More

    ಧನ್ವಂತರಿ: ಆಹಾರ, ಆರೋಗ್ಯ, ಜೀವನ ಪದ್ಧತಿಗಳಲ್ಲಿದೆ ವಿಶೇಷತೆ

    ಧನ್ವಂತರಿ: ಆಹಾರ, ಆರೋಗ್ಯ, ಜೀವನ ಪದ್ಧತಿಗಳಲ್ಲಿದೆ ವಿಶೇಷತೆವಿಶ್ವದಲ್ಲೇ ಅತಿಹೆಚ್ಚಿನ ಜನಸಂಖ್ಯೆಯ ವಿಚಾರದಲ್ಲಿ ಎರಡನೆಯ ಸ್ಥಾನದಲ್ಲಿರುವ ದೇಶ ನಮ್ಮದು. ಜಗತ್ತಿನೆಲ್ಲೆಡೆ ಕ್ಷಿಪ್ರವಾಗಿ ವ್ಯಾಪಿಸಿದ ಈಗಿನ ಸಾಂಕ್ರಾಮಿಕ ಭಾರತ ಹಾಗೂ ಚೀನಾದಲ್ಲಿ ವಿದೇಶಗಳೊಂದಿಗೆ ತುಲನೆ ಮಾಡಿದರೆ ಅತಿಹೆಚ್ಚಿನ ಪ್ರಮಾಣದಲ್ಲಿ ರೋಗಿಗಳು ಇರಬೇಕಾಗಿತ್ತು, ವೈದ್ಯಕೀಯ ಸೌಲಭ್ಯಗಳ ದೃಷ್ಟಿಯಿಂದ ಸಾವಿನ ಸಂಖ್ಯೆಯೂ ಹೆಚ್ಚು ಇರಬೇಕಾಗಿತ್ತು. ಆದರೆ ಹಾಗೆ ಆಗಲಿಲ್ಲ್ಲ ವಿದೇಶಗಳಲ್ಲಿ ಇಲ್ಲದ, ನಮ್ಮಲ್ಲಿ ಮಾತ್ರ ಇರುವ ವಿಶೇಷತೆಗಳು ಬದಲಾವಣೆ ತಂದವು ಎಂಬುದು ಭಾರತೀಯರೆಲ್ಲರೂ ಹೆಮ್ಮೆ ಪಟ್ಟುಕೊಳ್ಳಬೇಕಾದ ವಿಷಯ. ಅಂತಹುದು ನಮ್ಮಲ್ಲೇನಿತ್ತು ಎಂದರೆ ಉತ್ತರವೂ ಸರಳ ಹಾಗೂ ಎಲ್ಲರ ಕಣ್ಣೆದುರೇ ಇರುವ ವಾಸ್ತವ! ಅವು ಭಾರತೀಯ ಆಹಾರ ಪದ್ಧತಿ, ಭಾರತೀಯ ಆರೋಗ್ಯ ಪದ್ಧತಿ ಹಾಗೂ ಭಾರತೀಯ ಜೀವನ ಪದ್ಧತಿ.

    ಜಗತ್ತಿನ ಅಗ್ರಸಾಲಿನ ದೇಶಗಳಲ್ಲಿ ಸಾಮಾನ್ಯ ವೈರಾಣು ಜ್ವರದಿಂದ ಪ್ರತಿವರ್ಷವೂ ಸಾವಿರಾರು ಜನರು ಅಸುನೀಗುತ್ತಾರೆ! ಅದೇ ಭಾರತದಲ್ಲಿ ಈ ಸಾಮಾನ್ಯ ಶೀತ ಜ್ವರದಿಂದ ಸಾಯುವವರನ್ನು ಕಂಡಿದ್ದೀರಾ? ಪ್ರಾಣಹಾನಿ ಬಿಡಿ, ಕೆಲಸಕ್ಕೆ ಗೈರುಹಾಜರೂ ಆಗದೆ ದುಡಿಮೆಯಲ್ಲಿ ತೊಡಗಿಕೊಳ್ಳುವ ಸ್ವಭಾವ ನಮ್ಮದು. ಸಾಂಕ್ರಾಮಿಕವಾಗಿ ಬಂದ ಯಾವುದೇ ವೈರಾಣುಗಳನ್ನು ಎದುರಿಸುವಲ್ಲಿ ಭಾರತೀಯರು ಮೊದಲಿನಿಂದಲೂ ಗಟ್ಟಿ. ಇದಕ್ಕೆ ಮೊದಲ ಕಾರಣ ನಮ್ಮ ಆಹಾರ ಪದ್ಧತಿ. ಭಾರತೀಯರ ಅಡುಗೆಕೋಣೆಯ ಒಳಹೊಕ್ಕರೆ ಅದು ಆಯುರ್ವೆದೀಯ ಔಷಧಗಳ ಆಗರ. ಅಲ್ಲಿ ಸಾಂಬಾರ ಪದಾರ್ಥಗಳ ಪಾರುಪತ್ಯ! ವಿಶ್ವದಲ್ಲೇ ಅತಿಹೆಚ್ಚಿನ ಪ್ರಮಾಣದಲ್ಲಿ ಸಾಂಬಾರ ಪದಾರ್ಥಗಳನ್ನು ಅಡುಗೆಯಲ್ಲಿ ಬಳಸುವವರು ನಾವೇ. ಸಾಂಬಾರ ಪದಾರ್ಥಗಳ ರಾಜಧಾನಿ ಭಾರತವೆಂಬುದು ಹಿಂದಿನ ರಾಜರುಗಳ ಕಾಲದಲ್ಲಿ ಮಾತ್ರವಲ್ಲ ಇಂದಿಗೂ ನಿಜ. ಕಾಳುಮೆಣಸು, ಅರಿಶಿನದಿಂದ ಹಿಡಿದು ಲವಂಗ, ದಾಲ್ಚಿನ್ನಿಯವರೆಗೆ ಎಲ್ಲವುದಕ್ಕೂ ವಿಭಿನ್ನ ವೈರಾಣುನಾಶಕ ಗುಣವಿದೆ ಎಂಬುದನ್ನು ಸಂಶೋಧನೆಗಳು ಹೇಳುತ್ತವೆ. ಕರೋನಾದ ವಿಚಾರದಲ್ಲಿ ಸಂಶೋಧನೆಗಳು ಇನ್ನಷ್ಟೇ ನಡೆಯಬೇಕಿದೆ. ಇವು ಕೇವಲ ವೈರಾಣು ನಾಶಕವಲ್ಲ, ರೋಗನಿರೋಧಕ ಶಕ್ತಿ ಹೆಚ್ಚಿಸುವ, ಜೀರ್ಣಕ್ರಿಯೆ ಸುಗಮಗೊಳಿಸುವ, ಶ್ವಾಸಕೋಶ ಬಲವರ್ಧನೆ ಮಾಡುವ, ಕೆಮ್ಮು, ಶೀತ, ಜ್ವರ ಪರಿಹರಿಸುವ ಗುಣಗಳನ್ನು ಹೊಂದಿರುವುದು ಇಂದಿನ ಸಂದರ್ಭದಲ್ಲಿ ನಮಗೊದಗಿದ ವರದಾನವಲ್ಲದೆ ಮತ್ತಿನ್ನೇನು? ಸಾಂಬಾರ ಪದಾರ್ಥಗಳಿಗೆ ಸ್ವಲ್ಪ ಒತ್ತುಕೊಟ್ಟು ಬಳಸಿದ್ದು ನಮ್ಮೆಲ್ಲರನ್ನು ಸಾಂಕ್ರಾಮಿಕ ತಡೆಗಟ್ಟುವಲ್ಲಿ, ಒಂದೊಮ್ಮೆ ಬಂದಾಗ ಗೆದ್ದು ಬರುವಲ್ಲಿ ನಮ್ಮೊಂದಿಗೆ ಹೆಜ್ಜೆಹಾಕಿದ್ದು ಆಯುರ್ವೆದ ಆಧಾರಿತವಾದ ನಮ್ಮ ಆಹಾರ ಪದ್ಧತಿಯ ಮಹಿಮೆ.

    ದೇಶದಾದ್ಯಂತ ತಳಮಟ್ಟದಲ್ಲಿ ಸಹಸ್ರಾರು ವರ್ಷಗಳಿಂದ ಬೇರೂರಿರುವ ಆಯುರ್ವೆದವನ್ನು ಅಲುಗಾಡಿಸುವುದು ಎಂದೆಂದಿಗೂ ಸಾಧ್ಯವಾಗದ ಮಾತು. ಆಯುರ್ವೆದದ ಪ್ರಥಮ ಚಿಕಿತ್ಸೆ ಹಾಗೂ ಶೀಘ್ರ ಪರಿಣಾಮಕಾರಿ ಲಕ್ಷಾಂತರ ಮನೆಮದ್ದುಗಳು ದೇಶಪೂರ್ತಿ ವ್ಯಾಪಿಸಿವೆ. ಇದಿಲ್ಲವಾಗಿದ್ದಲ್ಲಿ ಚಿಕಿತ್ಸಾಲಯಗಳಲ್ಲಿ ರೋಗಿಗಳ ಸಂಖ್ಯೆ ಇನ್ನೂ ಹತ್ತುಪಟ್ಟು ಹೆಚ್ಚಿರುತ್ತಿತ್ತು. ತಲೆನೋವು, ಹೊಟ್ಟೆನೋವುಗಳಂತಹ ತೊಂದರೆಗಳು ಬಂದಾಕ್ಷಣ ಯಾರೂ ಆಸ್ಪತ್ರೆಗಳಿಗೆ ಓಡಿಹೋಗುವುದಿಲ್ಲ. ಬದಲಾಗಿ ಮನೆಯಲ್ಲೇ ಪರಿಹಾರ ಕಂಡುಕೊಳ್ಳುತ್ತಾರೆ. ಈ ಸಾಂಕ್ರಾಮಿಕದ ಸಂದರ್ಭದಲ್ಲೂ ಅಷ್ಟೇ. ಕೇಂದ್ರ ಸರ್ಕಾರವೇ ಮುಂಚೂಣಿಯಲ್ಲಿ ನಿಂತು ಅರಿಶಿನ, ತುಳಸಿ, ಕಾಳುಮೆಣಸು, ಅಮೃತಬಳ್ಳಿ, ಚ್ಯವನಪ್ರಾಶ ಮೊದಲಾದವುಗಳ ಬಳಕೆಗೆ ಒತ್ತು ನೀಡಿದ್ದು ಜನರಿಗೆ ಬತ್ತಳಿಕೆ ತುಂಬಿಕೊಟ್ಟಿತು. ಒಂದಿಲ್ಲೊಂದು ಕಷಾಯವನ್ನೋ, ಅರಿಶಿನ ಹಾಲನ್ನೋ, ತುಳಸಿನೀರನ್ನೋ, ಔಷಧೀಯ ಗ್ರೀನ್ ಟೀಗಳನ್ನೋ, ರೋಗನಿರೋಧಕ ಶಕ್ತಿವರ್ಧಕಗಳನ್ನೋ ಅಥವಾ ಆಯುರ್ವೆದದ ಔಷಧಗಳನ್ನೋ ಭಾರತೀಯರೆಲ್ಲರೂ ಹಳ್ಳಿಯಿಂದ ದಿಲ್ಲಿತನಕ ಸಾರ್ವತ್ರಿಕವಾಗಿ ಅವಲಂಬಿಸಿದರು. ಇವು ಯಾವುದನ್ನೂ ಒಮ್ಮೆಯೂ ಮಾಡಲಿಲ್ಲ ಎಂದು ಹೇಳುವ ಒಬ್ಬನೇ ಒಬ್ಬ ಭಾರತೀಯನೂ ಸಿಗುವುದಿಲ್ಲ ಎಂದರೆ ಅತಿಶಯೋಕ್ತಿಯಲ್ಲ. ದೇಶೀಯ ಆರೋಗ್ಯ ಪದ್ಧತಿಯ ಅಂತಃಸತ್ವವನ್ನು ಸಮಗ್ರ ದೇಶವೇ ಅನುಭವಿಸಿದ ಕಾಲವಿದು.

    ಪ್ರಕೃತಿಯ ಜೊತೆಗೆ ಸಂಪೂರ್ಣವಾಗಿ ತೆರೆದುಕೊಂಡು ಸಹಜವಾಗಿ ಬಾಳುವುದು ಭಾರತೀಯ ಜೀವನ ಪದ್ಧತಿ. ವಿದೇಶಗಳಂತೆ ಮನೆ, ಶಾಲೆ, ವಾಹನಗಳು, ಬಸ್, ರೈಲು, ವಿಮಾನ ನಿಲ್ದಾಣಗಳು, ಅಂಗಡಿ ಮಾಲ್​ಗಳು, ಕೆಲಸದ ಕಚೇರಿಗಳೆಲ್ಲವೂ ಭಾರತದಲ್ಲಿ ಹವಾನಿಯಂತ್ರಿತವಲ್ಲ. ಹವಾನಿಯಂತ್ರಿತ ಕೊಠಡಿಗಳಿಂದ ಹಣ್ಣು ತರಕಾರಿ, ದವಸಧಾನ್ಯಗಳನ್ನು ಕೊಂಡುಕೊಳ್ಳುವುದಿಲ್ಲ. ನಿಜಾರ್ಥದಲ್ಲಿ ಮಣ್ಣಿನೊಂದಿಗೆ, ವಾತಾವರಣಕ್ಕೆ ತೆರೆದುಕೊಂಡೇ ಬೆಳೆದು ಬಾಳುವವರು ನಾವು. ಯೋಗ, ಪ್ರಾಣಾಯಾಮ, ಆಯುರ್ವೆದ ಹೇಳಿದ ದಿನಚರ್ಯು, ಋತುಚರ್ಯು, ಸ್ವಸ್ಥವೃತ್ತ ಮುಂತಾದವುಗಳನ್ನು ಗೊತ್ತಿದ್ದೋ ಗೊತ್ತಿಲ್ಲದೆಯೋ ಯಥಾಸಾಧ್ಯ ಮಾಡುವವರು. ರೋಗಕಾರಕ ಸೂಕ್ಷ್ಮಕ್ರಿಮಿಗಳನ್ನು ಎದುರಿಸುವ ಸಾಮರ್ಥ್ಯವನ್ನು ತನ್ಮೂಲಕ ಹೆಚ್ಚಿಸಿಕೊಂಡ ದೇಶ ನಮ್ಮದು. ಅವಗುಣಗಳಿದ್ದರೂ ವಿಶೇಷ ಗುಣಗಳಿವೆ ಎಂಬಂತೆ ಭಾರತವೇ ಪುಣ್ಯಭೂಮಿ, ಭಾರತೀಯರೇ ಪುಣ್ಯವಂತರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts