More

  ಭಕ್ತರ ಇಷ್ಟಾರ್ಥ ಸಿದ್ಧಿಸುವ ಶ್ರೀ ಅಲ್ಲಿಪುರ ಮಹಾದೇವ ತಾತ

  ಧಾರವಾಡ: ತಾಯಂದಿರು ತಮ್ಮ ಹೆಣ್ಣು ಮಕ್ಕಳನ್ನು ಆಸ್ತಿವಂತರು, ನೌಕರಿದಾರರಿಗೇ ಕೊಡಬೇಕು ಎಂಬ ಮನಸ್ಥಿತಿಯಿಂದ ಹೊರ ಬಂದು ಸಕಲ ಗುಣಸಂಪನ್ನ ಮತ್ತು ದುಡಿದು ಉಣ್ಣುವ ಗುಣವುಳ್ಳ ವರನಿಗೆ ಕೊಟ್ಟು ಮದುವೆ ಮಾಡಲು ಮುಂದಾಗಬೇಕು ಎಂದು ಹುಬ್ಬಳ್ಳಿ ತಾಲೂಕಿನ ರಾಯನಾಳ ರೇವಣಸಿದ್ಧೇಶ್ವರ ಮಠದ ಶ್ರೀ ಅಭಿನವ ರೇವಣಸಿದ್ಧ ಸ್ವಾಮೀಜಿ ಹೇಳಿದರು.
  ಇಲ್ಲಿನ ರಾಜೀವ ಗಾಂಧಿನಗರದಲ್ಲಿರುವ ಶ್ರೀ ಅಲ್ಲಿಪುರ ಮಹಾದೇವ ತಾತನವರ ಮಠದಲ್ಲಿ ಸದ್ಗುರು ಮಹಾದೇವ ತಾತನವರ 36ನೇ ವರ್ಷದ ಪುಣ್ಯಾರಾಧನೆ ನಿಮಿತ್ತ ಭಾನುವಾರ ಹಮ್ಮಿಕೊಂಡಿದ್ದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.
  ಶ್ರೀ ಅಲ್ಲಿಪುರ ಮಹಾದೇವ ತಾತನವರು ಬೇಡಿ ಬಂದ ಭಕ್ತರಿಗೆ ಒಳಿತು ಮಾಡುತ್ತಿದ್ದರು. ಅಲ್ಲದೆ, ಭಕ್ತರಿಗೆ ಎದುರಾಗಲಿದ್ದ ಅನೇಕ ಸಮಸ್ಯೆಗಳನ್ನು ತಮ್ಮ ದಿವ್ಯ ಶಕ್ತಿಯಿಂದ ಅರಿತು, ಆ ಸಂಕಟದಿಂದ ಅವರನ್ನು ಪಾರು ಮಾಡಿದ ಅನೇಕ ಉದಾಹರಣೆಗಳಿವೆ. ಅಂಥ ತಾತನವರ ಶ್ರೀಮಠದಲ್ಲಿ ವಿವಾಹ ಆಗುತ್ತಿರುವ ನವಜೋಡಿಗಳು ನಿಜಕ್ಕೂ ಪುಣ್ಯವಂತರು. ನೀವೆಲ್ಲ ಆದರ್ಶ ಜೀವನ ನಡೆಸಬೇಕು. ತಾತನವರ ಮಠದ ಏಳಿಗೆಗೆ ಸಹಾಯ, ಸಹಕಾರ ನೀಡಬೇಕು ಎಂದರು.
  ಸಾಹಿತಿ ಡಾ. ಸಂಗಮನಾಥ ಲೋಕಾಪುರ ಮಾತನಾಡಿ, ಮಹಾದೇವ ತಾತನವರು ಬಾಲಕನಿದ್ದಾಗಲೇ ಧರ್ಮ ರಕ್ಷಣೆಗೆ ಪಣ ತೊಟ್ಟವರು. ಅಖಂಡ ತಪಸ್ಸು ಮಾಡಿ ಶಿವನಿಂದ ವರ ಪಡೆದು, ತಮ್ಮ ಎಲ್ಲ ಶಕ್ತಿಯನ್ನು ಭಕ್ತೋದ್ಧಾರಕ್ಕೆ ಧಾರೆ ಎರೆದ ಮಹಾಶರಣರಾಗಿದ್ದರು ಎಂದರು.
  ಅಧ್ಯಕ್ಷತೆ ವಹಿಸಿದ್ದ ಶಿವಾನಂದ ಹರಕುಣಿ ಮಾತನಾಡಿ, ತಾತನವರ ಶಕ್ತಿ ಅಪಾರವಿದೆ. ನಮ್ಮ ಮನೆತನದ ಹಿರಿಯರು ತಾತನ ಪವಾಡಗಳನ್ನು ಕಣ್ಣಾರೆ ಕಂಡಿದ್ದಾರೆ. ಭಕ್ತರ ಅಜ್ಞಾನ ಕಳೆದು ಜ್ಞಾನದ ಬೆಳಕು ನೀಡುವ ಯೋಗಿ ಮಹಾದೇವ ತಾತ ಎಂದರು.
  ಸಾಮೂಹಿಕ ವಿವಾಹದಲ್ಲಿ 25 ಜೋಡಿ ದಂಪತಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಶ್ರೀಮಠದ ಸದ್ಭಕ್ತ ಮಂಡಳಿ ಸದಸ್ಯರಾದ ಸಿದ್ಧಲಿಂಗಪ್ಪ ಹೊಸಕೇರಿ, ಸಂತೋಷ ಆನೆಗುಂದಿ, ಶಂಕರ ಕುಂಬಿ, ಸಂತೋಷ ಇಂಗಳಹಳ್ಳಿ, ಚಂದ್ರಶೇಖರ ಬೆಳಗಾವಿ, ಮಂಜುನಾಥ ಬೆಳಗಾವಿ, ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts