More

    ಚಿಕಿತ್ಸೆಯಲ್ಲಿ ಹಳೆಯ ರೋಗಿಯ ಅನುಭವದ ಮಹತ್ವ

    ಧನ್ವಂತರಿಜೀವನದಲ್ಲಿ ಬರುವ ಎಲ್ಲಾ ಸಂಕಷ್ಟಗಳಿಗೂ ಒಳ್ಳೆಯ ಪರಿಹಾರ ದೊರಕಬೇಕೆಂದು ಆಶಿಸುವುದು ಮಾನವನ ಸಹಜ ಗುಣ. ಹಾಗೆಂದು ಪ್ರತಿಬಾರಿಯೂ ಫಲಿತಾಂಶ ನಾವಂದುಕೊಂಡಂತೆ ಇರುವುದಿಲ್ಲ ಎಂಬ ವಾಸ್ತವದ ಅನುಭವ ವಿಭಿನ್ನ ಕಾಲಘಟ್ಟದಲ್ಲಿ ಪ್ರತಿಯೊಬ್ಬರಿಗೂ ಆಗಿರುತ್ತದೆ. ಕೆಲವು ಬಾರಿ ಗೊತ್ತಿದ್ದೂ ನಾವೆಸಗುವ ತಪ್ಪಿನಿಂದಾಗಿ ನಿರೀಕ್ಷಿತ ಫಲವು ದೊರೆಯದಿರಬಹುದು. ಕಾಯಿಲೆ ಬಂದಾಗ ನಡೆಯುವ ಚಿಕಿತ್ಸೆಯ ಸಂದರ್ಭದಲ್ಲೂ ಅಷ್ಟೇ. ಅಪೇಕ್ಷಿತ ಪ್ರತಿಫಲ ಸಿಗಬೇಕೆಂದಾದರೆ ವೈದ್ಯರ ಬಳಿ ಮುಚ್ಚುಮರೆ ಇಲ್ಲದೆಯೆ ಎಲ್ಲವನ್ನೂ ಇದ್ದಂತೆಯೇ ಹೇಳಬೇಕಾಗುತ್ತದೆ. ಅದಕ್ಕಾಗಿ ಹುಟ್ಟಿಕೊಂಡ ಗಾದೆ ವೈದ್ಯರ ಹತ್ತಿರ, ವಕೀಲರ ಹತ್ತಿರ ಸುಳ್ಳು ಹೇಳಬಾರದು ಎಂಬುದು ಅದೆಷ್ಟು ಅರ್ಥಗರ್ಭಿತವಾಗಿದೆ ಎಂಬುದನ್ನೊಮ್ಮೆ ಗಮನಿಸಿ. ಯಾವಾಗಲೂ ಸುಳ್ಳು ಹೇಳಬಾರದು, ಸದಾ ಸತ್ಯವನ್ನೇ ಜೀವನದ ಆಚರಣೆ ಆಗಿಟ್ಟುಕೊಂಡು ಮುನ್ನಡೆಯಬೇಕು ಎಂಬ ಆದರ್ಶ ಎಲ್ಲರಿಗೂ ತಿಳಿದಿದೆ. ಆದರೆ ನಮ್ಮೆದುರು ಬರುವ ಎಲ್ಲಾ ಸಂದರ್ಭಗಳಲ್ಲಿ ಸದಾ ಸರ್ವದಾ ಸತ್ಯದ ಪರವಾಗಿ ಇರಲು ಬಹುತೇಕ ಜನರಿಗೆ ಸಾಧ್ಯವಾಗುವುದೇ ಇಲ್ಲ. ವಾಸ್ತವ ಆಗಿದ್ದರೂ ವೈದ್ಯರಲ್ಲಿ ಎಳ್ಳಷ್ಟೂ ವಿಷಯ ತಿರುಚದೆ ಯಥಾವತ್ತಾಗಿ ಪ್ರಸ್ತಾಪಿಸಿ ಉತ್ಪ್ರೇಕ್ಷೆಯೂ ಇಲ್ಲದೆ, ಉಪೇಕ್ಷೆಯೂ ಇಲ್ಲದೆ ಹೇಳಬೇಕಾದುದು ರೋಗಿಯ ಅಥವಾ ರೋಗಿಯ ಪಾಲಕ, ಪೋಷಕರ ಕರ್ತವ್ಯವಷ್ಟೇ ಅಲ್ಲ ಅದು ಕಡ್ಡಾಯ ಎಂಬುದನ್ನು ಈ ನುಡಿಗಟ್ಟು ಒತ್ತಿಹೇಳುತ್ತದೆ.

    ರೋಗದ ಎಲ್ಲಾ ಆಯಾಮಗಳನ್ನು ವೈದ್ಯರು ಅರ್ಥೈಸಿಕೊಳ್ಳಬೇಕು ಎಂದಾದರೆ ನಾಚಿಕೆಯ ವಿಚಾರವಿರಲಿ, ಅಸಹ್ಯವೆನಿಸುವ ವಿಷಯವಾಗಲಿ, ತಲೆತಗ್ಗಿಸುವಂತಹ ಪ್ರಮೇಯವೇ ಆಗಿರಲಿ ಎಲ್ಲವನ್ನೂ ವೈದ್ಯರಲ್ಲಿ ಸ್ಪಷ್ಟವಾಗಿ ಭಿನ್ನವಿಸಿಕೊಳ್ಳಲೇಬೇಕು. ಆಗ ಎಲ್ಲಾ ದೃಷ್ಟಿಕೋನದಿಂದ ಸಮಗ್ರವಾಗಿ ರೋಗವನ್ನು ಹಾಗೂ ವ್ಯಾಧಿ ಬಂದ ವ್ಯಕ್ತಿಯನ್ನು ಪರಿಶೀಲಿಸಿ, ಅಭ್ಯಸಿಸಿ, ಸಂಶೋಧನೆ ನಡೆಸಿ, ವಿಚಾರ-ವಿಮರ್ಶೆಗೆ ಒಳಪಡಿಸಿ, ಚಿಂತನ-ಮಂಥನ ನಡೆಸಿ ಅತಿ ಸೂಕ್ತವಾದ, ಅತಿ ಉತ್ತಮವಾದ ಚಿಕಿತ್ಸೆ ನೀಡುವುದು ಸಾಧ್ಯವಾಗುತ್ತದೆ. ಅದು ಚಿಕಿತ್ಸೆಯ ಯಶಸ್ಸಿಗೆ ಕಾರಣೀಭೂತವಾಗುತ್ತದೆ. ಅದುಬಿಟ್ಟು ಏನನ್ನಾದರೂ ಮುಚ್ಚಿಟ್ಟರೆ ಅದರಿಂದ ಚಿಕಿತ್ಸೆ ಸಫಲವಾಗುವ ಸಾಧ್ಯತೆ ಕ್ಷೀಣಿಸುತ್ತದೆ. ಅಂತಿಮವಾಗಿ ರೋಗಿಯೇ ಅದರಿಂದ ಸಾಕಷ್ಟು ತೊಂದರೆಗೆ ಒಳಗಾಗಬೇಕಾಗುತ್ತದೆ. ವಕೀಲರ ಬಳಿ ವಿಷಯಗಳನ್ನು ಮುಚ್ಚಿಟ್ಟರೂ ಇಂತಹುದೇ ಪರಿಣಾಮವನ್ನು ಎದುರಿಸಬೇಕಾಗುತ್ತದೆ.

    ಚಿಕಿತ್ಸೆಯಲ್ಲಿ ಅನುಭವದ ಮಹತ್ವವನ್ನು ಸಾರುವ ಮತ್ತೊಂದು ಗಾದೆ ‘ಹೊಸ ವೈದ್ಯನಿಗಿಂತ ಹಳೆ ರೋಗಿಯೇ ಮೇಲು’. ಎಳೆಯ ವೈದ್ಯರಲ್ಲಿಗೆ ತೆರಳಿ ಚಿಕಿತ್ಸೆ ಪಡೆಯಲು ಅಂಜುವ ಅನೇಕ ಜನರಿರುತ್ತಾರೆ. ಹೊಸಬರೆಂದರೆ ಅವರಿಗೆ ಏನೇನೂ ತಿಳಿದಿಲ್ಲ ಎಂಬ ಪೂರ್ವಗ್ರಹ ಪೀಡಿತ ಮನೋಭಾವ ನೆಲೆಯೂರಿರುತ್ತದೆ. ಅನುಭವೀ ವೈದ್ಯರು, ಹಿರಿಯ ವೈದ್ಯರು ಅಥವಾ ನುರಿತ ವೈದ್ಯರೆಂಬ ಹಣೆಪಟ್ಟಿ ಬರಬೇಕಾದರೆ ಆರಂಭದ ಕೆಲವು ವರ್ಷಗಳನ್ನು ದಾಟಿಯೇ ಹೋಗಬೇಕಾದುದು ಅನಿವಾರ್ಯ ಎಂಬುದನ್ನು ಯಾರೂ ಯೋಚಿಸುವುದಿಲ್ಲ. ಅನುಭವ ಇಲ್ಲದ ವೈದ್ಯರೆಂದು ಅವರ ಬಳಿ ಯಾರೂ ಹೋಗದಿದ್ದರೆ ಆ ಹೊಸ ವೈದ್ಯರು ಅನುಭವಿಯಾಗುವುದಾದರೂ ಹೇಗೆ? ಹಾಗೆಂದು ಯಾರು ಕೂಡಾ ಪ್ರಯೋಗ ಪಶುವಾಗಲು ಇಚ್ಛಿಸುವುದಿಲ್ಲ ಎಂಬುದೂ ಅಷ್ಟೇಸತ್ಯ.

    ವೃತ್ತಿಜೀವನದ ಆರಂಭದಲ್ಲೇ ಒಂದರ ಬಳಿಕ ಮತ್ತೊಂದು ಉತ್ತಮ ಚಿಕಿತ್ಸಾ ಫಲಿತಾಂಶ ನೀಡಿ ಹೆಸರು ಗಳಿಸಿಕೊಳ್ಳಬೇಕಾದ ಗುರುತರ ಸವಾಲು ಹೊಸ ವೈದ್ಯರ ಮುಂದಿರುತ್ತದೆ. ಹಾಗಿದ್ದರೂ ವೈದ್ಯಕೀಯ ವಿದ್ಯಾಭ್ಯಾಸ ಮುಗಿಸಿ ಪದವಿ ಪಡೆದವರಿಗಿಂತ ರೋಗಿಗಿರುವ ಅನುಭವಕ್ಕೆ ಹೆಚ್ಚಿನ ಮಾನ್ಯತೆ ಯಾಕೆಂದು ಅಚ್ಚರಿಯಾಗುವುದು ಸಹಜ. ಇಲ್ಲಿರುವುದು ಪದವಿಗೂ ಅನುಭವಕ್ಕೂ ಇರುವ ಹೋಲಿಕೆಯಲ್ಲ. ಕೇವಲ ಪಠ್ಯ ಕಂಠಗತವಾದರೆ ಸಾಲದು, ಒಂದು ವಿಷಯದ ಮೇಲಿರುವ ಪಾಂಡಿತ್ಯ ಅತ್ಯಂತ ಮಹತ್ವಪೂರ್ಣ ಎಂಬುದನ್ನು ಮನನ ಮಾಡಿಕೊಳ್ಳಬೇಕು. ಕೇವಲ ಸಿದ್ಧಾಂತದ ಸಿದ್ಧಿಯಾದರೆ ಸಾಲದು, ಪ್ರಾಯೋಗಿಕ ಅನುಭವ ವೈದ್ಯನಾದವನಿಗೆ ಅನಿವಾರ್ಯ ಎಂಬ ಸ್ಪಷ್ಟ ಸಂದೇಶವೂ ಈ ಗಾದೆಯಲ್ಲಿದೆ. ರೋಗಿಗೆ ಒಂದೇ ಕಾಯಿಲೆಯ ವಿಚಾರದಲ್ಲಿ ಯಾವ ಔಷಧ ತೆಗೆದುಕೊಂಡರೆ ಯಾವ ರೀತಿಯಲ್ಲಿ ತನ್ನ ದೇಹವು ವರ್ತಿಸುತ್ತದೆ ಎಂಬುದರ ಬಗ್ಗೆ ನಿಖರವಾದ ಮಾಹಿತಿಯಿರುತ್ತದೆ. ಆ ಮಾಹಿತಿಯು ಸ್ವಾನುಭವದಿಂದ ಸಮೃದ್ಧವಾಗಿರುತ್ತದೆ. ಯಶಸ್ವೀ ಚಿಕಿತ್ಸೆಯಲ್ಲಿ ಇದಕ್ಕೆ ಇನ್ನಿಲ್ಲದ ಮಹತ್ವವಿದೆ. ವೈದ್ಯರು ಯಾಕಾಗಿ ಪ್ರತಿಯೊಂದು ರೋಗದ ವಿಚಾರದಲ್ಲೂ ನುರಿತವರಾಗಬೇಕು ಎಂಬುದರ ಕುರಿತು ಇದು ವಿಶೇಷ ಅರಿವು ಮೂಡಿಸುತ್ತದೆ ಹೊರತು ಹೊಸ ವೈದ್ಯರ ಬಳಿಗೆ ಹೋಗಬಾರದೆಂದೇನಲ್ಲ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts