More

    ಗೃಹಿಣಿ ಸ್ಥಾನ ಉನ್ನತ, ನೆಮ್ಮದಿಯಿರಲಿ ಅನವರತ

    ಈಗ ಗೃಹಿಣಿಗೆ ‘ಹೋಮ್ೆುೕಕರ್’ ಎಂದು ಹೇಳಲಾಗುತ್ತದೆ. ಅಂದರೆ ಮನೆಯ ಪೂರ್ತಿ ಜವಾಬ್ದಾರಿ ನಿಭಾಯಿಸುವವಳು. ಆದರೆ ಹೊರಗೆ ಕೆಲಸಕ್ಕೆ ಹೋಗುವವರಿಗೆ ಹೋಲಿಸಿದರೆ ಮನೆಯಲ್ಲಿರುವವರಿಗೆ ಕೀಳರಿಮೆ ಅಥವಾ ಮುಜುಗರ ಕಾಡುತ್ತದೆಯಾ? ಅಂದರೆ, ಒಟ್ಟಾರೆ ಮನೋಭಾವ ಬದಲಾಗಬೇಕಿದೆ, ಖುದ್ದು ಮಹಿಳೆಯರದು ಕೂಡಾ.

    ಗೃಹಿಣಿ ಸ್ಥಾನ ಉನ್ನತ, ನೆಮ್ಮದಿಯಿರಲಿ ಅನವರತಮಾನುಷಿ ಛಿಲ್ಲರ್. 2017ರಲ್ಲಿ ವಿಶ್ವ ಸುಂದರಿ ಪಟ್ಟ ಮುಡಿಗೇರಿಸಿಕೊಂಡ ಹರಿಯಾಣದ ಯುವತಿ. ಹಾಗಂತ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಕೇವಲ ಸೌಂದರ್ಯವೊಂದನ್ನೇ ಗಣಿಸಿ ಕಿರೀಟ ತೊಡಿಸುವುದಿಲ್ಲ. ಅಲ್ಲಿ ಅವರ ಬುದ್ಧಿಮತ್ತೆಯನ್ನೂ ಪರೀಕ್ಷಿಸಲಾಗುತ್ತದೆ. ಸ್ಪರ್ಧೆಯ ಕೊನೆಯ ಸುತ್ತಿನಲ್ಲಿ ಛಿಲ್ಲರ್​ಗೆ

    ಎದುರಾದ ಪ್ರಶ್ನೆ ಹೀಗಿತ್ತು: ‘ಹೆಚ್ಚು ವೇತನಕ್ಕೆ ಅರ್ಹವಾದ ವೃತ್ತಿ ಯಾವುದು?’. ‘ಒಬ್ಬ ತಾಯಿ ಹೆಚ್ಚು ವೇತನ ಮತ್ತು ಗೌರವಕ್ಕೆ ಅರ್ಹಳಾದವಳು. ವೇತನಕ್ಕೆ ಸಂಬಂಧಿಸಿ ಹೇಳುವುದಾದರೆ, ಅದು ಕೇವಲ ಹಣವಲ್ಲ. ಅದಕ್ಕಿಂತ ಹೆಚ್ಚಾಗಿ ಆಕೆ ಪ್ರೀತಿ ಹಾಗೂ ಗೌರವಕ್ಕೆ ಅರ್ಹಳಾದವಳು’ ಎಂದು ನೀಡಿದ ಉತ್ತರ ಮಾನುಷಿಯನ್ನು ಪ್ರಶಸ್ತಿ ಸನಿಹಕ್ಕೆ ತಂದಿತು.

    ಪ್ರಕರಣವೊಂದರ ವಿಚಾರಣೆ ವೇಳೆ ಈಚೆಗೆ ಮದ್ರಾಸ್ ಹೈಕೋರ್ಟ್ ನೀಡಿದ ತೀರ್ಪು ಹಾಗೂ ವ್ಯಕ್ತಪಡಿಸಿದ ಅಭಿಪ್ರಾಯಗಳು ಗಮನಾರ್ಹ. ಅಪಘಾತದಲ್ಲಿ ಶಾಶ್ವತವಾಗಿ ಅಂಗವಿಕಲಳಾದ ಮಹಿಳೆಗೆ ಪರಿಹಾರ ಧನ ನೀಡುವ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ಕುಟುಂಬ ಮತ್ತು ಸಮಾಜದಲ್ಲಿ ಗೃಹಿಣಿಯ ಪಾತ್ರದ ಪ್ರಾಮುಖ್ಯವನ್ನು ಕೊಂಡಾಡಿದ ನ್ಯಾ.ಎಸ್.ಸುಬ್ರಹ್ಮಣ್ಯಂ ಅವರಿದ್ದ ಪೀಠ, ಸದರಿ ಸಂತ್ರಸ್ತೆಗೆ ಮೊದಲು ಘೋಷಿಸಲಾಗಿದ್ದ 8.46 ಲಕ್ಷ ರೂ. ಪರಿಹಾರದ ಬದಲು 14.07 ಲಕ್ಷ ರೂ.ಗಳನ್ನು ನೀಡುವಂತೆ ಸೂಚಿಸಿತಲ್ಲದೆ, ಮನೆಯ ದುಡಿಯುವ ಸದಸ್ಯನಿಗಿಂತ ಗೃಹಿಣಿಯ ಸ್ಥಾನ ಉನ್ನತವಾದುದು ಎಂದೂ ಹೇಳಿತು. ‘ಮನೆಯ ಗೃಹಿಣಿಯ ಪಾತ್ರ ನಿಭಾಯಿಸುವುದು ಅತ್ಯಂತ ಕಷ್ಟಕರ. ಅವರು ಸಮಯದ ಮಿತಿಯಿಲ್ಲದೆ ದುಡಿಯುತ್ತಾರೆ. ಅವರ ಕೆಲಸದಲ್ಲಿ ಪ್ರೀತಿ-ಅಕ್ಕರೆ ಮಿಳಿತವಾಗಿರುತ್ತದೆ. ಅದೇ ಒಬ್ಬ ಸಾಮಾನ್ಯ ಉದ್ಯೋಗಿಯಿಂದ ಇಂಥದನ್ನು ನಿರೀಕ್ಷಿಸಲಾಗದು. ಗೃಹಿಣಿಯರು ರಾಷ್ಟ್ರನಿರ್ವಪಕರು ಎಂಬುದನ್ನು ನಾವು ಮರೆಯಬಾರದು. ನಿಜ, ಕುಟುಂಬದ ದುಡಿಯುವ ಸದಸ್ಯ ಮರಣಿಸಿದರೆ ಅದು ಅಗಾಧ ನಷ್ಟವೇ. ಅದೇ ಗೃಹಿಣಿ ಮರಣಿಸಿದರೆ ಅದರ ಪರಿಣಾಮ ಊಹಾತೀತ ಮತ್ತು ಅಂಥ ಕುಟುಂಬ ಛಿದ್ರವಾಗುತ್ತದೆ. ಹೀಗಾಗಿ, ಮನೆಯ ದುಡಿಯುವ ಸದಸ್ಯನಿಗಿಂತ ಗೃಹಿಣಿ ಉನ್ನತಸ್ಥಾನದಲ್ಲಿ ನಿಲ್ಲುತ್ತಾಳೆ’. ಕೋರ್ಟ್​ನ ಈ ಅಭಿಪ್ರಾಯಕ್ಕೆ ಪ್ರತ್ಯೇಕ ವಿವರಣೆ ಬೇಕಿಲ್ಲ ಅನಿಸುತ್ತದೆ. ಇದನ್ನೂ ಓದಿ: ದಿಕ್ಸೂಚಿ| ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೇ

    ಮೇಲೆ ವಿವರಿಸಿದಂಥ ಪ್ರಸಂಗಗಳು ಇನ್ನೊಂದು ಚರ್ಚೆಗೂ ದಾರಿಮಾಡಿವೆ. ಅಂದರೆ, ಮನೆಯಲ್ಲಿ ದುಡಿಯುವ ಮಹಿಳೆಯ ಕೆಲಸವನ್ನು ಹಣದ ಮೌಲ್ಯದಿಂದ ಅಳೆಯಬೇಕಾ? ಉದ್ಯೋಗಸ್ಥ್ಥಗೆ ಸಿಗುವ ಹಾಗೆ ಆವಳಿಗೂ ಒಂದು ವೇತನ ಅಂತ ಇರಬೇಕಾ? ಎಂಬುದು. ಈ ಬಗ್ಗೆ ಪರ-ವಿರೋಧ ಎರಡೂ ವಾದಗಳು ಅನೇಕ ವರ್ಷಗಳಿಂದ ಚಾಲ್ತಿಯಲ್ಲಿವೆ. ‘ಎಷ್ಟೆಲ್ಲ ಕೆಲಸ ಮಾಡಿದರೂ ಗೃಹಿಣಿಗೆ ಅವಳದೇ ಆದ ಆರ್ಥಿಕ ಮೂಲ ಎಂಬುದು ಇರುವುದಿಲ್ಲ. ಪ್ರತಿಯೊಂದಕ್ಕೂ ಮನೆಯ ಗಂಡಸರ ಮೇಲೆ ಅವಲಂಬಿತವಾಗಿರಬೇಕಾಗುತ್ತದೆ. ಎಷ್ಟೋ ಹೆಂಗಸರು ಈ ಕಾರಣದಿಂದಾಗಿ ದೌರ್ಜನ್ಯವನ್ನೂ ಮೌನವಾಗಿ ಸಹಿಸಿಕೊಂಡಿದ್ದಾರೆ. ಅವಳಿಗೆ ತನ್ನದೇ ಆದ ಹಣಕಾಸು ಸ್ವಾತಂತ್ರ್ಯ ಇದ್ದಲ್ಲಿ ಅನುಕೂಲ’- ಇದು ಪರವಾಗಿರುವವರ ವಾದಸರಣಿ. ‘ಛೆ, ಇದೆಂತಹ ವಾದ! ಇದು ಪಶ್ಚಿಮದಿಂದ ಬಂದ ಎರವಲು ಪರಿಕಲ್ಪನೆ. ನಮ್ಮ ಪರಂಪರೆಯಲ್ಲಿ ಹೆಣ್ಣಿಗೆ ಅವಳದೇ ಆದ ಸ್ಥಾನಮಾನಗಳಿವೆ. ಮನೆಯನ್ನು ನಡೆಸುವ ವಿಷಯದಲ್ಲಿ ಅವಳೇ ಸುಪ್ರೀಂ. ಗಂಡಸರು ದುಡಿಯುವುದು ಮನೆಗಾಗಿಯೇ ಅಲ್ಲವೆ? ಹೀಗಿರುವಾಗ, ಗೃಹಿಣಿಗೆ ಪ್ರತ್ಯೇಕ ವೇತನ ಎಂಬುದು ಬಂದಲ್ಲಿ ಕುಟುಂಬ ಛಿದ್ರವಾಗುತ್ತದೆ’ -ಇದು ಈ ಪ್ರಸ್ತಾಪ ವಿರೋಧಿಸುವವರ ಪ್ರತಿಪಾದನೆ.

    2012ರಲ್ಲಿ ಯುಪಿಎ ಸರ್ಕಾರದಲ್ಲಿ ಕೃಷ್ಣಾ ತೀರ್ಥ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿದ್ದಾಗ, ಗೃಹಿಣಿಯರಿಗೂ ವೇತನ ಕೊಡಬೇಕೆಂಬ ಪ್ರಸ್ತಾವವನ್ನು ಪರಿಶೀಲಿಸಿದ್ದರು. ಆ ಪ್ರಕಾರ, ಪತಿ ವೇತನ ಕೊಡಬೇಕು ಎಂದಿತ್ತು. ಗೃಹಿಣಿಯರ ಆರ್ಥಿಕ ಸಬಲೀಕರಣ ಇದರ ಉದ್ದೇಶವಾಗಿತ್ತು. ಆದರೆ ಆ ವಿಷಯ ಮುಂದುವರಿಯಲಿಲ್ಲ. ಇಲ್ಲವಾದಲ್ಲಿ ಚರ್ಚೆಯ ಕೋಲಾಹಲವೇ ಆಗಿರುತ್ತಿತ್ತು.

    ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆಯು (ಒಇಸಿಡಿ) ತನ್ನ 26 ಸದಸ್ಯ ದೇಶಗಳಲ್ಲಿ ಮತ್ತು ಮೂರು ಉದಯೋನ್ಮುಖ ಆರ್ಥಿಕತೆಯ ದೇಶಗಳಾದ ಭಾರತ, ಚೀನಾ ಹಾಗೂ ದಕ್ಷಿಣ ಆಫ್ರಿಕಾಗಳಲ್ಲಿ ಒಂದು ಸಮೀಕ್ಷೆ ನಡೆಸಿತ್ತು. ‘ಆರ್ಥಿಕ ಚಟುವಟಿಕೆಯಲ್ಲಿ ಗೃಹ ಉತ್ಪಾದನೆಯು ಪ್ರಮುಖ ಭಾಗ. ಮನೆಗೆಲಸ ಬಹುತೇಕವಾಗಿ ವೇತನರಹಿತವಾದ್ದರಿಂದ, ಆರ್ಥಿಕ ಚಟುವಟಿಕೆಯಲ್ಲಿ ಮಹಿಳೆಯರ ಪಾತ್ರವನ್ನು ಕಡೆಗಣಿಸಿದಂತಾಗುತ್ತದೆ. ಟರ್ಕಿ, ಮೆಕ್ಸಿಕೊ ಮತ್ತು ಭಾರತದಂತಹ ದೇಶಗಳ ಮಹಿಳೆಯರು ಪುರುಷರಿಗಿಂತ 4-5 ತಾಸು ವೇತನರಹಿತ ಕೆಲಸದಲ್ಲಿ ತೊಡಗುತ್ತಾರೆ’ ಎಂದು ಆ ವರದಿ ಹೇಳಿತ್ತು. ಸಾಂಪ್ರದಾಯಿಕವಾಗಿ ನೋಡಿದಲ್ಲಿ, ಭಾರತದಂತಹ ಕೃಷಿಪ್ರಧಾನ ದೇಶದಲ್ಲಿ ಪುರುಷರು ಮನೆಯ ಹೊರಗೆ ಅಂದರೆ ಹೊಲಗದ್ದೆಗಳಲ್ಲಿ ದುಡಿದರೆ, ಮಹಿಳೆಯರು ಮನೆಗೆಲಸ ಮಾಡುವುದು ಸಾಮಾನ್ಯ ರೂಢಿ. ಹಾಗಂತ ಮಹಿಳೆಯರು ಕೂಡ ಮೈಮುರಿದು ಕೃಷಿ ಕೆಲಸದಲ್ಲಿ ತೊಡಗುತ್ತಾರೆ. ಅದು ಬೇರೆ ವಿಚಾರ. ಆದರೆ ಕೈಗಾರಿಕಾ ಕ್ರಾಂತಿ ನಂತರದಲ್ಲಿ ಸನ್ನಿವೇಶ ಬದಲಾಯಿತು. ಈಗಲೂ ಪುರುಷರು ಹೊರಗೆ ಹೆಚ್ಚೆಚ್ಚು ಕೆಲಸದಲ್ಲಿ ತೊಡಗಿದರು. ಅದು ಕೃಷಿ ಹೊರತಾಗಿ, ನಗರಗಳಲ್ಲಿ ಮತ್ತು ಕಾರ್ಖಾನೆಗಳಲ್ಲಿ ಎಂಬ ಸ್ವರೂಪ ಪಡೆಯಿತು. ಕ್ರಮೇಣ, ಸಾಮಾಜಿಕ, ಶೈಕ್ಷಣಿಕ ಬದಲಾವಣೆಗಳ ಪರಿಣಾಮವಾಗಿ ಮಹಿಳೆಯರೂ ಹೊರಗೆ ದುಡಿಯಲು ಹೋಗತೊಡಗಿದರು. ಈಗಂತೂ, ಮಹಿಳೆ ಪ್ರವೇಶಿಸದ ಕ್ಷೇತ್ರವಿಲ್ಲ ಎಂಬಂತಾಗಿದೆ. ಇದನ್ನೂ ಓದಿ: ದಿಕ್ಸೂಚಿ: ಅನಾಯಾಸೇನ ಮರಣಂ ವಿನಾ ದೈನ್ಯೇನ ಜೀವನಂ

    ಮನೆಯಲ್ಲಿ ಕೆಲಸ ಮಾಡುವ ಮಹಿಳೆಯರಿಗೂ ಸಂಬಳ ಕೊಡಬೇಕು ಎಂಬ ದನಿ, 1972ರ ಹೊತ್ತಿಗೆ ಇಟಲಿಯಲ್ಲಿ ದಿ ಇಂಟರ್​ನ್ಯಾಷನಲ್ ವೇಜಸ್ ಫಾರ್ ಹೌಸ್​ವರ್ಕ್ ಕ್ಯಾಂಪೇನ್ ಎಂಬ ಚಳವಳಿ ಸ್ವರೂಪ ಪಡೆಯಿತು. ಸಲ್ಮಾ ಜೇಮ್್ಸ ಎಂಬಾಕೆ ಇದರ ನೇತೃತ್ವ ವಹಿಸಿದ್ದರು. ‘ಬಹುತೇಕ ಮಹಿಳೆಯರು ಮನೆಯಲ್ಲಿ ಗಂಡನ ದೌರ್ಜನ್ಯ ಸಹಿಸಿಕೊಂಡು ಬದುಕುತ್ತಾರೆ. ಏಕೆಂದರೆ, ಅವರಿಗೆ ತಮ್ಮದೇ ಆದ ಹಣಕಾಸಿನ ಮೂಲವಿಲ್ಲ’ ಎಂದು ಇಟಲಿಯ ನ್ಯಾಯವಾದಿ ಮತ್ತು ಮಾಜಿ ಸಂಸದೆ ಗಿಯುಲಿಯಾ ಬೊಂಗಿಯಾರ್ನಿ ಎಂಬುವರು ಈ ಚರ್ಚೆಗೆ ಕಾವೇರಿಸಿದರು.

    ಈಗ ಮನೆಯಲ್ಲಿ ಇರುವ ಗೃಹಿಣಿಗೆ ‘ಹೋಮ್ೆುೕಕರ್’ ಎಂದು ಹೇಳಲಾಗುತ್ತದೆ. ಅಂದರೆ ಮನೆಯನ್ನು ನಿರ್ವಹಿಸುವವಳು, ನಿಭಾಯಿಸುವವಳು ಎಂದರ್ಥ. ಹಿಂದಿನ ಹೌಸ್​ವೈಫ್ ಎಂಬ ಪದ ಈಗ ವಿಶಾಲ ಅರ್ಥ ಪಡೆದುಕೊಂಡಿದೆ. ಆದರೆ, ಹೊರಗೆ ಕೆಲಸಕ್ಕೆ ಹೋಗುವವರಿಗೆ ಹೋಲಿಸಿದರೆ ಮನೆಯಲ್ಲಿರುವವರಿಗೆ ಒಂದು ಬಗೆಯ ಕೀಳರಿಮೆ ಅಥವಾ ಮುಜುಗರ ಕಾಡುತ್ತದೆಯಾ? ಏಕೆಂದರೆ, ‘ನೀವು ಏನು ಮಾಡುತ್ತೀರಿ?’ ಎಂದು ಯಾರಾದರೂ ಕೇಳಿದರೆ, ‘ಏನೂ ಇಲ್ಲ ಮನೆಯಲ್ಲೇ ಇರುತ್ತೇನೆ’ ಎಂದು ಉತ್ತರ ಬರುವುದು ಸಾಮಾನ್ಯ. ಈ ವಾಕ್ಯದಲ್ಲಿ ಕೀಳರಿಮೆ ಗುಪ್ತಗಾಮಿನಿಯಾಗಿ ಪ್ರವಹಿಸುತ್ತಿರುತ್ತದೆ. ಅದೇ, ಇಂಥ ಪ್ರಶ್ನೆಗೆ ನೌಕರಿ ಮಾಡುವ ಮಹಿಳೆಯರ ಉತ್ತರದ ಧಾಟಿ ಬೇರೆಯದೇ ಆಗಿರುತ್ತದೆ. ಅಂದರೆ, ಒಟ್ಟಾರೆ ಮನೋಭಾವ ಬದಲಾಗಬೇಕಿದೆ, ಖುದ್ದು ಮಹಿಳೆಯರದು ಕೂಡಾ. ಅಂದಹಾಗೆ, ನೌಕರಿಯನ್ನೂ ಮಾಡುತ್ತ, ಮನೆಯನ್ನೂ ನಿಭಾಯಿಸುವ ಮಹಿಳೆಯರ ಹಾಡುಪಾಡು ಮತ್ತೊಂದು ರೀತಿ ಎನ್ನಿ.

    ಗೃಹಿಣಿಯರು ಮನೆಗೆಲಸ ಮಾಡುವುದರಿಂದ ಆ ಮನೆಗೆ ಮಾತ್ರವಲ್ಲ, ಒಟ್ಟಾರೆಯಾಗಿ ದೇಶದ ಆರ್ಥಿಕತೆಗೆ ಕೊಡುಗೆಯಾಗುತ್ತದೆ. ಹೀಗಾಗಿ ಸರ್ಕಾರವೇ ಕನಿಷ್ಠ ವೇತನ ನಿಗದಿ ಮಾಡಿ ಕೊಡಬೇಕು. ಇದರಿಂದ ಅವರ ಕೊಡುಗೆಯನ್ನು ಮಾನ್ಯಮಾಡಿದ ಹಾಗೂ ಆಗುತ್ತದೆ ಎಂಬುದು ಒಂದು ವಾದ. ‘ಸರ್ಕಾರ ಕೊಡುವ ಅಗತ್ಯವಿಲ್ಲ. ಮನೆಯ ಯಜಮಾನ ಅಥವಾ ಮಹಿಳೆಯ ಪತಿ ವೇತನ ಕೊಡಬೇಕು. ಇದರಿಂದ ಆಕೆಗೆ ಹಣಕಾಸು ಸ್ವಾತಂತ್ರ್ಯ ಸಿಕ್ಕಂತಾಗುತ್ತದೆ’ ಎಂಬುದು ಪ್ರತಿವಾದ. ಹಾಗಂತ, ಆಕೆ ತನಗೆಂದು ವ್ಯಯಿಸುವುದು ಕಡಿಮೆಯೇ. ಕೆರೆಯ ನೀರು ಕೆರೆಗೆ ಎಂಬಂತೆ ಆಕೆ ಮನೆಗೆಂದೇ ವ್ಯಯಿಸುತ್ತಾಳೆ ಎಂಬುದರಲ್ಲಿ ಅನುಮಾನವಿಲ್ಲ.ಇದನ್ನೂ ಓದಿ: ಬೆಳಕು ತರುವವರಿಗೆ ಕತ್ತಲು ಎದುರಾಗದಿರಲಿ ಎಂದು ದಿಕ್ಸೂಚಿಯಲ್ಲಿ ನಾಗರಾಜ ಇಳೆಗುಂಡಿ ಆಶಯ ವ್ಯಕ್ತಪಡಿಸಿದ್ದಾರೆ

    ವೇತನ ಎನ್ನಿ ಅಥವಾ ಗೌರವಧನವೆನ್ನಿ, ಒಟ್ಟಿನಲ್ಲಿ ಮಹಿಳೆಯ ಮನೆಗೆಲಸದ ಮೌಲ್ಯ ಎಷ್ಟಾಗುತ್ತದೆ ಎಂಬ ಒಂದು ಲೆಕ್ಕವಾದರೂ ಇರಲಿ ಎಂದು ಕೆಲವರು ಪ್ರತಿಪಾದಿಸುತ್ತಾರೆ. ಈಗಿನ ಕಾಲದ ಜೀವನಮಟ್ಟ ಗಮನದಲ್ಲಿಟ್ಟುಕೊಂಡು ತಯಾರಿಸಿದ ಒಂದು ಅಂದಾಜು ಹೀಗಿದೆ: ಇಬ್ಬರು ಮಕ್ಕಳನ್ನು ನಿತ್ಯ 12-14 ತಾಸು ನೋಡಿಕೊಳ್ಳುವುದು (ಡೇಕೇರ್): ವೇತನ-10- 12,000 ರೂ.; ಕುಟುಂಬದ 3-4 ಸದಸ್ಯರಿಗೆ ಅಡುಗೆ ಮಾಡುವುದು:ವೇತನ- 5-6,000 ರೂ.; ಹೌಸ್ಕೀಪಿಂಗ್: ಬಟ್ಟೆಗಳ ಇಸ್ತ್ರಿ, ಮತ್ತು ಮನೆಗೆಲಸದವರ ಕೆಲಸದ ಮೇಲ್ವಿಚಾರಣೆ: ವೇತನ- 2000 ರೂ.; ಮನೆಯ ಬಜೆಟ್ ಮತ್ತು ಅಕೌಂಟಿಂಗ್: ಮನೆಯ ಖರ್ಚುವೆಚ್ಚ, ಖರೀದಿ ಲೆಕ್ಕಪತ್ರ ಇಡುವುದು ಮತ್ತು ಹಣ ವಿಭಾಗಣೆ- ವೇತನ-3-4,000 ರೂ.; ಮನೆಯ ಮಕ್ಕಳು ಅಥವಾ ಹಿರಿಯರಿಗೆ ಅನಾರೋಗ್ಯವಾದರೆ ನೋಡಿಕೊಳ್ಳುವುದು:-ವೇತನ-5-6,000 ರೂ.; ಮಕ್ಕಳಿಗೆ ಕಲಿಸುವುದು ಮತ್ತು ಅವರ ಹೋಮ್ರ್ಕ್ ಹಾಗೂ ಪ್ರಾಜೆಕ್ಟ್ ಗಳಲ್ಲಿ ಸಹಾಯ ಮಾಡುವುದು- ವೇತನ-4-5,000 ರೂ. ಈ ಲೆಕ್ಕದಲ್ಲಿ ಮಾಸಿಕ 30-40,000 ರೂ. ದಾಟುತ್ತದೆ (ಇಲ್ಲಿ ವೇತನ ಅಂದರೆ ಕೆಲಸದವರನ್ನು ನೇಮಿಸಿಕೊಂಡರೆ ಕೊಡಬೇಕಾದ ಮೊತ್ತ ಎಂದರ್ಥ). ಇದು ನಗರಪ್ರದೇಶವನ್ನು ಗಮನದಲ್ಲಿರಿಸಿಕೊಂಡ ಲೆಕ್ಕ ಅಷ್ಟೆ. ಗ್ರಾಮೀಣಕ್ಕೆ ಇದು ಅನ್ವಯಿಸದು.

    ‘ನೀವು ಒಬ್ಬ ಪಾರ್ಟನರ್ ಜತೆ ಸೇರಿ ಉದ್ಯಮ ಆರಂಭಿಸುತ್ತೀರಿ ಎಂದುಕೊಳ್ಳಿ. ಅದರ ಲಾಭ-ನಷ್ಟಕ್ಕೆ ಇಬ್ಬರೂ ಸಮಾನ ಪಾಲುದಾರರೆ ಹೊರತು ಆ ಕಾರ್ಖಾನೆಯ ಕೆಲಸಗಾರರಲ್ಲ. ಹಾಗೇ, ಮನೆ ವಿಷಯದಲ್ಲಿ ಗಂಡ-ಹೆಂಡತಿ ಇಬ್ಬರೂ ಪಾರ್ಟನರ್​ಗಳು. ಅಲ್ಲಿ ಇಬ್ಬರಿಗೂ ಸಮಾನ ಹೊಣೆಗಾರಿಕೆಯಿರುತ್ತದೆ. ಅಷ್ಟಕ್ಕೂ, ಹಿಂದೂ ಕಾಯ್ದೆ ಪ್ರಕಾರ, ಹೆಣ್ಮಕ್ಕಳಿಗೂ ಆಸ್ತಿಯಲ್ಲಿ ಸಮಾನ ಹಕ್ಕು ಇದ್ದೇ ಇದೆ’ ಎಂದು ವಿಷಯದ ಮತ್ತೊಂದು ಆಯಾಮ ತೆರೆದಿಡುತ್ತಾರೆ, ಇಂಡಿಯನ್​ವುನಿಡಾಟ್​ಕಾಂ ಸಂಸ್ಥಾಪಕ ಸಿ.ಎಸ್.ಸುಧೀರ್. ಇದನ್ನೂ ಓದಿ: ದಿಕ್ಸೂಚಿ ಅಂಕಣ| ಯುವಜನರು ಬೀದಿಗಿಳಿಯುವುದು ತಪ್ಪಾ?

    ಅಮೆರಿಕದಲ್ಲಿ ಗೃಹಕೃತ್ಯದಲ್ಲಿ ತೊಡಗಿರುವ ಗೃಹಿಣಿಯರಿಗೆ ತಾಸಿನ ಲೆಕ್ಕದಲ್ಲಿ ವೇತನ ಅಂತ ಕೊಡುವುದಾದರೆ, ಆ ಮೊತ್ತ ವಾರ್ಷಿಕ 1.5 ಟ್ರಿಲಿಯನ್ ಡಾಲರ್​ಗಿಂತ ಹೆಚ್ಚಾಗುತ್ತದೆ ಎಂದು ಆಕ್ಸ್​ಪಾಮ್ ವರದಿ ಹೇಳುತ್ತದೆ. ಅಮೆರಿಕದ ಸಾರ್ವಜನಿಕ ಮತ್ತು ರಾಜಕೀಯ ವಲಯದಲ್ಲಿಯೂ ಇಂಥದೊಂದು ಚರ್ಚೆ ಚಾಲ್ತಿಯಲ್ಲಿದೆ. ಅಮೆರಿಕದ ವಯಸ್ಕ ಜನಸಂಖ್ಯೆಯಲ್ಲಿ ಪ್ರತಿ ಐವರಲ್ಲಿ ಒಬ್ಬರು ಮನೆಯಲ್ಲಿರುತ್ತಾರೆ ಎಂದು ಪ್ಯೂ ರಿಸರ್ಚ್ ಸೆಂಟರ್ ವರದಿ ಹೇಳುತ್ತದೆ. ಅಲ್ಲಿನ ಪೇಸ್ಕೇಲ್ ಎಂಬ ಸಂಸ್ಥೆಯ ವರದಿ ಪ್ರಕಾರ, ಪರ್ಸನಲ್ ಷೆಫ್ (ಮನೆಯಲ್ಲಿ ಅಡುಗೆ ಕೆಲಸ) ಒಂದು ತಾಸಿಗೆ 65 ಡಾಲರ್ ಗಳಿಸಬಹುದು. ಮನೆಗೆ ಅಗತ್ಯ ಸಾಮಗ್ರಿಗಳನ್ನು ತರುವ ಕೆಲಸಕ್ಕೆ ಹಣ ತೆರುವುದಾದರೆ ತಿಂಗಳಿಗೆ 160 ಡಾಲರ್​ನಷ್ಟಾಗುತ್ತದೆ. ಹೌಸ್ಕೀಪರ್.ಕಾಮ್ ವರದಿ ಪ್ರಕಾರ, ಮನೆ ಸ್ವಚ್ಛತೆಗೆ ಕೆಲಸಗಾರರು ಪ್ರತಿ ತಾಸಿಗೆ 20-40 ಡಾಲರ್ ಗಳಿಸುತ್ತಾರೆ. ಅದೇ ಗೃಹಿಣಿಗೆ ಈ ವೇತನ ನೀಡುವುದಾದರೆ, ತಿಂಗಳಿಗೆ 4,480 ಡಾಲರ್ ಆಗುತ್ತದೆ. ಅಂದರೆ, ಒಟ್ಟು ಎಷ್ಟಾಯಿತು ಲೆಕ್ಕಹಾಕಿ… 

    ಕೊನೇ ಮಾತು: ತನ್ನ ಕೆಲಸಕ್ಕೆ ಹಣದ ಮೌಲ್ಯ ಕಟ್ಟಲಿ ಬಿಡಲಿ, ಗೃಹಿಣಿಯ ಮನೆಗೆಲಸ ಮಾತ್ರ ಎಂದಿನಂತೆ ಮುಂದುವರಿಯುತ್ತದೆ. ನಮ್ಮ ಎಷ್ಟೋ ಗೃಹಿಣಿಯರಿಗೆ ಇಂಥದೊಂದು ಚರ್ಚೆಯಿದೆ ಎಂಬ ಮಾಹಿತಿ ಸಹ ಇಲ್ಲ. ಅವರಿಗೆ ಗೊತ್ತಿರುವುದು ಒಂದೇ-ಎದೆಯಲ್ಲಿ ನಿಷ್ಕಲ್ಮಷ ಪ್ರೀತಿ ತುಂಬಿಕೊಂಡು ಮನೆಯನ್ನು ಬೆಳಗುವುದು. ಜಗದ ಹಾದಿಗೆ ಅದುವೇ ಬೆಳಕು. ಆ ದೀಪವೇನಾದರೂ ಮಸುಕಾದಲ್ಲಿ ಮನುಜರ ನಡೆ ತಡವರಿಸುತ್ತದೆ… ಮನೆಯ ನೆಮ್ಮದಿ ಕುಸಿಯುತ್ತದೆ….

    ಕುಟುಂಬದಲ್ಲಿ ಪರಸ್ಪರ ಪ್ರೀತಿ, ಸೌಹಾರ್ದ ಮುಖ್ಯವಾಗುತ್ತದೆ. ಗೃಹಿಣಿ ಅಥವಾ ಪತ್ನಿಗೆ ಮನೆಯ ವ್ಯವಹಾರದಲ್ಲಿ ಹೆಚ್ಚು ಜವಾಬ್ದಾರಿ ಇರುತ್ತದೆ. ಆ ಕಾರಣಕ್ಕಾಗಿ ಅವರಿಗೆ ಮನ್ನಣೆ-ಗೌರವ ಸಲ್ಲಲೇಬೇಕು. ಹಾಗಂತ ಇದನ್ನು ವೇತನ ಅಥವಾ ಹಣದ ರೂಪದಲ್ಲಿ ನೋಡಲು ಹೋದರೆ ಆಗ ಸಂಬಂಧಗಳು ವ್ಯಾವಹಾರಿಕವಾಗುತ್ತವೆ. ಮತ್ತು ಕುಟುಂಬ ವ್ಯವಸ್ಥೆ ಮೇಲೆ ದುಷ್ಪರಿಣಾಮವಾಗುತ್ತದೆ.

    | ಸಿ.ಎಸ್.ಸುಧೀರ್ ಸಂಸ್ಥಾಪಕ  ಇಂಡಿಯನ್​ವುನಿಡಾಟ್​ಕಾಂ

    (ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)

    ದಿಕ್ಸೂಚಿ- ಕರೊನಾ ಚಕ್ರವ್ಯೂಹ ಭೇದಿಸಬಲ್ಲ ಅಭಿಮನ್ಯು ಯಾರು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts