More

    ಬಡವರ ಪಾಲಿನ ಸಂಜೀವಿನಿ ಜಿಲ್ಲಾ ಆಸ್ಪತ್ರೆ; ವಿವಿಧ ಸೇವೆಗಳ ಚಿಕಿತ್ಸಾ ವೆಚ್ಚ ಏಕಾಏಕಿ ದುಪ್ಪಟ್ಟು

    ಧಾರವಾಡ: ಸರ್ಕಾರಿ ಆಸ್ಪತ್ರೆಗಳು ಬಡವರ ಪಾಲಿನ ಸಂಜೀವಿನಿ. ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳ ಬಿಪಿಎಲ್ ಕಾರ್ಡ್‌ದಾರರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಸೌಲಭ್ಯ ಇರುತ್ತದೆ. ಆದರೆ, ಜಿಲ್ಲಾ ಆಸ್ಪತ್ರೆ ಬಡವರ ಪಾಲಿಗೆ ದುಬಾರಿಯಾಗಿದೆ. ಬಿಪಿಎಲ್ ಕಾರ್ಡ್‌ದಾರರೂ ಚಿಕಿತ್ಸಾ ವೆಚ್ಚದ ಶೇ. 50ರಷ್ಟು ಹಣ ಪಾವತಿಸಬೇಕು ಎಂಬ ಆದೇಶ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಬಿಸಿತುಪ್ಪವಾಗಿದೆ.
    ಇಲ್ಲಿನ ಜಿಲ್ಲಾ ಆಸ್ಪತ್ರೆ ಕೇವಲ ಧಾರವಾಡ ಜಿಲ್ಲೆಗೆ ಮಾತ್ರವಲ್ಲ, ಉತ್ತರ ಕನ್ನಡ ಹಾಗೂ ಬೆಳಗಾವಿ ಜಿಲ್ಲೆಯ ಕೆಲ ತಾಲೂಕುಗಳ ಬಡವರಿಗೂ ಸಂಜೀವಿನಿಯಾಗಿದೆ. ಆದರೆ, ಮೊಲಿದ್ದ ಚಿಕಿತ್ಸಾ ದರಗಳನ್ನು ಏಕಾಏಕಿಯಾಗಿ ಏರಿಕೆ ಮಾಡಲಾಗಿದೆ. ಈ ಹಿಂದೆ ಇದ್ದ ಹೊರರೋಗಿಗಳ ವಿಭಾಗದ ನೋಂದಣಿ ಶುಲ್ಕವನ್ನು 10 ರೂಪಾಯಿಯಿಂದ 20 ರೂಪಾಯಿಗೆ ಏರಿಸಲಾಗಿದೆ. ಜೊತೆಗೆ ಎಕ್ಸ್‌ರೇ, ಸ್ಕಾೃನಿಂಗ್, ಡ್ರೆಸಿಂಗ್ ವೆಚ್ಚವನ್ನೂ  ದುಪ್ಪಟ್ಟು ಮಾಡಲಾಗಿದೆ. ಮೊದಲು ಬಿಪಿಎಲ್ ಕಾರ್ಡ್‌ದಾರರಿಗೆ ನೋಂದಣಿ ಉಚಿತವಾಗಿತ್ತು. ಈಗ ನೋಂದಣಿ ಸೇರಿ ಎಲ್ಲ ಪರೀಕ್ಷೆಗಳಿಗೂ ಶೇ. 50ರಷ್ಟು ಹಣ ಪಾವತಿಸಬೇಕು.
    ಜಿಲ್ಲಾ ಆಸ್ಪತ್ರೆಯ ಚಿಕಿತ್ಸಾ ದರಗಳ ಹೆಚ್ಚಳಕ್ಕೆ ರೈತ ಕೃಷಿ ಕಾರ್ಮಿಕರ ಸಂಟನೆಗಳ ವಿರೋಧ ವ್ಯಕ್ತವಾಗಿದೆ. ಜಿಲ್ಲಾಡಳಿತದ ನಡೆ ಖಂಡಿಸಿ ಹೋರಾಟ ಸಹ ನಡೆಸಲಾಗಿದೆ. ಜಿಲ್ಲೆ ಬರ ಪೀಡಿತವಾಗಿರುವ ಸಂದರ್ಭದಲ್ಲಿ ದರ ಏರಿಕೆ ಮಾಡಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ. ದರ ಏರಿಕೆಯನ್ನು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಸಮರ್ಥಿಸಿಕೊಂಡಿದ್ದಾರೆ. 10 ವರ್ಷಗಳಿಂದ ಜಿಲ್ಲಾ ಆಸ್ಪತ್ರೆಯಲ್ಲಿ ದರ ಏರಿಕೆ ಮಾಡಿರಲಿಲ್ಲ. ಹುಬ್ಬಳ್ಳಿ ಕಿಮ್ಸ್ ದರಕ್ಕೆ ಅನುಗುಣವಾಗಿ ಇಲ್ಲೂ ದರ ಏರಿಕೆ ಮಾಡಲಾಗಿದೆ. ಆಸ್ಪತ್ರೆಯ ಸುಧಾರಣೆಗಾಗಿ ಹಣವನ್ನು ವಿನಯೋಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿದ್ದಾರೆ.

    ಬಡ, ಮಧ್ಯಮ ವರ್ಗದ ಜನರು ಖಾಸಗಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಲಾಗುವುದಿಲ್ಲ. ಅಂಥವರಿಗೆ ವರದಾನವಾಗಿದ್ದ ಜಿಲ್ಲಾ ಆಸ್ಪತ್ರೆಯಲ್ಲೂ ವಿವಿಧ ಚಿಕಿತ್ಸಾ ವೆಚ್ಚವನ್ನು ಏಕಾಏಕಿ ಏರಿಕೆ ಮಾಡಲಾಗಿದೆ. ಉಚಿತ ಆಸ್ಪತ್ರೆ ಈಗ ದುಬಾರಿ ಆಸ್ಪತ್ರೆ ಆಗುತ್ತಿದೆ.
    – ದೀಪಾ ಧಾರವಾಡ, ಹೋರಾಟಗಾರ್ತಿ, ಎಸ್‌ಯುಸಿಐ ಸಂಘಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts