More

    ದಿಕ್ಸೂಚಿ ಅಂಕಣ| ಯುವಜನರು ಬೀದಿಗಿಳಿಯುವುದು ತಪ್ಪಾ?

    ಪ್ರತಿಭಟನೆಯಲ್ಲಿ ಭಾಗವಹಿಸುವವರಿಗೆ ಆ ವಿಷಯದ ಕನಿಷ್ಠ ಜ್ಞಾನವಾದರೂ ಇರಬೇಕಾಗುತ್ತದೆ. ಅಂದರೆ ಯಾವ ಕಾರಣಕ್ಕೆ ಚಳವಳಿಯಲ್ಲಿ ಭಾಗವಹಿಸುತ್ತಿದ್ದೇವೆ, ನೇತೃತ್ವ ಯಾರದು, ಅವರ ಹಿನ್ನೆಲೆ ಏನು ಎಂಬಿತ್ಯಾದಿ ಮಾಹಿತಿ ಬೇಕು. ಇಲ್ಲವಾದಲ್ಲಿ ಅವರನ್ನು ದಿಕ್ಕುತಪ್ಪಿಸುವ, ಯಾವುದೋ ಉದ್ದೇಶಕ್ಕೆ ಬಳಸಿಕೊಳ್ಳುವ ಸಾಧ್ಯತೆಯೂ ಇರುತ್ತದೆ.

    ದಿಕ್ಸೂಚಿ ಅಂಕಣ| ಯುವಜನರು ಬೀದಿಗಿಳಿಯುವುದು ತಪ್ಪಾ?‘ಓ ಯುವಕನೇ, ನೀನೆಂಥ ಅದೃಷ್ಟಶಾಲಿ! ದೇವರು ನಿನ್ನತ್ತ ಪ್ರೀತಿಪೂರ್ವಕ ನೋಟ ಹರಿಸುತ್ತಿದ್ದಾನೆ. ನಿನಗೆ ಸಹಾಯಹಸ್ತ ಚಾಚಲು ಹಾಗೂ ಮಾರ್ಗದರ್ಶನ ನೀಡಲು ಸದಾ ಸಿದ್ಧವಿದ್ದಾನೆ. ನೀನು ನಿನ್ನ ಮಹೋನ್ನತ ಕರ್ತವ್ಯವೇನೆಂಬುದನ್ನು ಅರಿತುಕೊ, ಮನನ ಮಾಡಿಕೊ. ಇದೊಂದು ಅದ್ಭುತ ಅವಕಾಶವೆಂದು ತಿಳಿ. ಆ ಸಾಹಸಮಯ ದಾರಿಯಲ್ಲಿ ನಡೆಯಲು ಸಜ್ಜಾಗು. ಈ ಜಗತ್ತು ನಿನ್ನ ಮೇಲೆ ನಂಬಿಕೆಯಿಟ್ಟಿದೆ. ನಿನ್ನ ಪೂರ್ವಜರಿಗೆ ನಿನ್ನ ಮೇಲೆ ಅಪಾರವಾದ ಭರವಸೆಯಿದೆ. ನಿನ್ನ ಮೇಲೆ ನಿನಗೆ ವಿಶ್ವಾಸವಿರಲಿ. ನಿನ್ನ ಬದುಕಿನ ವಿನ್ಯಾಸ ರೂಪಿಸುವ ಕಲಾಕಾರ ನೀನೇ’

    ‘ಯೌವನವೆಂಬುದು ಜೀವನದ ಅತ್ಯಮೂಲ್ಯ ಅವಧಿ. ಈ ಸಮಯವನ್ನು ನೀನು ಹೇಗೆ ಸದುಪಯೋಗಪಡಿಸಿಕೊಳ್ಳುತ್ತಿ ಎಂಬುದರ ಮೇಲೆ ನಿನ್ನ ಭವಿಷ್ಯ ನಿಂತಿದೆ. ನಿನ್ನ ಸಂತೋಷ, ಗೌರವ ಮತ್ತು ಸಮಾಜದಲ್ಲಿ ದೊರಕುವ ಉತ್ತಮ ಹೆಸರು ಎಲ್ಲವೂ ನೀನು ಈ ವರ್ತಮಾನದಲ್ಲಿ ಏನು ಮಾಡುತ್ತಿ ಎಂಬುದನ್ನು ಅವಲಂಬಿಸಿದೆ. ಕುಂಬಾರ ಮಣ್ಣಿಗೆ ತನಗೆ ಬೇಕಾದ ಆಕಾರಸ್ವರೂಪ ಕೊಡುವಂತೆ, ನೀನೂ ನಿನ್ನ ಬದುಕಿಗೆ ಬೇಕಾದ ಆಕೃತಿಯನ್ನು ಕೊಡಬಹುದು. ಮತ್ತು ಅದನ್ನು ಈಗಲೇ ಈ ಕ್ಷಣವೇ ಇಂದೇ ಮಾಡು’

    ಒಹ್! ಎಂಥ ಉದ್ಭೋದಕ ನುಡಿಗಳು. ಸಾಧನೆಗೆ ಈಗಿಂದೀಗಲೇ ಎದ್ದು ಹೊರಡಬೇಕೆಂಬ ಪ್ರೇರಣೆ ತುಂಬುವ ಈ ಮಾತುಗಳು ಯಾರದೆಂದು ಸುಲಭದಲ್ಲಿ ಊಹಿಸಬಹುದು. ಹೌದು, ಭಾರತದ ಅಂತರಾತ್ಮವನ್ನು ಬಡಿದೆಚ್ಚರಿಸಿ, ಧಾರ್ವಿುಕ, ಆಧ್ಯಾತ್ಮಿಕ, ಸಾಮಾಜಿಕ ಜೀವನಕ್ಕೆ ಹೊಸದೊಂದೇ ಹೊಳಹು ನೀಡಿದವರು ಸ್ವಾಮಿ ವಿವೇಕಾನಂದರು. ಮೊನ್ನೆಯಷ್ಟೆ ಅವರ ಜಯಂತಿಯನ್ನು ಆಚರಿಸಿದೆವು; ದೇಶವಿದೇಶಗಳಲ್ಲಿ ಕಾರ್ಯಕ್ರಮಗಳು ನಡೆದು ‘ವಿವೇಕ ಪಥ’ದ ಸ್ಮರಣೆ ನಡೆಯಿತು.

    ಇತ್ತೀಚೆಗೆ ದೇಶದಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಎಲ್ಲರ ಅರಿವಿಗೂ ಇದೆ. ವಿಶೇಷವಾಗಿ, ಈಗ ಜಾರಿಗೆ ಬಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ಮುಂದೆ ಜಾರಿಗೆ ಬರಲಿದೆ ಎನ್ನಲಾಗುತ್ತಿರುವ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್​ಆರ್​ಸಿ) ವಿಚಾರವಾಗಿ ದೇಶದಲ್ಲಿ ಪರ-ವಿರೋಧ ಚರ್ಚೆ ಜೋರಾಗಿದೆ. ಆರಂಭದಲ್ಲಿ ಹಲವೆಡೆ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಅನೇಕ ಜೀವಹಾನಿ ಹಾಗೂ ಆಸ್ತಿಪಾಸ್ತಿ ಹಾನಿ ಕೂಡ ಆಯಿತು. ಈಗಲೂ ಅಲ್ಲಲ್ಲಿ ಶಾಂತಿಯುತವಾಗಿಯೇ ಪ್ರತಿರೋಧ ವ್ಯಕ್ತಪಡಿಸಲಾಗುತ್ತಿದೆ. ಹೀಗೆ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿರುವವರಲ್ಲಿ ಯುವಜನರ ಸಂಖ್ಯೆ ದೊಡ್ಡ ಪ್ರಮಾಣದಲ್ಲಿದೆ; ಅನೇಕ ಶೈಕ್ಷಣಿಕ ಸಂಸ್ಥೆಗಳಲ್ಲಿ ಕೂಡ ಈ ಬಗ್ಗೆ ದನಿಗಳು ಕೇಳಿಬಂದಿವೆ. ಈ ನಡುವೆ, ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ ಬೇರೆಯದೇ ಕಾರಣಗಳಿಗೆ ಸುದ್ದಿ ಮಾಡುತ್ತಿದೆ. ಅಷ್ಟಕ್ಕೂ ಅಲ್ಲಿ ಸೈದ್ಧಾಂತಿಕ ನೆಲೆಯಲ್ಲಿ ಆಗೀಗ ಗದ್ದಲಗಳು ನಡೆಯುತ್ತಿರುತ್ತವೆ. ಆ ವಿಷಯ ಒತ್ತಟ್ಟಿಗಿರಲಿ.

    ಸಿಎಎ ಮತ್ತು ಎನ್​ಆರ್​ಸಿ ವಿಚಾರಕ್ಕೆ ಬರುವುದಾದರೆ, ಇಲ್ಲಿ ಮುಸ್ಲಿಮರನ್ನು ಧರ್ವಧಾರಿತವಾಗಿ ಟಾರ್ಗೆಟ್ ಮಾಡಲಾಗಿದೆ ಎಂಬುದು ಇದನ್ನು ವಿರೋಧಿಸುವವರ ಪ್ರತಿಪಾದನೆ. ಇಂಥ ನಡೆ ಸಂವಿಧಾನಬಾಹಿರ ಎಂಬುದು ಇವರ ವಾದ. ಆದರೆ ಕೇಂದ್ರದ ಆಡಳಿತಾರೂಢ ಬಿಜೆಪಿ ಈ ವಾದವನ್ನು ಸಾರಾಸಗಟಾಗಿ ಅಲ್ಲಗಳೆಯುತ್ತಿದೆ. ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶಗಳಲ್ಲಿ ಮುಸ್ಲಿಮರು ಬಹುಸಂಖ್ಯಾತರು. ಹಾಗಾಗಿ ಅವರ ಮೇಲೆ ದೌರ್ಜನ್ಯ ಅಥವಾ ಶೋಷಣೆ ಪ್ರಶ್ನೆ ಬರುವುದಿಲ್ಲ; ಅಲ್ಲಿನ ಅಲ್ಪಸಂಖ್ಯಾತರಿಗೆ ತೊಂದರೆಯಾಗುತ್ತಿದೆ. ಹೀಗಾಗಿ ಆ ಅಲ್ಪಸಂಖ್ಯಾತರಿಗೆ ಪೌರತ್ವ ಕೊಡಬೇಕೆ ವಿನಾ ಮುಸ್ಲಿಮರಿಗೆ ಪೌರತ್ವ ನೀಡುವ ಬಗ್ಗೆ ಕಾಯ್ದೆಯಲ್ಲಿ ಉಲ್ಲೇಖಿಸುವ ಪ್ರಮೇಯವೇ ಬರುವುದಿಲ್ಲ ಎಂಬುದು ಬಿಜೆಪಿ ನಾಯಕರ ಪ್ರತಿಪಾದನೆ. ಈ ವಾದ-ಪ್ರತಿವಾದಗಳೇನೇ ಇದ್ದರೂ, ಬಿಜೆಪಿಯ ಬಲಪಂಥೀಯ ಸೈದ್ಧಾಂತಿಕ ನಿಲುವು ಕೂಡ ಸಿಎಎಯನ್ನು ವಿರೋಧಿಸುವವರ ಮೇಲೆ ಪರಿಣಾಮ ಬೀರಿರುವುದು ಮತ್ತು ಕಾಯ್ದೆಯ ಒಟ್ಟಾರೆ ಉದ್ದೇಶದ ಬಗ್ಗೆ ಶಂಕೆ ಮೂಡಿಸಿರುವುದು ಸುಳ್ಳಲ್ಲ. ಈಗ ಸಿಎಎ ವಿಷಯ ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವುದರಿಂದ ಅಲ್ಲಿ ಬರುವ ತೀರ್ಮಾನ ಈ ವಿಚಾರವಾಗಿ ಕಾನೂನು ಮತ್ತು ರ್ತಾಕ ತಾಕಲಾಟಗಳ ಅಂತ್ಯಕ್ಕೆ ಹಾದಿಮಾಡಲಿದೆ.

    ಇನ್ನು, ಪ್ರತಿಭಟನೆಯಲ್ಲಿ ಯುವಜನರ ಹಾಜರಿ ದೊಡ್ಡ ಪ್ರಮಾಣದಲ್ಲಿರುವುದು ನಾನಾ ಬಗೆಯ ವ್ಯಾಖ್ಯಾನ ಗಳಿಗೆ ದಾರಿಮಾಡಿದೆ. ಕೆಲವರ ಪ್ರಕಾರ, ಯುವಜನರು ಬೀದಿಗಿಳಿದಿರುವುದು, ಪ್ರತಿಭಟನೆ ನಡೆಸುವುದು ಅವರ ಚಲನಶೀಲತೆಯ, ವರ್ತಮಾನಕ್ಕೆ ಸ್ಪಂದಿಸುವ ಗುಣದ ಸಂಕೇತ. ದೇಶದ ಜ್ವಲಂತ ವಿಷಯವೊಂದರ ಬಗ್ಗೆ ಯುವಜನರು ಈ ಪ್ರಮಾಣದಲ್ಲಿ ರ್ಚಚಿಸುವುದು, ಪ್ರತಿಕ್ರಿಯಿಸುವುದು ಒಳ್ಳೆಯದೇ. ಏಕೆಂದರೆ ನಾಳಿನ ವಾರಸುದಾರರು ಅವರೇ. ನಮ್ಮಲ್ಲಿ ಹಿಂದೆ ಶಾಲಾಕಾಲೇಜುಗಳಲ್ಲಿ ವಿದ್ಯಾರ್ಥಿ ಸಂಘಟನೆಗಳಿರುತ್ತಿದ್ದವು; ಈಗಲೂ ಕೆಲವೆಡೆ ಇದೆ. ಕಾಲಕಾಲಕ್ಕೆ ಅವಕ್ಕೆ ಚುನಾವಣೆ ನಡೆದು ಪ್ರತಿನಿಧಿಗಳನ್ನು ಆರಿಸಲಾಗುತ್ತಿತ್ತು. ಕ್ರಮೇಣ ಅಲ್ಲಿ ರಾಜಕೀಯ ಪ್ರವೇಶವಾಗಿ, ಗದ್ದಲಗಳು ನಡೆಯತೊಡಗಿದ್ದರಿಂದ ಕೆಲವೆಡೆ ಅದನ್ನೀಗ ಬಂದ್ ಮಾಡಲಾಗಿದೆ. ರಾಜಕೀಯವಾಗಿ, ಸಾಮಾಜಿಕವಾಗಿ ಹೆಸರು ಮಾಡಿದ ಅನೇಕರಿಗೆ ವಿದ್ಯಾರ್ಥಿ ಸಂಘಟನೆಗಳು ಅಥವಾ ಚಳವಳಿಗಳೇ ಚಿಮ್ಮುಹಲಗೆಯಾಗಿದ್ದವು ಎಂಬುದು ನಿರಾಕರಿಸಲಾಗದ ಸತ್ಯ. ನಮ್ಮ ಕರ್ನಾಟಕವನ್ನೇ ತೆಗೆದುಕೊಂಡರೆ ಎಚ್.ಡಿ.ದೇವೇಗೌಡ, ಪಿಜಿಆರ್ ಸಿಂಧ್ಯಾ, ಮಲ್ಲಿಕಾರ್ಜುನ ಖರ್ಗೆ, ಶೋಭಾ ಕರಂದ್ಲಾಜೆ… ಹೀಗೆ ಹಲವು ಮಂದಿ ಒಂದು ಕಾಲಕ್ಕೆ ವಿದ್ಯಾರ್ಥಿ ಸಂಘಟನೆಯಲ್ಲಿದ್ದವರೇ. ಅಸ್ಸಾಂನಲ್ಲಿ ಅಕ್ರಮ ವಲಸೆ ವಿರುದ್ಧ ವಿದ್ಯಾರ್ಥಿಗಳು ನಡೆಸಿದ ಆಂದೋಲನದಲ್ಲಿ ಮುಂಚೂಣಿಯಲ್ಲಿದ್ದ ಪ್ರಫುಲ್ಲ ಕುಮಾರ ಮಹಂತ ಮುಂದೊಂದು ದಿನ ಮುಖ್ಯಮಂತ್ರಿ ಗಾದಿಗೇರಿದ್ದರು.

    ಇನ್ನು ಕೆಲವರ ಪ್ರಕಾರ, ‘ಸಿಎಎ-ವಿರೋಧಿ ಪ್ರತಿಭಟನೆಯಲ್ಲಿ ಭಾಗವಹಿಸುವ ಅನೇಕರಿಗೆ ಕಾಯ್ದೆಯ ನಿಜವಾದ ಪರಿಚಯವಿಲ್ಲ. ಯಾರದೋ ಪ್ರಚೋದನೆಗೆ ಒಳಗಾಗಿ, ಭಾವನೆಗೆ ಒಳಗಾಗಿ ಅಥವಾ ತಪು್ಪಮಾಹಿತಿಯಿಂದಾಗಿ ಹೀಗೆ ಮಾಡುತ್ತಿದ್ದಾರೆ.’ ಯುವಜನರು ರಸ್ತೆಗೆ ಬಂದು ಪ್ರತಿಭಟಿಸತೊಡಗಿದರೆ ಶೈಕ್ಷಣಿಕ ವಾತಾವರಣ ಹಾಳಾಗುತ್ತದೆ; ಅಲ್ಲದೆ ದೇಶದ ಭವಿಷ್ಯ ಏನಾಗಬೇಕು ಎಂಬುದು ಇವರ ವಾದ. ಈ ಮಾತಿನಲ್ಲಿ ಎಷ್ಟು ಹುರುಳಿದೆಯೋ ಗೊತ್ತಿಲ್ಲ. ಆದರೆ ಚಳವಳಿ ಅಥವಾ ಪ್ರತಿಭಟನೆಯಲ್ಲಿ ಭಾಗವಹಿಸುವವರಿಗೆ ಆ ವಿಷಯದ ಕನಿಷ್ಠ ಮಾಹಿತಿಯಾದರೂ ಇರಬೇಕಾಗುತ್ತದೆ ಎಂಬುದು ಮಾತ್ರ ಒಪ್ಪತಕ್ಕ ಮಾತು. ಅಂದರೆ ತಾವು ಯಾವ ಕಾರಣಕ್ಕೆ ಚಳವಳಿಯಲ್ಲಿ ಭಾಗವಹಿಸುತ್ತಿದ್ದೇವೆ, ನೇತೃತ್ವ ಯಾರದು, ಅವರ ಹಿನ್ನೆಲೆ ಏನು ಎಂಬಿತ್ಯಾದಿ ಮಾಹಿತಿ ಬೇಕಾಗುತ್ತದೆ. ಇಲ್ಲವಾದಲ್ಲಿ ಅವರನ್ನು ದಿಕ್ಕುತಪ್ಪಿಸುವ, ಯಾವುದೋ ಉದ್ದೇಶಕ್ಕೆ ಬಳಸಿಕೊಳ್ಳುವ ಸಾಧ್ಯತೆಯೂ ಇರುತ್ತದೆ. ಜಯಪ್ರಕಾಶ ನಾರಾಯಣರ (ಜೆಪಿ) ಆಂದೋಲನದಲ್ಲಿ ಬೃಹತ್ ಪ್ರಮಾಣದಲ್ಲಿ ವಿದ್ಯಾರ್ಥಿಗಳು ಭಾಗವಹಿಸುವ ಮೂಲಕ ಹೊಸ ಇತಿಹಾಸವನ್ನೇ ಸೃಷ್ಟಿಸಿದರು. ಜೆಪಿಯವರು ತಮ್ಮ ಉದ್ದೇಶದ ಬಗ್ಗೆ ಯುವಕರಿಗೆ ಮನದಟ್ಟು ಮಾಡಿದ್ದರು. ಅಥವಾ, ಯುವಜನರು ಜೆಪಿ ಉದ್ದೇಶವನ್ನು ಅರ್ಥಮಾಡಿಕೊಂಡಿದ್ದರು ಎಂದೂ ಹೇಳಬಹುದು.

    ಇಲ್ಲಿ ಒಂದು ವಿಷಯ ಉಲ್ಲೇಖಿಸಿದರೆ ಅಪ್ರಸ್ತುತವಲ್ಲ. ಇಸ್ಕಾನ್, ರಾಮಕೃಷ್ಣ ಮಿಷನ್ ಮುಂತಾದ ಧಾರ್ವಿುಕ, ಆಧ್ಯಾತ್ಮಿಕ ಸಂಸ್ಥೆಗಳಿಗೆ ಸಂನ್ಯಾಸಿಗಳಾಗಿ ಸೇರುವ ಅನೇಕ ಯುವಕರು ಇಂಜಿನಿಯರಿಂಗ್, ಮೆಡಿಕಲ್, ಎಂಬಿಎ ಹೀಗೆ ನಾನಾ ಉನ್ನತ ಪದವಿ ಪಡೆದವರು. ಹಾಗಂತ ಅವರು ಯಾವುದೋ ಭಾವಾವೇಶದಲ್ಲಿ, ತಾತ್ಕಾಲಿಕ ಮನಸ್ಥಿತಿಗೆ ಪಕ್ಕಾಗಿ ಹೀಗೆ ಮಠಮಂದಿರ ಸೇರಿಬಿಡುತ್ತಾರೆ ಅಂತ ಭಾವಿಸಬಹುದಾ? ಇಲ್ಲ. ಅವರು ಅರಿತು ಬಂದವರು; ಹೊಸದೇನನ್ನೋ ಅರಿಯಲು ಬಂದವರು. ಅದು ಪ್ರಜ್ಞಾಪೂರ್ವಕವಾಗಿ ಆರಿಸಿಕೊಂಡ ಜೀವನವಿಧಾನ. ಇಸ್ಕಾನ್​ನ ಯುವ ಸಂನ್ಯಾಸಿಯೊಬ್ಬರನ್ನು ನಾನು ಒಮ್ಮೆ ಪ್ರಶ್ನಿಸಿದಾಗ, ‘ನಾನು ಉನ್ನತ ವಿದ್ಯಾಭ್ಯಾಸ ಮಾಡಿದ್ದೇನೆ ನಿಜ. ಕೈತುಂಬ ಸಂಬಳ ತರುವ ಒಳ್ಳೆಯ ನೌಕರಿಯೂ ಇತ್ತು. ಆದರೆ ಕ್ರಮೇಣ ಜೀವನವೆಂದರೆ ಇಷ್ಟೇನಾ? ಮುಂದೇನು? ಎಂಬ ಆಲೋಚನೆ ಶುರು ವಾಯಿತು. ನಿಧಾನವಾಗಿ ಅಧ್ಯಾತ್ಮದತ್ತ ಆಸಕ್ತಿ ಮೂಡಿತು. ಕೃಷ್ಣನ ಸೇವೆಯಲ್ಲಿಯೇ ಜೀವನದ ಸಾರ್ಥಕ್ಯ ಅಡಗಿದೆ ಅನಿಸಿತು. ಹೀಗಾಗಿ ಇಸ್ಕಾನ್ ಸೇರಿದೆ’ ಎಂದರು.

    ಭಿನ್ನ ದನಿಗಳೇ ಪ್ರಜಾಪ್ರಭುತ್ವದ ಸೊಗಸು. ಅದಿಲ್ಲವಾದಲ್ಲಿ ಆ ದೇಶ ಸರ್ವಾಧಿಕಾರದ ನೆರಳಿನಡಿ ಸಾಗುತ್ತದೆ. ಆದರೆ ಆ ಭಿನ್ನತೆಯೆಂಬುದು ಅಂತಿಮವಾಗಿ ರಾಷ್ಟ್ರಹಿತಕ್ಕೆ ಪೂರಕವಾದ ನಿರ್ಣಯಕ್ಕೆ ಬರಲು ವೇದಿಕೆಯಾಗಬೇಕಾದುದು ಮುಖ್ಯ.

    ಇದೆಲ್ಲ ಏನೇ ಇದ್ದರೂ, ಭಾರತೀಯ ಯುವಜನರ ಶಕ್ತಿಸಾಮರ್ಥ್ಯಗಳನ್ನು ಉಪೇಕ್ಷಿಸಲಾಗದು ಎಂಬುದಕ್ಕೆ ಧಾರಾಳ ಉದಾಹರಣೆಗಳು ಸಿಗುತ್ತವೆ. ಒಂದು ನಿದರ್ಶನ ಕೊಡುವುದಾದರೆ, ಹೊಸ ಹೊಸ ಐಡಿಯಾಗಳನ್ನು ತಲೆಯಲ್ಲಿ ತುಂಬಿಕೊಂಡು, ಚಾಲ್ತಿಯಲ್ಲಿರುವ ಸಿದ್ಧಸೂತ್ರಗಳನ್ನು ಬುಡಮೇಲು ಮಾಡಿ ಹೊಸದೊಂದೇ ಮಾರ್ಗದಲ್ಲಿ ಸಾಗುವ ಸ್ಟಾರ್ಟಪ್ (ನವೋದ್ಯಮ)ಗಳ ವಿಷಯದಲ್ಲಿ ಭಾರತ ವಿಶ್ವದಲ್ಲಿ ಮೂರನೇ ಸ್ಥಾನದಲ್ಲಿದೆ. 2019ರಲ್ಲಿ ಸುಮಾರು 1,300 ಸ್ಟಾರ್ಟಪ್​ಗಳು ಚಾಲನೆ ಪಡೆದಿವೆ. ಅಂದಹಾಗೆ, ಇಂಥ ನವೋದ್ಯಮ ಶುರುಮಾಡುವವರಲ್ಲಿ ಹೆಚ್ಚಿನವರು ಯುವಜನರು. ಕೆಪಿಎಂಜಿ ವರದಿ ಪ್ರಕಾರ, ಭಾರತದಲ್ಲಿ 2008ರಲ್ಲಿ ಸುಮಾರು 7 ಸಾವಿರದಷ್ಟಿದ್ದ ನವೋದ್ಯಮಗಳ ಸಂಖ್ಯೆ 2018ರಲ್ಲಿ 50 ಸಾವಿರಕ್ಕೆ ತಲುಪಿದೆ. ವಿಶೇಷವಾಗಿ, ಮಾಹಿತಿ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ (ಅಠಿಜ್ಛಿಜ್ಚಿಜಿಚ್ಝ ಐಠಿಛ್ಝಿ್ಝಜಛ್ಞಿ್ಚ), ಹಣಕಾಸು, ಆಹಾರ ತಂತ್ರಜ್ಞಾನ, ಆರೋಗ್ಯ ತಂತ್ರಜ್ಞಾನ, ಕೃಷಿ ತಂತ್ರಜ್ಞಾನ ಮುಂತಾದ ನವೋದ್ಯಮಗಳತ್ತ ಆಸಕ್ತಿ ಹೆಚ್ಚುತ್ತಿದೆ. ಭಾರತ ಸರ್ಕಾರ ನವೋದ್ಯಮಗಳಿಗೆ ಉತ್ತೇಜನ ನೀಡಲೆಂದು ಸ್ಟಾರ್ಟಪ್ ಇಂಡಿಯಾ ಎಂಬ ಯೋಜನೆ ರೂಪಿಸಿದ್ದು, ಸುಮಾರು 15 ಸಾವಿರ ಸ್ಟಾರ್ಟಪ್​ಗಳನ್ನು ಈ ಯೋಜನೆಯಡಿ ಗುರುತಿಸಲಾಗಿದೆ. ಇನ್ನು, ಅನೇಕ ಜಾಗತಿಕ ಕಂಪನಿಗಳಿಗೆ ಭಾರತ ಮೂಲದ ಯುವಕರ ನೇತೃತ್ವವಿದೆ. ಇದು ಸುಮ್ಮನೆ ಆದ ಸಾಧನೆಯಲ್ಲ.

    ಯುವಜನರಿಗೆ ಮೋದಿ ಕರೆ

    ಬೆಂಗಳೂರಿನಲ್ಲಿ ಈಚೆಗೆ ಭಾರತೀಯ ವಿಜ್ಞಾನ ಕಾಂಗ್ರೆಸ್​ನ ಸಮ್ಮೇಳನ ನಡೆಯಿತು. ‘ವಿಜ್ಞಾನ ಮತ್ತು ತಂತ್ರಜ್ಞಾನ: ಗ್ರಾಮೀಣಾಭಿವೃದ್ಧಿ’ ಎಂಬುದು ಈ ಸಲದ ಥೀಮ್ ಆಗಿತ್ತು. ಆ ಸಮ್ಮೇಳನವನ್ನು ಉದ್ಘಾಟಿಸಿದ್ದು ಪ್ರಧಾನಮಂತ್ರಿ ನರೇಂದ್ರ ಮೋದಿ. ಸಮ್ಮೇಳನದ ಥೀಮ್ೆ ಪೂರಕವಾಗಿ ಕೆಲವು ಸಂಶೋಧನೆ, ಅಧ್ಯಯನ ಮಾಡುವಂತೆ ಅವರು ಯುವಜನರನ್ನೇ ಕೇಂದ್ರಬಿಂದುವನ್ನಾಗಿಸಿಕೊಂಡು ಕರೆನೀಡಿದ್ದು ವಿಶೇಷವಾಗಿತ್ತು (ಅಂದಹಾಗೆ, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ವಲಯಗಳಿಗೆ ಸಂಬಂಧಿಸಿದಂತೆ ಮೋದಿ ಸರ್ಕಾರ ದೊಡ್ಡ ದೊಡ್ಡ ಭರವಸೆಗಳನ್ನೇ ನೀಡಿದೆ).

    ಮೋದಿ ಅಂದು ಪ್ರಸ್ತಾಪಿಸಿದ ಕೆಲ ಸಂಗತಿಗಳು: # ರೈತರ ಬೆಳೆ ಮಾರಾಟ ತೊಂದರೆ ಪರಿಹಾರಕ್ಕೆ ಕ್ರಮ # ಪ್ಲಾಸ್ಟಿಕ್​ಗೆ ಪರ್ಯಾಯ ಉತ್ಪನ್ನ ಕಂಡುಹಿಡಿಯುವುದು. # ಆಳಸಮುದ್ರದಲ್ಲಿ ಗಣಿಗಾರಿಕೆಗೆ ತಂತ್ರಜ್ಞಾನ ಆವಿಷ್ಕಾರ # ಎಲೆಕ್ಟ್ರಾನಿಕ್ ತ್ಯಾಜ್ಯಗಳ ವಿಲೇವಾರಿ-ನಿರ್ವಹಣೆಗೆ ಉಪಾಯ # ಭಾರತವನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಿಸಬೇಕು ಎಂಬ ಗುರಿಗೆ ಪೂರಕವಾಗಿ ಸಣ್ಣ ಕೈಗಾರಿಕಾ ರಂಗವನ್ನು ಬೆಳೆಸಲು ಮಾರ್ಗ ಹುಡುಕುವುದು # ದೇಶದ ಪ್ರತಿಮನೆಗೆ ಕುಡಿಯುವ ನೀರು ಪೂರೈಸುವ ‘ಜಲ್ ಜೀವನ್’ ಯೋಜನೆಯ ಪರಿಣಾಮಕಾರಿ ಜಾರಿಗೆ ತಂತ್ರಜ್ಞಾನ ನೆರವು.

    ಮನೆಯ ಬಚ್ಚಲು ನೀರನ್ನು ಕೃಷಿಗೆ ಬಳಸಬಹುದಾದ ಸರಳ ತಂತ್ರಜ್ಞಾನ ಅಭಿವೃದ್ಧಿ. ಮೋದಿಯವರ ಈ ಆಹ್ವಾನವನ್ನು ಯುವ ವಿಜ್ಞಾನಿಗಳು ಮತ್ತು ಯುವತಂತ್ರಜ್ಞರು ಸ್ವೀಕರಿಸುವರೇ? ಆ ನಿಟ್ಟಿನಲ್ಲಿ ಕೊಡುಗೆಗಳನ್ನು ನೀಡುವರೇ? ಕಾದುನೋಡಬೇಕು. ಇದು ಸಾಧ್ಯವಾಗಬೇಕಾದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ (ಛಿಠಛಿಚ್ಟ್ಚ ಚ್ಞಛ ಈಛಿಡಛ್ಝಿಟಟಞಛ್ಞಿಠಿ) ಕ್ಷೇತ್ರದಲ್ಲಿ ಅಪಾರ ಪ್ರಮಾಣದ ಬಂಡವಾಳ ಹೂಡಬೇಕಾಗುತ್ತದೆ. ‘ಜಾಗತಿಕ ಸಂಶೋಧನೆ ಸೂಚ್ಯಂಕ’ ದಲ್ಲಿ ಮೊದಲಿಗೆ ಹೋಲಿಸಿದರೆ ಭಾರತದ ಸ್ಥಾನ ಈಗ ತುಸು ವರ್ಧಿಸಿದೆಯಾದರೂ, ಆಗಬೇಕಾದ ಕೆಲಸ ಬಹಳಷ್ಟಿದೆ ಎಂಬುದು ತಜ್ಞರ ಅಂಬೋಣ.

    ಜೈ ಯುವ ಭಾರತ!

    ಕೊನೇ ಮಾತು: ಯುವಜನರು ವಿಚಾರಾಧಾರಿತವಾಗಿ ಬೀದಿಗಿಳಿಯುವುದು ತಪ್ಪಲ್ಲ. ಆದರೆ ಬೀದಿಯಲ್ಲೇ ಇರುವುದು ಸರಿಯಲ್ಲ! ಅಲ್ಲವಾ?

    (ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts