More

    ಕರೊನಾ ಕೂಪವಾಗಿದ್ದ ಬೃಹತ್ ಕೊಳೆಗೇರಿಗೆ ಯಶಸ್ಸು ತಂದ ನಾಲ್ಕು ‘ಟಿ’

    ಮುಂಬೈ: ಸ್ಲಂ ಡಾಗ್‌ ಮಿಲಿಯನೇರ್‌’ ಹಾಲಿವುಡ್‌ ಚಿತ್ರ ನೋಡಿದವರಿಗೆ ಮುಂಬೈನ ಧಾರಾವಿ ಪರಿಚಯವಿದ್ದೇ ಇದೆ. ಈ ಕೊಳೆಗೇರಿಯ ಭಯಾನಕ ಚಿತ್ರಣವನ್ನು ಈ ಚಿತ್ರ ಬಿಂಬಿಸಿದೆ.
    ಏಷ್ಯಾದ ಅತಿ ದೊಡ್ಡ ಕೊಳೆಗೇರಿ ಎಂದೇ ಹೆಸರಾಗಿರುವ ಧಾರಾವಿಯ ವ್ಯಾಪ್ತಿ ಇರುವುದು 2.1 ಚದರ ಕಿಲೋಮೀಟರ್‌. ಇಲ್ಲಿ ವಾಸವಾಗಿರುವವರ ಸಂಖ್ಯೆ ಸರಿಸುಮಾರು ಲಕ್ಷ.

    ಮೂಲ ಸೌಕರ್ಯಗಳಿಂದ ಸಂಪೂರ್ಣ ವಂಚಿತವಾಗಿರುವ ಈ ಕೊಳೆಗೇರಿಯಲ್ಲಿ ಕರೊನಾ ಮಾತ್ರವಲ್ಲ, ಯಾವುದೇ ಸೋಂಕು ಕೂಡ ಅತಿ ವೇಗವಾಗಿ ಹರಡುವಂಥ ಪರಿಸರವಿದೆ. ಇನ್ನು ಕರೊನಾ ಕೇಳಬೇಕೆ? ಇಡೀ ಮಹಾರಾಷ್ಟ್ರ ಅದರಲ್ಲಿಯೂ ಮುಂಬೈ ನಗರ ಕರೊನಾದಿಂದ ತತ್ತಿರಿಸುತ್ತಿರುವ ಈ ಸಮಯದಲ್ಲಿ ಈ ಕೊಳೆಗೇರಿಯ ಪರಿಸ್ಥಿತಿ ಹೇಗಾಗಿರಬೇಡ?
    ಏಪ್ರಿಲ್‌ನಲ್ಲಿ ಕರೊನಾ ಸೋಂಕು 491 ಮಂದಿಯ ದೇಹವನ್ನು ಇಲ್ಲಿ ಪ್ರವೇಶಿಸಿತು. ಇದು ಮೇ ತಿಂಗಳಲ್ಲಿ 1216 ಆಯಿತು. 80 ಮಂದಿಯನ್ನು ಸೋಂಕು ಬಲಿಪಡೆದಿತು.

    ಮುಂಬೈನಲ್ಲಿ ಹರಡುತ್ತಿರುವ ಕರೊನಾ ವೇಗವನ್ನು ನೋಡಿದರೆ ಈ ಕೊಳೆಗೇರಿಯ ಜನರ ಸ್ಥಿತಿ ಮುಗಿಯಿತು ಎಂದೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಅಚ್ಚರಿಯ ಬೆಳವಣಿಗೆಯಲ್ಲಿ, ಧಾರಾವಿಯಲ್ಲಿ ಕರೊನಾ ನಿಯಂತ್ರಣಕ್ಕೆ ಬಂದಿದೆ.

    ಜೂನ್‌ನಲ್ಲಿ ಇದುವರೆಗೆ 274 ಪ್ರಕರಣಗಳು ದಾಖಲಾಗಿ 6 ಮಂದಿ ಮೃತಪಟ್ಟರು. ಈ ಸಂಖ್ಯೆ ಉಳಿದೆಡೆ ಹೋಲಿಸಿದರೆ ಅಷ್ಟೇನೂ ಕಮ್ಮಿಯಲ್ಲ ಎಂದು ಹೇಳಲಾಗುತ್ತಿದ್ದರೂ, ಮುಂಬೈ ನಗರದ ಸೋಂಕಿನ ಭರಾಟೆ ನೋಡಿದರೆ, ಧಾರಾವಿಯ ಇಕ್ಕಟ್ಟಿನ ಸ್ಥಳದಲ್ಲಿ ಇದು ಅತ್ಯಂತ ಕಡಿಮೆ ಸಂಖ್ಯೆ ಎಂದೇ ಹೇಳಬೇಕು ಎನ್ನುತ್ತಾರೆ ತಜ್ಞರು. ಸೋಂಕು ದುಪ್ಪಟ್ಟಾಗುವ ಎಲ್ಲಾ ಸಾಧ್ಯತೆಗಳಿಗೆ ಸೆಡ್ಡು ಹೊಡೆದ ಧಾರಾವಿಯಲ್ಲಿ ದಿನಗಳೆದಂತೆ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಲೇ ಸಾಗಿದೆ.

    ಇದನ್ನೂ ಓದಿ: ಆನ್‌ಲೈನ್‌ ಕ್ಲಾಸ್‌ಗೆ ಸೆಡ್ಡು ಹೊಡೆದ ಗ್ರಾಮ: ದೇಶಾದ್ಯಂತ ಶ್ಲಾಘನೆ

    ಅಷ್ಟಕ್ಕೂ ಇಂಥದ್ದೊಂದು ಅಚ್ಚರಿಯ ಯಶಸ್ಸಿಗೆ ಕಾರಣವಾದದ್ದು ನಾಲ್ಕು ‘ಟಿ’ ಗಳು. ಟ್ರೇಸಿಂಗ್‌, ಟ್ರ್ಯಾಕಿಂಗ್‌, ಟೆಸ್ಟಿಂಗ್‌ ಮತ್ತು ಟ್ರೀಟಿಂಗ್‌ (ಕರೊನಾ ಸೋಂಕಿತರನ್ನು ಕಂಡುಹಿಡಿಯುವುದು, ಪತ್ತೆಹಚ್ಚುವುದು, ಪರೀಕ್ಷಿಸುವುದು ಮತ್ತು ಚಿಕಿತ್ಸೆ ಕೊಡುವುದು).

    ಹೌದು. ಈ ಕೊಳೆಗೇರಿಯ ಭಯಾನಕತೆಯನ್ನು ಗಮನಿಸಿದ ವೈದ್ಯಕೀಯ ಸಿಬ್ಬಂದಿ ಮೊದಲು ಮನೆ ಮನೆಗೆ ಹೋಗಿ ಜನರನ್ನು ಪರೀಕ್ಷೆ ಮಾಡಿದ್ದಾರೆ. ಸಂಚಾರಿ ವ್ಯಾನ್‌ಗಳ ಮೂಲಕ ಎಲ್ಲರನ್ನೂ ಪರೀಕ್ಷಿಸುವ ಕಾರ್ಯ ನಡೆದಿದೆ. ಬಿಎಂಸಿ ಆರೋಗ್ಯ ಸೇವಾ ಕಾರ್ಯಕರ್ತರು 4.76 ಲಕ್ಷ ಮಂದಿಯನ್ನು ಇಲ್ಲಿಯವರೆಗೆ ಸಂಪರ್ಕಿಸಿದ್ದಾರೆ. ಮಾತ್ರವಲ್ಲದೇ ಅಲ್ಲಲ್ಲಿ ಫಿವರ್‌ ಕ್ಲಿನಿಕ್‌ಗಳನ್ನು ಸ್ಥಾಪಿಸಲಾಗಿದೆ. 3.6 ಲಕ್ಷ ಮಂದಿಯನ್ನು ಸ್ಕ್ರೀನ್‌ ಮಾಡಲಾಗಿದೆ. ಡೇಂಜರ್‌ ಸ್ಥಿತಿಯಲ್ಲಿ ಇರುವ 8,246 ಹಿರಿಯ ನಾಗರಿಕರನ್ನು ಗುರುತಿಸಲಾಗಿದ್ದು, ಅವರನ್ನು ಉಳಿದವರಿಂದ ಪ್ರತ್ಯೇಕವಾಗಿ ಇರಿಸಲಾಗಿದೆ.

    ಸುಮಾರು ಆರು ಲಕ್ಷ ಮಂದಿಯನ್ನು ಪರಿಶೀಲನೆಗೆ ಒಳಪಡಿಸಲಾಗಿದೆ. ಸುಸಜ್ಜಿತವಾದ ಕರೊನಾ ಕೇರ್‌ ಕೇಂದ್ರಗಳನ್ನು ಹಾಗೂ ಕ್ವಾರಂಟೈನ್‌ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗಿದೆ. 2450 ಮಂದಿ ಆರೋಗ್ಯ ಕಾರ್ಯಕರ್ತರನ್ನು ಧಾರಾವಿ ಪ್ರದೇಶವೊಂದಕ್ಕೇ ನಿಯೋಜಿಸಲಾಗಿದೆ.

    ಧಾರಾವಿಯಲ್ಲಿ ವಾಸಿಸುತ್ತಿರುವ ಹೆಚ್ಚಿನವರು ವಲಸೆ ಕಾರ್ಮಿಕರು ಹಾಗೂ ದಿನಗೂಲಿಯವರು. ಲಾಕ್‌ಡೌನ್‌ ಸಂದರ್ಭದಿಂದ ಕೆಲಸ ಕಳೆದುಕೊಂಡಿರುವ ಎಲ್ಲರಿಗೂ ಉಚಿತ ಊಟ ನೀಡಲಾಗುತ್ತಿದೆ. ಸುಮಾರು 1 ಲಕ್ಷ ಮಂದಿ ವಲಸೆ ಕಾರ್ಮಿಕರು ಧಾರಾವಿ ತೊರೆದು ಹೋಗಿದ್ದಾರೆ. (ಏಜೆನ್ಸೀಸ್‌)

    ಟಿಕ್‌ಟಾಕ್‌ ಬ್ಯಾನ್‌ ಬೆನ್ನಲ್ಲೇ ಚಿಗುರಿತು ‘ಚಿಂಗಾರಿ’: ಲಕ್ಷ ಲಕ್ಷ ಡೌನ್‌ಲೋಡ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts