More

    ಶಿಕ್ಷಣದಲ್ಲಿ ಹಗೆತನಕ್ಕೆ ಇಳಿಯಲ್ಲ: ಮಧು ಬಂಗಾರಪ್ಪ

    ಶಿವಮೊಗ್ಗ: ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಪಿ)ಗಿಂತ ರಾಜ್ಯ ಶಿಕ್ಷಣ ನೀತಿ(ಎಸ್‌ಇಪಿ)ಯೇ ಉತ್ತಮವಾಗಿದೆ ಎಂಬುದನ್ನು ಸಾಬೀತು ಪಡಿಸುತ್ತೇವೆ. ಶಿಕ್ಷಣದ ವಿಚಾರದಲ್ಲಿ ಯಾರೊಂದಿಗೂ ಹಗೆತನಕ್ಕೆ ಇಳಿಯುವುದಿಲ್ಲ. ಬದಲಿಗೆ ನಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು ನಮ್ಮ ಉದ್ದೇಶವಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

    ಕುವೆಂಪು ರಂಗಮಂದಿರದಲ್ಲಿ ಬುಧವಾರ ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಮತ್ತು ಶಾಲಾ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಬದಲಾದ ಪರೀಕ್ಷಾ ಪದ್ಧತಿ ಕುರಿತು ಶೈಕ್ಷಣಿಕ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ದಿನನಿತ್ಯ ದೇವರಿಗೆ ಕೈಮುಗಿಯದಿದ್ದರೂ ಪರವಾಗಿಲ್ಲ, ನಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವುದನ್ನು ದೇವರ ಕೆಲಸವೆಂದು ನಂಬಿದ್ದೇನೆ ಎಂದರು.
    ಕರ್ನಾಟಕ ಪಬ್ಲಿಲ್ ಸ್ಕೂಲ್‌ಗಳು ಯಶಸ್ವಿಯಾಗಿವೆ. ಹಾಗಾಗಿ ಮುಂದಿನ ಮೂರು ವರ್ಷದಲ್ಲಿ 3 ಸಾವಿರ ಕೆಪಿಎಸ್ ತೆರೆಯಲಾಗುವುದು. ಹೋಬಳಿಗೆ ಎರಡು ಶಾಲೆಗಳನ್ನು ತೆರೆದು ಒಂದರಿಂದ ಪಿಯುಸಿವರೆಗೆ ಶಿಕ್ಷಣ ಕೊಡಿಸುವ ವ್ಯವಸ್ಥೆ ಮಾಡಲಾಗುವುದು. ಪ್ರಸ್ತುತ ಅಂಗನವಾಡಿಗಳಲ್ಲಿ ಮಕ್ಕಳ ಕಲಿಕಾ ಸಾಮರ್ಥ್ಯ ಕೊರತೆ ಕಾಡುತ್ತಿದೆ. ಹಾಗಾಗಿ ಕೆಪಿಎಸ್ ಶಾಲೆಗಳ ಮೂಲಕ ಮಕ್ಕಳು 14 ವರ್ಷ(ಒಂದರಿಂದ ದ್ವಿತೀಯ ಪಿಯು)ದವರೆಗೆ ಒಂದೇ ಕಡೆ ಓದಬೇಕು. ಮಕ್ಕಳ ಮೇಲೆ ನಿಗಾ ಇರಿಸಲು ಇದರಿಂದ ಸಾಧ್ಯವಾಗಲಿದ್ದು ಮುಂದಿನ ವರ್ಷವೇ 500ರಿಂದ 600 ಕೆಪಿಎಸ್‌ಗಳನ್ನು ತೆರೆಯಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
    ಸರ್ಕಾರಿ ಶಾಲೆಗಳತ್ತ ಮಕ್ಕಳು ಓಡೋಡಿ ಬರುವಂತೆ ಮಾಡಬೇಕು ಎಂಬುದು ನಮ್ಮ ಕಲ್ಪನೆಯಾಗಿದೆ. ಈ ಮೂಲಕ ಎಲ್ಲರಿಗೂ ಸಮಾನತೆ ತರುವ ಶಿಕ್ಷಣ ವ್ಯವಸ್ಥೆ ಜಾರಿಗೆ ತರಲು ಪ್ರಮಾಣಿಕವಾಗಿ ಕೆಲಸ ಮಾಡುತ್ತೇನೆ. ಮಾಧ್ಯಮ ಯಾವುದೇ ಇದ್ದರೂ ಸರ್ಕಾರಿ ಶಾಲೆಗಳಲ್ಲಿ ಕನ್ನಡ ಕಡ್ಡಾಯವಾಗಿರುವಂತೆ ಮಾಡಲಾಗುವುದು ಎಂದು ಹೇಳಿದರು.
    ಅಧ್ಯಕ್ಷತೆ ವಹಿಸಿ ಮಾತನಾಡಿದ ಗ್ಲೋಬಲ್ ಎಜುಕೇಶನ್ ಸೊಸೈಟಿ ಕಾರ್ಯದರ್ಶಿ ಎನ್.ರಮೇಶ್, ಸಂಸ್ಥೆಯು ಶಿಕ್ಷಕರ ಪರವಾಗಿ ಸಾಮಾಜಿಕ ಕಾರ್ಯ ಮಾಡಿಕೊಂಡು ಬರುತ್ತಿದೆ. ಬದಲಾವಣೆ ಆಗಿರುವ 8, 9, 10ನೇ ತರಗತಿ ಮಕ್ಕಳಿಗೆ ಯಾವ ರೀತಿ ಪರೀಕ್ಷೆ ತೆಗದುಕೊಳ್ಳಬೇಕಿದೆ. ಪರೀಕ್ಷಾ ವಿಚಾರದಲ್ಲಿ ಸಾಕಷ್ಟು ಗೊಂದಲಗಳಿದ್ದು ಅದಕ್ಕೆ ಪರಿಹಾರವಾಗಿ ಕಾರ್ಯಾಗಾರ ಆಯೋಜಿಸಲಾಗಿದೆ ಎಂದರು.
    ಬೆಂಗಳೂರು ವಿಜಯಾ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಟಿ.ಎನ್.ಚಂದ್ರಕಾಂತ್ ಮಾತನಾಡಿದರು. ಮಾಜಿ ಜಿಪಂ ಅಧ್ಯಕ್ಷ ಕಲಗೋಡು ರತ್ನಾಕರ್, ಡಿಡಿಪಿಯು ಸಿ.ಆರ್.ಪರಮೇಶ್ವರಪ್ಪ, ಡಿಡಿಪಿಯು ಬಿ.ಕೃಷ್ಣಪ್ಪ, ಡಯಟ್ ಪ್ರಾಚಾರ್ಯ ಬಸವರಾಜಪ್ಪ, ಡಯಟ್ ಪ್ರಾಧ್ಯಾಪಕ ಡಾ. ಎನ್.ಹರಿಪ್ರಸಾದ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts