More

    ಶಿಗ್ಲಿ ಪ್ರಾಥಮಿಕ ಆರೋಗ್ಯದಲ್ಲಿ ವೈದ್ಯರೇ ಇಲ್ಲ!

    ಶಿಗ್ಲಿ: ಸಮರ್ಪಕವಾಗಿ ವೈದ್ಯೋಪಚಾರ ಮಾಡುವುದರ ಮೂಲಕ 2020ರಲ್ಲಿ ಕಾಯಕಲ್ಪ ಪ್ರಶಸ್ತಿ ಪಡೆದ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇದೀಗ ವೈದ್ಯ ಕಾಯಕ ಮಾಡುವವರೇ ಇಲ್ಲ. ಹೀಗಾಗಿ ಹಲವಾರು ರೋಗಿಗಳು ನಿತ್ಯವೂ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯದೆ ಮರಳಿ ಹೋಗುತ್ತಿದ್ದಾರೆ.
    ಈ ಮೊದಲು ವೈದ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಡಾಕ್ಟರ್ ಪುಷ್ಪಲತಾ ಟಿ.ಎಸ್. ಅವರು ಏಪ್ರಿಲ್ 1ರಿಂದಲೇ ತರಬೇತಿಗಾಗಿ ಹೋಗಿದ್ದಾರೆ. ಹೀಗಾಗಿ ಅವರ ಜಾಗಕ್ಕೆ ಯಾವೊಬ್ಬ ವೈದ್ಯರೂ ಬಾರದ ಕಾರಣ ರೋಗಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಇಡೀ ದೇಶವೇ ಕರೊನಾದಿಂದ ಬಸವಳಿಯುತ್ತಿದೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಗ್ರಾಮದ ವೈದ್ಯಾಧಿಕಾರಿಯನ್ನು ತರಬೇತಿಗೆ ಕಳುಹಿಸುವ ಅಗತ್ಯವಾದರೂ ಏನಿತ್ತು? ಕಳುಹಿಸಿದರೂ ಅವರ ಜಾಗಕ್ಕೆ ಬೇರೊಬ್ಬರನ್ನು ನೇಮಿಸಬೇಕಿತ್ತು ಎನ್ನುತ್ತಾರೆ ಗ್ರಾಮಸ್ಥರು.
    ಶಿಗ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವು ಸ್ವಚ್ಛತೆ, ಸುರಕ್ಷತೆ ಹಾಗೂ ಸಮರ್ಪಕ ಚಿಕಿತ್ಸೆ ನೀಡುವುದರ ಮೂಲಕ ಸುತ್ತಲಿನ ಹತ್ತಾರು ಹಳ್ಳಿಗಳ ಜನರಿಂದ ಭೇಷ್ ಎನಿಸಿಕೊಂಡಿದೆ. ಹೀಗಾಗಿ ಶಿಗ್ಲಿ, ಉಳ್ಳಟ್ಟಿ, ಶ್ಯಾಬಳಾ, ಸುವರ್ಣಗಿರಿ ತಾಂಡಾ, ಒಡೆಯರ ಮಲ್ಲಾಪುರ, ಗೋವನಾಳ ಹಾಗೂ ಹಾವೇರಿ ಜಿಲ್ಲೆಯ ಗಡಿ ಗ್ರಾಮಗಳಾದ ಹೆಸರೂರು, ಬಸವನಕೊಪ್ಪ, ಹೂವಿನಶಿಗ್ಲಿ, ನಾಯಿ ಕೆರೂರು ಹಾಗೂ ಸುತ್ತ್ತನ ಹಲವಾರು ಗ್ರಾಮಗಳ ರೋಗಿಗಳು ಆರೋಗ್ಯ ಕೇಂದ್ರವನ್ನು ಅವಲಂಬಿಸಿದ್ದಾರೆ. ವಿಶೇಷವಾಗಿ ಮಹಿಳೆಯರು ಸುರಕ್ಷಿತ ಹಾಗೂ ಸ್ವಚ್ಛತೆಯ ದೃಷ್ಟಿಯಿಂದ ಹೆರಿಗೆ ಮಾಡಿಸಿಕೊಳ್ಳಲು ಹೆಚ್ಚಾಗಿ ಇದೇ ಕೇಂದ್ರಕ್ಕೆ ಬರುತ್ತಾರೆ. ಲಕ್ಷ್ಮೇಶ್ವರದ ಪಟ್ಟಣದಿಂದಲೂ ಗರ್ಭಿಣಿಯರು ಇಲ್ಲಿಗೆ ಬಂದು ಚಿಕಿತ್ಸೆ ಪಡೆಯುತ್ತಾರೆ. ಪ್ರತಿ ಗುರುವಾರ ಗರ್ಭಿಣಿಯರ ಹಾಗೂ ಬಾಣಂತಿಯರ ಆರೋಗ್ಯ ಪರೀಕ್ಷೆ ಪರೀಕ್ಷೆ ನಡೆಸಲಾಗುತ್ತದೆ. ಆದರೆ, ಗುರುವಾರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಂದಿದ್ದ ಗರ್ಭಿಣಿಯರು, ಬಾಣಂತಿಯರು ವೈದ್ಯರಿಲ್ಲದ ಕಾರಣ ಸುಮ್ಮನೆ ಮನೆಗೆ ಹೋದರು.

    ನನ್ನ 6 ವರ್ಷದ ಮಗಳ ಆರೋಗ್ಯದಲ್ಲಿ ತೊಂದರೆ ಕಾಣಿಸಿಕೊಂಡಿದ್ದರಿಂದ ಚಿಕಿತ್ಸೆ ಕೊಡಿಸಲು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗಿದ್ದೆ. ಆದರೆ, ವೈದ್ಯರೇ ಇಲ್ಲದ ಕಾರಣ ಚಿಕಿತ್ಸೆ ಕೊಡಿಸದೆ ವಾಪಸಾಗುವಂತಾಯಿತು. ನಮ್ಮೂರಿಗೆ ಕಾಯಂ ಆಗಿ ಒಬ್ಬ ಮಹಿಳಾ ಹಾಗೂ ಪುರುಷ ವೈದ್ಯರ ಅವಶ್ಯಕತೆ ಇದೆ.
    | ಹೀನಾ ಜಮಕನ್, ಶಿಗ್ಲಿ ಗ್ರಾಮದ ನಿವಾಸಿ

    ಎರಡು ಮೂರು ದಿನಗಳ ಹಿಂದೆ ಡಿಎಚ್​ಒ ಅವರಿಗೆ ದೂರವಾಣಿ ಕರೆ ಮಾಡಿ ಶಿಗ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈದ್ಯರನ್ನು ನಿಯೋಜಿಸುವಂತೆ ಹೇಳಿದ್ದೆ. ಆದರೆ, ಇದುವರೆಗೆ ವೈದ್ಯರನ್ನು ನೇಮಿಸದಿರುವುದು ಗೊತ್ತಾಗಿದೆ. ಮತ್ತೊಮ್ಮೆ ಕರೆಮಾಡಿ ಸಮಸ್ಯೆ ಬಗೆಹರಿಸುವಂತೆ ಸೂಚಿಸುತ್ತೇನೆ.
    | ರಾಮಣ್ಣ ಲಮಾಣಿ, ಶಾಸಕ

    ಶಿಗ್ಲಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಡಾ. ಶ್ರೀಕಾಂತ ಕಾಟೆವಾಲೆ ಅವರನ್ನು ನೇಮಿಸಲಾಗಿದೆ. ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸುತ್ತೇನೆ.
    | ಡಾ. ಸತೀಶ ಬಸರಿಗಿಡದ, ಡಿ.ಎಚ್. ಒ ಗದಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts