More

  ತತ್ವಪದಗಳ ಕಾಲ ಬೆಳಕಿನ ಯುಗ

  ಕಲಬುರಗಿ: ತತ್ವಪದಗಳ ರಚನೆ ಕಾಲವನ್ನು ಕೆಲವರು ಕತ್ತಲೆಯುಗ ಎಂದು ಬಿಂಬಿಸಿದ್ದರು. ಆದರೆ ಅದು ಬೆಳಕಿನ ಯುಗ. ಜನರ ಬದುಕನ್ನು ಗಟ್ಟಿಗೊಳಿಸಿ ಅರಿವು ಮೂಡಿಸಿದ ಕಾಲವದು ಎಂದು ತತ್ವಪದ ಸಮ್ಮೇಳನಾಧ್ಯಕ್ಷರಾದ ಕಡಕೋಳ ಮಡಿವಾಳೇಶ್ವರ ಮಹಾಮಠ ಶ್ರೀ ಡಾ.ರುದ್ರಮುನಿ ಶಿವಾಚಾರ್ಯ ಹೇಳಿದರು.

  ನಗರದ ಕನ್ನಡ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಭಾನುವಾರ ಆಯೋಜಿಸಿದ್ದ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ತತ್ವಪದಗಳು ಜನರ ನಾಡಿಮಿತವಾಗಿದ್ದವು. ಅದರಿಂದ ಬದುಕು ಕಟ್ಟಿಕೊಳ್ಳುವುದರ ಜತೆಗೆ ತಿದ್ದಿಕೊಳ್ಳಲು ಪ್ರೇರಣೆ ಸಿಕ್ಕಿದೆ ಎಂದರು.

  ಸಮ್ಮೇಳನ ಉದ್ಘಾಟಿಸಿದ ಖ್ಯಾತ ಸಂಸ್ಕೃತಿ ಚಿಂತಕ ಮಲ್ಲಿಕಾರ್ಜುನ ಕಡಕೋಳ ಮಾತನಾಡಿ, ತತ್ವಪದ ಗ್ರಾಮೀಣರ ಅಕ್ಷರದ ಮಂತ್ರಗಳಾಗಿವೆ. ಕಡಕೋಳ ಗ್ರಾಮ ತತ್ವಪದಗಳನ್ನು ಉಳಿಸಿದ ಕೇಂದ್ರ. ಸಾಹಿತ್ಯ ಚರಿತ್ರೆಕಾರರು, ತತ್ವಪದಕಾರರು ಲೋಕ ಮಿಮಾಂಸಕರಾಗಿದ್ದಾರೆ. ಜನಜೀವನ ಗಟ್ಟಿಗೊಳಿಸುವ ಸಾಹಿತ್ಯವೇ ತತ್ವಪದ ಸಾಹಿತ್ಯ. ಅನುಭವಕ್ಕೆ ಬಂದ ವಿಚಾರವನ್ನು ಪದಗಳ ಮೂಲಕ ವ್ಯಕ್ತಪಡಿಸಿದ್ದಾರೆ. ತತ್ವಪದಕಾರರು ಮತ್ತು ತತ್ವಪದಗಳಿಗೆ ಸಿಗಬೇಕಿದ್ದ ಸಾಂಸ್ಕೃತಿಕ ಸ್ಥಾನಮಾನ ದೊರಕಲಿಲ್ಲ ಎಂದು ಕಳಕಳ ವ್ಯಕ್ತಪಡಿಸಿದರು.

  ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಪ್ರಾಸ್ತಾವಿಕ ಮಾತನಾಡಿ, ಕಡಕೋಳ ಮಡಿವಾಳಪ್ಪನವರ ತತ್ವಪದಗಳು ಜೀವನ ಹಸನಾಗಿಸುವ ಶಕ್ತಿ ಹೊಂದಿವೆ. ಮಡಿವಾಳಪ್ಪನವರ ಚಿಂತನೆಗಳು ಸಂಶೋಧನೆ ಮೂಲಕ ಪಸರಿಸಬೇಕಾಗಿದೆ ಎಂದರು.

  ಚಿಗರಳ್ಳಿಯ ಶ್ರೀ ಸಿದ್ಧಬಸವ ಕಬೀರ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ನಿವೃತ್ತ ಪ್ರಾಚಾರ್ಯ ಮಹ್ಮದ್ ಅಲ್ಲಾವುದ್ದೀನ್ ಸಾಗರ, ಆರತಿ ಪಾಟೀಲ್, ಸ್ವಾಗತ ಸಮಿತಿ ಅಧ್ಯಕ್ಷ ಕಲ್ಯಾಣಕುಮಾರ ಸಂಗಾವಿ ಗಂವ್ಹಾರ, ಕಾರ್ಯಾಧ್ಯಕ್ಷ ಬಲವಂತರಾಯಗೌಡ ಬಿರಾದಾರ ಅರಳಗುಂಡಗಿ, ಚನ್ನಮಲ್ಲಯ್ಯ ಹಿರೇಮಠ, ಪ್ರಮುಖರಾದ ಧರ್ಮಣ್ಣ ಧನ್ನಿ, ಶರಣರಾಜ ಛಪ್ಪರಬಂದಿ, ಸಿದ್ಧಲಿಂಗ ಜಿ ಬಾಳಿ, ರವೀಂದ್ರಕುಮಾರ ಭಂಟನಳ್ಳಿ, ಕಲ್ಯಾಣಕುಮಾರ ಶೀಲವಂತ, ವಿಶ್ವನಾಥ ತೊಟ್ನಳ್ಳಿ, ರಾಜೇಂದ್ರ ಮಾಡಬೂಳ, ಶಕುಂತಲಾ ಪಾಟೀಲ್, ಶಿಲ್ಪಾ ಜೋಶಿ, ಜ್ಯೋತಿ ಕೋಟನೂರ, ಮಹಾನಂದಾ ಸಿಂಗೆ, ಗುರುಬಸಪ್ಪ ಸಜ್ಜನಶೆಟ್ಟಿ, ಸಂತೋಷ ಕುಡಳ್ಳಿ, ಸುರೇಶ ದೇಶಪಾಂಡೆ, ನಾಗಪ್ಪ ಸಜ್ಜನ್, ಎಸ್.ಕೆ. ಬಿರಾದಾರ, ಶಾಮಸುಂದರ ಕುಲಕರ್ಣಿ, ಪ್ರಭುಲಿಂಗ ಮೂಲಗೆ, ಶರಣಬಸಪ್ಪ ಕೋಬಾಳ, ವೀರೇಂದ್ರ ಕೊಲ್ಲೂರ ಇದ್ದರು.

  ಗ್ರಾಮೀಣರ ಜೀವನ ಜತೆ ಅಡಕ: ತತ್ವಪದಗಳು ಗ್ರಾಮೀಣರ ನಿತ್ಯದ ಜೀವನದ ಜತೆಯಲ್ಲೇ ಅಡಕವಾಗಿವೆ. ತತ್ವಪದಗಳು ಎಡ-ಬಲ ಪಂಥವಲ್ಲ ಗುರುಪಂಥ. ಬದುಕಿಗೆ ಮಾರ್ಗದರ್ಶನ ನೀಡುವ ಸಾಹಿತ್ಯವೇ ತತ್ವಪದ ಸಾಹಿತ್ಯ ಎಂದು ಸಮ್ಮೇಳನ ಅಧ್ಯಕ್ಷರಾದ ಶ್ರೀ ಡಾ.ರುದ್ರಮುನಿ ಶಿವಾಚಾರ್ಯರು ಹೇಳಿದರು. ಸರ್ವಾಧ್ಯಕ್ಷೀಯ ಭಾಷಣ ಮಾಡಿದ ಅವರು, ಕರ್ನಾಟಕದ ಅನೇಕ ಕಡೆ ತತ್ವಪದಕಾರರ ನೆಲೆಗಳು ಕಂಡು ಬರುತ್ತವೆ. ಕೆಲವರು ತತ್ವಪದ ರಚಿಸದೆಯೂ ತಾತ್ವಿಕ ಸಿದ್ಧ ಸಾಧಕ ಬಾಳು ಸಾಗಿಸಿದ್ದಾರೆ. ಅಂಥ ಅಜ್ಞಾತ ಸಂತರನ್ನು ಗುರುತಿಸಬೇಕಿದೆ. ತತ್ವಪದ ಸಾಹಿತ್ಯ ಉಳಿಸಿ ಬೆಳೆಸಬೇಕಿದೆ. ತತ್ವಪದ ಸಾಹಿತ್ಯ ಸಂವೇದನೆಗಳನ್ನು ಹುಟ್ಟು ಹಾಕುತ್ತದೆ. ಕಲಬುರಗಿ ಜಿಲ್ಲೆ ತತ್ವಪದಗಳ ತವರೂರು ಎಂದರು.

  ಸಮ್ಮೇಳನಾಧ್ಯಕ್ಷರ ಜರ‍್ದಾರ್ ಮೆರವಣಿಗೆ: ಶರಣರು, ಸಂತರು ಮತ್ತು ಅನುಭಾವಿಗಳ ತವರು ಕಲಬುರಗಿಯಲ್ಲಿ ಪ್ರಥಮ ಜಿಲ್ಲಾ ತತ್ವಪದ ಸಾಹಿತ್ಯ ಸಮ್ಮೇಳನಾಧ್ಯಕ್ಷ ಶ್ರೀ ಡಾ.ರುದ್ರಮುನಿ ಶಿವಾಚಾರ್ಯರ ಸಾಂಸ್ಕೃತಿಕ ವೈಭವದ ಮೆರವಣಿಗೆ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಿಂದ ಕನ್ನಡ ಭವನವರೆಗೆ ಸಾಗಿತು. ಯಾಕ್ ಮಾಡುತಿ ಒಣ ಚಿಂತಿ, ನಿನಗ್ ಬಡ್ಕೊಂಡಾದ ಮಾಯದ ಭ್ರಾಂತಿ ಎಂಬ ತತ್ವಪದ ಹಾಡುತ್ತ ಕಲಾವಿದರು ಹೆಜ್ಜೆ ಹಾಕಿದರು. ಹಲಗೆ ವಾದನ, ಡೊಳ್ಳು ಕುಣಿತ, ಭಜನಾ ತಂಡಗಳೊಂದಿಗೆ ಉರಿಬಿಸಿಲು ಲೆಕ್ಕಿಸದೆ ನೂರಾರು ಜನ ಕುಣಿದು ಕುಪ್ಪಳಿಸಿದರು. ಕಡಕೋಳ ಮಡಿವಾಳಪ್ಪ ನವರಿಗೆ ಜಯವಾಗಲಿ ಜೈಘೋಷ ಮೊಳಗಿದವು.

  ಗೋಷ್ಠಿಗಳಲ್ಲಿ ಚಿಂತನ ಮಂಥನ
  ಕನ್ನಡ ಸಾಹಿತ್ಯ: ತತ್ವಪದಗಳ ಪ್ರಸ್ತುತತೆ ಕುರಿತ ಗೋಷ್ಠಿಯಲ್ಲಿ ಮಾತನಾಡಿದ ಹಿರಿಯ ಸಾಹಿತಿ ಡಾ.ಸ್ವಾಮಿರಾವ ಕುಲಕರ್ಣಿ, ವಿದ್ಯಾವಂತರೇ ಹೆಚ್ಚು ಭ್ರಷ್ಟಾಚಾರಿಗಳು. ಇಂಥವರ ಬಗ್ಗೆ ತತ್ವಪದಕಾರರು ಅಂದೇ ಅರಿವು ಮೂಡಿಸಿದ್ದರು. ಮೋಸ ಮಾಡುವ ಮನಸ್ಸುಗಳು ಹೆಚ್ಚಾಗುತ್ತಿವೆ. ಮನಸ್ಸಿನ ಪರಿವರ್ತನೆ ಆಗಬೇಕು. ಇದುವೇ ತತ್ವಪದಕಾರರು, ಶರಣರು, ದಾಸರು ತಿಳಿಸಿ ಬದುಕಿನ ಬಗ್ಗೆ ಎಚ್ಚರಿಸಿದ್ದಾರೆ ಎಂದರು. ತತ್ವಪದ ಸಾಹಿತ್ಯ: ಕರ್ನಾಟಕ ಸೌಹಾರ್ದ ಪರಂಪರೆ ಕುರಿತು ಮಾತನಾಡಿದ ಚಿಂತಕ ಡಾ.ಗೌಸುದ್ದಿನ್ ತುಮಕುರಕರ್, ಹಿಂದು ಮುಸ್ಲಿಂ ಭಾವ್ಯಕ್ಯಕ್ಕೆ ಕುಂದುಂಟು ಮಾಡುವ ಇಂದಿನ ಕೆಟ್ಟ ಮನಸ್ಸುಗಳ ಬಗ್ಗೆ ದಿನಂಪ್ರತಿ ಕೇಳುತ್ತೇವೆ. ತತ್ವಪದವೆಂದರೆ ಅನುಭಾವ ಪದಗಳು ಎಂದರು. ಈರಮ್ಮ ಗುರುಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಕಲಾವಿದ ಬಾಬುರಾವ ಕೋಬಾಳ ಅಧ್ಯಕ್ಷತೆಯ ತತ್ವಪದ ಸಂಭ್ರಮದಲ್ಲಿ ಗಿರಿಜಾ ಕರ್ಪೂರ, ಶ್ರೀಹರಿ ಕರಕೇಳ್ಳಿ, ಗುರುಬಸಪ್ಪ ಚಾಂದಕವಟೆ, ಮಹೇಶ ಚಿಂತನಪಳ್ಳಿ ಇದ್ದರು. ಶ್ರುತಿ ಚರಂತಿಮಠ, ಮಲ್ಲಿಕಾರ್ಜುನ ಫರಹತಾಬಾದ್, ಈರಯ್ಯ ಸ್ವಾಮಿ ಯಾತನೂರ, ಸಾಯಬಣ್ಣ ಕಟ್ಟಿಮನಿ ಇತರರು ತತ್ವಪದ ಹಾಡಿದರು. ಸಾಹಿತಿ ಎಚ್.ಬಿ. ತೀರ್ಥೆ ಅಧ್ಯಕ್ಷತೆಯಲ್ಲಿ ತತ್ವಪದ ಕವಿಗೋಷ್ಠಿ ಜರುಗಿತು.

  ಸಂಶೋಧನಾ ಕೇಂದ್ರ ಸ್ಥಾಪಿಸಿ: ಹಿರಿಯ ಸಾಹಿತಿ ಡಾ.ಶ್ರೀಶೈಲ ನಾಗರಾಳ ಸಮಾರೋಪ ನುಡಿಗಳನ್ನಾಡಿ, ಕಡಕೋಳ ಮಡಿವಾಳಪ್ಪನವರ ತತ್ವಪದ ಕುರಿತು ಅನೇಕ ಕೃತಿಗಳು ಪ್ರಕಟವಾಗಿವೆ. ಜನಸಾಮಾನ್ಯರಿಗೆ ಒಳವಿನ ಅರಿವು ಮೂಡಿಸುತ್ತದೆ. ರಾಜ್ಯ ಮಟ್ಟದ ತತ್ವಪದಕಾರರ ಸಾಹಿತ್ಯ ಸಮ್ಮೇಳನ ನಡೆಸಲು ಒತ್ತಾಯಿಸಿದರು. ಮಾಧ್ಯಮ ಅಕಾಡೆಮಿ ಸದಸ್ಯ ದೇವೇಂದ್ರಪ್ಪ ಕಪನೂರ, ಸಂಗೀತ ಅಕಾಡೆಮಿ ಸದಸ್ಯ ಶಂಕರ ಹೂಗಾರ ಇತರರಿದ್ದರು. ಸಮಾರೋಪದಲ್ಲಿ ಕಡಕೋಳ ಮಡಿವಾಳಪ್ಪ ತತ್ವಪದ ಮತ್ತು ಸಂಶೋಧನಾ ಕೇಂದ್ರ ಸ್ಥಾಪಿಸಬೇಕೆಂಬ ಏಕೈಕ ನಿರ್ಣಯವನ್ನು ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಧರ್ಮಣ್ಣ ಧನ್ನಿ ಹಾಗೂ ಸಿದ್ಧಲಿಂಗ ಬಾಳಿ ಮಂಡಿಸಿದರು. ಪಾಲ್ಗೊಂಡವರು ಚಪ್ಪಾಳೆ ತಟ್ಟಿ ಅನುಮೋದಿಸಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts