More

    ಜಿಲ್ಲೆಯ 22 ಶಿಕ್ಷಕರಿಗೆ ಕರೊನಾ – ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ

    ಬೆಳಗಾವಿ: ಜಿಲ್ಲೆಯಲ್ಲಿ ಶಾಲಾ-ಕಾಲೇಜ್ ಆರಂಭವಾದ ವಾರದೊಳಗೆ ಶಿಕ್ಷಕರಲ್ಲಿ ಕರೊನಾ ಸೋಂಕು ದೃಢಪಟ್ಟಿದ್ದು, ಪಾಲಕ ವಲಯದಲ್ಲಿ ಮತ್ತಷ್ಟು ಆತಂಕ ಹೆಚ್ಚಿಸಿದೆ. ಜಿಲ್ಲೆಯಲ್ಲಿ ಈವರೆಗೂ 5 ಸಾವಿರಕ್ಕೂ ಹೆಚ್ಚು ಶಿಕ್ಷಕರಿಗೆ ಕರೊನಾ ಪರೀಕ್ಷೆ ಮಾಡಿಸಲಾಗಿದ್ದು, ಇದರಲ್ಲಿ 2 ಸಾವಿರ ಶಿಕ್ಷಕರ ವರದಿ ನೆಗೆಟಿವ್ ಬಂದಿದ್ದು, 22 ಶಿಕ್ಷಕರಿಗೆ ಸೋಂಕು ದೃಢಪಟ್ಟಿದೆ. 3 ಸಾವಿರ ಶಿಕ್ಷಕರ ವರದಿ ಬರುವುದು ಬಾಕಿ ಇದೆ.

    ಈ ವಿಚಾರವಾಗಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ, ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ 4 ಶಿಕ್ಷಕರು ಮತ್ತು ಬೆಳಗಾವಿ ಶೈಕ್ಷಣಿಕ ಜಿಲ್ಲೆಯ 18 ಶಿಕ್ಷಕರಿಗೆ ಕರೊನಾ ವೈರಸ್ ದೃಢಪಟ್ಟಿದೆ ಎಂದು ಮಾಹಿತಿ ನೀಡಿದರು. ಸರ್ಕಾರದ ಸೂಚನೆಯಂತೆ ಶಾಲೆ- ಕಾಲೇಜ್ ಆರಂಭಿಸಲಾಗಿದೆ. ಅದೇ ರೀತಿ ವಿದ್ಯಾಗಮ ಚಟುವಟಿಕೆಗಳನ್ನೂ ಸಹ ಹಮ್ಮಿಕೊಳ್ಳಲಾಗುತ್ತಿದೆ. ಇದಕ್ಕೂ ಮುನ್ನ ಕರೊನಾ ಪರೀಕ್ಷೆ ಮಾಡಿಸುವಂತೆ ಸೂಚಿಸಲಾಗಿತ್ತು. ಕ್ರಮೇಣ ವರದಿಗಳು ಬರುತ್ತಿವೆ ಎಂದು ತಿಳಿಸಿದರು.

    ಕಡೋಲಿ ಶಾಲೆ ಬಂದ್: ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಹುಕ್ಕೇರಿಯಲ್ಲಿ ಇಬ್ಬರು ಹಾಗೂ ರಾಯಬಾಗದಲ್ಲಿ ಇಬ್ಬರು ಶಿಕ್ಷಕರಲ್ಲಿ ಸೋಂಕು ದೃಢಪಟ್ಟಿದೆ. ಬೆಳಗಾವಿ ಶೈಕ್ಷಣಿಕ ಜಿಲ್ಲೆಯ ಬೆಳಗಾವಿ ನಗರದಲ್ಲಿ 4, ಗ್ರಾಮೀಣ ಭಾಗದಲ್ಲಿ 10, ರಾಮದುರ್ಗದಲ್ಲಿ 3, ಕಿತ್ತೂರಿನ ಓರ್ವ ಶಿಕ್ಷಕರಿಗೆ ಕರೊನಾ ದೃಢಪಟ್ಟಿದೆ. ಇವರಾರೂ ಶಾಲೆಗೆ ಹೋಗಿರಲಿಲ್ಲ.

    ಹೀಗಾಗಿ ಆ ಶಾಲಾ-ಕಾಲೇಜ್ ಬಂದ್ ಮಾಡುವ ಅವಶ್ಯಕತೆ ಇಲ್ಲ. ಆದರೆ, ಬೆಳಗಾವಿ ತಾಲೂಕಿನ ಕಡೋಲಿಯ ಶಾಲೆಯಲ್ಲಿ ನಾಲ್ವರು ಶಿಕ್ಷಕರಿಗೆ ಸೋಂಕು ದೃಢಪಟ್ಟಿದ್ದರಿಂದ ಆ ಶಾಲೆಯನ್ನು ಬಂದ್ ಮಾಡಲಾಗಿದೆ. ವಾರದ ಬಳಿಕ ಶಾಲೆಗೆ ಸ್ಯಾನಿಟೈಸ್ ಮಾಡಿ ಮತ್ತೆ ಪ್ರಾರಂಭಿಸುತ್ತೇವೆ ಎಂದು ತಿಳಿಸಿದರು.

    ಭಯಗೊಳ್ಳುವ ಅಗತ್ಯವಿಲ್ಲ: ಕರೊನಾ ಸೋಂಕಿಗೆ ತುತ್ತಾದ ಈ ಶಿಕ್ಷಕರು ಮಕ್ಕಳ ಸಂಪರ್ಕಕ್ಕೆ ಬಂದಿಲ್ಲ. ಹೀಗಾಗಿ ಪೋಷಕರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಜಿಲ್ಲೆಯಲ್ಲಿ ಇನ್ನೂ ನೂರಾರು ಶಿಕ್ಷಕರ ಕರೊನಾ ಪರೀಕ್ಷಾ ವರದಿ ಬರುವುದು ಬಾಕಿ ಇದೆ. ಕರೊನಾ ನೆಗೆಟಿವ್ ಬಂದವರಿಗೆ ಮಾತ್ರ ಶಾಲೆಗೆ ತೆರಳಿ ಬೋಧನೆಗೆ ಅವಕಾಶ ಕಲ್ಪಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಹಿರೇಮಠ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts