More

    ಚಿಕ್ಕೋಡಿ ಜಿಲ್ಲೆಗಾಗಿ ನಾಯಕರು ಒಂದಾಗಿ – ಬಿ.ಆರ್. ಸಂಗಪ್ಪಗೋಳ

    ಚಿಕ್ಕೋಡಿ: ಜಿಲ್ಲೆಯ ಜನಪ್ರತಿನಿಧಿಗಳು ಬೆಳಗಾವಿ ಜಿಲ್ಲಾ ಡಿಸಿಸಿ ಬ್ಯಾಂಕ್ ನಿರ್ದೇಶಕರ ಅವಿರೋಧ ಆಯ್ಕೆಗೆ ಒಂದಾದಂತೆ ಚಿಕ್ಕೋಡಿ ಜಿಲ್ಲೆ ಮಾಡುವುದಕ್ಕೆ ನಾಯಕರು ಪಕ್ಷಾತೀತವಾಗಿ ಒಂದಾಗಬೇಕು ಎಂದು ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಬಿ.ಆರ್. ಸಂಗಪ್ಪಗೋಳ ಹೇಳಿದರು.
    ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಯಕರ ಒಗ್ಗಟ್ಟಿನಿಂದ ಬೆಳಗಾವಿ ಡಿಸಿಸಿ ಬ್ಯಾಂಕ್ ರಾಜ್ಯದಲ್ಲೆ ಮಾದರಿಯಾಗಿದೆ. ಇದೇ ರೀತಿ ನಾಯಕರು ಒಗ್ಗಟ್ಟಾಗಿ ಚಿಕ್ಕೋಡಿಯನ್ನು ಜಿಲ್ಲೆಯನ್ನಾಗಿ ಮಾಡಬೇಕು ಎಂದರು.

    ಚಿಕ್ಕೋಡಿ ಜಿಲ್ಲೆಯಾಗುವುದಕ್ಕೆ ಎಲ್ಲ ಅರ್ಹತೆ ಹೊಂದಿದೆ. ಜಿಲ್ಲೆಯ ರಾಜಕೀಯ ನಾಯಕರ ಇಚ್ಚಾಶಕ್ತಿ ಕೊರತೆಯಿಂದಾಗಿ ಚಿಕ್ಕೋಡಿ ಜಿಲ್ಲೆಯಾಗುತ್ತಿಲ್ಲ ಎಂದು ಆರೋಪಿಸಿದರು. ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರು ಜಿಲ್ಲೆಯ 11 ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಸಮೀಕ್ಷೆ ಮಾಡಿಸುತ್ತಿದ್ದಾರೆ. ಅತಿ ಶೀಘ್ರದಲ್ಲೇ ಜಿಲ್ಲೆಯ ನನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳನ್ನು ಅನುಷ್ಠಾನ ಮಾಡಬೇಕು ಎಂದರು.

    ಜಿಲ್ಲೆಯ ಸಚಿವರು ಗಡಿ ಜಿಲ್ಲೆಗೆ ಹೆಚ್ಚಿನ ಅನುದಾನ ತರಲು ಮುಂದಾಗಬೇಕು. ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ಧಾರವಾಡ ಜಿಲ್ಲೆಗೆ ಅತಿ ಹೆಚ್ಚಿನ ಅನುದಾನ ತಂದು ಅಭಿವೃದ್ಧಿ ಮಾಡಿದ್ದಾರೆ. ನಮ್ಮ ಜಿಲ್ಲೆಯ ಸಚಿವರು ಸಹ ಹೆಚ್ಚಿನ ಅನುದಾನ ತರುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು. ಸರ್ಕಾರ ಉರುಳಿಸುವ- ಉಳಿಸುವ ತಾಕತ್ತು ಹೊಂದಿರುವ ಜಿಲ್ಲೆಯ ಜನಪ್ರತಿನಿಧಿಗಳು, ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಒತ್ತಾಯಿಸಿದರು.

    ಚಿಕ್ಕೋಡಿ ಜಿಲ್ಲೆಗೆ ಮೆಡಿಕಲ್ ಕಾಲೇಜ್ ಹಾಗೂ ಸರ್ಕಾರಿ ಇಂಜಿನಿಯರಿಂಗ್ ಕಾಲೇಜ್ ಮಂಜೂರು ಮಾಡಲು ಪ್ರಯತ್ನಿಸಬೇಕು. ಚಿಕ್ಕೋಡಿ ಜಿಲ್ಲೆ ಮಾಡದಿದ್ದರೆ ಮುಂಬರುವ ದಿನಗಳಲ್ಲಿ ಸಚಿವರ ಮನೆ ಎದರು ಧರಣಿ ಸತ್ಯಾಗೃಹ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ನಿವೃತ್ತ ಪ್ರಾಧ್ಯಾಪಕ, ಸಾಹಿತಿ ಎಸ್.ವೈ.ಹಂಜಿ, ತ್ಯಾಗರಾಜ ಕದಮ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts