More

    ದೇಶೀಯ ಕ್ರಿಕೆಟಿಗರ ವೇತನ ಶೇ. 40 ಏರಿಕೆ ನಿರೀಕ್ಷೆ

    ನವದೆಹಲಿ: ಮುಂಬರುವ ದೇಶೀಯ ಕ್ರಿಕೆಟ್ ಋತು ಆರಂಭಕ್ಕೆ ಮುನ್ನ ಕ್ರಿಕೆಟಿಗರಿಗೆ ಭರ್ಜರಿ ಸಿಹಿಸುದ್ದಿ ಲಭಿಸುವ ನಿರೀಕ್ಷೆ ಮೂಡಿದೆ. ದೇಶೀಯ ಕ್ರಿಕೆಟಿಗರ ವೇತನವನ್ನು ಶೇ. 40 ಏರಿಕೆ ಮಾಡಲು ಬಿಸಿಸಿಐ ಚಿಂತನೆ ನಡೆಸಿದೆ. ಸೆಪ್ಟೆಂಬರ್ 20ರಂದು ನಡೆಯಲಿರುವ ಬಿಸಿಸಿಐ ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳುವ ನಿರೀಕ್ಷೆ ಇದೆ. ಜತೆಗೆ ದೇಶೀಯ ಕ್ರಿಕೆಟಿಗರಿಗೆ ಅವರ ರಾಜ್ಯ ಕ್ರಿಕೆಟ್ ಸಂಸ್ಥೆಗಳಿಂದ ಕೇಂದ್ರಿಯ ಗುತ್ತಿಗೆಯೂ ಲಭಿಸುವ ನಿರೀಕ್ಷೆ ಇದೆ.

    ಮುಂದಿನ ದೇಶೀಯ ಕ್ರಿಕೆಟ್ ಋತುವಿನಲ್ಲಿ ಪ್ರಥಮ ದರ್ಜೆ ಪಂದ್ಯಗಳಿಗೆ ಪ್ರತಿದಿನಕ್ಕೆ ಮತ್ತು ಏಕದಿನ ಪಂದ್ಯಗಳಿಗೆ 50 ಸಾವಿರ ರೂಪಾಯಿ ಮತ್ತು ಟಿ20 ಪಂದ್ಯಗಳಿಗೆ 25 ಸಾವಿರ ರೂಪಾಯಿಗೆ ಸಂಭಾವನೆ ಏರಿಕೆ ಮಾಡುವ ಕುರಿತು ಸದ್ಯ ಬಿಸಿಸಿಐ ಮುಂದೆ ಪ್ರಸ್ತಾವನೆ ಇದೆ. ಇದಕ್ಕೆ ಬಿಸಿಸಿಐ ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ಸಮ್ಮತಿ ಸಿಗಬೇಕಾಗಿದೆ.

    ಸದ್ಯ ರಣಜಿ ಟ್ರೋಫಿಯ ಚತುರ್ದಿನ ಪಂದ್ಯಗಳಿಗೆ ಪ್ರತಿದಿನಕ್ಕೆ ಮತ್ತು ವಿಜಯ್ ಹಜಾರೆ ಟ್ರೋಫಿ ಏಕದಿನ ಪಂದ್ಯಗಳಿಗೆ 35 ಸಾವಿರ ರೂ. ಸಂಭಾವನೆ ಇದ್ದರೆ, ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಪಂದ್ಯಗಳಿಗೆ 17,500 ರೂ. ಸಂಭಾವನೆ ನೀಡಲಾಗುತ್ತಿದೆ. ತಂಡದ ಜತೆಗಿದ್ದು ಪಂದ್ಯ ಆಡುವ ಅವಕಾಶ ಪಡೆಯದೆ ಬೆಂಚು ಕಾಯಿಸುವ ಆಟಗಾರರೂ ಇದರ ಶೇ. 50 ಸಂಭಾವನೆ ಪಡೆಯುತ್ತಾರೆ.

    ಇನ್ನು ದೇಶೀಯ ಕ್ರಿಕೆಟಿಗರಿಗೂ ಕೇಂದ್ರಿಯ ಗುತ್ತಿಗೆ ನೀಡುವ ಕುರಿತು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ 2019ರಲ್ಲಿ ಅಧಿಕಾರ ಸ್ವೀಕರಿಸಿದ ಸಮಯದಲ್ಲೇ ೋಷಣೆ ಮಾಡಿದ್ದರು. ಆದರೆ ಅದು ಇನ್ನು ಜಾರಿಗೆ ಬಂದಿಲ್ಲ. ಮುಂಬರುವ ದೇಶೀಯ ಕ್ರಿಕೆಟ್ ಋತುವಿಗೆ ಮುನ್ನ ಎಲ್ಲ ರಾಜ್ಯ ಕ್ರಿಕೆಟ್ ಸಂಸ್ಥೆಗಳಿಂದಲೂ ಕೇಂದ್ರಿಯ ಗುತ್ತಿಗೆ ಜಾರಿಯಾಗುವ ಸಾಧ್ಯತೆ ಇದೆ.

    ಮಹಿಳಾ ಕ್ರಿಕೆಟಿಗರಿಗೂ ಹೈಕ್?
    ದೇಶೀಯ ಮಹಿಳಾ ಕ್ರಿಕೆಟಿಗರಿಗೂ ಶೇ. 25ರಿಂದ 40 ವೇತನ ಏರಿಕೆಯಾಗುವ ಸಾಧ್ಯತೆ ಇದೆ. ಸದ್ಯ ಮಹಿಳಾ ಕ್ರಿಕೆಟಿಗರು ಪ್ರತಿ ಏಕದಿನ ಪಂದ್ಯಕ್ಕೆ 12,500 ರೂಪಾಯಿ ಮತ್ತು ಟಿ20 ಪಂದ್ಯಗಳಿಗೆ 6,250 ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ.

    ಶೇ. 50 ಪರಿಹಾರ
    ಕರೊನಾ ಹಾವಳಿಯಿಂದಾಗಿ ಕಳೆದ ವರ್ಷದ ರಣಜಿ ಟ್ರೋಫಿ ರದ್ದುಗೊಂಡಿದ್ದರಿಂದ ದೇಶೀಯ ಕ್ರಿಕೆಟಿಗರಿಗೆ ಆಗಿರುವ ಆರ್ಥಿಕ ನಷ್ಟಕ್ಕೆ ಪಂದ್ಯ ಸಂಭಾವನೆಯ ಶೇ. 50 ಪರಿಹಾರ ನೀಡುವ ನಿರೀಕ್ಷೆ ಇದೆ. 2019-20ರ ಆವೃತ್ತಿಯಲ್ಲಿ ಅಥವಾ ಕಳೆದೆರಡು ಆವೃತ್ತಿಗಳಲ್ಲಿ ಕನಿಷ್ಠ ಒಂದಾದರೂ ಪಂದ್ಯ ಆಡಿರುವ ಆಟಗಾರರಿಗೆ ಈ ಪರಿಹಾರ ಸಿಗಲಿದೆ. ಪ್ರತಿ ದಿನಕ್ಕೆ 35 ಸಾವಿರ ರೂ.ನಂತೆ ರಣಜಿ ಪಂದ್ಯವೊಂದಕ್ಕೆ ಆಟಗಾರರು 1.4 ಲಕ್ಷ ರೂ. ಸಂಭಾವನೆ ಪಡೆಯುತ್ತಿದ್ದರೆ, ಶೇ. 50ರ ಅನ್ವಯ ಪ್ರತಿ ಪಂದ್ಯಕ್ಕೆ 70 ಸಾವಿರ ರೂ. ಪರಿಹಾರ ಪಡೆಯಲಿದ್ದಾರೆ. ಪರಿಹಾರ ಪ್ರಮಾಣ ನಿರ್ಧಾರಕ್ಕೆ ನೇಮಿಸಲಾಗಿದ್ದ ಸಮಿತಿ ಈ ಶಿಾರಸು ಸಲ್ಲಿಸಿದ್ದು, ಬಿಸಿಸಿಐ ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ಅಂತಿಮ ಒಪ್ಪಿಗೆ ಸಿಗಬೇಕಾಗಿದೆ.

    VIDEO: ಅಭ್ಯಾಸ ಪಂದ್ಯದಲ್ಲಿ ಎಬಿಡಿ ಶತಕ, 10 ಸಿಕ್ಸರ್ ಸಿಡಿಸಿದ ಸ್ಟಾರ್ ಬ್ಯಾಟ್ಸ್ ಮನ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts