More

    ಜಿಲ್ಲಾಡಳಿತ ಭವನ ನಿರ್ಮಾಣ ನನೆಗುದಿಗೆ

    ಬೆಳಗಾವಿ: ಎರಡನೇ ರಾಜಧಾನಿ ಖ್ಯಾತಿಯ ಬೆಳಗಾವಿಯಲ್ಲಿ, ಸ್ಮಾರ್ಟ್ ಸಿಟಿಯ ಹೃದಯ ಭಾಗದಲ್ಲಿ ನಿರ್ಮಾಣಗೊಳ್ಳಬೇಕಿದ್ದ ‘ಜಿಲ್ಲಾಡಳಿತ ಭವನ’ ನಿರ್ಮಾಣ ಯೋಜನೆ ಆರ್ಥಿಕ ಸಮಸ್ಯೆಯಿಂದಾಗಿ ಅರ್ಧದಲ್ಲಿಯೇ ನನೆಗುದಿಗೆ ಬಿದ್ದಿದೆ.

    ದೂರದ ಹಳ್ಳಿಗಳಿಂದ ಜಿಲ್ಲಾ ಮಟ್ಟದ ಕಚೇರಿಗಳಿಗೆ ಬರುವ ಜನಸಾಮಾನ್ಯರಿಗೆ ಅನುಕೂಲವಾಗಲು ಮತ್ತು ಆಡಳಿತಾತ್ಮಕ ದೃಷ್ಟಿಯಿಂದ ಎಲ್ಲ ಕಚೇರಿಗಳು ಒಂದೇ ಸೂರಿನಡಿ ಕಾರ್ಯನಿರ್ವಹಿಸುವ ನಿಟ್ಟಿನಲ್ಲಿ ಸರ್ಕಾರವು 2010ರಲ್ಲಿಯೇ ‘ಜಿಲ್ಲಾಡಳಿತ ಭವನ’ ನಿರ್ಮಾಣಕ್ಕೆ ನಿರ್ಧರಿಸಿತ್ತು. ಆದರೆ, ಬದಲಾದ ಸರ್ಕಾರ, ಆರ್ಥಿಕ ಸಮಸ್ಯೆ, ಕೋವಿಡ್-19 ಕಾರಣದಿಂದಾಗಿ ಇದೀಗ ಹೊಸ ಕಟ್ಟಡ ನಿರ್ಮಾಣ ಯೋಜನೆಯನ್ನೇ ಕೈಬಿಟ್ಟಂತಿದೆ.

    ಜನತೆಗೆ ತೊಂದರೆ: ಗ್ರಾಮೀಣಾಭಿವೃದ್ಧಿ ಪಂಚಾಯತ್‌ರಾಜ್, ಗ್ರಾಮೀಣ ಕುಡಿಯುವ ನೀರು, ಸಮಾಜ ಕಲ್ಯಾಣ ಇಲಾಖೆ, ಕಂದಾಯ ಇಲಾಖೆ, ಜಲಸಂಪನ್ಮೂಲ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಅಬಕಾರಿ, ಹಿಂದುಳಿದ ವರ್ಗಗಳ ಇಲಾಖೆ, ಕಾರ್ಮಿಕ ಇಲಾಖೆ, ಬೃಹತ್, ಮಧ್ಯಮ ಕೈಗಾರಿಕೆ ಇಲಾಖೆ, ಪರಿಸರ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸೇರಿದಂತೆ ಒಟ್ಟು 34 ಇಲಾಖೆಗಳು ಹಾಗೂ 20 ಅಭಿವೃದ್ಧಿ ನಿಗಮಗಳ ಜಿಲ್ಲಾ ಮಟ್ಟದ ಕಚೇರಿಗಳು ಬೇರೆ ಬೇರೆ ಸ್ಥಳಗಳಲ್ಲಿದೆ. ಈ ಕಚೇರಿಗಳು ಎಲ್ಲಿವೆ ಎಂದು ಜನಸಾಮಾನ್ಯರಿಗೆ ಗೊತ್ತಿಲ್ಲ. ಹೀಗಾಗಿ ಜನರು ನಿತ್ಯ ಸಮಸ್ಯೆ ಅನುಭವಿಸುವಂತಾಗಿದೆ.

    ಸಿಕ್ಕಿಲ್ಲ ಅನುಮೋದನೆ: ಸುಗಮ ಆಡಳಿತದ ಹಿನ್ನೆಲೆಯಲ್ಲಿ ಎಲ್ಲ ಸರ್ಕಾರಿ ಕಚೇರಿಗಳು ಒಂದೇ ಸೂರಿನಡಿ ಕಾರ್ಯ ನಿರ್ವಹಿಸುವಂತಾಗಲು ತಾಲೂಕು ಮಟ್ಟದಲ್ಲಿರುವ ಮಿನಿ ವಿಧಾನಸೌಧದ ಮಾದರಿಯಲ್ಲಿಯೇ ‘ಜಿಲ್ಲಾ ಭವನ’ ನಿರ್ಮಿಸಲು ಕಂದಾಯ ಇಲಾಖೆಯು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ, ಇನ್ನೂ ಸರ್ಕಾರದಿಂದ ಅನುಮೋದನೆ ಸಿಕ್ಕಿಲ್ಲ ಎಂದು ವಿವಿಧ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    2019ರಲ್ಲಿ ಜಿಲ್ಲಾಡಳಿತ ಭವನ ನಿರ್ಮಾಣ ಕುರಿತು ಲೋಕೋಪಯೋಗಿ ಇಲಾಖೆ ಇಂಜಿನಿಯರ್‌ಗಳಿಗೆ ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಅವರು ಸ್ಥಳ, ಅಂದಾಜು ವೆಚ್ಚದ ಕ್ರಿಯಾ ಯೋಜನೆ ರೂಪಿಸುವಂತೆ ಸೂಚಿಸಿದ್ದರು. ಆದರೆ, ವರ್ಷ ಕಳೆದಿದ್ದು ಬಿಟ್ಟರೆ, ಇನ್ನೂ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿ ಯಾವುದೇ ವರದಿ ಸಿದ್ಧಗೊಂಡಿಲ್ಲ.

    ಬೆಳಗಾವಿ ನಗರದಲ್ಲಿ ‘ಜಿಲ್ಲಾಡಳಿತ ಭವನ’ ನಿರ್ಮಾಣ ಕುರಿತು ಸರ್ಕಾರಕ್ಕೆ ಈ ಹಿಂದೆ ಪ್ರಸ್ತಾವನೆ ಸಲ್ಲಿಕೆಯಾಗಿತ್ತು. ಇಲ್ಲಿಯವರೆಗೆ ಅನುಮೋದನೆ ಸಿಕ್ಕಿಲ್ಲ. ಅಲ್ಲದೆ, ಕೋವಿಡ್-19 ಕಾರಣದಿಂದಾಗಿ ಸರ್ಕಾರಿ ಕಚೇರಿಗಳಿಗೆ ಹೊಸ ಕಟ್ಟಡ ನಿರ್ಮಿಸದಂತೆ ಸರ್ಕಾರ ಸೂಚಿಸಿದೆ. ಹಾಗಾಗಿ ಮುಂದಿನ ವರ್ಷವೇ ಹೊಸ ಕಟ್ಟಡಗಳ ನಿರ್ಮಾಣ ಯೋಜನೆ ಕೈಗೆತ್ತಿಕೊಳ್ಳುವ ಸಾಧ್ಯತೆಯಿದೆ.
    | ಎಂ.ಜಿ. ಹಿರೇಮಠ, ಜಿಲ್ಲಾಧಿಕಾರಿ

    | ಮಂಜುನಾಥ ಕೋಳಿಗುಡ್ಡ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts