More

    ಜನ-ವಾಹನ ಸಂಚಾರಕ್ಕೆ ತೊಂದರೆ

    ಶಿಗ್ಗಾಂವಿ: ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ವಾಹನಗಳನ್ನು ಬೇಕಾಬಿಟ್ಟಿಯಾಗಿ ನಿಲ್ಲಿಸುತ್ತಿರುವುದರಿಂದ ಸುಗಮ ಸಂಚಾರ ಗಗನಕುಸುಮವಾಗಿದ್ದು, ಸಮಸ್ಯೆಯಿಂದ ವಿದ್ಯಾರ್ಥಿಗಳು, ಜನಸಾಮಾನ್ಯರು ಬೇಸತ್ತು ಹೋಗಿದ್ದಾರೆ.

    ಪಟ್ಟಣದ ಗಂಗೇಬಾವಿ ಕ್ರಾಸ್‌ನಿಂದ ಹಳೇ ಬಸ್ ನಿಲ್ದಾಣ, ರಾಣಿ ಚನ್ನಮ್ಮ ವೃತ್ತದ ಮೂಲಕ ಸವಣೂರು ಸಂಪರ್ಕಿಸುವ ಮುಖ್ಯರಸ್ತೆಯಲ್ಲಿ ಜನ-ವಾಹನ ಸಂಚಾರಕ್ಕೆ ಹರಸಾಹಸ ಪಡಬೇಕಾಗಿದೆ. ರಸ್ತೆಯ ಎರಡೂ ಬದಿ ಕೆಲ ಬೀದಿಬದಿ ವ್ಯಾಪಾರಸ್ಥರು ರಸ್ತೆ ಆಕ್ರಮಿಸಿಕೊಂಡಿದ್ದಾರೆ. ಜತೆಗೆ ಬೈಕ್, ಆಟೋ, ಗೂಡ್ಸ್, ಟ್ರ್ಯಾಕ್ಟರ್, ಲಾರಿಗಳನ್ನು ಎಲ್ಲೆಂದರಲ್ಲಿ ನಿಲ್ಲಿಸಲಾಗುತ್ತ್ತಿದೆ. ಮಾರ್ಕೆಟ್ ಕಿಕ್ಕಿರಿದು ತುಂಬಿದ್ದರೂ ದೊಡ್ಡ ವಾಹನಗಳನ್ನು ರಸ್ತೆಗಳಲ್ಲಿ ನಿಲ್ಲಿಸಿ, ಸಾಮಗ್ರಿಗಳ ಲೋಡಿಂಗ್-ಅನ್‌ಲೋಡಿಂಗ್ ಮಾಡುತ್ತಾರೆ.

    ಪ್ರತಿದಿನ ಸಂಜೆ ನಾಲ್ಕು ಗಂಟೆಯಾದರೆ ಸಾಕು ರಾಣಿ ಚನ್ನಮ್ಮ ವೃತ್ತದಲ್ಲಿ ವಿದ್ಯಾರ್ಥಿಗಳ ಪಾಡಂತೂ ಹೇಳತೀರದಾಗಿದೆ. ಹೊಸ ಬಸ್ ನಿಲ್ದಾಣ ಸಂಪರ್ಕಿಸುವ ಮುಖ್ಯರಸ್ತೆಯಲ್ಲಿ ಸಾಲುಗಟ್ಟಿ ನಿಲ್ಲುವ ವಾಹನಗಳಿಂದಾಗಿ ಜನಸಾಮಾನ್ಯರಿಗೆ ಕಿರಿಕಿರಿಯಾಗಿ ಪರಿಣಮಿಸಿದೆ. ಅದರಲ್ಲೂ ಸಂತೆ ದಿನವಾದ ಬುಧವಾರ ವಿದ್ಯಾರ್ಥಿಗಳು ಶಾಲೆಯಿಂದ ಬಸ್ ನಿಲ್ದಾಣ ತಲುಪಲು ಹರಸಾಹಸ ಪಡುವಂತಾಗಿದೆ. ಇಷ್ಟೆಲ್ಲ ಸಮಸ್ಯೆಗಳಿದ್ದರೂ, ಅದರ ಮುಕ್ತಿಗೆ ಸ್ಥಳೀಯ ಪುರಸಭೆಯಾಗಲಿ, ಪೊಲೀಸ್ ಇಲಾಖೆಯಾಗಲಿ ಗಮನಹರಿಸದಿರುವುದು ವಿಪರ್ಯಾಸವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು, ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕೆಂದು ನಾಗರಿಕರು ಒತ್ತಾಯಿಸುತ್ತಿದ್ದಾರೆ.

    ಪಟ್ಟಣದ ಮುಖ್ಯ ರಸ್ತೆಗಳಲ್ಲಿ, ಹಳೇ ಮಾರ್ಕೆಟ್, ಚನ್ನಮ್ಮ ಸರ್ಕಲ್, ಹೊಸ ಮಾರ್ಕೆಟ್, ಬ್ಯಾಂಕ್, ಕಾಂಪ್ಲೆಕ್ಸ್‌ಗಳ ಮುಂದೆ ವಾಹನ ನಿಲುಗಡೆಗೆ ವ್ಯವಸ್ಥೆ ಇಲ್ಲ. ವಾಣಿಜ್ಯ ಕಟ್ಟಡಗಳ ನಿರ್ಮಾಣ ವೇಳೆ ವಾಹನ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಬೇಕಾದದ್ದು ಕಟ್ಟಡ ಮಾಲೀಕರ ಜವಾಬ್ದಾರಿ. ಆದರೆ, ಈ ನೀತಿ ಪಟ್ಟಣದಲ್ಲಿ ಪಾಲನೆಯಾಗುತ್ತಿಲ್ಲ. ಇದರಿಂದ ಪ್ರತಿದಿನವೂ ಜನರು ಪರದಾಡುವಂತಾಗಿದೆ.
    I ಅಮೃತಗೌಡ ಪಾಟೀಲ, ಸ್ಥಳೀಯ ನಿವಾಸಿ

    ಸುಗಮ ಸಂಚಾರ ದೃಷ್ಟಿಯಿಂದ ಧ್ವನಿವರ್ಧಕ ವಾಹನದ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಪುರಸಭೆ ಮುಖ್ಯಾಧಿಕಾರಿ, ಅಧ್ಯಕ್ಷ, ಪಟ್ಟಣದ ವ್ಯಾಪಾರ ಮಳಿಗೆಗಳ ಮಾಲೀಕರೊಂದಿಗೆ ಮತ್ತು ಬ್ಯಾಂಕ್ ವ್ಯವಸ್ಥಾಪಕರುಗಳೊಂದಿಗೆ ಸಭೆ ನಡೆಸಿ, ಅಂಗಡಿ- ಬ್ಯಾಂಕ್‌ಗಳ ಮುಂದೆ ಸೆಕ್ಯೂರಿಟಿ ಗಾರ್ಡ್‌ಗಳನ್ನು ಆಯೋಜಿಸಿ ಸಂಚಾರಕ್ಕೆ ತೊಂದರೆ ಆಗದ ರೀತಿಯಲ್ಲಿ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗುವುದು. ಅಲ್ಲದೆ, ವಾಹನ ಸವಾರರು ಜಾಗೃತಿ ವಹಿಸಿ ಸೂಕ್ತ ಸ್ಥಳಗಳಲ್ಲಿ ವಾಹನ ನಿಲ್ಲಿಸಿ, ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವುದು ಅವಶ್ಯವಾಗಿದೆ.

    I ಎಸ್.ಬಿ. ಮಾಳಗೊಂಡ, ಸಿಪಿಐ ಪೊಲೀಸ್ ಠಾಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts