More

    ಶಾಲಾ ಸಮಯ ಬದಲಾಯಿಸಬೇಡಿ: ಶಿಕ್ಷಣ ಇಲಾಖೆಗೆ ಸಲಹೆ

    ಬೆಂಗಳೂರು ಬೆಂಗಳೂರು ನಗರದ ಶಾಲೆಗಳ ಸಮಯವನ್ನು ಬದಲಾವಣೆ ಮಾಡದಿರುವಂತೆ ಶಿಕ್ಷಣ ಇಲಾಖೆ ಪಾಲುದಾರರಾದ ಖಾಸಗಿ ಶಾಲೆಗಳು, ಪಾಲಕರು, ಪೊಲೀಸ್ ಮತ್ತು ಸಾರಿಗೆ ಇಲಾಖೆ ಸರ್ಕಾರಕ್ಕೆ ಸಲಹೆ ನೀಡಿವೆ.

    ಬೆಂಗಳೂರು ಮಹಾನಗರದಲ್ಲಿ ದಿನನಿತ್ಯ ಉಂಟಾಗುತ್ತಿರುವ ವಾಹನ ದಟ್ಟಣೆಯನ್ನು ತಪ್ಪಿಸುವ ಸಲುವಾಗಿ ಶಾಲೆಗಳು ಮತ್ತು ಕೈಗಾರಿಕೆಗಳ ಕಾರ್ಯನಿರ್ವಹಣೆ ಸಮಯ ಬದಲಾವಣೆಗೆ ಹೈಕೋರ್ಟ್ ಸರ್ಕಾರಕ್ಕೆ ಸಲಹೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಸಮಗ್ರ ಶಿಕ್ಷಣ ಕರ್ನಾಟಕ ಕಚೇರಿಯಲ್ಲಿ ಸೋಮವಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶ್‌ಕುಮಾರ್ ಸಿಂಗ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಸಲಹೆಗಳನ್ನು ನೀಡಿವೆ.

    ಶಿಕ್ಷಣ ಇಲಾಖೆಯು ಮಂಗಳವಾರ ಹೈಕೋರ್ಟ್‌ನಲ್ಲಿ ‘ಶಾಲಾ ಸಮಯ ಪರಿಷ್ಕರಣೆ’ ಕುರಿತು ನಡೆಯಲಿರುವ ವಿಚಾರಣೆಯಲ್ಲಿ ಪಾಲುದಾರರ ಅಭಿಪ್ರಾಯವನ್ನು ಮಂಡಿಸಲಿದೆ. ಹೈಕೋರ್ಟ್‌ನ ತೀರ್ಪಿನ ಆಧಾರದಲ್ಲಿ ಶಾಲಾ ಸಮಯ ಪರಿಷ್ಕರಿಸುವ ನಿರ್ಧಾರ ಕೈಗೊಳ್ಳಲಿದೆ.

    ಸಭೆಯ ಬಳಿಕ ಮಾತನಾಡಿದ ರಿತೇಶ್‌ಕುಮಾರ್ ಸಿಂಗ್, ಸಾರಿಗೆ, ಪೊಲೀಸ್ ಇಲಾಖೆ, ಖಾಸಗಿ ಶಾಲೆಗಳು ಮತ್ತು ಪಾಲಕರು ಸಂಘಟನೆಗಳು ಹಾಲಿ ಚಾಲ್ತಿಯಲ್ಲಿರುವ ಸಮಯವನ್ನೇ ಮುಂದುವರಿಸುವಂತೆ ತಮ್ಮ ಅಭಿಪ್ರಾಯವನ್ನು ತಿಳಿಸಿವೆ ಎಂದು ತಿಳಿಸಿದರು.

    ಸಭೆಯಲ್ಲಿ ಪ್ರಮುಖವಾಗಿ ಸಂಚಾರ ದಟ್ಟಣೆ ನಿವಾರಣೆ ಮಾಡಲು 4-5 ಖಾಸಗಿ ಶಾಲೆಗಳು ಸೇರಿ ಒಮ್ಮತದಿಂದ ಅನುಮತಿ ನೀಡಿದರೆ, ಬಿಎಂಟಿಸಿ ಬಸ್‌ಗಳನ್ನು ಓಡಿಸಲಾಗುತ್ತದೆ. ಇದನ್ನು ವಿಶೇಷವಾಗಿ ಶಾಲಾ ಮಕ್ಕಳು ಮತ್ತು ಬೋಧಕ ಸಿಬ್ಬಂದಿ ಮಾತ್ರ ಮೀಸಲಾಗಿರುತ್ತದೆ ಎಂದು ಬಿಎಂಟಿಸಿ ಅಧಿಕಾರಿಗಳು ಸಲಹೆ ನೀಡಿದ್ದಾರೆ ಎಂದರು.

    ವಿದೇಶಗಳಲ್ಲಿ ಸ್ಥಳೀಯವಾಗಿ ಸಂಚಾರ ದಟ್ಟಣೆಯನ್ನು ಟ್ರಾಫಿಕ್ ವಾರ್ಡನ್‌ಗಳು ನಿರ್ವಹಣೆ ಮಾಡುತ್ತಾರೆ. ಆ ಮಾದರಿಯಲ್ಲಿಯೇ ಇಲ್ಲಿಯೂ ಯೋಜನೆ ರೂಪಿಸಲು ಪೊಲೀಸ್ ಇಲಾಖೆ ಆಸಕ್ತಿ ತೋರಿದೆ. ಇದಕ್ಕೆ ಪಾಲಕರು ಒಪ್ಪಿಗೆ ಸೂಚಿಸಿದ್ದಾರೆ. ಬೆಂಗಳೂರಿನ ಕೇಂದ್ರ ಭಾಗ ಹಾಗೂ ಇತರೆ ಸಂಚಾರ ದಟ್ಟಣೆ ಬಡಾವಣೆಗಳಾದ ಸರ್ಜಾಪುರ, ಹೆಬ್ಬಾಳ, ಆಡುಗೋಡಿ ಮತ್ತು ಸಿಲ್ಕ್ ಬೋರ್ಡ್‌ಗಳು ಪ್ರಮುಖ ಸಂಚಾರ ದಟ್ಟಣೆ ಬಡಾವಣೆಗಳಾಗಿವೆ. ಈ ಸುತ್ತಲಿನ ಶಾಲೆಗಳಲ್ಲಿ ಟ್ರಾಫಿಕ್ ವಾರ್ಡನ್ ನೇಮಿಸುವ ಅಗತ್ಯವಿದೆ ಎಂದು ತಿಳಿಸಿದೆ.

    ಸ್ಥಳಿಯವಾಗಿ ಅನುಕೂಲವಾಗುವಂತೆ ಶಿಕ್ಷಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕರ (ಡಿಡಿಪಿಐ) ಅವರನ್ನು ಒಳಗೊಂಡ ಸಮಿತಿ ರಚಿಸಿಕೊಂಡು ಯೋಜನೆ ರೂಪಿಸಿ ಪರಿಹಾರಗಳನ್ನು ಕಂಡುಕೊಳ್ಳಬಹುದು ಎಂಬ ಸಲಹೆಗಳು ಬಂದಿವೆ ಎಂದು ತಿಳಿಸಿದರು.

    ಸಭೆಯಲ್ಲಿ ಶಿಕ್ಷಣ ಇಲಾಖೆಯ ಆಯುಕ್ತೆ ಬಿ.ಬಿ. ಕಾವೇರಿ, ಪ್ರಾಥಮಿಕ ಶಿಕ್ಷಣ ನಿರ್ದೇಶಕ ಪ್ರಸನ್ನಕುಮಾರ್, ಜಂಟಿ ಪೊಲೀಸ್ ಆಯುಕ್ತ (ಸಂಚಾರ) ಎಂ.ಎನ್. ಅನುಚೇತ್, ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್, ಪಾಲಕರ ಸಂಘಟನೆಯ ಬಿ.ಎನ್. ಯೋಗಾನಂದ ಸೇರಿ ಹಲವರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts