More

    9ನೇ ಬಾರಿ ಆಸ್ಟ್ರೇಲಿಯನ್ ಓಪನ್ ಗೆದ್ದ ಜೋಕೊವಿಕ್, 18ನೇ ಗ್ರಾಂಡ್ ಸ್ಲಾಂ ಕಿರೀಟ

    ಮೆಲ್ಬೋರ್ನ್: ವಿಶ್ವ ನಂ. 1 ಆಟಗಾರ ನೊವಾಕ್ ಜೋಕೊವಿಕ್ ಸತತ 3ನೇ ಹಾಗೂ ಒಟ್ಟಾರೆ 9ನೇ ಬಾರಿಗೆ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಈ ಮೂಲಕ ಅವರು 18ನೇ ಗ್ರಾಂಡ್ ಸ್ಲಾಂ ಪ್ರಶಸ್ತಿ ಒಲಿಸಿಕೊಂಡ ಸಾಧನೆ ಮಾಡಿದ್ದಾರೆ ಮತ್ತು ಗರಿಷ್ಠ ಗ್ರಾಂಡ್ ಸ್ಲಾಂ ಗೆದ್ದ ಸಾಧಕರಾದ ರೋಜರ್ ಫೆಡರರ್ ಮತ್ತು ರಾಫೆಲ್ ನಡಾಲ್ ಅವರಿಗೆ ಮತ್ತಷ್ಟು ಸನಿಹವಾಗಿದ್ದಾರೆ.

    ರೋಲ್ಯಾಂಡ್ ಗ್ಯಾರಸ್‌ನ ಕ್ಲೇಕೋರ್ಟ್‌ನಲ್ಲಿ ರಾಫೆಲ್ ನಡಾಲ್ ಹೊಂದಿರುವಂಥ ಪ್ರಭುತ್ವವನ್ನೇ ರಾಡ್ ಲೆವರ್ ಅರೇನಾದ ಬ್ಲೂ ಹಾರ್ಡ್‌ಕೋರ್ಟ್‌ನಲ್ಲಿ ತಾನು ಹೊಂದಿದ್ದೇನೆ ಎಂಬುದನ್ನು ನಿರೂಪಿಸಿದ ಸೆರ್ಬಿಯಾ ತಾರೆ ಜೋಕೊವಿಕ್, ರಷ್ಯಾದ ಡೇನಿಲ್ ಮೆಡ್ವೆಡೇವ್ ವಿರುದ್ಧ ಭಾನುವಾರ ನಡೆದ ಏಕಪಕ್ಷೀಯ ಫೈನಲ್ ಪಂದ್ಯದಲ್ಲಿ 7-5, 6-2, 6-2 ನೇರಸೆಟ್‌ಗಳಿಂದ ಸುಲಭ ಗೆಲುವು ದಾಖಲಿಸಿದರು. ಎರಡು ಗಂಟೆಗೂ ಕಡಿಮೆ ಸಮಯ ನಡೆದ ಪ್ರಶಸ್ತಿ ಹೋರಾಟದಲ್ಲಿ ಅವರು ಮೊದಲ ಸೆಟ್‌ನಲ್ಲಿ ಮಾತ್ರ ವಿಶ್ವ ನಂ. 5 ಮೆಡ್ವೆಡೇವ್‌ರಿಂದ ತಕ್ಕಮಟ್ಟಿಗೆ ಪ್ರತಿರೋಧ ಎದುರಿಸಿದರು.

    ಇದನ್ನೂ ಓದಿ: ಕೋಮು ಆಧಾರದಲ್ಲಿ ತಂಡ ಆಯ್ಕೆ, ನಿರ್ಗಮನ ಕೋಚ್​ ವಾಸಿಂ ಜಾಫರ್ ವಿರುದ್ಧ ಉತ್ತರಾಖಂಡ ಆರೋಪ

    ಮೇನಲ್ಲಿ 34ನೇ ವರ್ಷಕ್ಕೆ ಕಾಲಿಡಲಿರುವ ಜೋಕೊವಿಕ್, ಆಸ್ಟ್ರೇಲಿಯನ್ ಓಪನ್‌ನಲ್ಲಿ ಸೆಮಿಫೈನಲ್‌ಗೇರಿದ ಬಳಿಕ ಎಂದೂ ಸೋಲದ ಅಜೇಯ ದಾಖಲೆಯನ್ನು ಮುಂದುವರಿಸಿದರು. 2008ರಲ್ಲಿ ಇಲ್ಲಿ ಮೊದಲ ಬಾರಿಗೆ ಪ್ರಶಸ್ತಿ ಜಯಿಸಿದ್ದ ಜೋಕೊವಿಕ್, ಮುಕ್ತ ಟೆನಿಸ್ ಯುಗದಲ್ಲಿ 30ನೇ ವಯಸ್ಸಿನ ಬಳಿಕ 3 ಬಾರಿ ಆಸ್ಟ್ರೇಲಿಯನ್ ಓಪನ್ ಜಯಿಸಿದ ಮೊದಲಿಗರೆನಿಸಿದರು. ಅಲ್ಲದೆ 30ನೇ ವಯಸ್ಸಿನ ಬಳಿಕ ಗರಿಷ್ಠ 6 ಗ್ರಾಂಡ್ ಸ್ಲಾಂ ಗೆದ್ದಿರುವ ನಡಾಲ್ ದಾಖಲೆಯನ್ನೂ ಸರಿಗಟ್ಟಿದರು.

    25 ವರ್ಷದ ಮೆಡ್ವೆಡೇವ್ ಫೈನಲ್‌ನಲ್ಲಿ ಸಮರ್ಥ ಆಟವಾಡಲು ಸಾಧ್ಯವಾಗದ ಸಿಟ್ಟನ್ನು ಆಗಾಗ ರ‌್ಯಾಕೆಟ್ ಮೇಲೆ ತೋರಿಸಿದರು. ಆದರೆ ಜೋಕೊವಿಕ್ ಅನುಭವದ ಎದುರು ಅವರ ಆಟ ನಡೆಯಲಿಲ್ಲ. ಇದರೊಂದಿಗೆ ಅವರ ಸತತ 20 ಗೆಲುವಿನ ಓಟಕ್ಕೂ ತೆರೆ ಬಿದ್ದಿತು. ಮೆಡ್ವೆಡೇವ್ 2ನೇ ಸಲವೂ ಗ್ರಾಂಡ್ ಸ್ಲಾಂ ಫೈನಲ್‌ನಲ್ಲಿ ನಿರಾಸೆ ಅನುಭವಿಸಿದರು. 2019ರಲ್ಲಿ ಯುಎಸ್ ಓಪನ್‌ನಲ್ಲಿ ಆಡಿದ್ದ ಮೊದಲ ಫೈನಲ್‌ನಲ್ಲೂ ಅವರು ರನ್ನರ್‌ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು.

    ಜೋಕೊವಿಕ್ 18 ಗ್ರಾಂಡ್ ಸ್ಲಾಂ:
    ಆಸ್ಟ್ರೇಲಿಯನ್ ಓಪನ್: 9 (2008,2011,2012,2013,2015,2016,2019, 2020, 2021)
    ಫ್ರೆಂಚ್​ ಓಪನ್: 1 (2016)
    ವಿಂಬಲ್ಡನ್: 5 (2011,2014,2015,2018, 2019)
    ಯುಎಸ್ ಓಪನ್: 3 (2011,2015,2018)

    ಗರಿಷ್ಠ ಗ್ರಾಂಡ್ ಸ್ಲಾಂ ಗೆಲುವು
    ರೋಜರ್ ಫೆಡರರ್: 20
    ರಾಫೆಲ್ ನಡಾಲ್: 20
    ನೊವಾಕ್ ಜೋಕೊವಿಕ್: 18

    ಆಸ್ಟ್ರೇಲಿಯನ್ ಓಪನ್ ಗೆದ್ದ ಜಪಾನ್ ತಾರೆ ನವೊಮಿ ಒಸಾಕಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts