More

    ಅರ್ಧಕ್ಕರ್ಧ ಹಳ್ಳಿಗಳು ನಗರಗಳಿಗೆ ಬಂದರೆ!?

    ವಿಶ್ವಸಂಸ್ಥೆಯ ಜನಸಂಖ್ಯಾ ವರದಿ ಪ್ರಕಾರ, 2030ರ ಹೊತ್ತಿಗೆ ಭಾರತದ ನಗರವಾಸಿಗಳ ಪ್ರಮಾಣ ಶೇ.40.76ರಷ್ಟಾಗಲಿದೆ. ಎರಡನೇ ಮತ್ತು ಮೂರನೇ ಹಂತದ ನಗರಗಳನ್ನು ಬೆಳೆಸಬೇಕೆಂಬ ಚಿಂತನೆಯ ಪರಿಣಾಮ ನಿರೀಕ್ಷಿತ ರೀತಿಯಲ್ಲಿ ಕಂಡುಬರುತ್ತಿಲ್ಲ.

    ಅರ್ಧಕ್ಕರ್ಧ ಹಳ್ಳಿಗಳು ನಗರಗಳಿಗೆ ಬಂದರೆ!?ಕೆಲ ದಿನಗಳ ಹಿಂದಿನ ಮಾತು. ಬೆಂಗಳೂರಿನ ವಿಧಾನಸೌಧದ ಒಳಗಣ ಉದ್ಯಾನದಲ್ಲಿ ದಂಪತಿ ಕಸ ಆಯುವ ಕೆಲಸ ಮಾಡುತ್ತಿದ್ದರು. ಅವರು ದೂರದ ರಾಯಚೂರಿನವರು. ಆ ಸಂದರ್ಭದಲ್ಲಿ ಅವರ ಇಬ್ಬರು ಮಕ್ಕಳೂ ಅಲ್ಲೇ ಕಸ ಆಯುತ್ತ, ಆಟವಾಡುತ್ತಿದ್ದರು. ಮಕ್ಕಳ ಈ ಚಿತ್ರಣ ವಿಜಯವಾಣಿ ಪತ್ರಿಕೆಯಲ್ಲಿ ಸಣ್ಣ ವರದಿಯಾಗಿ ಪ್ರಕಟವಾಯಿತು. ರಾಜ್ಯದ ಆಡಳಿತದ ಶಕ್ತಿಕೇಂದ್ರದ ಆವರಣದಲ್ಲಿಯೇ ಇಂಥದೊಂದು ಸನ್ನಿವೇಶ ಕಂಡುಬಂದಿದ್ದರಿಂದಾಗಿ ಮರುದಿನ ಶಿಕ್ಷಣಾಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಮಕ್ಕಳನ್ನು ಹೀಗೆ ಕೆಲಸಕ್ಕೆ ಹಚ್ಚುವುದು ಸರಿಯಲ್ಲ, ಶಾಲೆಗೆ ಸೇರಿಸಬೇಕು ಎಂದೆಲ್ಲ ಹೇಳಿದರು. ಪಾಲಕರೂ ಏನೋ ಸಮಜಾಯಿಷಿ ನೀಡಿದರು.

    ಆ ದಂಪತಿ ಹೊಟ್ಟೆಪಾಡಿಗೆಂದು ಇಲ್ಲಿಗೆ ಬಂದವರು. ಜೀವನದ ಅನಿವಾರ್ಯತೆ. ನಾವೇನು ಮೂಲಸೌಕರ್ಯ ಎನ್ನುತ್ತೇವೆ, ಮಲಗಲೊಂದು ಸೂರು, ಶುದ್ಧ ಕುಡಿಯುವ ನೀರು, ಆರೋಗ್ಯ ಸವಲತ್ತು ಇಂಥದೆಲ್ಲ ಅವರಿಗೆ ಈ ಬೆಂಗಳೂರಲ್ಲಿ ಸಿಗಲು ಸಾಧ್ಯವೇ? ಆ ಮಕ್ಕಳಿಗೆ ಶಾಲಾ ಶಿಕ್ಷಣ ಸರಿಯಾಗಿ ದೊರೆಯಬಹುದೆ?

    ವಲಸೆಯ ಪರಿಣಾಮಗಳಿಗೆ ಈ ಘಟನೆಯನ್ನು ಸಂಕೇತವಾಗಿ ಪರಿಗಣಿಸಬಹುದೇನೋ? ಹೀಗೆ ಬೆಂಗಳೂರಿಗೆ ಬರುವವರ ಸಂಖ್ಯೆ ಬಹು ದೊಡ್ಡದಿದೆ. ಎಷ್ಟೆಂದರೆ, ಈ ಮಹಾನಗರಿಯ ಸರಿಸುಮಾರು ಅರ್ಧದಷ್ಟು ಮಂದಿ ರಾಜ್ಯದ ಬೇರೆ ಬೇರೆ ಭಾಗಗಳಿಂದ ಮತ್ತು ಹೊರರಾಜ್ಯಗಳಿಂದ ಬಂದವರು ಎನ್ನುತ್ತವೆ ಅಂಕಿಅಂಶಗಳು. 2011ರ ಜನಗಣತಿ ಪ್ರಕಾರ ಬೆಂಗಳೂರಿನ ಜನಸಂಖ್ಯೆ 91.2 ಲಕ್ಷ (ವಾಸ್ತವದಲ್ಲಿ ಜನಸಂಖ್ಯೆ ಇದಕ್ಕಿಂತ ಜಾಸ್ತಿಯಿರುತ್ತದೆ. ಎಲ್ಲರೂ ಗಣತಿಗೆ ಸಿಕ್ಕಿರುವುದಿಲ್ಲ). ಈ ಪೈಕಿ ಸುಮಾರು ಅರ್ಧದಷ್ಟು ಅಂದರೆ 44.3 ಲಕ್ಷ ಮಂದಿ ವಲಸಿಗರು. ಜನಗಣತಿ ಆಯುಕ್ತರು ಮತ್ತು ನೋಂದಣಿ ಮಹಾನಿರ್ದೇಶಕರ ಕಚೇರಿ ಮಾಹಿತಿ ಇದು. ಈಗ ಈ ಪ್ರಮಾಣ ಇನ್ನಷ್ಟು ಹೆಚ್ಚಿದೆ. ಏಕೆಂದರೆ ಜನಸಂಖ್ಯೆ ಒಂದೂಕಾಲು ಕೋಟಿ ದಾಟಿದೆ. 2001ರ ಜನಗಣತಿಯಲ್ಲಿ ವಲಸಿಗರ ಪ್ರಮಾಣ ಸುಮಾರು ಶೇಕಡ 31ರಷ್ಟಿತ್ತು. ಬೆಂಗಳೂರು ಎಷ್ಟು ವೇಗವಾಗಿ ಬೆಳೆಯುತ್ತಿದೆ ಎಂಬುದಕ್ಕೆ ಬೇರೆ ಪುರಾವೆ ಬೇಕೆ?

    ಹೀಗೆ ವಲಸೆ ಬರುವವರಲ್ಲಿ ನಮ್ಮ ರಾಜ್ಯದ ಬೇರೆ ಬೇರೆ ಭಾಗಗಳವರು ಹೆಚ್ಚು. ಹೊರರಾಜ್ಯವನ್ನು ಪರಿಗಣಿಸಿದರೆ ತಮಿಳುನಾಡಿನಿಂದ ಹೆಚ್ಚು ಸಂಖ್ಯೆಯಲ್ಲಿ ಜನರು ಬರುತ್ತಾರೆ. ಉದ್ಯಾನನಗರಿ, ನಿವೃತ್ತರ ಸ್ವರ್ಗ ಎಂಬೆಲ್ಲ ಹೆಗ್ಗಳಿಕೆಗಳನ್ನು ಹೊಂದಿದ್ದ ಬೆಂಗಳೂರು ಈಗ ದೇಶದ ಜನ ಮೆಚ್ಚುವ ‘ಬಹುಸಂಸ್ಕೃತಿ ನಗರಿ’ (ಕಾಸ್ಮೊಪಾಲಿಟನ್ ಸಿಟಿ)ಯಾಗಿ ಹೊರಹೊಮ್ಮಿದೆ. ಆದರೆ ಈ ಹೆಮ್ಮೆಯ ಗರಿಗಾಗಿ ಅದು ಕೆಲ ‘ಕಂದಾಯ’ಗಳನ್ನೂ ಕಟ್ಟಬೇಕಿದೆ. ಇಷ್ಟೆಲ್ಲ ಜನರಿಗೆ ಮೂಲಸೌಕರ್ಯ ಒದಗಿಸುವಲ್ಲಿ ಬಿಬಿಎಂಪಿ ಕೈಸೋಲುತ್ತಿದೆ, ಇನ್ನು ಟ್ರಾಫಿಕ್ ಜಾಮ್ ವಿಶ್ವದಲ್ಲಿಯೇ ಅತಿ ಹೆಚ್ಚು, ಮಾಲಿನ್ಯದ ಹಾವಳಿ, ಕಸದ ಸಮಸ್ಯೆ…ಹೀಗೆ. ನೀರಿನ ವಿಚಾರವನ್ನು ತೆಗೆದುಕೊಂಡರೆ ಬೆಂಗಳೂರಿಗೆ ತನ್ನದೇ ಆದ ಸ್ವಂತ ನೀರಿನ ಮೂಲವಿಲ್ಲ. ತಿಪ್ಪಗೊಂಡನಹಳ್ಳಿ ಜಲಾಶಯ ಹಿಂದೆ ಕೆಲಮಟ್ಟಿಗೆ ನೀರು ಪೂರೈಸುತ್ತಿದ್ದರೂ ಈಗ ಹಾಗಿಲ್ಲ. ನೂರಿಪ್ಪತ್ತು ಕಿಲೋಮೀಟರ್ ದೂರದ ಕಾವೇರಿ ನದಿಯಿಂದ ನೀರು ತರಬೇಕು. ಭರಪೂರ ಮಳೆಯಾದರೆ ಓಕೆ, ಇಲ್ಲವಾದರೆ ಜೋಕೆ!

    ಇದನ್ನೇ ಇನ್ನೊಂದು ರೀತಿಯಲ್ಲಿ ನೋಡುವುದಾದರೆ, ಕರ್ನಾಟಕದಿಂದಲೂ ಬೇರೆ ಬೇರೆ ರಾಜ್ಯಗಳಿಗೆ ಮತ್ತು ಹೊರದೇಶಗಳಿಗೆ ಹೋಗಿ ನೆಲೆಸುವವರ ಪ್ರಮಾಣ ದೊಡ್ಡದಾಗಿಯೇ ಇದೆ. ಸುಮ್ಮನೆ ನೆನೆಸಿಕೊಳ್ಳುವುದಾದರೆ, ಮುಂಬೈ ಜೊತೆಗಿನ ನಮ್ಮ ರಾಜ್ಯದವರ ನಂಟು ದಶಕಗಳಷ್ಟು ಹಳೆಯದು. ಹೋಟೆಲ್ ಉದ್ಯಮ ಸೇರಿದಂತೆ ಹಲವಾರು ರಂಗಗಳಲ್ಲಿ ನಮ್ಮವರು ಅಲ್ಲಿ ತಮ್ಮದೇ ಆದ ಛಾಪೊತ್ತಿದ್ದಾರೆ.

    ಈಗ ಪೌರತ್ವ ತಿದ್ದುಪಡಿ ಕಾನೂನು (ಸಿಎಎ) ಭಾರಿ ಸದ್ದು ಸುದ್ದಿ ಮಾಡುತ್ತಿರುವುದು ಗೊತ್ತೇ ಇದೆ. ಇದು ನೆರೆದೇಶಗಳಾದ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನಗಳಿಂದ ಭಾರತಕ್ಕೆ ಬರುವ ಅಲ್ಪಸಂಖ್ಯಾತರಿಗೆ (ಹಿಂದು, ಬೌದ್ಧ, ಜೈನ, ಪಾರ್ಸಿ, ಸಿಖ್) ಪೌರತ್ವ ನೀಡುವುದಕ್ಕೆ ಆಸ್ಪದ ನೀಡುವ ಕಾನೂನು. ಇಲ್ಲಿ ನಮ್ಮದೇ ದೇಶದೊಳಗೆ ನಡೆಯುತ್ತಿರುವುದು ಬೇರೆಯದೇ ಆದ ರೀತಿಯ ವಲಸೆ.

    ಹಾಗೆನೋಡಿದರೆ ಬೆಂಗಳೂರು ಮಾತ್ರವಲ್ಲ ಭಾರತದ ಎಲ್ಲ ನಗರಗಳ ಕತೆಯೂ ಇದೇ- ಜನಸಂಖ್ಯಾ ಒತ್ತಡ.1901ರ ಹೊತ್ತಿಗೆ ಭಾರತದ ನಗರವಾಸಿಗಳ ಪ್ರಮಾಣ ಸುಮಾರು ಶೇ.11.4ರಷ್ಟಿತ್ತು. ಒಂದು ಶತಮಾನದ ಬಳಿಕ, ಅಂದರೆ 2001ರಲ್ಲಿ ಅದು ಶೇ.28.53ಕ್ಕೆ ಏರಿತ್ತು. ಅದಾದ ಹತ್ತು ವರ್ಷಗಳಲ್ಲಿ ಅಂದರೆ, 2011ರ ವೇಳೆಗೆ ಈ ಪ್ರಮಾಣ ಶೇ.31.6ಕ್ಕೆ, 2017ಕ್ಕೆ ಶೇ.34ಕ್ಕೆ ಹೆಚ್ಚಿದೆ. ವಿಶ್ವಸಂಸ್ಥೆಯ ಜನಸಂಖ್ಯಾ ವರದಿ ಪ್ರಕಾರ, 2030ರ ಹೊತ್ತಿಗೆ ಭಾರತದ ನಗರವಾಸಿಗಳ ಪ್ರಮಾಣ ಶೇ.40.76ರಷ್ಟಾಗಲಿದೆ. 120 ವರ್ಷಗಳ ಹಿಂದೆ ಶೇ.90 ರಷ್ಟು ಜನರನ್ನು ಹಳ್ಳಿಗಳಲ್ಲಿ ಹೊಂದಿದ್ದ ಭಾರತ ಇನ್ನು ಕೆಲ ವರ್ಷಗಳಲ್ಲಿ ಅರ್ಧದಷ್ಟು ಜನರನ್ನು ನಗರದ ಒಡಲುಗಳಲ್ಲಿ ತುಂಬಲಿದೆ. ಅರ್ಥಾತ್, ‘ಭಾರತ ಹಳ್ಳಿಗಳ ದೇಶ’ ಎಂಬ ಅಭಿದಾನ ಮಾಯವಾಗುವಂಥ ಸನ್ನಿವೇಶವಿದೆ. ಇದು ನಾವು ಪ್ರಗತಿ ಸಾಧಿಸಿದ ನಿದರ್ಶನವೋ? ಅಥವಾ ವಿಗತಿಯ ಪ್ರದರ್ಶನವೋ? ಅಳತೆಗೋಲು ಎಲ್ಲಿದೆ?

    ಇನ್ನು, ನಮ್ಮ ಕರ್ನಾಟಕದ್ದೇ ಒಂದು ಉದಾಹರಣೆ ಕೊಡುವುದಾದರೆ, ಹತ್ತು ವರ್ಷಗಳಲ್ಲಿ 84 ಹಳ್ಳಿಗಳು ರಾಜ್ಯದ ನಕಾಶೆಯಿಂದ ಮಾಯವಾಗಿವೆ! ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ, 2001ರಿಂದ 2011ರ ಅವಧಿಯಲ್ಲಿ ರಾಜ್ಯದಲ್ಲಿ 84 ಗ್ರಾಮಗಳು ಅಸ್ತಿತ್ವ ಕಳೆದುಕೊಂಡಿವೆ ಮತ್ತು 18 ಗ್ರಾಮಗಳಲ್ಲಿ ಜನರೇ ಇಲ್ಲ. 2001ರಲ್ಲಿ 27,481 ಇದ್ದ ರಾಜ್ಯದ ಗ್ರಾಮಗಳ ಸಂಖ್ಯೆ 2011ರಲ್ಲಿ 27,397 ಆಗಿದೆ. ಶೂನ್ಯ ಜನಸಂಖ್ಯೆ ಹಳ್ಳಿಗಳ ಸಂಖ್ಯೆ 2011ರಲ್ಲಿ 1,925 ಇದ್ದುದು 2011ರಲ್ಲಿ 1,943 ಆಗಿದೆ. ಈ ಲೆಕ್ಕದಲ್ಲಿ ನೋಡಿದರೆ, 2011ರಿಂದ 2021ರ ಅವಧಿಯಲ್ಲಿ ಈ ಪ್ರಮಾಣ ದ್ವಿಗುಣವಾದರೂ ಅಚ್ಚರಿಯಿಲ್ಲ ಎಂಬುದು ಸಾಮಾಜಿಕ ತಜ್ಞರ ಅಂಬೋಣ. ಹಳ್ಳಿಹಳ್ಳಿಯೇ ಮಾಯವಾಗುವುದು ಅಥವಾ ನಿರ್ಜನವಾಗುವುದು ಯಾವುದರ ದ್ಯೋತಕ?

    ಹತ್ತಿರದ ನಗರ ಅಥವಾ ಪಟ್ಟಣಕ್ಕೆ ಹಳ್ಳಿಯನ್ನು ಸೇರಿಸುವುದರಿಂದಲೂ ಅದು ಅಸ್ತಿತ್ವ ಕಳೆದುಕೊಳ್ಳುತ್ತದೆ. ಇದು ಸಹ ನಗರೀಕರಣದ ಮತ್ತೊಂದು ಆಯಾಮವೇ. ಹೀಗೆ ಹಳ್ಳಿಯೊಂದು ಹತ್ತಿರದ ನಗರ ಅಥವಾ ಪಟ್ಟಣಕ್ಕೆ ಸೇರಿದರೆ ಅಲ್ಲಿನ ಜಾಗದ ದರ ಸರ್ರನೆ ಮೇಲಕ್ಕೇರುತ್ತದೆ. ಇದೇ ರೀತಿ, ದೊಡ್ಡ ಯೋಜನೆಯೊಂದು ಬಂದಾಗಲೂ ಭೂಮಿಗೆ ಬಂಗಾರದ ಬೆಲೆ ಬರುತ್ತದೆ. ಅಂಥ ಸಂದರ್ಭದಲ್ಲಿ ಕೆಲ ರೈತರು ಭೂಮಿಯನ್ನು ಮಾರಿ ಗರಿ ಗರಿ ನೋಟು ಎಣಿಸುತ್ತಾರೆ; ತಾವು ಸಹ ನಗರದ ಶ್ರೀಮಂತರಷ್ಟೇ ಸಿರಿವಂತರಾದೆವೆಂದು ಬೀಗುತ್ತಾರೆ; ದ್ವಿಚಕ್ರ ವಾಹನದಲ್ಲಿ ಓಡಾಡುತ್ತಿದ್ದವರು ಐಷಾರಾಮಿ ಕಾರಿನಲ್ಲಿ ಮಿಂಚುತ್ತಾರೆ. ಆದರೆ ದುರಂತ ಎಂದರೆ, ಅತ್ತ ಭೂಮಿ ಕೈಬಿಟ್ಟಿರುತ್ತದೆ, ಇತ್ತ ಕೈಗೆ ಬಂದ ದುಡ್ಡ ಬಹಳ ದಿನ ಉಳಿಯುವುದಿಲ್ಲ. ‘ಅಂತು ಇಂತು ಕುಂತಿ ಮಕ್ಕಳಿಗೆ ರಾಜ್ಯವಿಲ್ಲ’ ಎಂಬ ಗಾದೆಮಾತು ಈ ರೀತಿಯಲ್ಲಿಯೂ ನಿಜವಾಗುವುದು ಆಘಾತಕಾರಿಯೇ ಸರಿ.

    ಹಾಗಾದರೆ ಕೇವಲ ನಗರಜೀವನದ ಆಕರ್ಷಣೆಯೊಂದೇ ವಲಸೆಗೆ ಕಾರಣವೇ? ಅದು ಒಂದು ಪ್ರಮುಖ ಕಾರಣ ಎಂಬುದರಲ್ಲಿ ಅನುಮಾನವಿಲ್ಲ. ಜತೆಗೆ, ಉದ್ಯೋಗದ ಅನಿವಾರ್ಯತೆ, ಶಿಕ್ಷಣಕ್ಕೆ ತಕ್ಕ ಕೆಲಸದ ಹುಡುಕಾಟ, ಹಳ್ಳಿಗಳಲ್ಲಿ ಉದ್ಯೋಗಾವಕಾಶ ಇಲ್ಲದಿರುವುದು- ಹೀಗೆ ಬೇರೆ ಬೇರೆ ಕಾರಣಗಳನ್ನು ಪಟ್ಟಿ ಮಾಡಬಹುದು. ಇದು ವೈಯಕ್ತಿಕ ಆಯ್ಕೆಯೂ ಹೌದಾದ್ದರಿಂದ ಎಲ್ಲರೂ ತಂತಮ್ಮ ಬದುಕಿನ ವಿನ್ಯಾಸವನ್ನು ರೂಪಿಸಿಕೊಳ್ಳುವ ಬಗ್ಗೆ ಸಮರ್ಥಿಸಿಕೊಳ್ಳುವುದು ಸಹಜವೇ. ಹೀಗಾಗಿ ಇಲ್ಲಿ ತಪು್ಪಒಪ್ಪಿನ ನಿಷ್ಕರ್ಷೆ ಸುಲಭವಲ್ಲ. ಏನಿದ್ದರೂ, ಸಾಧಕ-ಬಾಧಕದ ಚರ್ಚೆ ಮಾಡಬಹುದಷ್ಟೆ. ಆದರೂ, ಕೆಲ ವಿಷಯಗಳನ್ನು ಚರ್ಚೆಗೆತ್ತಿಕೊಳ್ಳುವುದಾದರೆ, ಹಳ್ಳಿಗಳಲ್ಲಿ ಉದ್ಯೋಗಾವಕಾಶ ಕಡಿಮೆ ಎಂಬುದು ನಿಜ. ಅದಕ್ಕೆ ಬೇರೆ ಬೇರೆ ಕಾರಣಗಳಿವೆ. ಆದರೂ, ಕೃಷಿಯಲ್ಲಿ ಕಾರ್ವಿುಕರ ತೀವ್ರ ತುಟಾಗ್ರತೆ ಇದೆಯಲ್ಲ, ಇದನ್ನು ಹೇಗೆ ವಿಶ್ಲೇಷಿಸುವುದು? ಎಷ್ಟರಮಟ್ಟಿಗೆ ಎಂದರೆ, ಕೆಲವರಂತೂ ಕಾರ್ವಿುಕರ ಅಭಾವದಿಂದಾಗಿ ಕೆಲ ಬೆಳೆಗಳನ್ನೇ ಕೈಬಿಟ್ಟಿದ್ದಾರೆ. ಹೀಗಾಗಿ ಬೆಳೆವೈವಿಧ್ಯ ಮಾಯವಾಗುತ್ತ ಏಕಬೆಳೆಯತ್ತ ಕೃಷಿ ಸಾಗುವ ಅಪಾಯ ಎದುರಾಗಿದೆ. ಹಾಗಂತ ಕೃಷಿ ಕಾರ್ವಿುಕರಿಗೆ ದಿನಗೂಲಿ ಏನು ಕಡಿಮೆ ಇಲ್ಲ. ಕೆಲ ಯೋಜನೆಗಳಲ್ಲಿ ಸರ್ಕಾರ ನಿಗದಿಪಡಿಸಿದ ಹಣಕ್ಕಿಂತಲೂ ಹೆಚ್ಚು ಕೃಷಿಯಲ್ಲಿ ಕೊಡಲಾಗುತ್ತದೆ.

    ಆಸಕ್ತಿಕರ ಸಂಗತಿ ಎಂದರೆ, ನಗರಗಳಲ್ಲೂ ಕೆಲವರು ತಮಗೆ ಕೆಲಸಗಾರರ ಕೊರತೆ ಎನ್ನುವುದು. ಉದಾ: ಹೋಟೆಲ್ ಉದ್ಯಮದವರನ್ನು ಯಾರನ್ನೇ ಕೇಳಿದರೂ ಈ ಮಾತು ಹೇಳುತ್ತಾರೆ. ಹಾಗಾದರೆ ಗ್ರಾಮೀಣದಿಂದ ಬರುವವರೆಲ್ಲ ಎಲ್ಲಿ, ಯಾವ ಕೆಲಸ ಮಾಡುತ್ತಾರೆ? ಅಧ್ಯಯನಕ್ಕೆ ಕುತೂಹಲದ ವಸ್ತುವಿದು.

    1990ರ ಆರ್ಥಿಕ ಉದಾರೀಕರಣ ಭಾರತದ ಚಿತ್ರಣವನ್ನು ಹಲವು ರೀತಿಗಳಲ್ಲಿ ಬದಲಿಸಿತು (ಈ ಹೆಜ್ಜೆಯ ಬಗ್ಗೆ ಈಗಲೂ ಪರ-ವಿರೋಧ ಚರ್ಚೆ ನಡೆಯುತ್ತಿದೆ. ಅದು ಬೇರೆ ಮಾತು). ನಗರೀಕರಣ ಹೆಚ್ಚಾಯಿತು. ಹೊಸಹೊಸ ಉದ್ಯೋಗಾವಕಾಶಗಳು ತೆರೆದುಕೊಂಡವು. ಹೀಗಾಗಿ ಜನರ ವಲಸೆ ಕೂಡ ಹೆಚ್ಚಾಯಿತು.

    ಆದರೆ ನಗರೀಕರಣ ತಂದೊಡ್ಡುವ ಸಮಸ್ಯೆ-ಸವಾಲುಗಳು ಒಂದೆರಡಲ್ಲ. ಹಾಗೆ ಸುಮ್ಮನೆ ಕೆಲ ಅಂಕಿಅಂಶಗಳತ್ತ ಗಮನಹರಿಸುವುದಾದರೆ-

    • 2017-18ರ ಭಾರತದ ಆರ್ಥಿಕ ಸಮೀಕ್ಷೆ ಪ್ರಕಾರ, 2001ರಲ್ಲಿ ಶೇ.58.3ರಷ್ಟಿದ್ದ ಕೃಷಿ ಕಾರ್ವಿುಕರ ಸಂಖ್ಯೆ 2050ರ ವೇಳೆಗೆ ಶೇ.25.7ಕ್ಕೆ ಕುಸಿಯುತ್ತದೆ.
    • ನೀತಿ ಆಯೋಗವು 2018ರ ಜೂನ್​ನಲ್ಲಿ ಪ್ರಕಟಿಸಿದ ವರದಿಯಲ್ಲಿ ಉಲ್ಲೇಖಿಸಿದ ಪ್ರಕಾರ, 2020ರ ವೇಳೆಗೆ ಭಾರತದ 21 ನಗರಗಳಲ್ಲಿ ಅಂತರ್ಜಲ ಬರಿದಾಗುತ್ತದೆ! ಈ ನಗರಗಳ ಪಟ್ಟಿಯಲ್ಲಿ ಬೆಂಗಳೂರು, ಮುಂಬೈ, ದೆಹಲಿ ಕೂಡ ಸೇರಿವೆ. ಅಂತರ್ಜಲ ಸಂಪೂರ್ಣ ಬತ್ತದಿದ್ದರೂ ಈಗಾಗಲೇ ಪಾತಾಳಕ್ಕಿಳಿದಿರುವ ಅಂತರ್ಜಲದ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುವುದರಲ್ಲಿ ಅನುಮಾನವಿಲ್ಲ.
    • ಗ್ರಾಮೀಣ ಭಾಗದಿಂದ ನಗರವಲಸೆ ಹೆಚ್ಚುತ್ತಿರುವ ಪರಿಣಾಮ ನಗರ ಪ್ರದೇಶಗಳಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚುತ್ತಿದ್ದರೆ ಹಳ್ಳಿಗಳಲ್ಲಿ ಕಮ್ಮಿಯಾಗುತ್ತಿದೆ ಎಂದು 2017-18ರ ಆರ್ಥಿಕ ಸಮೀಕ್ಷೆ ವರದಿ ಬೊಟ್ಟುಮಾಡಿದೆ.
    • ಬೆಂಗಳೂರಿನಂತಹ ಮಹಾನಗರಗಳ ಒತ್ತಡ ಕಡಿಮೆ ಮಾಡಬೇಕೆಂದೇ ಎರಡನೇ ಮತ್ತು ಮೂರನೇ ಹಂತದ ನಗರಗಳನ್ನು ಬೆಳೆಸಬೇಕೆಂಬ ಚಿಂತನೆ ಮೂಡಿದ್ದು, ಈ ಕುರಿತಂತೆ ಸರ್ಕಾರಗಳು ಅಲ್ಪಸ್ವಲ್ಪ ಹೆಜ್ಜೆಯಿಟ್ಟಿವೆ. ಹೂಡಿಕೆದಾರರ ಸಮಾವೇಶದಂಥ ಉಪಕ್ರಮಗಳೂ ನಡೆಯುತ್ತಿವೆ. ಆದರೂ ಪರಿಣಾಮ ನಿರೀಕ್ಷಿತ ರೀತಿಯಲ್ಲಿ ಕಂಡುಬರುತ್ತಿಲ್ಲ.

    ಕನ್ನಡದ ಒಂದು ಜಾನಪದ ಹಾಡಿನ ಒಂದು ಚರಣ ಹೀಗಿದೆ-

    ತೊಟ್ಟಿಲು ಹೊತ್ಕೊಂಡು

    ತವರು ಬಣ್ಣ ಉಟ್ಕೊಂಡು

    ಅಪ್ಪ ಕೊಟ್ಟೆಮ್ಮೆ ಹೊಡ್ಕೊಂಡು

    ತಿಟ್ಹತ್ತಿ ತಿರುಗಿ ನೋಡ್ಯಾಳ

    ತವರುಮನೆಯಿಂದ ಗಂಡನ ಮನೆಗೆ ಹೊರಟ ಹೆಣ್ಣುಮಗಳೊಬ್ಬಳು ದಾರಿಯಲ್ಲಿ ಗುಡ್ಡದ ಮೇಲೆ ನಿಂತು ತವರಿನತ್ತ ದಿಟ್ಟಿಸುತ್ತಾಳೆ. ಆಗ ಅವಳ ಭಾವನೆಗಳು ಹೇಗಿದ್ದಿರಬಹುದು….ಹೆಣ್ಣುಮಗಳು ಗಂಡನ ಮನೆ ಸೇರುವುದು ಸಹಜ ವಿದ್ಯಮಾನ. ಅವಳೀಗ ತನ್ನ ಬದುಕಿನ ಬಹುದೊಡ್ಡ ಪಲ್ಲಟದ ಕ್ಷಣದಲ್ಲಿದ್ದಾಳೆ. ತವರಿನಿಂದ ಪತಿಮನೆಯತ್ತ ನಡೆಯುವ ದಾರಿಯಲ್ಲಿ ಒಂದರೆಘಳಿಗೆ ತನ್ನ ಜೀವನವನ್ನು ಅವಲೋಕಿಸಿಕೊಳ್ಳುತ್ತಾಳೆ. ಅದೇ ರೀತಿ ಕಾರಣಾಂತರಗಳಿಂದ ನಗರವಾಸಿಗಳಾದವರು ಹೀಗೆ ಆಗೀಗಲಾದರೂ ತಿಟ್ಹತ್ತಿ ತಿರುಗಿ ಹಳ್ಳಿಗಳ ಕಡೆಗೊಮ್ಮೆ ದೃಷ್ಟಿಹಾಯಿಸುವ ರೂಢಿಯಿಟ್ಟುಕೊಂಡರೆ ಹಳ್ಳಿಗಳ ಹಸಿರು-ಉಸಿರು ತುಸುವಾದರೂ ಉಳಿದೀತು…

    (ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts