More

    ದಾವಣಗೆರೆಯಲ್ಲಿ ಬಕ್ಕೇಶ್ವರ ಸ್ವಾಮಿ ಅದ್ದೂರಿ ರಥೋತ್ಸವ

    ದಾವಣಗೆರೆ: ನಗರದ ಚೌಕಿಪೇಟೆಯ ಶ್ರೀ ಗುರು ಬಕ್ಕೇಶ್ವರ ಸ್ವಾಮಿ ಮಹಾರಥೋತ್ಸವ ಶನಿವಾರ ಸಂಜೆ ಮಳೆಯ ಸಿಂಚನದ ನಡುವೆ ವಿಜೃಂಭಣೆಯಿಂದ ನೆರವೇರಿತು.
    ನೂತನ ತೇರಿನಲ್ಲಿ ಜಯದೇವ ಸ್ವಾಮೀಜಿ ಭಾವಚಿತ್ರ, ಶ್ರೀ ಗುರು ಬಕ್ಕೇಶ್ವರ ಸ್ವಾಮಿಯ ಉತ್ಸವ ಮೂರ್ತಿ ಕೂರಿಸಿ ಪೂಜೆ ಸಲ್ಲಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಭಕ್ತರು ಶ್ರದ್ಧಾ ಭಕ್ತಿಯಿಂದ ನೂತನ ತೇರು ಎಳೆದರು. ರಥದ ಗಾಲಿಗೆ ತೆಂಗಿನಕಾಯಿ ಒಡೆದು ಹಾಗೂ ಬಾಳೆಹಣ್ಣು ಎಸೆಯುವ ಮೂಲಕ  ಭಕ್ತಿ ಸಮರ್ಪಿಸಿದರು. ಹನಿಯುತ್ತಿದ್ದ ತುಂತುರು ಮಳೆಯಲ್ಲೂ ಕದಲದ ಭಕ್ತರು ರಥೋತ್ಸವ ಕಣ್ತುಂಬಿಕೊಂಡರು. ದೇವಸ್ಥಾನ ಮಾರ್ಗದಲ್ಲಿ ಪೂರ್ವಾಭಿಮುಖವಾಗಿ ಸಾಗಿದ ರಥವು ಆನಂತರ ಹಿಂತಿರುಗಿ ದೊಡ್ಡಪೇಟೆಯ ಶ್ರೀ ಬಸವೇಶ್ವರ ದೇವಸ್ಥಾನದವರೆಗೂ ಚಲಿಸಿತು. ಆರಂಭದಲ್ಲಿ ರಥಪೂಜೆ ನಡೆಯಿತು. ರಥದ ಸುತ್ತ ಹೋಳಿಗೆ, ಬುತ್ತಿ ಎಡೆ ಮಾಡಿ ಪೂಜೆ ಸಲ್ಲಿಸಲಾಯಿತು.
    ದೇವಸ್ಥಾನದಲ್ಲಿ ಬೆಳಗ್ಗೆ ಶ್ರೀ ಗುರು ಬಕ್ಕೇಶ್ವರ ಸ್ವಾಮಿಗೆ ರುದ್ರಾಭಿಷೇಕ ನಡೆಸಿ ವಿಶೇಷ ಅಲಂಕಾರದೊಂದಿಗೆ ಪೂಜೆ ಸಲ್ಲಿಸಲಾಯಿತು. ಬೆಳಗ್ಗೆಯಿಂದಲೇ ದೇಗುಲಕ್ಕೆ ಆಗಮಿಸಿದ ಭಕ್ತರು ಸ್ವಾಮಿಯ ದರ್ಶನ ಪಡೆದರು. ರಥೋತ್ಸವದಲ್ಲಿ ಗಜರಾಜನೊಂದಿಗೆ ನಾದಸ್ವರ, ನಂದಿಕೋಲು, ಸಮಾಳ, ಕೀಲುಕುದುರೆ, ಉಡುಪಿಯ ಚಂಡೆಮೇಳ, ಕೇರಳದ ದೈವಂನೃತ್ಯ, ಡ್ರಮ್‌ಸೆಟ್ ಹಾಗೂ ಕೋಲಾಟ ಮೊದಲಾದ ಕಲಾತಂಡಗಳು ರಥೋತ್ಸವಕ್ಕೆ ಮೆರುಗು ನೀಡಿದವು. ಇದೇ ಸಂದರ್ಭದಲ್ಲಿ ರಥದ ಶಿಲ್ಪಿಗಳಾದ ಗೊಪ್ಪೇನಹಳ್ಳಿ ಚಂದ್ರಾಚಾರ್ ಮಕ್ಕಳಾದ ವೀರಾಚಾರ್, ಜಗನ್ನಾಥಾಚಾರ್ ಹಾಗೂ ದಾವಣಗೆರೆ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪುರಸ್ಕೃತರಾದ ಸ್ವಾಮಿಯ ಅನನ್ಯ ಭಕ್ತರು, ಹಿರಿಯ ಪತ್ರಕರ್ತ ಡಾ. ಎಚ್.ಬಿ.ಮಂಜುನಾಥ್ ಅವರನ್ನು ಶಾಸಕ ಶಾಮನೂರು ಶಿವಶಂಕರಪ್ಪ ಸನ್ಮಾನಿಸಿದರು.
    ನಿಶಾನೆ ಹರಾಜು : ಹರಾಜು ಪ್ರಕ್ರಿಯೆಯಲ್ಲಿ 2,00,101 ರೂಪಾಯಿಗೆ ಸ್ವಾಮಿಯ ನಿಶಾನೆಯನ್ನು ದೇವರಮನಿ ಶಿವಕುಮಾರ್ ಪಡೆದುಕೊಂಡರು.ಹೆಬ್ಬಾಳ್‌ನ ಶ್ರೀ ಮಹಾಂತರುದ್ರೇಶ್ವರ ಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಶ್ರೀ ಗುರು ಬಕ್ಕೇಶ್ವರ ಸೇವಾ ಸಮಿತಿ ಅಧ್ಯಕ್ಷ ಮಾಗಾನಹಳ್ಳಿ ಶಿವಾನಂದಪ್ಪ, ಪ್ರಧಾನ ಕಾರ್ಯದರ್ಶಿ ಡಾ.ಅಥಣಿ ಎಸ್.ವೀರಣ್ಣ, ಖಜಾಂಚಿ ಮಾಗಾನಹಳ್ಳಿ ವಿನಯ್ಕುಮಾರ್, ಪದಾಧಿಕಾರಿಗಳಾದ  ಬಾದಾಮಿ ರುದ್ರೇಶ್, ಆಲದಹಳ್ಳಿ ಸಿದ್ದರಾಮಣ್ಣ, ಮಾಗಾನಹಳ್ಳಿ ಜಯದೇವಪ್ಪ ಇತರರು ರಥೋತ್ಸವದಲ್ಲಿ ಭಾಗವಹಿಸಿದ್ದರು.
    ನೂತನ ರಥದ ವಿಶೇಷ : 102ನೇ ವರ್ಷದ ರಥೋತ್ಸವದಲ್ಲಿ ಶ್ರೀ ಗುರು ಬಕ್ಕೇಶ್ವರ ಸ್ವಾಮಿಯ ನೂತನ ತೇರುಗಡ್ಡೆಯು ಸುಮಾರು 8.5 ಅಡಿ ಎತ್ತರ, 8 ಅಡಿ ಅಗಲವಿದ್ದು, ಕಳಶದವರೆಗೆ 28 ಅಡಿ ಎತ್ತರ ಹೊಂದಿದೆ. 16 ಕೋನಗಳ ವೇದ, ಆಗಮೋಕ್ಷ ದಕ್ಷಿಣ ಭಾರತೀಯ ಶೈಲಿಯಲ್ಲಿ ತೇಗ, ಹೊನ್ನೆ, ಕರಿಮತ್ತಿ ಮರಗಳನ್ನು ಬಳಸಿ ರಥಗಡ್ಡೆ ನಿರ್ಮಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts