More

    ಕ್ಯಾನೈನ್ ಡಿಸ್ಟೆಂಪರ್‌ಗೆ ಶ್ವಾನ ಬಲಿ

    ಭರತ್ ಶೆಟ್ಟಿಗಾರ್ ಮಂಗಳೂರು

    ಒಂದೆಡೆ ಜನ ಕರೊನಾ ವೈರಸ್‌ನಿಂದ ಹೈರಾಣಾಗಿದ್ದರೆ, ಇನ್ನೊಂದೆಡೆ ಶ್ವಾನಗಳು ಮಾರಣಾಂತಿಕ ಕ್ಯಾನೈನ್ ಡಿಸ್ಟೆಂಪರ್ ಎಂಬ ವೈರಸ್ ಹಾವಳಿಗೆ ತುತ್ತಾಗುತ್ತಿವೆ. ಚಳಿಗಾಲ ಆರಂಭವಾಗಿರುವುರಿಂದ ಈ ವೈರಸ್ ವೇಗವಾಗಿ ಹರಡುತ್ತಿದ್ದು, ಮುಖ್ಯವಾಗಿ ಬೀದಿನಾಯಿಗಳನ್ನೇ ಬಲಿ ಪಡೆಯುತ್ತಿವೆ.

    ಈ ವೈರಸ್‌ಗೆ ಪ್ರತ್ಯೇಕ ವ್ಯಾಕ್ಸಿನ್ ಇಲ್ಲ. ಡಿಸ್ಟೆಂಪರ್, ಹೆಪಟೈಟಿಸ್, ಲ್ಯಾಕ್ಟೋಸ್ಪೋರಿಯಾಸಿಸ್, ಪಾರ್ವೋ ವೈರಸ್, ಪ್ಯಾರಾ ಇನ್‌ಫ್ಲುೃಯೆಂಜಾ ವೈರಸ್ ಹೀಗೆ ನಾಲ್ಕೈದು ಕಾಯಿಲೆಗಳಿಗೆ ಸಂಬಂಧಿಸಿ ಒಂದೇ ವ್ಯಾಕ್ಸಿನ್ ನೀಡಲಾಗುತ್ತದೆ. ವಿವಿಧ ಕಂಪನಿಗಳ ವ್ಯಾಕ್ಸಿನ್ ಲಭ್ಯವಿದ್ದು, ಕನಿಷ್ಠ 650 ರೂ.ನಿಂದ 800 ರೂ.ವರೆಗೆ ದರವಿದೆ. ನಾಯಿ-ಬೆಕ್ಕಿಗೆ ಸಂಬಂಧಿಸಿದ ಯಾವುದೇ ವ್ಯಾಕ್ಸಿನ್ ಸರ್ಕಾರದಿಂದ ಉಚಿತ ಸಿಗುವುದಿಲ್ಲ. ಸರ್ಕಾರ ಅಗ್ಗದ ದರದಲ್ಲಿ ವ್ಯಾಕ್ಸಿನ್ ಪೂರೈಕೆ ವ್ಯವಸ್ಥೆ ಮಾಡಿದರೆ, ಈ ವೈರಸ್‌ನಿಂದ ನಾಯಿಗಳನ್ನು ರಕ್ಷಿಸಬಹುದು ಎನ್ನುತ್ತಾರೆ ಶ್ವಾನ ಪ್ರೇಮಿಗಳು.

    60 ನಾಯಿಗಳಿಗೆ ಸೋಂಕು: ಬೀದಿನಾಯಿಗಳ ಮೂಲಕ ಹರಡುವುದರಿಂದ ಎಷ್ಟು ನಾಯಿಗಳಿಗೆ ಈ ವೈರಸ್ ಬಂದಿದೆ ನಿಖರ ಮಾಹಿತಿ ಇಲ್ಲ. ಮಂಗಳೂರಿನ ಶಕ್ತಿನಗರದ ಅನಿಮಲ್ ಕೇರ್ ಟ್ರಸ್ಟ್ ಸಂಸ್ಥೆಯ ದಾಖಲೆ ಪ್ರಕಾರ, ಮಂಗಳೂರು ವ್ಯಾಪ್ತಿಯಲ್ಲಿ 60 ನಾಯಿಗಳಿಗೆ ಈ ವೈರಸ್ ತಗಲಿದೆ. ಕಳೆದ ವರ್ಷ 200 ಪ್ರಕರಣಗಳು ವರದಿಯಾಗಿತ್ತು. ಇವುಗಳಲ್ಲಿ ಬಹುತೇಕ ಬೀದಿನಾಯಿಗಳು. ಈ ಬಾರಿ ಚಳಿಗಾಲ ಆರಂಭವಾಗುವುದಕ್ಕೆ ಮುನ್ನವೇ ಅಂದರೆ ಅಕ್ಟೋಬರ್-ನವೆಂಬರ್ ತಿಂಗಳಲ್ಲೇ ಈ ವೈರಸ್ ಪತ್ತೆಯಾಗಿದೆ. ಮಾರ್ಚ್‌ವರೆಗೂ ಇವುಗಳು ಹರಡುವ ಸಾಧ್ಯತೆ ಇರುವುದರಿಂದ ಎಚ್ಚರ ಅಗತ್ಯ.

    ಏನಿದು ವೈರಸ್?: ಕ್ಯಾನೈನ್ ಡಿಸ್ಟೆಂಪರ್ ನಾಯಿಗಳಿಗೆ ಬರುವ ವೈರಸ್ ಕಾಯಿಲೆ. ಗಾಳಿಯಲ್ಲಿ ಹರಡುತ್ತದೆ. ನಿಯಮಿತ ವ್ಯಾಕ್ಸಿನ್ ನೀಡುವುದರಿಂದ ಶ್ವಾನಗಳನ್ನು ರೋಗಕ್ಕೆ ಒಳಗಾಗದಂತೆ ನೋಡಿಕೊಳ್ಳಬಹುದು. ಆದರೆ ಬೀದಿನಾಯಿಗಳು ವ್ಯಾಕ್ಸಿನ್‌ನಿಂದ ವಂಚಿತವಾಗುವುದರಿಂದ ಮತ್ತು ಅವುಗಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದು ವೈರಸ್ ಹರಡಲು ಪ್ರಮುಖ ಕಾರಣ. ಬೀದಿನಾಯಿಗಳಿಂದ ಸಾಕು ನಾಯಿಗಳಿಗೂ ರೋಗ ಹರಡುವ ಸಾಧ್ಯತೆ ಹೆಚ್ಚು. ಶ್ವಾನ ಪ್ರೇಮಿಗಳು ಎಚ್ಚರಿಕೆ ವಹಿಸಬೇಕಾದ ಅಗತ್ಯವಿದೆ ಎನ್ನುತ್ತಾರೆ ವೈದ್ಯರು.

    ಮಿದುಳು, ಶ್ವಾಸಕೋಶ ಮೇಲೆ ಪರಿಣಾಮ: ಈ ವೈರಸ್ ಮಿದುಳು(ನರ) ಮತ್ತು ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತದೆ. ಮೊದಲು ನಾಯಿಗಳಿಗೆ ಜ್ವರ ಬಂದು ನಂತರ ಕಾಲು ಕೈ ಸೇರಿದಂತೆ ದೇಹವೆಲ್ಲ ನೋವಿನಿಂದ ಕೂಡಿರುತ್ತದೆ. ನಿಲ್ಲಲೂ ಸಾಧ್ಯವಾಗುವುದಿಲ್ಲ. ಬೀದಿನಾಯಿಗಳಾದರೆ ಆಹಾರ ಹುಡುಕಿಕೊಂಡು ಹೋಗಲೂ ಸಮಸ್ಯೆಯಾಗುತ್ತದೆ. ಮೂಗಿನಲ್ಲಿ ನೀರು, ಸಿಂಬಳ ಹರಿಯುತ್ತದೆ. ಮಿದುಳಿನ ಮೂಲಕ ನರಮಂಡಲಕ್ಕೆ ಬಂದಿದ್ದರೆ ಕೈ, ಬಾಯಿಗೆ ಪಾರ್ಶ್ವವಾಯು ಬಂದು ಸೊಟ್ಟಗಾಗುತ್ತದೆ. ಸೂಕ್ತ ಆರೈಕೆ ಇಲ್ಲದಿದ್ದರೆ ಒಂದೇ ವಾರದಲ್ಲಿ ಸಾವು.

    ಕ್ಯಾನೈನ್ ಡಿಸ್ಟೆಂಪರ್ ವೈರಸ್ ಚಳಿಗಾಲದಲ್ಲಿ ಹೆಚ್ಚಾಗಿ ಹರಡುತ್ತದೆ. ಬೀದಿನಾಯಿಗಳಲ್ಲಿ ಕಂಡು ಬರುವ ಈ ವೈರಸ್ ಮಿದುಳು-ಶ್ವಾಸಕೋಶಕ್ಕೆ ಹರಡಿ ಜ್ವರ, ಮೈ ಕೈನೋವು ಕಾಣಿಸಿಕೊಂಡು ಪ್ರಾಣಾಪಾಯದ ಹಂತದವರೆಗೆ ಹೋಗುತ್ತದೆ. ಈ ಬಾರಿಯೂ ಕೆಲ ಪ್ರಕರಣಗಳು ಕಂಡುಬಂದಿವೆ. ಲಸಿಕೆ ಇದೆ. ಆದರೆ ಸರ್ಕಾರದಿಂದ ಉಚಿತವಾಗಿ ದೊರೆಯುವುದಿಲ್ಲ.

    ಡಾ.ರಾಮಪ್ರಕಾಶ್ ಡಿ
    ಉಪನಿರ್ದೇಶಕರು, ಪಶು ಪಾಲಿಕ್ಲಿನಿಕ್, ಮಂಗಳೂರು

    ವೈರಸ್ ಹಾವಳಿಯಿಂದ ನಾವು ಸೋತು ಹೋಗಿದ್ದೇವೆ. ಎಲ್ಲ ಕಡೆ ಈ ವೈರಸ್ ಹಾವಳಿ ಇದ್ದರೂ, ಕರಾವಳಿಯ ಹವಾಗುಣದಲ್ಲಿ ಇದು ಹೆಚ್ಚು ಹರಡುತ್ತಿದೆ. ಮೂರು ವರ್ಷದಿಂದ ಇದು ಕಾಡುತ್ತಿದ್ದು, ಈ ಬಾರಿ ವರ್ಷವಿಡೀ ವೈರಸ್‌ನಿಂದ ಸಾಕಷ್ಟು ನಾಯಿಗಳು ಸಾವನ್ನಪ್ಪಿದ್ದು, ಸಂಕಷ್ಟ ಅನುಭವಿಸಿವೆ. ಸರ್ಕಾರ ಆದ್ಯತೆ ಮೇರೆಗೆ ಸಬ್ಸಿಡಿ ದರದಲ್ಲಿ ಲಸಿಕೆ ಪೂರೈಸಲು ವ್ಯವಸ್ಥೆ ಮಾಡಬೇಕು.

    ಸುಮಾ ರಮೇಶ್
    ಗೌರವ ಟ್ರಸ್ಟಿ, ಎನಿಮಲ್ ಕೇರ್ ಟ್ರಸ್ಟ್ ಶಕ್ತಿನಗರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts