More

    ಜೀವನಾಂಶ ನೀಡುವಂತೆ ಅಂಗವಿಕಲನಿಗೆ ನಿರ್ದೇಶಿಸಲಾಗದು ಹೈಕೋರ್ಟ್

    ಬೆಂಗಳೂರು : ವಿಚ್ಛೇದಿತ ಪತ್ನಿಗೆ ಜೀವನಾಂಶ ಪಾವತಿಸುವಂತೆ ಶೇ.75 ರಷ್ಟು ಅಂಗವೈಕಲ್ಯದಿಂದ ಬಳಲುತ್ತಿರುವ ವ್ಯಕ್ತಿಗೆ ನಿರ್ದೇಶಿಸಲು ಹೈಕೋರ್ಟ್ ನಿರಾಕರಿಸಿದೆ. ಅಲ್ಲದೆ, ಪ್ರಕರಣ ಸಂಬಂಧ ವಿಚಾರಣಾ ನ್ಯಾಯಾಲಯ ಹೊರಡಿಸಿದ್ದ ಆದೇಶ ರದ್ದುಪಡಿಸಿದೆ.

    ಇದೇ ವೇಳೆ ಪತ್ನಿಯೂ ಸಂಪಾದನೆಗೆ ಅರ್ಹಳಾಗಿದ್ದರು ಸಹ ಅಂಗವೈಕಲ್ಯದಿಂದಾಗಿ ಸಂಪಾದಿಸಲು ಅಸಮರ್ಥನಾಗಿರುವ ಗಂಡನ ಪರಿಸ್ಥಿತಿಯನ್ನು ಕಣ್ಣಾರೆ ನೋಡಿಕೊಂಡು ಜೀವನಾಂಶವನ್ನು ಪಾವತಿಸಲು ಕೋರಿ ಹೆಂಡತಿ ಏಕೆ ಮತ್ತು ಹೇಗೆ ಒತ್ತಾಯಿಸುತ್ತಿದ್ದಾಳೆ ಎನ್ನುವುದು ಅರ್ಥವಾಗುವುದಿಲ್ಲ ಎಂದು ನ್ಯಾಯಪೀಠ ಅಸಮಾಧಾನ ಹೊರಹಾಕಿದೆ.

    ವಿಚ್ಚೇದನ ಕುರಿತಾಗಿ ವಿಚಾರಣಾ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸುವಂತೆ ಪತಿ ಸಲ್ಲಿಸಿದ ಹಾಗೂ ಮಾಸಿಕ ಜೀವನಾಂಶ ಮೊತ್ತವನ್ನು ಹೆಚ್ಚಿಸುವಂತೆ ಕೋರಿ ಪತ್ನಿಯೂ ಸಲ್ಲಿಸಿದ ಪ್ರತ್ಯೇಕ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ ವಿಚಾರಣೆ ನಡೆಸಿತು. ಪತಿ ಊರುಗೋಲಿನ ಸಹಾಯದಿಂದ ನಡೆಯುತ್ತಾನೆ. ಆತ ಉದ್ಯೋಗವನ್ನು ಹುಡುಕಲು ಅಸಹಾಯಕನಾಗಿದ್ದಾನೆ. ಹೀಗಾಗಿ ಆತನಿಗೆ ಜೀವನಾಂಶವನ್ನು ನೀಡುವಂತೆ ನಿರ್ದೇಶಿಸಲಾಗದು ಎಂದು ಹೇಳಿದೆ.

    ಪತಿಯ ಅಂಗವೈಕಲ್ಯ ಪ್ರಮಾಣಪತ್ರವನ್ನು ಉಲ್ಲೇಖಿಸಿದ ನ್ಯಾಯಪೀಠ, ಜೀವನಾಂಶವನ್ನು ನಿರ್ಧರಿಸುವಾಗ ಹೆಂಡತಿ ಅಥವಾ ಮಗುವನ್ನು ಕಾಪಾಡಿಕೊಳ್ಳಲು ವ್ಯಕ್ತಿ ಸಮರ್ಥನೇ ಎಂಬುದನ್ನು ಗಮನಿಸುವುದು ಅಗತ್ಯ. ಈ ಪ್ರಕರಣದಲ್ಲಿ ಪತಿಯ ಆರೋಗ್ಯ ಸ್ಥಿತಿ ಸರಿಯಿಲ್ಲದಿರುವುದರಿಂದ ಮುಂದೆ ಉದ್ಯೋಗವನ್ನು ಹುಡುಕಲು ಮತ್ತು ಹೆಂಡತಿ ಮತ್ತು ಮಗುವಿಗೆ ಜೀವನಾಂಶ ಪಾವತಿಸಲು ಆತ ಶಕ್ತನಾಗಿಲ್ಲ ಎಂಬುದನ್ನು ಗಮನಿಸಬೇಕಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

    2013ರ ಡಿಸೆಂಬರ್‌ನಲ್ಲಿ ಪತಿ ತೀವ್ರ ಅನಾರೋಗ್ಯಕ್ಕೆ ತುತ್ತಾದರು. ಅನಾರೋಗ್ಯದ ಅವಧಿಯನ್ನು ಒಳಗೊಂಡು 19 ಲಕ್ಷ ರೂ. ಜೀವನಾಂಶ ನೀಡಲು ಬಾಕಿಯಿದೆ ಎಂದು ಕೋರಲಾಗಿದೆ. ಇದನ್ನು ಪಾವತಿಸಲು ನಿರ್ದೇಶಿಸಿದರೆ ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿಯನ್ನು ಇನ್ನಷ್ಟು ಚಿಂತೆಗೆ ನೂಕಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟಿದೆ.

    ಜತೆಗೆ, ವಿಚ್ಛೇದಿತ ಪತಿಯು ತಂದೆ ಹಲವಾರು ಆಸ್ತಿಗಳನ್ನು ಹೊಂದಿದ್ದು, ಹೆಂಡತಿ ಮತ್ತು ಮಗುವಿನ ಜೀವನಾಂಶವನ್ನು ಪಾವತಿಸಲು ಸಮರ್ಥರಾಗಿದ್ದಾರೆ ಎಂಬ ಪತ್ನಿಯ ವಾದವನ್ನು ನ್ಯಾಯಾಲಯ ತಿರಸ್ಕರಿಸಿತು.

    ಅಜ್ಜಂದಿರಿಗೆ ಹೊಣೆ

    ಪತಿಯ ತಂದೆ ಹಾಗೂ ಪತ್ನಿಯ ತಂದೆಗೆ ಮೊಮ್ಮಕ್ಕಳ ಶಿಕ್ಷಣ, ಜೀವನದ ಎಲ್ಲ ಹಂತಗಳು ಸೇರಿ ಇತರ ಅಗತ್ಯಗಳನ್ನು ನೋಡಿಕೊಳ್ಳಬೇಕಾಗಿರುವುದು ಸೂಕ್ತವೆಂದು ಭಾವಿಸುವುದಾಗಿ ನ್ಯಾಯಪೀಠ ಅಭಿಪ್ರಾಯಪಟ್ಟಿತು. ಪ್ರಕರಣದಲ್ಲಿ ಪತ್ನಿಗೆ ಪ್ರತಿವಾದಿಯು ಅರ್ಹರಾಗಿರುವ ಏಕೈಕ ಪರಿಹಾರ ಇದಾಗಿದೆ ಜೀವನಾಂಶವನ್ನು ಶೇ.70ಕ್ಕೆ ಹೆಚ್ಚಿಸುವ ಹೆಂಡತಿಯ ಬೇಡಿಕೆಯನ್ನು ತಿರಸ್ಕರಿಸಿದ್ದು, ಗಂಡನ ಅಂಗವೈಕಲ್ಯದ ದಿನಾಂಕದವರೆಗಿನ ಜೀವನಾಂಶದ ಬಾಕಿ ಮೊತ್ತವನ್ನು ಪತಿಯ ತಂದೆ ಪಾವತಿಸಬೇಕು ಎಂದು ನಿರ್ದೇಶಿಸಿತು.

    ಏನಿದು ಪ್ರಕರಣ ?

    ವಿಚಾರಣಾ ನ್ಯಾಯಾಲಯವು ಪತ್ನಿಗೆ ಮಾಸಿಕ 15,000 ರೂ. ಮಧ್ಯಂತರ ಜೀವನಾಂಶವನ್ನು ಪ್ರಕಟಿಸಿತ್ತು. ಆದೇಶದ ದಿನದಿಂದ ಮೊತ್ತ ಬಾಕಿಯಾಗಿದೆ ಎಂದು ಪತ್ನಿ ವಾದಿಸಿದ್ದರು. ಇದ್ನನು ವಿಚಾರಣಾ ನ್ಯಾಯಾಲಯ ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಈ ಅರ್ಜಿ ವಿಚಾರಣೆ ಬಾಕಿಯಿರುವಾಗಲೇ ಪತಿ ಪಾರ್ಶ್ವವಾಯುವಿಗೆ ತುತ್ತಾಗಿ ಅಂಗವೈಕಲ್ಯಕ್ಕೆ ಒಳಗಾಗಿದ್ದರಿಂದ ಕೆಲಸಕ್ಕೆ ರಾಜೀನಾಮೆ ನೀಡಿದರು. ಹೀಗಿದ್ದರೂ
    ಜೀವನಾಂಶ ಹೆಚ್ಚಳ ಹಾಗೂ ಬಾಕಿ ಪಾವತಿಗೆ ಪತ್ನಿ ಕೋರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts