More

    ಕೂಡ್ಲಮಠ ಶಾಲೆಗೆ ವಜ್ರಮಹೋತ್ಸವ ಸಂಭ್ರಮ

    ಶಿಗ್ಲಿ: ಇಲ್ಲಿನ ಗ್ರಾಮ ಭಾರತಿ ಶಿಕ್ಷಣ ಸಮಿತಿಯು ಜ. 27ರಂದು 60 ವರ್ಷ ಪೂರೈಸಲಿದೆ. ಅಂಗವಾಗಿ ಎಸ್.ಎಸ್. ಕೂಡ್ಲಮಠ ಶಾಲೆಯಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ವಜ್ರಮಹೋತ್ಸವ ಸಂಭ್ರಮ ಕಾರ್ಯಕ್ರಮ ಏರ್ಪಡಿಸಲಾಗಿದೆ.

    ಗ್ರಾಮವು ಶಿಕ್ಷಣ ಕಾಶಿ ಎಂದು ಹೆಸರಾಗಿದೆ. ಇದಕ್ಕೆ ಕಾರಣ 1964ರಲ್ಲಿ ಜನ್ಮ ತಾಳಿದ ಗ್ರಾಮ ಭಾರತಿ ಶಿಕ್ಷಣ ಸಮಿತಿ. ಗ್ರಾಮದ ಹಿರಿಯರಾದ ಹಾಲಪ್ಪ ಅಕ್ಕುರ, ರಾಜಪ್ಪ ಶೆಟ್ಟರ, ಎಂ.ವಿ. ಲೋಹಾರ, ಕೆ.ಎಂ. ಸುಂಕದ, ಎಸ್.ವಿ. ಬಳಿಗಾರ, ಶಿವಣ್ಣ ಭಂಡಾರಿ, ಪರಮೇಶಪ್ಪ ಬಳಿಗಾರ, ಡಾ. ಮೇಲ್ಮುರಿ ಮತ್ತಿತರ ಗೆಳೆಯರು ಸೇರಿ ಶ್ರೀ ಬಸವಕುಮಾರ ಮುಳಗುಂದಮಠ ಹಾಗೂ ಸುರೇಭಾನದ ನೀಲಕಂಠ ಗಣಾಚಾರಿ ಅವರ ಪ್ರೇರಣೆಯಿಂದ ಶಿಕ್ಷಣ ಸಮಿತಿ ಸ್ಥಾಪಿಸಿದರು.

    ನಂತರ ಟಿಡಿಬಿ ಸದಸ್ಯರಾಗಿದ್ದ ಪರಮೇಶಪ್ಪ ಮಲ್ಲೇಶಪ್ಪ ಬಳಿಗಾರ, ವೀರಣ್ಣ ಹತ್ತಿಕಾಳ, ನೀಲಪ್ಪ ಎಲಿಗಾರ, ಹಾಲಪ್ಪ ಪವಾಡದ, ಫಕೀರಶಟ್ರು ಅಣ್ಣಿಗೇರಿ, ನಿಂಗಪ್ಪ ಕಳ್ಳಳ್ಳಿ, ದ್ಯಾಮಣ್ಣ ತೋಟದ, ಎಲ್ಲಪ್ಪ ಹುನಗುಂದ, ಕೆಂಚಪ್ಪ ಕಾಳಪ್ಪನವರ ಇತರರು ಸೇರಿ ಗ್ರಾಮದ ಮುರುಗಯ್ಯ ಕೂಡ್ಲಮಠರ ಮನವೊಲಿಸಿದರು. ಕೂಡ್ಲುಮಠ ಅವರ ತಂದೆ ಸಿದ್ದಯ್ಯ ಕೂಡ್ಲಮಠ ಸ್ಮರಣಾರ್ಥ ಆರೂವರೆ ಎಕರೆ ಜಮೀನು ಹಾಗೂ 25,000 ರೂ.ಗಳನ್ನು ದಾನವಾಗಿ ಪಡೆದು ಸಮಿತಿ ಅಡಿ ಎಸ್.ಎಸ್. ಕೂಡ್ಲಮಠ ಮಾಧ್ಯಮಿಕ ಶಾಲೆ ನಿರ್ವಿುಸಿದರು. ಅಂದಿನ ಶಿಕ್ಷಣ ಮಂತ್ರಿ ಎಸ್.ಆರ್. ಕಂಠಿ ಅವರಿಂದ 1964ರ ಜೂ.1ರಂದು ಉದ್ಘಾಟಿಸಲಾಯಿತು.

    ಆಡಳಿತ ಮಂಡಳಿಯ ದೃಢ ನಿರ್ಧಾರಗಳು ಶೈಕ್ಷಣಿಕ ಗುಣಮಟ್ಟ, ಅಭಿವೃದ್ಧಿಗೆ ದಾರಿಯಾಯಿತು. ಬಳಿಕ ಸುಮಾರು 1 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ವಣಗೊಂಡ ಭವ್ಯ ಕಟ್ಟಡವನ್ನು 2007ರ ಆ.20ರಂದು ಅಂದಿನ ಉಪಮುಖ್ಯಮಂತ್ರಿಗಳಾಗಿದ್ದ ಬಿ.ಎಸ್. ಯಡಿಯೂರಪ್ಪ ಅವರಿಂದ ಉದ್ಘಾಟನೆಗೊಂಡಿತು. ಶಿಕ್ಷಣದ ಮಹತ್ವ ಅರಿತ ಜಾನಕಿಬಾಯಿ ರಜಪೂತ ಎಂಬುವವರು ಗ್ರಾಮಭಾರತಿ ಶಿಕ್ಷಣ ಸಮಿತಿಗೆ 15 ಎಕರೆ ಭೂಮಿ ಹಾಗೂ ಒಂದು ಮನೆಯನ್ನು ದಾನವಾಗಿ ಕೊಟ್ಟರು. ಅದರಿಂದಾಗಿ 1986ರಲ್ಲಿ ಶ್ರೀಮತಿ ಜಾನಕಿಬಾಯಿ ರಜಪೂತ ಕನ್ನಡ ಪ್ರಾಥಮಿಕ ಶಾಲೆ ತಲೆ ಎತ್ತಿತು. ಬಳಿಕ ದಿ. ಪುಟ್ಟಯ್ಯ ಸಂಗಯ್ಯ ಕೂಡ್ಲಮಠ ಪೂರ್ವ ಪ್ರಾಥಮಿಕ ಶಾಲೆ, 2010ರಲ್ಲಿ ಆಂಗ್ಲ ಮಾಧ್ಯಮಿಕ ಶಾಲೆ ತಲೆಎತ್ತಿದವು. ಪ್ರಸ್ತುತ ಎಸ್.ಎಸ್. ಕೂಡ್ಲಮಠ ಪ್ರೌಢ ಶಾಲೆಯಲ್ಲಿ 968 ವಿದ್ಯಾರ್ಥಿಗಳು ಓದುತ್ತಿದ್ದಾರೆ.

    ಶಾಲೆಯಲ್ಲಿ ಕಲಿತ ಅನೇಕ ವಿದ್ಯಾರ್ಥಿಗಳು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಉನ್ನತ ಸಾಧನೆ ಮಾಡಿದ್ದಾರೆ. ರಾಜ್ಯ, ಕೇಂದ್ರ ಸರ್ಕಾರದ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದು, ಶಾಲೆಯ ಗೌರವವನ್ನು ಹೆಚ್ಚಿಸಿದ್ದಾರೆ.

    ಪ್ರಸ್ತುತ ಗ್ರಾಮಭಾರತಿ ಶಿಕ್ಷಣ ಸಮಿತಿಯ ಆಡಳಿತ ಮಂಡಳಿಯು ಗ್ರಾಮಸ್ಥರ ಸಲಹೆ ಸೂಚನೆಗಳನ್ನು ಪಡೆದು ಸಂಸ್ಥೆಯಲ್ಲಿ ಕಲಿಯುವ ಮಕ್ಕಳ ಶಿಕ್ಷಣದ ಸರ್ವತೋಮುಖ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತ ಮೆಚ್ಚುಗೆ ಗಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts