More

    ಶಿಕ್ಷಣಕ್ಕೆ ನೆರವು ನೀಡಿದವರ ಮರೆಯದಿರಿ: ಡಿವೈಎಸ್‌ಪಿ

    ಸಾಗರ: ಶಿಕ್ಷಣಕ್ಕಾಗಿ ಆರ್ಥಿಕ ನೆರವು ಪಡೆದುಕೊಂಡ ಸಂಸ್ಥೆಗೆ ಫಲಾನುಭವಿ ವಿದ್ಯಾರ್ಥಿಗಳು ಮುಂದೆ ಅದರ ಫಲ ಸಿಕ್ಕಾಗ ವಾಪಸು ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು. ಸಿಕ್ಕ ಅವಕಾಶವನ್ನು ಬಳಸಿಕೊಂಡು, ತನ್ಮೂಲಕ ಇತರರಿಗೂ ಸಹಕರಿಸಬೇಕು ಎಂದು ಡಿವೈಎಸ್‌ಪಿ ರೋಹನ್ ಜಗದೀಶ್ ಕಿವಿಮಾತು ಹೇಳಿದರು.

    ಸಾಗರದ ಶೃಂಗೇರಿ ಶಂಕರ ಮಠದಲ್ಲಿ ವಿದ್ಯಾಪೋಷಕ್ ಸಂಸ್ಥೆಯಿಂದ ಏರ್ಪಡಿಸಿದ್ದ ಸೇತುಬಂಧ ಶಿಬಿರದ ಸಮಾರೋಪದಲ್ಲಿ ಗುರುವಾರ ಸಂಜೆ ಮಾತನಾಡಿ, ಇದರಿಂದ ಸಂಸ್ಥೆಗೂ ಅನುಕೂಲ, ಮತ್ತಷ್ಟು ವಿದ್ಯಾರ್ಥಿಗಳಿಗೆ ನೆರವಾಗಲು ಪೂರಕ ಎಂದರು.
    ಬದಲಾದ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳಿಗೆ ಸಾಕಷ್ಟು ಸೌಲಭ್ಯಗಳು ಸಿಗುತ್ತಿವೆ. ಈ ಹಂತದಲ್ಲಿ ಬದುಕಿನ ನೆಲೆಗಟ್ಟನ್ನು ಭದ್ರಪಡಿಸಿಕೊಳ್ಳಬೇಕು. ಕೇವಲ ಓದಿನಲ್ಲಿ ತೊಡಗಿಕೊಳ್ಳದೆ ಲೋಕಜ್ಞಾನ ಗಳಿಸಬೇಕು. ಎಲ್ಲ ಸಮಸ್ಯೆಗೂ ಒಂದು ಪರಿಹಾರ ಇದೆ. ಹಣ ಇದ್ದವರಿಗೂ ಸಮಸ್ಯೆ ಇರುತ್ತದೆ. ಜೀವನ ಗೆಲ್ಲುವ ಗುರಿ ನಿಮ್ಮದಾಗಿರಲಿ ಎಂದು ತಿಳಿಸಿದರು.
    ವಿದ್ಯಾರ್ಥಿಗಳು ಕಷ್ಟಪಟ್ಟು ಓದಬೇಕು. ಈ ಹಂತದಲ್ಲಿ ಮೊಬೈಲ್, ವಾಟ್ಸ್‌ಆ್ಯಪ್, ಇನ್‌ಸ್ಟಾಗ್ರಾಂ ಮುಂತಾದವುಗಳ ಬಳಕೆಯಿಂದ ದೂರವಿರಿ. ಓದು ಮುಗಿಸಿ ಉದ್ಯೋಗ ಸಿಕ್ಕಾಗ ಬಡವರಿಗೆ ಸಹಾಯ ಮಾಡುವುದನ್ನು ಮರೆಯದಿರಿ. ಶೈಕ್ಷಣಿಕ ಸಹಾಯ ಕೇಳಲು ಬಂದವರಿಗೆ ಸೂಕ್ತ ಮಾರ್ಗದರ್ಶನ ಮಾಡಿ. ನಾನು ಇಬ್ಬರಿಗೆ ಮಾರ್ಗದರ್ಶನ ಮಾಡಿದ್ದು, ಒಬ್ಬರು ಐಎಎಸ್, ಮತ್ತೊಬ್ಬರು ಐಪಿಎಸ್ ಅಧಿಕಾರಿಗಳಾಗಿದ್ದಾರೆ ಎಂದರು.
    ಯಾವುದೇ ವ್ಯಸನಕ್ಕೆ ಬೀಳಬೇಡಿ. ಇಂಟರ್‌ನೆಟ್‌ನಲ್ಲಿ ಬರುವ ಅನಗತ್ಯ ಸಂದೇಶಗಳಿಗೆ ಪ್ರತಿಕ್ರಿಯಿಸಬೇಡಿ. ಸುಳ್ಳು ಯಾವುದು, ಸತ್ಯ ಯಾವುದು ತಿಳಿಯುವುದಿಲ್ಲ. ಸುಲಭವಾಗಿ ವಂಚಿಸುವವರ ಬಗ್ಗೆ ಎಚ್ಚರದಿಂದ ಇರಿ. ಆಧುನಿಕ ತಂತ್ರಜ್ಞಾನ ತಿಳುವಳಿಕೆ ಆಗಬೇಕೇ ಹೊರತು ಅದರ ದುರುಪಯೋಗ ಆಗಬಾರದು ಎಂದು ತಿಳಿಸಿದರು.
    ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ವಿದ್ಯಾಪೋಷಕ್ ಸಂಸ್ಥೆಯ ಅಧ್ಯಕ್ಷ ಸಿ.ವಿ.ಓಂಕಾರಿ, ಮ್ಯಾನೇಜರ್ ಎ.ಎಂ.ನಾಯಕ್, ಪ್ರಮುಖರಾದ ಕವಲಕೋಡು ವೆಂಕಟೇಶ್, ಟಿ.ವಿ.ಪಾಂಡುರಂಗ, ಶಂಕರ ಮಠದ ಧರ್ಮಾಧಿಕಾರಿ ಅಶ್ವಿನಿಕುಮಾರ್, ಪ್ರಕಾಶ್ ಭಟ್, ಮಾಸ ನಂಜುಂಡಸ್ವಾಮಿ, ಶಶಿಪ್ರಿಯಾ ಅಶ್ವಿನಿ, ವಿಜಯಲಕ್ಷ್ಮೀ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts