More

    ಕಾಂಗ್ರೆಸ್​ಗೆ ಶೂನ್ಯಸಾಧನೆ ಕಳಂಕ ತಪ್ಪುವುದೇ?

    ರಾಘವ ಶರ್ಮ ನಿಡ್ಲೆ, ನವದೆಹಲಿ
    ಮರುಭೂಮಿ, ರಾಜ-ಮಹಾರಾಜರ ಮನೆತನಗಳ ನೆಲೆಬೀಡಾಗಿರುವ ರಾಜಸ್ಥಾನದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯೇ ಎದುರಾಳಿಗಳು. 2014 ಮತ್ತು 2019ರ ಲೋಕಸಭೆ ಚುನಾವಣೆಯಲ್ಲಿ ರಾಜಸ್ಥಾನದ ಮತದಾರರು ಸಂಪೂರ್ಣವಾಗಿ ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಈ ಎರಡೂ ಚುನಾವಣೆಗಳಲ್ಲಿ ಬಿಜೆಪಿ ಎಲ್ಲ 25 ಕ್ಷೇತ್ರಗಳನ್ನು ಗೆದ್ದುಕೊಂಡಿತ್ತು. ರಾಜ್ಯದಲ್ಲಿ ಬಿಜೆಪಿ ಸರ್ಕಾರವಿರುವುದರಿಂದ ಕಾಂಗ್ರೆಸ್ ಮುಂದೆ ದೈತ್ಯ ಸವಾಲಿರುವುದು ಸುಳ್ಳಲ್ಲ.

    2014ರ ಲೋಕಸಭೆ ಚುನಾವಣೆಯಲ್ಲಿ ಪ್ರಚಂಡ ಮೋದಿ ಅಲೆ ಪರಿಣಾಮ ಬಿಜೆಪಿ ಶೇಕಡ 55ರಷ್ಟು ಮತ ಗಳಿಸಿ ಹೊಸ ಇತಿಹಾಸ ಬರೆದಿತ್ತು. 2019ರಲ್ಲಿ ಈ ಸಾಧನೆ ಮೀರಿದ ಕೇಸರಿಪಡೆ, ತನ್ನ ಮತಗಳಿಕೆ ಪ್ರಮಾಣವನ್ನು ಶೇ.59ಕ್ಕೆ ಏರಿಸಿಕೊಂಡಿತ್ತು. ಎರಡೂ ಚುನಾವಣೆಗಳಲ್ಲೂ ಪ್ರಧಾನಿ ಮೋದಿ ಜನಪ್ರಿಯತೆಯೇ ಪಕ್ಷಕ್ಕೆ ಬಹುದೊಡ್ಡ ವರದಾನವಾಗಿತ್ತು. ಪ್ರಬಲ ಸಮುದಾಯಗಳಾದ ರಜಪೂತ, ಜಾಟ್ ಸೇರಿ ಬಹುಪಾಲು ಮಂದಿ ಕೇಂದ್ರದ ಬಿಗಿ ನಾಯಕತ್ವಕ್ಕೆ ಮತ ಹಾಕಿದ್ದವು. ಕಳೆದ ಚುನಾವಣೆಯಲ್ಲಿ ಪಾಕ್ ಮೇಲಿನ ಬಾಲಕೋಟ್ ದಾಳಿ, ರಾಜತಾಂತ್ರಿಕ ಮೇಲುಗೈ ಸೇರಿ ಹಲವು ವಿಷಯಗಳೂ ಚುನಾವಣಾ ಕಣದಲ್ಲಿ ಸದ್ದು ಮಾಡಿದ್ದವು. ಈ ಬಾರಿ ರಾಮಮಂದಿರ, ಭದ್ರ, ಸ್ಥಿರ ಆಡಳಿತ, ಡಬಲ್ ಇಂಜಿನ್ ಸರ್ಕಾರ ಸೇರಿ ಹಲವು ಅಸ್ತ್ರಗಳು ಬಿಜೆಪಿ ಬತ್ತಳಿಕೆಯಲ್ಲಿವೆ. ಏಪ್ರಿಲ್ 19ರ ಮೊದಲ ಚರಣದಲ್ಲಿ ರಾಜ್ಯದ 11 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.

    ಕ್ಲೀನ್​ಸ್ವೀಪ್​ನಿಂದ ಶೂನ್ಯಕ್ಕೆ: 1984ರಲ್ಲಿ ಇಂದಿರಾ ಗಾಂಧಿ ಹತ್ಯೆ ಯಿಂದಾಗಿ ಜನರಲ್ಲಿ ಅನುಕಂಪದ ಅಲೆ ಹೆಚ್ಚಾಗಿ ಅದೇ ವರ್ಷದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ರಾಜ್ಯದ 25 ಸೀಟುಗಳನ್ನೂ ತನ್ನದಾಗಿಸಿಕೊಂಡಿತ್ತು. ಆಗ ಶಿವಚರಣ್ ಮಾಥುರ್ ಮುಖ್ಯಮಂತ್ರಿಯಾಗಿದ್ದರು. ಆದರೆ ನಾಲ್ಕೇ ವರ್ಷಗಳಲ್ಲಿ ಕಾಂಗ್ರೆಸ್ ಹಣೆಬರಹ ಬದಲಾಗಿತ್ತು. ಪ್ರಧಾನಿ ರಾಜೀವ್ ಗಾಂಧಿ ಮೇಲಿನ ಬೋಫೋರ್ಸ್ ಹಗರಣದ ಆರೋಪದಿಂದಾಗಿ ಕಾಂಗ್ರೆಸ್ 25 ಸೀಟುಗಳಲ್ಲೂ ಸೋಲನುಭವಿಸಿತ್ತು. ಬಿಜೆಪಿಗೆ 13 ಮತ್ತು ಜನತಾದಳಕ್ಕೆ 11 ಸೀಟುಗಳು ಬಂದಿದ್ದವು. ಆಗಲೂ ಕಾಂಗ್ರೆಸ್​ನ ಮಾಥುರ್ ಅವರೇ ರಾಜ್ಯದ ಸಿಎಂ ಆಗಿದ್ದರು.

    ಅಲ್ವಾರ್​ನಿಂದ ಭೂಪೇಂದ್ರ ಯಾದವ್: ರಾಜ್ಯಸಭೆ ಸದಸ್ಯ, ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್ ಮೊದಲ ಸಲ ಲೋಕಸಭೆ ಚುನಾವಣೆಯಲ್ಲಿ್ಲ ಸ್ಪರ್ಧಿಸುತ್ತಿದ್ದು, ಅಲ್ವಾರ್ ಕ್ಷೇತ್ರದಿಂದ ಕಣದಲ್ಲಿದ್ದಾರೆ. ಪಿಎಂ ಮೋದಿ, ಗೃಹ ಸಚಿವ ಅಮಿತ್ ಷಾ ಜತೆ ಸೇರಿ ವಿವಿಧ ವಿಧಾನಸಭೆ ಚುನಾವಣೆಗಳಿಗೆ ರಣನೀತಿ ರೂಪಿಸುತ್ತಿದ್ದ ಭೂಪೇಂದ್ರ ಯಾದವ್, ಬಿಜೆಪಿ ವರಿಷ್ಠ ವರ್ಗದಲ್ಲಿ ಮಹತ್ವದ ಸ್ಥಾನ ಪಡೆದಿದ್ದಾರೆ. ಹಿಂದೆ ಸುಪ್ರೀಂಕೋರ್ಟ್ ವಕೀಲರಾಗಿದ್ದ ಭೂಪೇಂದ್ರ ಯಾದವ್, ನಂತರದ ವರ್ಷಗಳಲ್ಲಿ ಅಮಿತ್ ಷಾ ಆಪ್ತವರ್ಗದಲ್ಲಿ ಗುರುತಿಸಿಕೊಂಡಿದ್ದರು.

    2019ರಲ್ಲಿ ಅಲ್ವಾರ್​ನಿಂದ ಮಹಾಂತ್ ಬಾಲಕ್​ನಾಥ್ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದಿದ್ದರು. 2023ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಈಗ ಶಾಸಕರಾಗಿರುವ ಹಿನ್ನೆಲೆಯಲ್ಲಿ ಯಾದವ್ ಚುನಾವಣೆ ನಿರ್ವಹಣೆ ಬದಲು ತಮ್ಮದೇ ಚುನಾವಣೆ ಗೆಲ್ಲುವ ಸವಾಲನ್ನೆದುರಿಸುತ್ತಿದ್ದಾರೆ. 2014ರಲ್ಲಿ ಇಲ್ಲಿಂದ ಮಹಾಂತ್ ಚಂದ್​ನಾಥ್ ಗೆಲುವು ಸಾಧಿಸಿದ್ದರೂ, 2018ರಲ್ಲಿ ಉಪ ಚುನಾವಣೆ ನಡೆದು, ಕಾಂಗ್ರೆಸ್​ನ ಕರಣ್ ಸಿಂಗ್ ಯಾದವ್ ಗೆಲುವು ಸಾಧಿಸಿದ್ದರು. ಆದರೆ, 2019ರಲ್ಲಿ ಕಾಂಗ್ರೆಸ್ ಸೋಲು ಅನುಭವಿಸಿತು.

    ಈ ಬಾರಿ, ಕಾಂಗ್ರೆಸ್ ಪ್ರಭಾವಿ ನಾಯಕ, ಹಾಲಿ ಶಾಸಕ ಲಲಿತ್ ಯಾದವ್​ಗೆ ಟಿಕೆಟ್ ನೀಡಿದೆ. ಕಳೆದೆರಡು ಚುನಾವಣೆಯಲ್ಲಿ ಮಾಜಿ ಕೇಂದ್ರ ಸಚಿವ, ಎಐಸಿಸಿ ಪ್ರಧಾನ ಕಾರ್ಯದರ್ಶಿ, ರಾಹುಲ್ ಗಾಂಧಿ ಆಪ್ತ, ಭನ್ವರ್ ಜಿತೇಂದ್ರ ಸಿಂಗ್ ಕ್ಷೇತ್ರದಿಂದ ಸ್ಪರ್ಧಿಸಿ, ಸೋತಿದ್ದರಿಂದ ಈ ಸಲ ಅಭ್ಯರ್ಥಿ ಬದಲಾಯಿಸಲಾಗಿದೆ. ಅಲ್ವಾರ್ ಕ್ಷೇತ್ರದಲ್ಲಿ ನೀರಿನ ಸಮಸ್ಯೆ ವ್ಯಾಪಕವಾಗಿದ್ದು, ಭೂಪೇಂದ್ರ ಯಾದವ್ ಪ್ರಚಾರಗೈಯುತ್ತಿರುವ ಗ್ರಾಮೀಣ ಭಾಗದಲ್ಲಿ ಜನರು ಜಲಸಮಸ್ಯೆಯಿಂದ ಮುಕ್ತಿ ನೀಡುವಂತೆ ಮನವಿ ಮಾಡುತ್ತಿದ್ದಾರೆ. ಕ್ಷೇತ್ರದ ಸಮಸ್ಯೆ ಪರಿಹರಿಸಲು ಮಹಾಂತ್ ಬಾಲಕ್​ನಾಥ್ ಏನೂ ಮಾಡಲಿಲ್ಲ ಎಂಬ ಆಕ್ರೋಶದ ಮಧ್ಯೆ ಭೂಪೇಂದ್ರ ಯಾದವ್ ಮೋದಿ-ಷಾಗೆ ಆಪ್ತರಾಗಿರುವುದರಿಂದ ನಮ್ಮ ಕ್ಷೇತ್ರ ಅಭಿವೃದ್ಧಿಯಾಗಲಿದೆ ಎಂಬ ಭರವಸೆಯೂ ಅನೇಕರಲ್ಲಿದೆ.

    ಮೇಘವಾಲ್ vs ಮೇಘವಾಲ್: ಥಾರ್ ಮರುಭೂಮಿಯ ನೆಲೆ ಬಿಕಾನೇರ್ ಈ ಬಾರಿ ಮೇಘವಾಲ್ ದ್ವಯರ ಕಾಳಗಕ್ಕೆ ಸಾಕ್ಷಿಯಾಗುತ್ತಿದೆ. ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘವಾಲ್ ತಮ್ಮ ಸೀಟನ್ನು ಉಳಿಸಿಕೊಳ್ಳುವ ಹೋರಾಟದಲ್ಲಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ಗೋವಿಂದ ರಾಮ್ ಮೇಘವಾಲ್, 2004ರಿಂದ ಬಿಜೆಪಿ ತೆಕ್ಕೆಯಲ್ಲಿರುವ ಕ್ಷೇತ್ರವನ್ನು ತಮ್ಮದಾಗಿಸಿಕೊಳ್ಳುವ ತವಕದಲ್ಲಿದ್ದಾರೆ. 2009, 2014, 2019ರಲ್ಲಿ ಬಿಕಾನೇರ್ ಕ್ಷೇತ್ರ ಗೆದ್ದಿರುವ ಅರ್ಜುನ್ ರಾಮ್ ನಾಲ್ಕನೇ ಬಾರಿಗೆ ಗೆದ್ದು ಮತ್ತೆ ಪ್ರಧಾನಿ ಮೋದಿ ನೇತೃತ್ವದ ಸಚಿವ ಸಂಪುಟಕ್ಕೆ ಸೇರ್ಪಡೆಯಾಗುವ ನಂಬಿಕೆಯಲ್ಲಿದ್ದಾರೆ. ವಿವಿಧ ರಾಜ್ಯ ಖಾತೆಗಳನ್ನು ನಿಭಾಯಿಸಿರುವ ಅರ್ಜುನ್ ರಾಮ್ ಬಿಜೆಪಿಯ ಪ್ರಭಾವಿ ಜನನಾಯಕರೂ ಹೌದು. ರಾಜಸ್ಥಾನ ಸಿಎಂ ಸ್ಥಾನಕ್ಕೆ ಅವರ ಹೆಸರೂ ಕೇಳಿಬಂದಿತ್ತು. 2004ರಲ್ಲಿ ಬಿಕಾನೇರ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಬಾಲಿವುಡ್ ನಟ ಧಮೇಂದ್ರ ಸ್ಪರ್ಧಿಸಿ, ಗೆದ್ದಿದ್ದರು. ಬಿಕಾನೇರ್ ವ್ಯಾಪ್ತಿಯಲ್ಲಿ 8 ವಿಧಾನಸಭೆಗಳಿದ್ದು, 6ರಲ್ಲಿ ಬಿಜೆಪಿ ಶಾಸಕರಿದ್ದಾರೆ.

    ಚುರು ಸಂಘರ್ಷ ಜೋರು: ರಾಜಸ್ಥಾನದ ಶೇಖಾವತಿ ಪ್ರಾಂತ್ಯದ ಚುರು ಲೋಕಸಭೆ ಈ ಬಾರಿ ಪಕ್ಷಕ್ಕಿಂತ ಹೆಚ್ಚು ಜಾಟ್ ಮತ್ತು ರಜಪೂತ ಸಮುದಾಯಗಳ ನಾಯಕರ ವೈಯಕ್ತಿಕ ಕದನಕ್ಕೆ ಸದ್ದು ಮಾಡುತ್ತಿದೆ. ಕಳೆದೆರೆಡು ಚುನಾವಣೆಗಳಲ್ಲಿ ಬಿಜೆಪಿಯಿಂದ ಜಾಟ್ ಸಮುದಾಯದ ರಾಹುಲ್ ಕಾಸ್ವಾನ್ ಸಂಸದರಾಗಿ ಆಯ್ಕೆಯಾಗಿದ್ದರು. ಆದರೆ, ಅಚ್ಚರಿಯ ಬೆಳವಣಿಗೆಯಲ್ಲಿ ಕಾಸ್ವಾನ್ ಬದಲಿಗೆ ಪ್ಯಾರಾಒಲಿಂಪಿಕ್ ಜ್ಯಾವೆಲಿನ್ ಎಸೆತಗಾರ ದೇವೇಂದ್ರ ಜಜಾರಿಯಾಗೆ ಬಿಜೆಪಿ ಟಿಕೆಟ್ ನೀಡಿದೆ. ಬಿಜೆಪಿ ನಾಯಕ, 7 ಬಾರಿ ಶಾಸಕರಾಗಿರುವ ರಾಜೇಂದ್ರ ಸಿಂಗ್ ರಾಠೋಡ್ ಟಿಕೆಟ್ ತಪ್ಪಿಸಿದ್ದಾರೆ ಎಂದು ಕಾಸ್ವಾನ್ ಆಕ್ರೋಶಗೊಂಡಿದ್ದು, ಚುರುವಿನಲ್ಲಿ ಕಾಸ್ವಾನ್ ವರ್ಸಸ್ ರಾಜೇಂದ್ರ ರಾಠೋಡ್ ಎಂಬ ವಾತಾವರಣ ಸೃಷ್ಟಿಯಾಗಿದೆ. ರಾಜೇಂದ್ರ ರಾಠೋಡ್ ಕೂಡ ಇಲ್ಲಿಂದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಬಿಜೆಪಿ ವರಿಷ್ಠರ ತೀರ್ವನದಿಂದ ಸಿಟ್ಟಾದ ಕಾಸ್ವಾನ್, ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ‘35 ವರ್ಷಗಳಿಂದ ರಾಜಕಾರಣದಲ್ಲಿದ್ದೇವೆ, ಏಕಾಏಕಿ ಟಿಕೆಟ್ ತಪ್ಪಿಸಿದರೆ ಸುಮ್ಮನೆ ಕೂರಬೇಕೆ’ ಎಂದು ಹೈಕಮಾಂಡ್ ವಿರುದ್ಧವೇ ಬಂಡೆದ್ದಿದ್ದಾರೆ. ರಾಹುಲ್ ಕಾಸ್ವಾನ್ ತಂದೆ ರಾಮ್ ಸಿಂಗ್ ಕಾಸ್ವಾನ್ ಮತ್ತು ರಾಜೇಂದ್ರ ರಾಠೋಡ್ ಬಿಜೆಪಿ ಮಾಜಿ ನಾಯಕ, ಮಾಜಿ ಉಪರಾಷ್ಟ್ರಪತಿ ಭೈರೋನ್ ಸಿಂಗ್ ಶೆಖಾವತ್ ಗರಡಿಯಲ್ಲಿ ಬೆಳೆದವರು. ರಾಮ್ ಸಿಂಗ್ ರಾಷ್ಟ್ರ ರಾಜಕಾರಣ ಮತ್ತು ರಾಜೇಂದ್ರ ರಾಠೋಡ್ ರಾಜ್ಯ ರಾಜಕಾರಣದಲ್ಲಿ ಪ್ರಭಾವಿಯಾಗಿದ್ದರು. ಚುರು ಲೋಕಸಭೆ ವ್ಯಾಪ್ತಿಯಲ್ಲಿ 8 ವಿಧಾನಸಭೆಗಳಿದ್ದು, 5ರಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts