More

    ಮೂರನೇ ಅಲೆಯಲ್ಲಿ ಮತ್ತಷ್ಟು ಮುರುಟಿ ಹೋಗುವವೇ ಮಧ್ಯಮ-ಸಣ್ಣ ಕೈಗಾರಿಕೆಗಳು?

    ಮೂರನೇ ಅಲೆಯಲ್ಲಿ ಮತ್ತಷ್ಟು ಮುರುಟಿ ಹೋಗುವವೇ ಮಧ್ಯಮ-ಸಣ್ಣ ಕೈಗಾರಿಕೆಗಳು?| ಗಿರೀಶ್ ಲಿಂಗಣ್ಣ
    ವ್ಯವಸ್ಥಾಪಕ ನಿರ್ದೇಶಕ,
    ಎ.ಡಿ.ಡಿ. ಇಂಜಿನಿಯರಿಂಗ್ ಇಂಡಿಯಾ (ಇಂಡೋ -ಜರ್ಮನ್ ಸಂಸ್ಥೆ)

    ಕೋವಿಡ್ 19ರ ಸಮಯದಲ್ಲಿ ವ್ಯಾಪಾರದ ರೀತಿಯು ಖಚಿತವಾಗಿಯೂ ಬದಲಾಗಿದೆ. ಬಹುಶಃ ಮತ್ತೆ ಅದನ್ನು ಮೊದಲಿನ ಸ್ಥಿತಿಗೆ ತರಲಾಗುವುದಿಲ್ಲ. ಜನರು ಮತ್ತು ಅವರ ಜೀವನೋಪಾಯದ ಮೇಲೂ ಬಹುದೊಡ್ಡ ಪರಿಣಾಮವೂ ಉಂಟಾಗಿದೆ.

    ಐಎಲ್ಒ ಪ್ರಕಾರ, ಭಾರತದಲ್ಲಿ ಅನೌಪಚಾರಿಕ ಆರ್ಥಿಕತೆಯಲ್ಲಿ ಕೆಲಸ ಮಾಡುವ ಸುಮಾರು 40 ಕೋಟಿ ಜನರು (ಒಟ್ಟು ಉದ್ಯೋಗಿಗಳ 76.2%) ಬಡತನದ ಅಪಾಯದಲ್ಲಿದ್ದಾರೆ ಎಂದು ಹೇಳಲಾಗಿದೆ.

    ತಜ್ಞರ ಪ್ರಕಾರ SARS-CoV-2 ಅಥವಾ ಮೂರನೇ ಅಲೆಯಲ್ಲಿ ಅದರ ರೂಪಾಂತರವಾದ ಒಮಿಕ್ರಾನ್ ಫೆಬ್ರವರಿ 2022ರಲ್ಲಿ ಸೋಂಕಿನ ಗರಿಷ್ಠ ಮಟ್ಟವನ್ನು ತಲುಪುವ ಸಾಧ್ಯತೆಯಿದೆ. ಎರಡು ಅಲೆಗಳ ಹೊಡೆತದಿಂದ ಚೇತರಿಸಿಕೊಳ್ಳಲು ಸಾಧ್ಯವಾಗದೆ ತಂತಿಯ ಮೇಲೆ ನಡೆಯುತ್ತಿರುವ ಸಣ್ಣ ವ್ಯವಹಾರಗಳು ಇದರಿಂದ ಆತಂಕದಲ್ಲಿವೆ. ಈಗಾಗಲೇ ಹಲವು ರೂಪಾಂತರಗಳನ್ನು ಪಡೆದಿರುವ ಒಮಿಕ್ರಾನ್ “ಕಳವಳಕಾರಿ ರೂಪಾಂತರವಾಗಿದೆ” ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಘೋಷಿಸಿದೆ. ಡೆಲ್ಟಾ ಸೇರಿದಂತೆ ಕೋವಿಡ್‌ನ ಈ ಹಿಂದಿನ ಹಲವು ರೂಪಾಂತರಗಳು, ಅವುಗಳ ಹರಡುವಿಕೆ, ಉಗ್ರತೆ ಮತ್ತು ತೀವ್ರತೆಯನ್ನು ಅರ್ಥ ಮಾಡಿಕೊಳ್ಳಲು ಸಂಶೋಧಕರು ಜಾಗತಿಕ ಮಟ್ಟದಲ್ಲಿ ಪ್ರಯತ್ನಿಸುತ್ತಿರುವಾಗ, ಚಿಂತೆಗೆ ಕಾರಣವಾಗುವ ಇತರ ರೂಪಾಂತರಗಳಿಗೆ ಹೋಲಿಸಿದರೆ ಒಮಿಕ್ರಾನ್ ಮೂಲಕ ಮರು-ಸೋಂಕಿನ ಅಪಾಯ ಜಾಸ್ತಿ ಎಂಬುದನ್ನು ಪ್ರಾಥಮಿಕ ಪುರಾವೆಗಳು ಸೂಚಿಸಿವೆ.

    ಆದರೂ, ಲಭ್ಯವಿರುವ ಮಾಹಿತಿಯು ಸೀಮಿತವಾಗಿದೆ ಎಂದು ಡಬ್ಲ್ಯುಎಚ್ಒ ತಿಳಿಸಿದೆ. ಕಳೆದ ಎರಡು ಅಲೆಗಳಲ್ಲಿ ಎಂಎಸ್ಎಂಇಗಳ ಮೇಲೆ ಕೋವಿಡ್- 19ರ ಪರಿಣಾಮವು ಅತ್ಯಂತ ಕೆಟ್ಟದಾಗಿದೆ. ಈ ಅವಧಿಯಲ್ಲಿ ಅನೇಕ ಘಟಕಗಳು ಮುಚ್ಚಿದವು ಮತ್ತು/ಅಥವಾ ತಮ್ಮ ಉದ್ಯೋಗಿಗಳ ಸಂಖ್ಯೆಯನ್ನು ಕಡಿತಗೊಳಿಸುವ ಅನಿವಾರ್ಯ ಸ್ಥಿತಿ ಒದಗಿತು. ಆದರೆ, ನಿಖರವಾಗಿ ಎಷ್ಟು ಎಂಬುದು ತಿಳಿದಿಲ್ಲ. ಏಕೆಂದರೆ, ಉದ್ಯಮ ತಜ್ಞರ ಪ್ರಕಾರ, ಸರ್ಕಾರವು ಈ ಕುರಿತು ಯಾವುದೇ ದತ್ತಾಂಶವನ್ನು ದಾಖಲಿಸಿಲ್ಲ. ಎರಡನೇ ಅಲೆಯ ಸಮಯದಲ್ಲಿ ಸಾವಿನ ಪ್ರಮಾಣ ತೀವ್ರವಾಗಿದೆ. ಆದರೆ, ಆರ್ಥಿಕ ಪರಿಣಾಮವು ಮೊದಲ ಅಲೆಗಿಂತ ಸೌಮ್ಯವಾಗಿದೆ ಎಂದು ವರದಿಯಾಗಿದೆ. ಈಗ ಮೂರನೇ ಅಲೆಯು ಸಮೀಪಿಸುತ್ತಿರುವಂತೆ ತೋರುತ್ತಿದೆ. ತಜ್ಞರ ಪ್ರಕಾರ, ವೈರಾಣುವನ್ನು ನಿಯಂತ್ರಿಸಲು ಮತ್ತೆ ಕಠಿಣ ನಿರ್ಬಂಧಗಳ ಅಗತ್ಯ ಉಂಟಾಗಬಹುದು. ಇದರಿಂದ ವೈರಾಣು ಹರಡುವಿಕೆಯನ್ನು ಸಾಕಷ್ಟು ಮಟ್ಟಿಗೆ ನಿಯಂತ್ರಿಸಬಹುದು. ಇದರಲ್ಲಿ ಸ್ವಲ್ಪ ಲೋಪವಾದರೂ ಅದು ಎಷ್ಟರಮಟ್ಟಿನ ಅಡಚಣೆಯನ್ನು ಉಂಟುಮಾಡುತ್ತದೆ ಎನ್ನುವುದನ್ನು ಮುಂದಿನ ಕೆಲವೇ ವಾರಗಳಲ್ಲಿ ತಿಳಿಯಬಹುದು. ಆದರೆ, ಎಂಎಸ್‌ಎಂಇಗಳಲ್ಲಿ ಈ ವಿಷಯವು ಗಂಭೀರ ಸ್ವರೂಪದ ಕಳವಳವನ್ನು ಉಂಟುಮಾಡಿದೆ. ಅವುಗಳು ಉಸಿರು ಬಿಗಿ ಹಿಡಿದುಕೊಂಡು ಮುಂದಿನ ಸಂಗತಿಗಳು ಹೇಗೆ ತೆರೆದುಕೊಳ್ಳುತ್ತವೆ ಎಂಬುದನ್ನು ಕಾಯುತ್ತಿವೆ. ದೇವರೇ ಮುನಿಸಿಕೊಂಡರೆ, ಹೊಸ ರೂಪಾಂತರವು ಹೆಚ್ಚು ತೀವ್ರವಾಗಿರುತ್ತದೆ, ಆಗ ಎಲ್ಲರೂ ಅದಕ್ಕೆ ಬೆಲೆ ತೆರಬೇಕಾಗುತ್ತದೆ.

    ಸರ್ಕಾರ ಮಾಡಬೇಕಾದ ಕೆಲಸಗಳಲ್ಲಿ ಲಾಕ್‌ಡೌನ್ ಕೊನೆಯದಾಗಿರುತ್ತದೆ. ಅದು ಪೂರೈಕೆ ಸರಪಳಿಯನ್ನು ಹದಗೆಡಿಸುತ್ತದೆ. ಇದರ ಪರಿಣಾಮ ಉತ್ಪಾದನಾ ಕ್ಷೇತ್ರದ ಮೇಲಾಗುತ್ತದೆ. ಲಾಕ್‌ಡೌನ್ ಜಾರಿಯಾಗಿದ್ದೇ ಆದಲ್ಲಿ, ಆ ಅವಧಿಯಲ್ಲಿ ಉತ್ಪಾದನಾ ಚಟುವಟಿಕೆಯನ್ನು ಮುಂದುವರಿಸಲು ಎಂಎಸ್‌ಎಂಇಗಳು ಕನಿಷ್ಠ ಒಂದು ತಿಂಗಳಿಗೆ ಸಾಕಾಗುವಷ್ಟು ಕಚ್ಚಾ ವಸ್ತುಗಳ ದಾಸ್ತಾನು ಇರಿಸಿಕೊಳ್ಳಲು ಪ್ರಯತ್ನಿಸಬೇಕು. ಭಾರತೀಯ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಒಕ್ಕೂಟದ (ಎಫ್‌ಐಎಸ್‌ಎಂಇ) ಪ್ರಧಾನ ಕಾರ್ಯದರ್ಶಿ ಅನಿಲ್ ಭಾರದ್ವಾಜ್ ಅವರ ಪ್ರಕಾರ, ಸರ್ಕಾರವು ಎರಡನೇ ಅಲೆಯಿಂದ ಪಡೆದಿರುವ ಅನುಭವಗಳ ಆಧಾರದಲ್ಲಿ ಮೂರನೇ ಅಲೆಯ ಸಂದರ್ಭದಲ್ಲಿ ವ್ಯವಹಾರಗಳನ್ನು ನಡೆಸಲು ಅವಕಾಶ ನೀಡಬೇಕು.

    ದೇಶದಲ್ಲಿ ಕೋವಿಡ್‌ ಏರಿಕೆಯ ಮುನ್ಸೂಚನೆ ಗಣಿತದ ಮಾದರಿಯಲ್ಲಿ ಕೆಲಸ ಮಾಡುವ ವಿಜ್ಞಾನಿಗಳಲ್ಲಿ ಒಬ್ಬರಾಗಿರುವ ಐಐಟಿ ಕಾನ್ಪುರದ ಪ್ರೊಫೆಸರ್ ಮನೀಂದ್ರ ಅಗರವಾಲ್ ಅವರ ಒಂದು ಟ್ವೀಟ್ ಗಮನಾರ್ಹ: ಇತ್ತೀಚಿನ ವರದಿಯ ಪ್ರಕಾರ, ಪುರಾವೆಗಳ ಆಧಾರದ ಮೇಲೆ, ಭಾರತದಲ್ಲಿ ಈ ವರ್ಷದ ಆರಂಭದಲ್ಲಿ ಮೂರನೇ ಅಲೆಯು ಸೌಮ್ಯವಾಗಿದ್ದು,  “ಫೆಬ್ರವರಿ ಅವಧಿಯಲ್ಲಿ” ನಿತ್ಯ 1 ಲಕ್ಷದಿಂದ ಗರಿಷ್ಠ 1.5 ಲಕ್ಷ ಸೋಂಕಿನ ಪ್ರಕರಣಗಳು ದಾಖಲಾಗುವ ಸಾಧ್ಯತೆ ಇದೆ.

    ಭಾರತದಲ್ಲಿ ಒಮಿಕ್ರಾನ್ ಈಗಾಗಲೇ ಕಾಲಿಟ್ಟಿದೆ ಮತ್ತು ಹರಡುತ್ತಿದೆ ಎಂದು ಊಹಿಸಲು ಹಾಗೂ ಭವಿಷ್ಯದ ಪಥವನ್ನು ಊಹಿಸಲು ವಿವಿಧ ತೀರ್ಮಾನಗಳನ್ನು ಬಳಸಿಕೊಂಡು ಅಗರವಾಲ್ ಹೇಳಿದ್ದಿಷ್ಟು: “ಒಮಿಕ್ರಾನ್ ಯಾವುದೇ ಮಹತ್ವದ ರೀತಿಯಲ್ಲಿ ನೈಸರ್ಗಿಕ ಪ್ರತಿರಕ್ಷೆಯನ್ನು ಉಲ್ಲಂಘಿಸುತ್ತಿಲ್ಲ. ಆಸ್ಪತ್ರೆಗೆ ದಾಖಲಾಗುವ ಪ್ರಮಾಣವು ಇನ್ನೂ ಕಡಿಮೆಯಾಗಿದೆ. ಹೀಗಾಗಿ, ಪ್ರಕರಣಗಳು ಬಹುತೇಕ ಸೌಮ್ಯವಾಗಿರುವ ಸೂಚನೆಗಳಿವೆ. ಆದರೂ, ಖಚಿತಪಡಿಸಲು ಹೆಚ್ಚಿನ ಡೇಟಾ ನಿರೀಕ್ಷಿಸಲಾಗುತ್ತಿದೆ.”

    ಅದೇನೇ ಇದ್ದರೂ, ಜಾಗತಿಕವಾಗಿ ವರದಿಯ ಸಂಶೋಧನೆಗಳು ಇನ್ನೂ ಪೂರ್ವಭಾವಿಯಾಗಿವೆ. ವೈರಸ್ ತೀವ್ರವಾಗಿ ರೂಪಾಂತರಗೊಂಡಿರುವುದರಿಂದ ಅದು ಮುಂದುವರಿದಂತೆ ವಿಕಸನಗೊಳ್ಳುತ್ತದೆ. ಎಂಎಸ್‌ಎಂಇಗಳು ಸುಮಾರು 11 ಕೋಟಿ ಜನರಿಗೆ ಉದ್ಯೋಗ ಕೊಡುವ ಜತೆಗೆ, ಭಾರತದ ಜಿಡಿಪಿಗೆ ಸುಮಾರು 30% ದಷ್ಟು ಕೊಡುಗೆ ನೀಡುತ್ತವೆ. ಒಟ್ಟು ರಫ್ತಿನ ಸುಮಾರು 40% ಒಳಗೊಂಡಿವೆ. ಅವುಗಳಲ್ಲಿ ಅರ್ಧಕ್ಕಿಂತ ಹೆಚ್ಚು ಗ್ರಾಮೀಣ ಭಾರತದಲ್ಲಿವೆ. ಈ ವಲಯವು ಸಮಗ್ರ ಬೆಳವಣಿಗೆಯನ್ನು ಸಾಧಿಸುವಂತಾಗಲು ಅದನ್ನು ಪುನರುಜ್ಜೀವನಗೊಳಿಸಲು ಸರ್ಕಾರವು ಉತ್ಸುಕವಾಗಿದೆ. ತನ್ಮೂಲಕ ಸ್ವಾವಲಂಬನೆ (ಆತ್ಮನಿರ್ಭರ ಭಾರತ) ಪ್ರಾಪ್ತವಾಗುತ್ತದೆ.

    ಭಾರತೀಯ ಎಂಎಸ್ಎಂಇಗಳು ಮುಖ್ಯವಾಗಿ ಅಸುರಕ್ಷಿತ ಸಾಲಗಳ ಮೇಲೆ ಅವಲಂಬಿತವಾಗಿದೆ ಮತ್ತು ಕ್ಯಾಪೆಕ್ಸ್‌ಗಾಗಿ ಕೆಲವು ದೀರ್ಘಾವಧಿಯ ಸಾಲಗಳನ್ನು ತೆಗೆದುಕೊಳ್ಳುತ್ತವೆ ಎಂದು ಸಿಎಂಐಇ ಪ್ರೊವೆಸ್ ಡೇಟಾಬೇಸ್‌ನ ವಿಶ್ಲೇಷಣೆಯು ಬಹಿರಂಗಪಡಿಸುತ್ತದೆ. ಸಾಕಷ್ಟು ಆಸ್ತಿಯ ರಕ್ಷಣೆ (ಮೇಲಾಧಾರ) ಇಲ್ಲದಿರುವುದು ಕಡಿಮೆ ಬಡ್ಡಿದರದಲ್ಲಿ ಸುರಕ್ಷಿತ ಸಾಲಗಳನ್ನು ತೆಗೆದುಕೊಳ್ಳುವ ಅವಕಾಶದಿಂದ ಈ ಕಂಪನಿಗಳನ್ನು ವಂಚಿತರನ್ನಾಗಿಸುತ್ತವೆ. ಈ ಕಾರಣಕ್ಕಾಗಿ ಅವು ಹೆಚ್ಚಿನ ಬಡ್ಡಿದರದಲ್ಲಿ ಅಸುರಕ್ಷಿತ ಸಾಲಗಳನ್ನು ಅವಲಂಬಿಸಬೇಕಾಗುತ್ತದೆ. ಇದು ಅವುಗಳ ವ್ಯವಹಾರಗಳ ಲಾಭದಾಯಕತೆ ಮತ್ತು ಆರ್ಥಿಕ ಕಾರ್ಯಸಾಧ್ಯತೆಯನ್ನು ಕುಗ್ಗಿಸುತ್ತದೆ.

    ಹಿನ್ನಡೆಯಲ್ಲಿದ್ದ ಕಾಫಿ ಡೇಗೆ ಮುನ್ನಡೆ; ಕಂಪನಿಯ ಸಾಲದ ಹೊರೆ ತಗ್ಗಿಸಿದರು ಸಿದ್ಧಾರ್ಥರ ಪತ್ನಿ ಮಾಳವಿಕಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts