More

    ಸಂಬಳವಿಲ್ಲದೆ ಶಿಗ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಪರದಾಟ

    ಚಂದ್ರಶೇಖರ ಗುರುಬಸಣ್ಣವರ ಶಿಗ್ಲಿ

    ಕರೊನಾ ಸಂಕಷ್ಟದ ಸಮಯದಲ್ಲಿ ಮುಂಚೂಣಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇಲ್ಲಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಕಳೆದ ಮೂರು ತಿಂಗಳಿನಿಂದ ಸಂಬಳ ಇಲ್ಲದೆ ಪರದಾಡುತ್ತಿದ್ದಾರೆ. ಸಕಾಲಕ್ಕೆ ಸಂಬಳ ಲಭಿಸದ ಕಾರಣ ಮನೆ ಬಾಡಿಗೆ, ಬ್ಯಾಂಕ್ ಸಾಲಗಳ ಕಂತು ಭರಿಸಲು ಇವರು ಕಷ್ಟಪಡುವಂತಾಗಿದೆ.

    ಕರೊನಾ ಸೋಂಕು ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸಿಬ್ಬಂದಿ ಯಾವುದೇ ಸರ್ಕಾರಿ ರಜೆಗಳನ್ನೂ ತೆಗೆದುಕೊಳ್ಳದೆ ಕಾರ್ಯನಿರ್ವಹಿಸುತ್ತಿದ್ದಾರೆ. ಇಷ್ಟೆಲ್ಲ ಮಾಡಿದರೂ, ಸರಿಯಾಗಿ ಸಂಬಳ ಸಿಗದಿರುವುದಕ್ಕೆ ಇಲ್ಲಿನ ಸಿಬ್ಬಂದಿ ಬೇಸರಗೊಂಡಿದ್ದಾರೆ.

    ಸೋಂಕಿತರ ಸಂರ್ಪತರನ್ನು ಪತ್ತೆ ಮಾಡುವುದು, ಮನೆಯಲ್ಲಿ ಚಿಕಿತ್ಸೆ ಪಡೆಯುವ ಸೋಂಕಿತರಿಗೆ ಸಕಾಲಕ್ಕೆ ಮಾತ್ರೆ ಒದಗಿಸುವುದು, ಸೋಂಕಿನ ಬಗ್ಗೆ ಜಾಗೃತಿ ಮೂಡಿಸುವ ಜತೆಗೆ ಗರ್ಭಿಣಿ, ಬಾಣಂತಿಯರಿಗೆ, ಮಕ್ಕಳಿಗೆ ಸಕಾಲದಲ್ಲಿ ಚುಚ್ಚುಮದ್ದು ಒದಗಿಸಿ ಆರೋಗ್ಯ ನಿರ್ವಹಣೆ ಮಾಡುವುದು, ಹದಿಹರೆಯದವರಿಗೆ ಆರೋಗ್ಯದ ಜಾಗೃತಿ ಸೇರಿ ಹಲವಾರು ಕಾರ್ಯಗಳಲ್ಲಿ ಇವರು ನಿರತರಾಗಿದ್ದಾರೆ. ಇಷ್ಟೆಲ್ಲ ಕಾರ್ಯಗಳನ್ನು ನಿರ್ವಹಿಸುವ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಹಾಗೂ ಕಾರ್ಯಕರ್ತರನ್ನು ಕರೊನಾ ಸೇನಾನಿಗಳೆಂದು ಹೇಳುವ ಸರ್ಕಾರ ಅವರಿಗೆ ಸಕಾಲಕ್ಕೆ ಸಂಬಳ ಒದಗಿಸುತ್ತಿಲ್ಲ.

    ಕೆಲಸದ ಒತ್ತಡ ಹೆಚ್ಚು: ನಾಲ್ಕು ತಿಂಗಳ ಹಿಂದೆ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೈದ್ಯಾಧಿಕಾರಿ ಪುಷ್ಪಲತಾ ಟಿ.ಎಸ್. ಅವರು ಬೇರೆಡೆ ವರ್ಗಾವಣೆಯಾದರು. ಈಗ ಡಾ. ಪಿ.ಪಿ. ಶಿರಹಟ್ಟಿ ಅವರು ವೈದ್ಯಾಧಿಕಾರಿಯಾಗಿದ್ದಾರೆ. ಆದರೆ, ಅವರಿಗೆ ಸೂರಣಗಿ ಕೇಂದ್ರದ ಜವಾಬ್ದಾರಿಯೂ ಇರುವುದರಿಂದ ವಾರಕ್ಕೆ 3 ದಿನ ಅಲ್ಲಿ ಕೆಲಸ ನಿರ್ವಹಿಸುತ್ತಾರೆ. ಕೇಂದ್ರದಲ್ಲಿ ಒಬ್ಬ ವೈದ್ಯಾಧಿಕಾರಿ, ಕಿರಿಯ ಫಾರ್ಮಸಿಸ್ಟ್ 1, ಹಿರಿಯ ಪುರುಷ ಆರೋಗ್ಯ ಸಹಾಯಕ 3, ಡಿ-ಗ್ರೂಪ್ ನೌಕರ 2, ಸ್ಟಾಫ್ ನರ್ಸ್ 1, ಹಿರಿಯ ಆರೋಗ್ಯ ಸಹಾಯಕ 1, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ 1, ಹಿರಿಯ ಮಹಿಳಾ ಆರೋಗ್ಯ ಸಹಾಯಕಿ 1, ಕಿರಿಯ ಪ್ರಯೋಗಶಾಲಾ ತಂತ್ರಜ್ಞ 1, ದ್ವಿತೀಯ ದರ್ಜೆ ಸಹಾಯಕ 1, ಹಿರಿಯ ಪುರುಷ ಆರೋಗ್ಯ ಸಹಾಯಕ 1 ಹಾಗೂ ಏಳು ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಹುದ್ದೆ ಸೇರಿ ಒಟ್ಟು 21 ಹುದ್ದೆಗಳಿವೆ. ಗ್ರಾಮಸ್ಥರು ಸೇರಿದಂತೆ ಪಕ್ಕದ ಹಾವೇರಿ ಜಿಲ್ಲೆ ಗಡಿ ಗ್ರಾಮಗಳಾದ ಹೆಸರೂರು, ನಾಯಿಕೆರೂರು, ಬಸವನಕೊಪ್ಪ, ಹೂವಿನಶಿಗ್ಲಿ, ಬಡ್ನಿ ಗ್ರಾಮಸ್ಥರು ಇದೇ ಆಸ್ಪತ್ರೆಯನ್ನು ಅವಲಂಬಿಸಿದ್ದಾರೆ.

    ಶಿಗ್ಲಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶೀಘ್ರ ಕಾಯಂ ವೈದ್ಯರನ್ನು ನೇಮಿಸಲಾಗುವುದು. ತಾಂತ್ರಿಕ ತೊಂದರೆಗಳಿಂದ ವೈದ್ಯಕೀಯ ಸಿಬ್ಬಂದಿಯ ವೇತನ ಪಾವತಿಗೆ ವಿಳಂಬವಾಗಿದೆ. ವಾರದೊಳಗೆ ಸಮಸ್ಯೆ ಬಗೆಹರಿಸಿ ವೇತನ ಪಾವತಿಸಲಾಗುವುದು.

    | ಡಾ. ಸತೀಶ ಬಸರೀಗಿಡದ, ಡಿಎಚ್​ಒ, ಗದಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts