More

    ಶ್ವಾನಗಳ ಪಾಲನೆ, ಪೋಷಣೆಗೆ ಆದ್ಯತೆ ನೀಡಿ

    ಚಿಂಚೋಳಿ: ಗಡಿ ತಾಲೂಕಿನಲ್ಲಿ ದೇಶ, ವಿದೇಶಗಳ ತಳಿಯ ಶ್ವಾನಗಳನ್ನು ಪೋಷಣೆ ಮಾಡುತ್ತಿರುವುದು ಖುಷಿ ತಂದಿದೆ ಎಂದು ಪಶು ವೈದ್ಯಕೀಯ ಜಿಲ್ಲಾ ಉಪ ನಿರ್ದೇಶಕ ಡಾ.ಎಸ್.ಡಿ.ಅವಟಿ ಹೇಳಿದರು.

    ಸರ್ಕಾರಿ ಪ್ರಥಮದರ್ಜೆ ಕಾಲೇಜು ಆವರಣದಲ್ಲಿ ಜಿಲ್ಲಾ ಪಂಚಾಯಿತಿ, ಪಶು ಪಾಲನ, ಪಶು ವೈದ್ಯಕೀಯ ಸೇವಾ ಇಲಾಖೆ, ಪಶು ಆಸ್ಪತ್ರೆಯಿಂದ ಭಾನುವಾರ ಹಮ್ಮಿಕೊಂಡಿದ್ದ ಶ್ವಾನ ಪ್ರದರ್ಶನದಲ್ಲಿ ಮಾತನಾಡಿದ ಅವರು, ಶ್ವಾನ ಪ್ರಿಯರಿಗೆ ಉತ್ತೇಜನೆ ನೀಡುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ. ಪ್ರತಿ ಶ್ವಾನವು ಆಕರ್ಷಣಿಯವಾಗಿದ್ದು, ಉತ್ತಮ ರೀತಿಯಲ್ಲಿ ಪಾಲನೆ ಹಾಗೂ ಪೋಷಣೆ ಮಾಡಬೇಕು ಎಂದು ಸಲಹೆ ನೀಡಿದರು.

    ಶ್ವಾನಗಳ ಪೋಷಣೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಂಕಲ್ಪ ಮಾಡಲಾಗಿದೆ. ಸೋಲು- ಗೆಲುವು ಮುಖ್ಯವಲ್ಲ, ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ಪ್ರಮುಖ. ಸ್ಪರ್ಧೆಯಲ್ಲಿ ಭಾಗಿಯಾದ ಎಲ್ಲರಿಗೂ ಪ್ರಶಸ್ತಿ ನೀಡಲಾಗಿದೆ. ವಿವಿಧ ತಳಿಯ ತಲಾ ೯ ಶ್ವಾನಗಳು ಪ್ರಥಮ, ದ್ವಿತೀಯ ಸ್ಥಾನ ಪಡೆದಿವೆ. ಕೆರಳ್ಳಿಯ ಚನ್ನಪ್ಪ ಅವರ ಮುಧೋಳ ತಳಿಯ ಶ್ವಾನ ಚಾಂಪಿಯನ್ ಆಫ್ ಚಾಂಪಿಯನ್ ಪ್ರಶಸ್ತಿ ತನ್ನದಾಗಿಸಿಕೊಂಡಿದೆ ಎಂದರು.

    ಪಶು ವೈದ್ಯಾಧಿಕಾರಿ ಡಾ.ಧನರಾಜ ಬೊಮ್ಮಾ, ಪ್ರಮುಖರಾದ ಡಾ.ಭಗವಂತಪ್ಪ, ಡಾ.ವೆಂಕಣ್ಣಗೌಡ, ಡಾ.ರಘುವೀರ ಪ್ರಸಾದ, ಡಾ. ಶಿವಕಾಂತ, ಡಾ.ಗುರುನಾಥ, ಡಾ.ಸೂರ್ಯಕಾಂತ ಪಡಶೆಟ್ಟಿ, ಡಾ.ಮಲ್ಲಿಕಾರ್ಜುನ ಗುತ್ತೇದಾರ್, ಡಾ.ರಾಜವರ್ಮನ್, ಡಾ. ಸಂತೋಷಕುಮಾರ, ಡಾ.ನಾಸೀರ್‌ಶಾಹ, ಡಾ.ತೃಪ್ತಿ, ಡಾ.ನಿರೂಪ್, ಡಾ.ರಾಮ, ಶ್ರೀನಿವಾಸ ಪಾಟೀಲ್, ವೀರಭದ್ರಪ್ಪ, ರಾಮಯ್ಯ ಕಮಲಾಕರ್, ಅನೀಲರೆಡ್ಡಿ, ಮಹಾದೇವ, ಚಂದ್ರಶೇಖರ ಚಿಕ್ಕಮಠ, ರೇವಣಸಿದ್ದಪ್ಪ ಮಟ್ಟಿ, ಡಾ.ಓಂಕಾರ ಇತರರಿದ್ದರು.

    ೮೯ ತಳಿ ಶ್ವಾನಗಳು ಭಾಗಿ: ಚಿಂಚೋಳಿಯಲ್ಲಿ ಆಯೋಜಿಸಿದ್ದ ಶ್ವಾನ ಪ್ರದರ್ಶನದಲ್ಲಿ ಸುಮಾರು ೮೯ ಶ್ವಾನಗಳು ಭಾಗವಹಿಸಿದ್ದವು. ಇದರಲ್ಲಿ ಮುಧೋಳ, ಪೊಮೆರೇನಿಯನ್, ಲ್ಯಾಬ್ರಡಾರ್ ರಿಟ್ರೈವರ್, ಸ್ಟಿಜು, ಜರ್ಮನ್ ಶಫರ್ಡ್, ಪಿಗ್, ಡಾಬರಮನ್, ಸೈಬೇರಿಯನ್ ಹಸ್ಕಿ, ಚೌಚೌ, ಫಾಕ್ಸ್ ಟೆರಿಯರ್, ಗೊಲ್ಡನ್ ರಿಟ್ರೈವರ್ ಸೇರಿ ಇನ್ನಿತರ ತಳಿಯ ಶ್ವಾನಗಳು ಪ್ರದರ್ಶನದಲ್ಲಿ ಗಮನ ಸೆಳೆದವು. ಆಂಟಿ ರೇಬೀಸ್ ಲಸಿಕೆ ನೀಡುವುದರ ಜತೆಗೆ ಪೆಡಿಗ್ರಿ, ಫೀಡಿಂಗ್ ಚೌಲ, ಹಾಲು ಹಾಗೂ ಪಾರಿತೋಷಕವಾಗಿ ನೀಡಲಾಯಿತು. ಚಿಂಚೋಳಿಯ ವೀರೇಶ ಕುಲಕರ್ಣಿ ಅವರ ಲ್ಯಾಬ್ರಡಾರ್ ರಿಟ್ರೈವರ್ ತಳಿಯ ಶ್ವಾನವು ನೆರೆದ ಜನಸ್ತೋಮಕ್ಕೆ ನಮಸ್ಕರಿಸುವ ಮೂಲಕ ಗಮನ ಸೆಳೆಯಿತು.

    ನಾನೊಬ್ಬ ಕೃಷಿಕನಾಗಿದ್ದು, ಶ್ವಾನ ಸಾಕುವುದೆಂದರೆ ಬಲು ಪ್ರೀತಿ. ಕೆಲ ವರ್ಷಗಳಿಂದ ಮುಧೋಳ ಹಾಗೂ ಲ್ಯಾಬ್ರಡಾರ್ ತಳಿಯ ಶ್ವಾನಗಳನ್ನು ತಂದು ಪೋಷಣೆ ಮಾಡುತ್ತಿದ್ದೇನೆ. ಚಿಂಚೋಳಿಯಲ್ಲಿ ಶ್ವಾನ ಪ್ರದರ್ಶನ ಆಯೋಜಿಸಿರುವ ಬಗ್ಗೆ ಮಾಹಿತಿ ಬಂತು, ಹೀಗಾಗಿ ಮುಧೋಳ ತಳಿಯ ಶ್ವಾನವನ್ನು ತಂದಿದ್ದೆ. ಅದಕ್ಕೆ ಪ್ರಶಸ್ತಿ ದೊರೆತಿರುವುದು ಖುಷಿ ತಂದಿದೆ.
    | ಚನ್ನಪ್ಪ ಕೆರಳ್ಳಿ, ಚಾಂಪಿಯನ್ ಆಫ್ ಚಾಂಪಿಯನ್ ಪ್ರಶಸ್ತಿ ಪಡೆದ ಶ್ವಾನದ ಮಾಲೀಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts