More

    2ನೇ ತರಗತಿಗೆ ನೇರ ನೋಂದಣಿ

    ಶಿರಸಿ: ಕರೊನಾ ಕಾರಣಕ್ಕೆ ಗೊಂದಲಗಳ ಗೂಡಾಗಿ ಮಾರ್ಪಟ್ಟಿದ್ದ ಶೈಕ್ಷಣಿಕ ವ್ಯವಸ್ಥೆಯಿಂದ ದೂರವಿದ್ದ ನೂರಾರು ವಿದ್ಯಾರ್ಥಿಗಳು ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ನೇರವಾಗಿ ಎರಡನೇ ತರಗತಿಗೆ ನೋಂದಣಿಯಾಗಿದ್ದಾರೆ.
    ಕರೊನಾ ಕಾರಣಕ್ಕೆ ಕಳೆದೊಂದು ವರ್ಷದಿಂದ ಇಡೀ ಶಿಕ್ಷಣ ವ್ಯವಸ್ಥೆ ಕಲಸು ಮೇಲೋರಗದಂತಾಗಿತ್ತು. ಶಾಲೆಗಳು ಬಂದಾಗಿ ಆನ್​ಲೈನ್ ಕ್ಲಾಸ್​ಗಳು ಮುನ್ನೆಲೆಗೆ ಬಂದಿದ್ದವು. ಕರೊನಾ ಭಯ ಪಾಲಕರನ್ನು ತಲ್ಲಣಗೊಳಿಸಿತ್ತು. ಮಕ್ಕಳ ಮೇಲಿನ ವ್ಯಾಮೋಹ, ಕರೊನಾದ ಜೀವ ಭಯದಿಂದ ಹಲವು ಪಾಲಕರು ಮಕ್ಕಳನ್ನು ಶಾಲೆಗಳಿಗೆ ದಾಖಲಿಸಲು ಹಿಂಜರಿದಿದ್ದರು. ಇವೆಲ್ಲ ಕಾರಣದಿಂದ ಕಳೆದ ಶೈಕ್ಷಣಿಕ ವರ್ಷದಲ್ಲಿ ನೂರಾರು ವಿದ್ಯಾರ್ಥಿಗಳು ಶಾಲಾ ದಾಖಲಾತಿಗೆ ಸೇರದೆ ಮನೆಯಲ್ಲೇ ಉಳಿದುಕೊಂಡಿದ್ದರು. ಪ್ರಸಕ್ತ ವರ್ಷ ಶಾಲೆಗಳು ಪುನರಾರಂಭಿಸಲು ಸರ್ಕಾರ ಸೂಚಿಸಿದ ಬೆನ್ನಲ್ಲೇ ಈ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಕಡ್ಡಾಯ ಶಿಕ್ಷಣ ಕಾಯ್ದೆ (ಆರ್​ಟಿಇ)ಯಲ್ಲಿನ ಅವಕಾಶ ಬಳಸಿಕೊಂಡು, ಉತ್ತರ ಕನ್ನಡ ಜಿಲ್ಲೆಯ ಎರಡು ಶೈಕ್ಷಣಿಕ ಜಿಲ್ಲೆಗಳಲ್ಲಿ ಒಂದನೇ ತರಗತಿಗೆ ದಾಖಲಾಗಲು ಸಾಧ್ಯವಾಗದ ಮಕ್ಕಳಿಗೆ ನೇರವಾಗಿ 2ನೇ ತರಗತಿಗೆ ಅವಕಾಶ ಕಲ್ಪಿಸಲಾಗಿದೆ.
    500ರಷ್ಟು ಮಕ್ಕಳು: ಕರೊನಾ, ಲಾಕ್​ಡೌನ್ ಪರಿಣಾಮ ಹಲವು ಪಾಲಕರು ಮಹಾನಗರ ತೊರೆದು ತವರಿಗೆ ಮರಳಿದ್ದು, ಅವರ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದರು. ಯಾವ ಶಾಲೆಗೆ ಸೇರಿಸುವುದು? ಸರ್ಕಾರಿ ಶಾಲೆ ಉತ್ತಮವೇ? ಖಾಸಗಿ ವ್ಯವಸ್ಥೆಯೇ ಎಂಬಿತ್ಯಾದಿ ಪಾಲಕರ ಗೊಂದಲಗಳ ಮಧ್ಯೆ ಹಲವಾರು ಮಕ್ಕಳು ಒಂದನೇ ತರಗತಿಗೆ ದಾಖಲಾಗಲೂ ಸಾಧ್ಯವಾಗಿರಲಿಲ್ಲ. ಕರೊನಾ ಎರಡನೇ ಅಲೆಯಲ್ಲಿ ಇಡೀ ಶೈಕ್ಷಣಿಕ ವರ್ಷ ಪೂರ್ಣಗೊಂಡಿತ್ತು. ಈ ಬಾರಿ ಶಾಲೆ ಆರಂಭದೊಂದಿಗೆ ಕಳೆದ ಸಾಲಿನಲ್ಲಿ ದಾಖಲಾಗದೇ ಉಳಿದು ಹೋಗಿರುವ ಮಕ್ಕಳಿಗೆ ವಿಶೇಷ ಆದ್ಯತೆ ನೀಡಲಾಗಿದೆ. ಶಿರಸಿ ಹಾಗೂ ಕಾರವಾರ ಶೈಕ್ಷಣಿಕ ಜಿಲ್ಲೆಗಳಲ್ಲಿ ಈವರೆಗೆ ಅಂದಾಜು 500ರಷ್ಟು ಮಕ್ಕಳನ್ನು ನೇರವಾಗಿ ಎರಡನೇ ತರಗತಿಗೆ ದಾಖಲಿಸಲಾಗಿದೆ. ಇನ್ನೂ ಈ ಪ್ರಕ್ರಿಯೆ ಚಾಲ್ತಿಯಲ್ಲಿದೆ.
    ಶಿಕ್ಷಕರಿಗೆ ಸೂಚನೆ
    ಶೈಕ್ಷಣಿಕ ವರ್ಷದ ಮೊದಲ ಅರ್ಧದಲ್ಲಿ ಒಂದು ಮತ್ತು ಎರಡನೇ ತರಗತಿಗಳಲ್ಲಿ ಬರುವ ಅಕ್ಷರಗಳು, ನಿತ್ಯದ ಪದ್ಯಗಳು, ಗುರುತಿಸುವಿಕೆ ಇತ್ಯಾದಿ ಪಾಠಗಳನ್ನು ಈ ಮಕ್ಕಳಿಗೆ ಕಲಿಸಲು ಈಗಾಗಲೇ ಸಂಬಂಧಪಟ್ಟ ಶಿಕ್ಷಕರಿಗೆ ಸೂಚಿಸಲಾಗಿದೆ. ನೇರವಾಗಿ ಎರಡನೇ ತರಗತಿಗೆ ದಾಖಲಾಗುವ ಕಾರಣ ಕೆಲವು ತಿಂಗಳ ಕಾಲ ಎರಡೂ ತರಗತಿಗಳ ಪಾಠ ಅನಿವಾರ್ಯ ಎಂಬುದು ಇಲಾಖೆ ಅಧಿಕಾರಿಗಳ ಅಭಿಪ್ರಾಯ.

    ಕರೊನಾ, ಲಾಕ್​ಡೌನ್ ಕಾರಣಕ್ಕೆ ಒಂದನೇ ತರಗತಿಗೆ ಮಗುವನ್ನು ಕಳುಹಿಸಲು ಆತಂಕವಾಗಿತ್ತು. ಹೀಗಾಗಿ ಶಾಲೆಗೆ ದಾಖಲಿಸಿರಲಿಲ್ಲ. ಇದರಿಂದ ಮಗುವಿನ ಒಂದು ವರ್ಷ ಶಿಕ್ಷಣ ಹಾಳಾಯಿತು ಎಂಬ ಬೇಸರವಿತ್ತು. ಆದರೆ, ಪ್ರಸಕ್ತ ವರ್ಷದ ಶೈಕ್ಷಣಿಕ ಸಾಲಿಗೆ ನೇರವಾಗಿ 2ನೇ ತರಗತಿಗೆ ಸೇರ್ಪಡೆ ಮಾಡಲು ಶಿಕ್ಷಣ ಇಲಾಖೆ ಅವಕಾಶ ನೀಡಿದ್ದು, ಸಮಾಧಾನ ನೀಡಿದೆ.
    | ಹೇಮಲತಾ ಹೆಗಡೆ
    ಪಾಲಕಿ, ಶಿರಸಿ

    ಯಾರೊಬ್ಬರೂ ಶಿಕ್ಷಣದಿಂದ ವಂಚಿತವಾಗಬಾರದು. ಈ ನಿಟ್ಟಿನಲ್ಲಿ ಆರ್​ಟಿಇ ಸಹಾಯ ಪಡೆದು ಮಕ್ಕಳ ವಯಸ್ಸು ಆಧರಿಸಿ ಆಯಾ ತರಗತಿಗಳಿಗೆ ಅವಕಾಶ ಕಲ್ಪಿಸಲಾಗುತ್ತಿದೆ. 6.5 ವರ್ಷ ಮೇಲ್ಪಟ್ಟ ಮಕ್ಕಳಿಗೆ ನೇರವಾಗಿ 2ನೇ ತರಗತಿಗೆ ಅವಕಾಶ ನೀಡಲಾಗಿದೆ. 7.5 ವರ್ಷ ಮೇಲ್ಪಟ್ಟ ಮಕ್ಕಳಿಗೆ ಮೂರನೇ ತರಗತಿಗೆ ಅವಕಾಶ ಕಲ್ಪಿಸಲಾಗಿದೆ. ಈ ಬಗ್ಗೆ ಪಾಲಕರು ಶಾಲೆಯ ಮುಖ್ಯ ಶಿಕ್ಷಕರ ಬಳಿ ದಾಖಲಾತಿ ಸಲ್ಲಿಸಿ ನೋಂದಣಿ ಮಾಡಿಸಬೇಕು.
    | ದಿವಾಕರ ಶೆಟ್ಟಿ
    ಡಿಡಿಪಿಐ, ಶಿರಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts