More

    ಸರ್ಕಾರಿ ಯೋಜನೆಗಳ ಸಾಲದ ಅರ್ಜಿ ತಿರಸ್ಕರಿಸಬೇಡಿ-ಜಿಪಂ ಸಿಇಒ ಬ್ಯಾಂಕರ್‌ಗಳಿಗೆ ಸೂಚನೆ

    ಕಾರವಾರ: ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳು ಬ್ಯಾಂಕ್‍ಗಳಿಗೆ ಸಲ್ಲಿಸುವ ಸಾಲದ
    ಅರ್ಜಿಗಳನ್ನು ಬ್ಯಾಂಕ್ ಅಧಿಕಾರಿಗಳು ಕೂಲಕುಂಷವಾಗಿ ಪರಿಶೀಲಿಸಿ, ದಾಖಲೆಗಳ ಕೊರತೆಯಿದ್ದಲ್ಲಿ ಈ ಬಗ್ಗೆ ಅರ್ಜಿದಾರರಿಗೆ ಮಾಹಿತಿ
    ನೀಡಿ, ಸಮರ್ಪಕ ದಾಖಲೆಗಳನ್ನು ಪಡೆದು ಸಾಲ ಮಂಜೂರು ಮಾಡುವಂತೆ ಹಾಗೂ ಸಣ್ಣಪುಟ್ಟ ಕಾರಣಗಳಿಗೆ ಅರ್ಜಿಗಳನ್ನು
    ತಿರಸ್ಕೃತಗೊಳಿಸದಂತೆ ಜಿಲ್ಲಾ ಪಂಚಾಯಿತಿ ಸಿಇಒ ಈಶ್ವರ ಕುಮಾರ್ ಕಾಂದೂ ಎಲ್ಲ ಬ್ಯಾಂಕ್ ಗಳ
    ಅಧಿಕಾರಿಗಳಿಗೆ ಸೂಚನೆ ನೀಡಿದರು.
    ಅವರು ಇಂದು ನಗರಸಭೆ ಸಭಾಂಗಣದಲ್ಲಿ ನಡೆದ ಲೀಡ್ ಬ್ಯಾಂಕ್ ಪ್ರಗತಿ ಪರಿಶೀಲನಾ ಸಭೆಯ ಅದ್ಯಕ್ಷತೆ ವಹಿಸಿ
    ಮಾತನಾಡಿದರು. ಸರ್ಕಾರದ ವಿವಿಧ ಯೋಜನೆಗಳ ಪ್ರಯೋಜನಕ್ಕಾಗಿ ಬ್ಯಾಂಕ್ ಗಳ ಮೂಲಕ ಸಾಲ ಪಡೆಯಲು ಅರ್ಜಿ ಸಲ್ಲಿಸುವ
    ಫಲಾನುಭವಿಗಳಿಗೆ ಸಂಬಂದಪಟ್ಟ ಇಲಖೆಯ ಅಧಿಕಾರಿಗಳು ಸದ್ರಿ ಯೋಜನೆಯ ಕುರಿತು ಹಾಗೂ ಸಾಲ ಪಡೆಯಲು ಇರಬೇಕಾದ ಅರ್ಹತೆಗಳ
    ಬಗ್ಗೆ ವಿವರವಾದ ಮಾಹಿತಿ ನೀಡಿ, ಅರ್ಜಿದಾರರು ನೀಡುವ ದಾಖಲೆಗಳನ್ನು ಪರಿಶೀಲಿಸಿ, ಎಲ್ಲ ಪೂರಕ ದಾಖಲೆಗಳೊಂದಿಗೆ ಅರ್ಜಿಗಳನ್ನು ಬ್ಯಾಂಕ್ ಆಧಿಕಾರಿಗಳೊಂದಿಗೆ ಮತ್ತೊಮ್ಮೆ ಪರಿಶೀಲಿಸಿ, ಫಲಾನುಭವಿಗಳಿಗೆ ಸರ್ಕಾರದ ಯೋಜನೆಗಳ ಪ್ರಯೋಜನ
    ದೊರೆಯುವಂತೆ ನೋಡಿಕೊಳ್ಳಬೇಕು. ಸಾದ್ಯವಾದಷ್ಟು ಮಟ್ಟಿಗೆ ಅರ್ಜಿಗಳನ್ನು ತಿರಸ್ಕರಿಸದೇ ಅಗತ್ಯವಿರುವ ಹೆಚ್ಚುವರಿ
    ದಾಖಲಾತಿಗಳನ್ನು ಪಡೆದು , ಬ್ಯಾಂಕ್ ಮತ್ತು ಸಂಬಂದಪಟ್ಟ ಇಲಾಖೆಯ ಅಧಿಕಾರಿಗಳು ಪರಸ್ಪರ ಸಮನ್ವಯದಿಂದ ಕಾರ್ಯ ನಿರ್ವಹಿಸಿ,
    ಸರ್ಕಾರಿ ಯೋಜನೆಗಳ ಸಂಪೂರ್ಣ ಯಶಸ್ವಿಗೆ ಕಾರ್ಯನಿರ್ವಹಿಸಬೇಕು ಎಂದರು.
    ಜಿಲ್ಲೆಯ ಬ್ಯಾಂಕ್ ಗಳಲ್ಲಿ ಸಾಲ ಮತ್ತು ಠೇವಣಿ ಅನುಪಾತವನ್ನು ಹೆಚ್ಚಿಸಲು ಹೆಚ್ಚಿನ ಸಂಖ್ಯೆಯಲ್ಲಿ ಸಾಲಗಳನ್ನು
    ವಿತರಿಸುವಂತೆ ತಿಳಿಸಿದ ಈಶ್ವರ ಕಾಂದೂ, ಕೈಗಾರಿಗೆ ಹಾಗೂ ವಸತಿ ಕ್ಷೇತ್ರದಲ್ಲಿ ಸಾಲ ವಿತರಣೆಗೆ ಅಡಚಣೆಯಾಗಿರುವ ಫಾರ್ಮ್ 9/11, ಇ
    ಸ್ವತ್ತು ಹಾಗೂ ಫಾರ್ಮ 3 ಸಮಸ್ಯೆಗಳ ಬಗ್ಗೆ ಜಿಲ್ಲಾ ಪಂಚಾಯಿತಿ ವತಿಯಿಂದ ಹಾಗೂ ಜಿಲ್ಲಾ ನಗರಾಭಿವೃಧ್ದಿ ಕೋಶದ ವತಿಯಿಂದ
    ತಕ್ಷಣ ಕ್ರಮ ಕೈಗೊಂಡು ಆದ್ಯತೆ ಮೇಲೆ ಸಮಸ್ಯೆಯನ್ನು ಇತ್ಯರ್ಥಪಡಿಸುವುದಾಗಿ ತಿಳಿಸಿದರು.
    ಪಶುಪಾಲನೆ ಮತ್ತು ಮೀನುಗಾರಿಕಾ ಇಲಾಖೆವತಿಯಿಂದ ನೀಡುವ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿ ಹೆಚ್ಚಿನ
    ಸಂಖ್ಯೆಯಲ್ಲಿ ಸಾಲ ವಿತರಿಸುವಂತೆ ಹಾಗೂ ಪಿಎಂ ಸ್ವ ನಿಧಿ ಯೋಜನೆಯಡಿಯಲ್ಲಿ ಜಿಲ್ಲೆಯ ಎಲ್ಲಾ ಬೀದಿ ಬದಿ ವ್ಯಾಪಾರಸ್ಥರಿಗೆ ಸಾಲ
    ನೀಡುವಂತೆ ಸೂಚಿಸಿದರು.

    ಇದನ್ನೂ ಓದಿ: ಕಾರು ಲಾರಿ ಮಧ್ಯೆ ಡಿಕ್ಕಿಯಾಗಿ ಮಹಿಳೆ ಸಾವು
    ಪ್ರಧಾನ ಮಂತ್ರಿ ಉದ್ಯೋಗ ಸೃಜನಾ ಯೋಜನೆಯಡಿ ಸ್ವಯಂ ಉದ್ಯೋಗ ಕೈಗೊಳ್ಳುವವರಿಗೆ , ಅರ್ಜಿ ಸಲ್ಲಿಸುವ ವಿಧಾನದ
    ಬಗ್ಗೆ ವಿವರವಾದ ಮಾಹಿತಿ ನೀಡಿ, ಈ ಬಗ್ಗೆ ಅರಿವು ಕಾರ್ಯಕ್ರಮಗಳನ್ನು ಆಯೋಜಿಸಿ, ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ದಿಗೆ
    ಪೂರಕವಾದ ಚಟುವಟಿಕೆಗಳಿಗೆ ಆದ್ಯತೆಯಲ್ಲಿ ಸಾಲ ವಿತರಿಸುವಂತೆ ತಿಳಿಸಿದರು.
    ಮುದ್ರಾ ಯೋಜನೆ ಮತ್ತು ಸ್ಟಾರ್ಟಪ್ ಗಳಿಗೆ ಸಾಲ ವಿತರಿಸುವ ಕುರಿತಂತೆ ಎಲ್ಲಾ ಬ್ಯಾಂಕ್ ಗಳು ಜಿಲ್ಲೆಯಾದ್ಯಂತ ಹೆಚ್ಚಿನ
    ಅರಿವು ಕಾರ್ಯಕ್ರಮಗಳನ್ನು ಆಯೋಜಿಸಿ, ಯುವ ಜನತೆಗೆ ಮತ್ತು ಸ್ವಯಂ ಉದ್ಯೋಗ ಕೈಗೊಳ್ಳುವವರಿಗೆ ನೆರವಾಗುವಂತೆ ಈಶ್ವರ
    ಕಾಂದೂ ತಿಳಿಸಿದರು.

    10 ರೂ ನಾಣ್ಯ ಪಡೆಯಬಹುದು:
    ಜಿಲ್ಲೆಯ ಎಲ್ಲ ಬ್ಯಾಂಕ್ ಗಳು ಪ್ರತೀ ತಿಂಗಳು ತಮ್ಮ ವ್ಯಾಪ್ತಿಯ ಗ್ರಾಹಕರೊಂದಿಗೆ ತಪ್ಪದೇ ಸಭೆ ನಡೆಸುವಂತೆ ಮತ್ತು
    ಗ್ರಾಹಕರಿಗೆ ಆನ್ ಲೈನ್ ವಂಚನೆಗಳ ಬಗ್ಗೆ ಎಚ್ಚರದಿಂದಿರುವ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಸೂಚನೆ ನೀಡಿದ
    ಆರ್‌ಬಿಐ ಮೇನೆಜರ್ ತನು ನಂಜಪ್ಪ , ಸಾರ್ವಜನಿಕರಲ್ಲಿ 10 ರೂಪಾಯಿ ನಾಣ್ಯದ ಬಳಕೆ ಬಗ್ಗೆ ಗೊಂದಲಗಳಿದ್ದು, 10 ರೂ ನಾಣ್ಯದ
    ನಕಲು ತಯಾರಿಸಲು 10 ಗಿಂತ ಜಾಸ್ತಿ ವೆಚ್ಚವಾಗಲಿದ್ದು, ಆ ರೀತಿಯ ನಕಲಿ ನಾಣ್ಯಗಳು ತಯಾರಿಕೆ ಮಾಡಲು ಸಾಧ್ಯವಿಲ್ಲ . ಆದ್ದರಿಂದ
    ಸಾರ್ವಜನಿಕರು ತಮ್ಮ ದೈನಂದಿನ ವಹಿವಾಟಿನಲ್ಲಿ 10 ರೂ ನಾಣ್ಯವನ್ನು ನಿರಾಂತಕವಾಗಿ ಬಳಸುವಂತೆ ತಿಳಿಸಿದರು.

    ಲೀಡ್ ಬ್ಯಾಂಕ್ ಮೆನೇಜರ್ ರೇವತಿ ಸುಧಾಕರ್ ಮಾತನಾಡಿ, ಜಿಲ್ಲೆಯಲ್ಲಿ ಕಳೆದ ತ್ರೈಮಾಸಿಕ ಅವಧಿಯಲ್ಲಿ 1957 ಕೋಟಿ
    ಸಾಲ ವಿತರಣೆ ಗುರಿಗೆ 2442.14 ಕೋಟಿ ರೂ ಸಾಲ ವಿತರಿಸಿ ಶೇ. 124.79 ಸಾಧನೆ ಮಾಡಲಾಗಿದೆ. ಕೃಷಿ ವಲಯಕ್ಕೆ 1128.11 ಕೋಟಿ,
    ಮಧ್ಯಮ ಮತ್ತು ಸಣ್ಣ ವಲಯಕ್ಕೆ 820.74 ಕೋಟಿ ಸಾಲ ವಿತರಿಸಲಾಗಿದೆ, ಗೃಹ ನಿರ್ಮಾಣ ಮತ್ತು ಶೈಕ್ಷಣಿಕ ಸಾಲ ವಿತರಣೆಯಲ್ಲಿ
    ಬ್ಯಾಂಕ್ ಗಳು ಇನ್ನೂ ಹೆಚ್ಚಿನ ಪ್ರಗತಿ ಸಾಧಿಸಬೇಕಿದೆ. ಜಿಲ್ಲೆಯ ಸಾಲ ಮತ್ತು ಠೇವಣಿ ಅನುಪಾತ ಕಳೆದ ಸಾಲಿಗೆ ಹೋಲಿಸಿದಲ್ಲಿ
    ಪ್ರಗತಿಯಾಗಿದ್ದು, ಸಾಲ ನೀಡಿಕೆ ಪ್ರಮಾಣ ಇನ್ನೂ ಹೆಚ್ಚಳವಾಗಬೇಕಿದೆ ಎಂದರು.
    ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಕರೀಂ ಅಸಾದಿ ಹಾಗೂ ಜಿಲ್ಲೆಯ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ
    ಅಧಿಕಾರಿಗಳು ಹಾಗೂ ಬ್ಯಾಂಕ್ ಗಳ ಅಧಿಕಾರಿಗಳು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts