ದುಬೈ: ಭಾರತೀಯ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಮತ್ತು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯಿಬ್ ಮಲಿಕ್ ವೈವಾಹಿಕ ಜೀವನದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿ ಕಳೆದ ಒಂದು ವರ್ಷದಿಂದಲೂ ಹರಿದಾಡುತ್ತಲೇ ಇತ್ತು. ಆದರೆ, ಸಾನಿಯಾ ಆಗಲಿ, ಶೋಯಿಬ್ ಆಗಲಿ ಅಧಿಕೃತವಾಗಿ ಮಾತನಾಡಿರಲಿಲ್ಲ. ಆದರೆ, ಅವರ ನಡೆ-ನುಡಿ ಮಾತ್ರ ಇಬ್ಬರ ವೈವಾಹಿಕ ಜೀವನದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸುತ್ತಿತ್ತು. ಇತ್ತೀಚೆಗಷ್ಟೇ ಸಾನಿಯಾ, ಮದುವೆ ಮತ್ತು ಡಿವೋರ್ಸ್ ಬಗ್ಗೆಯೂ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದರು. ಇದು ಕೂಡ ವದಂತಿ ಎಂದೇ ಹೇಳಲಾಗಿತ್ತು. ಆದರೆ ದಿಢೀರ್ ಬೆಳವಣಿಗೆ ಎನ್ನುವಂತೆ ಪಾಕಿಸ್ತಾನದ ಖ್ಯಾತ ನಟಿ ಸನಾ ಜಾವೇದ್ರನ್ನು ಮದುವೆಯಾಗುವ ಮೂಲಕ ಶೋಯಿಬ್, ಡಿವೋರ್ಸ್ ವದಂತಿಗೆ ಅಧಿಕೃತ ಮುದ್ರೆ ಒತ್ತಿದ್ದಾರೆ.
ಸಾನಿಯಾಗೆ ಡಿವೋರ್ಸ್ ನೀಡದೆ ಸನಾ ಜಾವೇದ್ರನ್ನು ಶೋಯಿಬ್ ಮದುವೆ ಆಗಿದ್ದಾರೆ ಎಂದು ಹೇಳಲಾಗಿದೆ. ಶೋಯಿಬ್ ಮಲಿಕ್ ಮೂರನೇ ಮದುವೆ ಬಗ್ಗೆ ಸಾನಿಯಾ ಮಿರ್ಜಾ ತಂದೆ ಇಮ್ರಾನ್ ಮಿರ್ಜಾ ಮಾತನಾಡಿ, ಸಂಪ್ರದಾಯದಂತೆ ಸಾನಿಯಾ ತನ್ನ ಪತಿಗೆ ವಿಚ್ಛೇದನ ನೀಡಿದ್ದಾರೆ ಎಂದಿದ್ದಾರೆ. ಇದರ ಬೆನ್ನಲ್ಲೇ ಸಾನಿಯಾಗೆ ಸಿಗುವ ಜೀವನಾಂಶದ ಕುರಿತಾದ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಜೋರಾಗಿದೆ. ಗಂಡನಿಂದ ಬೇರೆಯಾದ ಬಳಿಕ ಪತ್ನಿ, ಜೀವನಾಂಶ ಕೇಳುವುದು ಸಹಜ ಪ್ರಕ್ರಿಯೆಯಾಗಿದೆ.
ಒಂದು ಪೈಸೆಯೂ ಬೇಡ!
ಆದರೆ, ಈ ವಿಚಾರದಲ್ಲಿ ಸಾನಿಯಾ ವಿರುದ್ಧ ನಿಲುವು ತೆಳೆದಿದ್ದಾರೆ ಎನ್ನಲಾಗಿದೆ. ಮಾಜಿ ಪತಿ ಶೋಯಿಬ್ನಿಂದ ಒಂದೇ ಒಂದು ರೂಪಾಯಿ ಪಡೆಯದಿರಲು ಸಾನಿಯಾ ಬಯಸಿದ್ದಾರೆ ಎಂದು ಹೇಳಲಾಗಿದೆ. ಒಂದು ಪೈಸೆಯನ್ನೂ ತೆಗೆದುಕೊಳ್ಳದೆ ವಿಚ್ಛೇದನದ ಪತ್ರಕ್ಕೆ ಸಹಿ ಮಾಡಿ ಅಲ್ಲಿಂದ ಹೊರ ಬಂದಿದ್ದಾರೆ ಎಂಬ ಸುದ್ದಿ ಇದೀಗ ಹಾಟ್ ಟಾಪಿಕ್ ಆಗಿದೆ. ಇದನ್ನು ಕೇಳಿದ ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಇಂದು ಭಾರತೀಯ ಹೆಣ್ಣಿನ ಪವರ್ ಎಂದು ಕಾಮೆಂಟ್ ಮೂಲಕ ಕೊಂಡಾಡುತ್ತಿದ್ದಾರೆ ಮತ್ತು ಮಲಿಕ್ ಓರ್ವ ಹೆಣ್ಣುಬಾಕ ಎಂದು ನಿಂದಿಸುತ್ತಿದ್ದಾರೆ.
ಅಂದಹಾಗೆ ಸನಾ ಜಾವೇದ್ಗೆ ಇದು ಎರಡನೇ ಮದುವೆಯಾದರೆ, ಮಲಿಕ್ಗೆ ಮೂರನೇ ಮದುವೆ. ಸನಾ ಜಾವೇದ್ ಈ ಹಿಂದೆ ಪಾಕ್ ಸಿಂಗ್ ಉಮೈರ್ ಜಾಸ್ವಾಲ್ ಎಂಬುವರನ್ನು ಮದುವೆಯಾದರು. ಮದುವೆ ಆಗಿದ್ದರೂ ಸುಮಾರು 3 ವರ್ಷಗಳ ಕಾಲ ಸನಾ, ಮಲಿಕ್ ಜತೆ ಸಂಬಂಧ ಇಟ್ಟುಕೊಂಡಿದ್ದರು ಎಂದು ಪಾಕಿಸ್ತಾನಿ ಪತ್ರಕರ್ತ ಮತ್ತು ಸಾಮಾ ಟಿವಿಯ ಬ್ಯೂರೋ ಮುಖ್ಯಸ್ಥ ನಯೀಮ್ ಹನೀಫ್ ಅವರು ಹೇಳಿದ್ದಾರೆ.
ಫ್ರೆಂಡ್ ಹೇಳಿದ ಮಾತು ನಿಜವಾಯ್ತು!
ಅಂದಹಾಗೆ ಸಾನಿಯಾ ಮತ್ತು ಶೋಹಿಬ್ ಈಗಾಗಲೇ ಪ್ರತ್ಯೇಕವಾಗಿ ವಾಸಿಸುತ್ತಿದ್ದು, ಡಿವೋರ್ಸ್ ಪಡೆಯಲು ದಂಪತಿ ಮುಂದಾಗಿದ್ದಾರೆ ಎಂಬ ಸುದ್ದಿ ಒಂದು ವರ್ಷದ ಹಿಂದೆಯೇ ಹರಿದಾಡಿತ್ತು. ಇದೇ ವಿಚಾರವಾಗಿ ಸಾನಿಯಾ ಮತ್ತು ಮಲಿಕ್ ಅವರ ಫ್ರೆಂಡ್ಸ್ ಪ್ರತಿಕ್ರಿಯೆ ನೀಡಿದ್ದರು. ಸಾನಿಯಾರ ಫ್ರೆಂಡ್ಸ್ ಪ್ರಕಾರ ಈಗಾಗಲೇ ಇಬ್ಬರು ಒಂದು ನಿರ್ಧಾರಕ್ಕೆ ಬಂದಿದ್ದು, ಇಬ್ಬರು ಡಿವೋರ್ಸ್ ಪಡೆಯಲು ತಯಾರಿ ನಡೆಸುತ್ತಿದ್ದಾರೆ. ಡಿವೋರ್ಸ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಇನ್ನೂ ಕೆಲವೇ ದಿನಗಳಲ್ಲಿ ಅಧಿಕೃತವಾಗಿ ಮಾಹಿತಿ ಹೊರಬೀಳಲಿದೆ ಎಂದು 2022ರ ನವೆಂಬರ್ ತಿಂಗಳಲ್ಲೇ ಈ ಮಾತನ್ನು ಆಡಿದ್ದರು. ಆದರೆ, ಈ ಬಗ್ಗೆ ಸಾನಿಯಾ-ಶೋಯಿಬ್ ಪ್ರತಿಕ್ರಿಯೆ ನೀಡದಿದ್ದರಿಂದ ಇದೂ ಕೂಡ ವದಂತಿಯಾಗಿತ್ತು. ಆದರೆ, ಈಗ ಈ ಮಾತು ನಿಜವಾಗಿದೆ.
ಮಲಿಕ್ ಬಗ್ಗೆಯೂ ಫ್ರೆಂಡ್ಸ್ ಮಾತನಾಡಿದ್ದರು
ಮತ್ತೊಂದೆಡೆ ಶೋಯಿಬ್ ಮಲಿಕ್ ಅವರ ಪಾಕಿಸ್ತಾನ ಕ್ರಿಕೆಟ್ ಮ್ಯಾನೇಜ್‌ಮೆಂಟ್ ಸದಸ್ಯರು ಮತ್ತು ಫ್ರೆಂಡ್ಸ್ ಸಹ ಇದನ್ನು ಖಚಿತಪಡಿಸಿದ್ದರು. ಇಬ್ಬರೂ ಬೇರ್ಪಟ್ಟಿದ್ದಾರೆ ಮತ್ತು ವಿಚ್ಛೇದನ ಪಡೆಯುತ್ತಿದ್ದಾರೆ ಎಂದು ಬಹಿರಂಗಪಡಿಸಿದ್ದರು. ಸಾನಿಯಾ ಮಿರ್ಜಾ ದುಬೈನಲ್ಲಿ ತಂಗಿದ್ದು, ಶೋಯೆಬ್ ಮಲಿಕ್ ಪಾಕಿಸ್ತಾನದಲ್ಲಿ ನೆಲೆಸಿದ್ದಾರೆ ಎಂದು ಹೇಳಿದ್ದರು.
ಇನ್ಸ್ಟಾಗ್ರಾಂ ಬಯೋ
ಕೆಲವು ತಿಂಗಳುಗಳ ಹಿಂದೆ ಶೋಯಿಬ್ ಮಲಿಕ್ ಅವರ ಇನ್ಸ್ಟಾಗ್ರಾಂ ಬಯೋದಲ್ಲಾಗಿರುವ ಬದಲಾವಣೆ ಸಹ ಡಿವೋರ್ಸ್ ವದಂತಿಗೆ ಪುಷ್ಠಿ ನೀಡಿತು ಮತ್ತು ಡಿವೋರ್ಸ್ ವಿಚಾರವನ್ನು ಮತ್ತೆ ಮುನ್ನೆಲೆಗೆ ತಂದಿತ್ತು. ಈ ಮೊದಲು ಬಯೋದಲ್ಲಿ ಸೂಪರ್ವುಮ್ಯನ್ ಸಾನಿಯಾ ಮಿರ್ಜಾರ ಪತಿ ಎಂದು ಶೋಯಿಬ್ ಬರೆದುಕೊಂಡಿದ್ದರು. ಆದರೆ, ಅದನ್ನು ತೆಗೆದಿದ್ದರು. ಹೀಗಾಗಿ ಇಬ್ಬರ ಸಂಬಂಧದಲ್ಲಿ ಬಿರುಕು ಬಿಟ್ಟಿರುವುದು ಖಚಿತ ಎನ್ನಲಾಗಿತ್ತು.
ಡಿವೋರ್ಸ್ ವಿಚಾರ ಶುರುವಾಗಿದ್ದ ಯಾವಾಗ?
2022ರ ನವೆಂಬರ್ 11ರಂದು ಸಾನಿಯಾ ಮಿರ್ಜಾ ಇನ್ಸ್ಟಾಗ್ರಾಂನಲ್ಲಿ ಒಂದು ಪೋಸ್ಟ್ ಹಾಕಿದ್ದರು. ಅದರಲ್ಲಿ “ಕಠಿಣ ದಿನಗಳು ಮತ್ತು ಒಡೆದ ಹೃದಯಗಳು” ಎಂದು ಬರೆದುಕೊಂಡಿದ್ದರು. ಅಲ್ಲಿಂದಾಚೆಗೆ ಇಬ್ಬರ ಬ್ರೇಕಪ್ ವದಂತಿ ಹರಡಲು ಆರಂಭವಾಯಿತು. ಇದರ ನಡುವೆ ಒಮ್ಮೆ ಇಝಾನ್ ಜೊತೆಗಿನ ಮುದ್ದಾದ ಫೋಟೋವನ್ನು ಸಾನಿಯಾ ಹಂಚಿಕೊಂಡು, ಕಠಿಣ ದಿನಗಳಲ್ಲಿ ನನ್ನನ್ನು ಪಡೆಯುವ ಕ್ಷಣಗಳು ಎಂದು ಬರೆದಿದ್ದರು. ಇಷ್ಟೇ ಅಲ್ಲದೆ, ಶೋಯಿಬ್ ಮತ್ತು ಸಾನಿಯಾ ದುಬೈನಲ್ಲಿ ಇಜಾನ್‌ನ ನಾಲ್ಕನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿದರು. ಬರ್ತಡೇ ಪಾರ್ಟಿಯ ಅನೇಕ ಫೋಟೋಗಳನ್ನು ಶೋಯಿಬ್ ಹಂಚಿಕೊಂಡರೆ, ಸಾನಿಯಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಯಾವುದನ್ನೂ ಹಂಚಿಕೊಂಡಿಲ್ಲ ಇದು ಅನುಮಾನಗಳಿಗೆ ಕಾರಣವಾಗಿತ್ತು. ಅಲ್ಲಿಂದ ಶುರುವಾದ ಡಿವೋರ್ಸ್ ವದಂತಿ ಕತೆ ಇಂದು ಶೋಯಿಬ್, ಸನಾ ಜಾವೇದ್ ಜತೆ ಮದುವೆ ಆಗುವವರೆಗೂ ಬಂದು ನಿಂತಿದೆ. ಅಲ್ಲದೆ, ಸಾನಿಯಾ-ಶೋಯಿಬ್ ಬೇರೆಯಾಗಿರುವುದು ಖಚಿತವಾಗಿದೆ.
ಅಂದಹಾಗೆ ಸಾನಿಯಾ ಮಿರ್ಜಾ (Sania Mirza) ಮತ್ತು ಶೋಯಿಬ್ ಮಲಿಕ್ (Shoib Malik) 2010ರ ಏಪ್ರಿಲ್ 12ರಂದು ಹೈದರಾಬಾದ್‌ನಲ್ಲಿರುವ ತಾಜ್ ಕೃಷ್ಣ ಹೋಟೆಲ್‌ನಲ್ಲಿ ಸಾಂಪ್ರದಾಯಿಕ ಹೈದರಾಬಾದಿ ಮುಸ್ಲಿಂ ಸಂಪ್ರದಾಯದಂತೆ ವಿವಾಹವಾದರು. ಇದಾದ ನಂತರ ಪಾಕಿಸ್ತಾನಿ ಪದ್ಧತಿಯಂತೆ ಪಾಕಿಸ್ತಾನದ ಸಿಯಾಲ್‌ಕೋಟ್‌ನಲ್ಲಿ ಮದುವೆ ನಡೆಯಿತು. (ಏಜೆನ್ಸೀಸ್)
ಮೂಗುತಿ ಸುಂದರಿ ಸಾನಿಯಾ ಬಗ್ಗೆ ವರ್ಷದ ಹಿಂದೆಯೇ ಫ್ರೆಂಡ್ಸ್ ಹೇಳಿದ್ದ ಮಾತು ಕೊನೆಗೂ ನಿಜವಾಯ್ತು!
3 ವರ್ಷದ ಅಕ್ರಮ ಸಂಬಂಧಕ್ಕೆ ಅಧಿಕೃತ ಮುದ್ರೆ! ಮಲಿಕ್ ಮೋಹದ ಬಲೆಗೆ ಸನಾ ಬಿದ್ದಿದ್ಹೇಗೆ? ಇಂಚಿಂಚೂ ಮಾಹಿತಿ ಬಯಲು