More

    ಆಸ್ಪತ್ರೆಯಿಂದ ಪರಾರಿಯಾಗಿದ್ದ ಆರೋಪಿ ಅರೆಸ್ಟ್

    ಬಾಳೆಹೊನ್ನೂರು: ಪೊಲೀಸರಿಂದ ಗುಂಡಿನೇಟು ತಿಂದು ಚಿಕಿತ್ಸೆಗಾಗಿ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿದ್ದ ಪೂರ್ಣೇಶನನ್ನು ಬಾಳೆಹೊನ್ನೂರು ಪೊಲೀಸರು ಮಂಗಳವಾರ ಮಾಗಲು ಗ್ರಾಮದ ಸಮೀಪ ಬಂಧಿಸಿದ್ದಾರೆ.

    ಮಾಗಲು ಗ್ರಾಮದ ಪೂರ್ಣೇಶನ ವಿರುದ್ಧ 9 ಕೇಸ್‌ಗಳಿದ್ದು ಪೊಲೀಸರಿಗೆ ಬೇಕಾಗಿದ್ದ. ಆದರೆ 2012ರಿಂದ ಕಾಡಿನಲ್ಲಿ ಮರಗಳ ಮೇಲೆ ಮಲಗಿ ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದ. ಕಳೆದ ಅಕ್ಟೋಬರ್‌ನಲ್ಲಿ ಮನೆಯಲ್ಲಿರುವ ಮಾಹಿತಿ ಮೇರೆಗೆ ಬಂಧಿಸಲು ಹೋದಾಗ ಪೊಲೀಸರ ಮೇಲೆ ಲಾಂಗ್‌ನಿಂದ ದಾಳಿ ನಡೆಸಿದ್ದ. ಈ ವೇಳೆ ಪಿಎಸ್‌ಐ ವಿ.ಟಿ.ದಿಲೀಪ್‌ಕುಮಾರ್ ಫೈರಿಂಗ್ ಮಾಡಿದ್ದರಿಂದ ಪೂರ್ಣೇಶ್ ಬಲಗಾಲಿಗೆ ಗುಂಡು ತಗುಲಿತ್ತು.
    ತೀವ್ರ ಗಾಯಗೊಂಡ ಹಿನ್ನೆಲೆಯಲ್ಲಿ ಪೊಲೀಸರೇ ಆರೋಪಿಯನ್ನು ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದರು. ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿ ಇದ್ದ ವೇಳೆಯಲ್ಲಿ ಜ.13ರಂದು ಈತ ಪೊಲೀಸರ ಕಣ್ತಪ್ಪಿಸಿ ಆಸ್ಪತ್ರೆಯಿಂದ ಪರಾರಿಯಾಗಿದ್ದ. ಈ ಕುರಿತು ಚಿಕ್ಕಮಗಳೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
    ಆರೋಪಿ ಪತ್ತೆಗಾಗಿ ಎಸ್ಪಿ ಡಾ. ವಿಕ್ರಮ ಅಮಟೆ ಅವರು ಏಳು ವಿಶೇಷ ಪೊಲೀಸ್ ತಂಡಗಳನ್ನು ರಚಿಸಿದ್ದರು. ಮಂಗಳವಾರ ಮುಂಜಾನೆ ಆರೋಪಿಯು ಖಾಂಡ್ಯ ಹೋಬಳಿಯ ಮಾಗಲು ಗ್ರಾಮದ ಬಳಿ ಇರುವ ಕುರಿತು ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಬಾಳೆಹೊನ್ನೂರು ಪಿಎಸ್‌ಐ ವಿ.ಟಿ.ದಿಲೀಪ್‌ಕುಮಾರ್, ಜಯಪುರ ಪಿಎಸ್‌ಐ ಗುರು ಎ. ಸಜ್ಜನ್ ಹಾಗೂ ಸಿಬ್ಬಂದಿ ಮಾಗಲು ಗ್ರಾಮದ ಸೇತುವೆ ಬಳಿಯಿಂದ ಬಸ್ ನಿಲ್ದಾಣದ ಕಡೆಗೆ ಬರುತ್ತಿದ್ದಾಗ ವಶಕ್ಕೆ ಪಡೆದಿದ್ದಾರೆ. ಬಳಿಕ ಬಾಳೆಹೊನ್ನೂರು ಠಾಣೆಗೆ ಕರೆತಂದು ವಿಚಾರಣೆ ನಡೆಸಿ, ಚಿಕ್ಕಮಗಳೂರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts