More

    ಸಡಗರದಿಂದ ಸಿದ್ಧಾರೂಢರ ರಥ ಎಳೆದ ಭಕ್ತರು

    ಹುಬ್ಬಳ್ಳಿ: ಭಕ್ತರ ಆರಾಧ್ಯ ದೈವ ಶ್ರೀ ಸಿದ್ಧಾರೂಢಸ್ವಾಮಿ ಹಾಗೂ ಶ್ರೀ ಗುರುನಾಥಾರೂಢ ಸ್ವಾಮಿಯವರ ಮಹಾರಥೋತ್ಸವ ಶುಕ್ರವಾರ ಸಂಜೆ ಗೋಧೂಳಿ ಸಮಯದಲ್ಲಿ ಲಕ್ಷಾಂತರ ಭಕ್ತರ ಹಷೋದ್ಗಾರದ ಮಧ್ಯೆ ಅದ್ದೂರಿಯಾಗಿ ನೆರವೇರಿತು.

    ರಥ ಎಳೆಯುತ್ತಿದ್ದಂತೆ ಹರ ಹರ ಮಹಾದೇವ, ಓಂ ನಮಃ ಶಿವಾಯ… ಮಂತ್ರಘೋಷಗಳು ಮುಗಿಲು ಮುಟ್ಟಿದವು. ಸಿದ್ಧಾರೂಢ ಮಹಾರಜ್ ಕೀ ಜೈ… ಗುರುನಾಥಾರೂಢ ಮಹಾರಾಜ್ ಕೀ ಜೈ… ಘೋಷಣೆಗಳು ಮೊಳಗಿದವು. ಕರಡಿ ಮಜಲು, ಜಾಂಜ್ ಮೇಳ, ದಾಲಪಟಾ ಮುಂತಾದ ವಾದ್ಯಮೇಳಗಳ ನಾದ ಎಲ್ಲೆಡೆ ಹರಡಿತ್ತು.

    ಶ್ರೀಮಠದ ಮುಖ್ಯ ರಸ್ತೆಯಲ್ಲಿ ಮಹಾರಥ ಸಾಗುತ್ತಿದ್ದಂತೆ ಭಕ್ತರು ಓಂ ನಮಃ ಶಿವಾಯ ಎನ್ನುತ್ತ ಉತ್ತತ್ತಿ, ಬಾಳೆ ಹಣ್ಣು, ಲಿಂಬೆಹಣ್ಣು, ಬೆಂಡು ಬೆತ್ತಾಸು ಎಸೆದರು. ಇಷ್ಟಾರ್ಥ ಈಡೇರಿಸುವಂತೆ ಮಹಾಸ್ವಾಮಿಗೆ ಪ್ರಾರ್ಥನೆ ಸಲ್ಲಿಸಿದರು. ತೇರು ಹಾಗೂ ಆರಾಧ್ಯದೈವರಿಗೆ ನಮಿಸುತ್ತ ಅಸಂಖ್ಯ ಭಕ್ತರು ಮಹಾರಥೋತ್ಸವವನ್ನು ಕಣ್ತುಂಬಿಕೊಂಡರು.

    ಶುಕ್ರವಾರ ಊರಲ್ಲಿ ಪಲ್ಲಕ್ಕಿ ಉತ್ಸವ ಸಂಚರಿಸಿತು. ಸಂಜೆ 5 ಗಂಟೆ ಹೊತ್ತಿಗೆ ಪಲ್ಲಕ್ಕಿ ಶ್ರೀಮಠದ ಆವರಣಕ್ಕೆ ಬಂದ ನಂತರ ಉತ್ಸವ ಮೂರ್ತಿಗಳನ್ನು ಅಲಂಕೃತ ರಥದಲ್ಲಿ ಪ್ರತಿಷ್ಠಾಪಿಸಲಾಯಿತು.

    ಶ್ರೀ ಸಿದ್ಧಾರೂಢಸ್ವಾಮಿ ಮಠ ಟ್ರಸ್ಟ್ ಕಮಿಟಿ ಮುಖ್ಯ ಆಡಳಿತಾಧಿಕಾರಿ ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಉಮೇಶ ಎಂ. ಅಡಿಗ ಅವರು ಸಂಜೆ 5.20ರ ಸುಮಾರಿಗೆ ಮಹಾರಥಕ್ಕೆ ಪೂಜೆ ಸಲ್ಲಿಸಿ ಮಂಗಳಾರತಿ ಬೆಳಗಿದ ನಂತರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.

    ಟ್ರಸ್ಟ್ ಕಮಿಟಿ ಚೇರ್ಮನ್ ಡಿ.ಡಿ. ಮಾಳಗಿ, ವೈಸ್ ಚೇರ್ಮನ್ ಜಗದೀಶ ಮಗಜಿಕೊಂಡಿ, ಗೌರವ ಕಾರ್ಯದರ್ಶಿ ಸಿದ್ರಾಮಪ್ಪ ಕೋಳಕೂರ, ಧರ್ಮದರ್ಶಿಗಳಾದ ಕೆ.ಎಲ್. ಪಾಟೀಲ, ಶ್ಯಾಮಾನಂದ ಪೂಜೇರಿ, ಹನಮಂತ ಕೊಟಬಾಗಿ, ಮಹೇಶಪ್ಪ ಹನಗೋಡಿ, ಪ್ರಕಾಶ ಉಡಿಕೇರಿ, ಗಣಪತಿ ನಾಯಕ, ಧರಣೇಂದ್ರ ಜವಳಿ, ಕೊಟ್ಟೂರೇಶ್ವರ ತೆರಗುಂಟಿ, ಡಾ. ಗೋವಿಂದ ಮಣ್ಣೂರ ಇತರರು ಉಪಸ್ಥಿತರಿದ್ದರು.

    ರಾಜ್ಯದ ವಿವಿಧ ಕಡೆಗಳಿಂದ ಅನೇಕ ಸ್ವಾಮೀಜಿಗಳು, ಗಣ್ಯರು, ಅಸಂಖ್ಯ ಭಕ್ತರು ಆಗಮಿಸಿದ್ದರು. ಶ್ರೀಮಠದ ಸುತ್ತಮುತ್ತ ಎಲ್ಲೆಂದರಲ್ಲಿ ಭಕ್ತರು, ವಾಹನಗಳ ಭರಾಟೆ ಕಂಡು ಬಂತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts