More

    ದೇವದತ್ ಪಡಿಕಲ್​​ಗೆ ಸವಾಲೆಸೆದ ಯುವರಾಜ್​! ಕನ್ನಡಿಗನ ಉತ್ತರವೇನು ಗೊತ್ತೇ ?

    ಬೆಂಗಳೂರು: ಕರ್ನಾಟಕದ ಯುವ ಬ್ಯಾಟ್ಸ್​ಮನ್ ದೇವದತ್ ಪಡಿಕಲ್ ಐಪಿಎಲ್​ನಲ್ಲಿ 3 ಅರ್ಧಶತಕ ಸಿಡಿಸಿ ಕ್ರಿಕೆಟ್ ಜಗತ್ತಿನ ಗಮನ ಸೆಳೆದಿದ್ದಾರೆ. ಅದರಲ್ಲೂ ಶನಿವಾರ ರಾಜಸ್ಥಾನ ರಾಯಲ್ಸ್ ವಿರುದ್ಧ ಆರ್​ಸಿಬಿ ಗೆಲುವಿಗೆ ನೆರವಾದ ಪಡಿಕಲ್ ಆಟಕ್ಕೆ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಕೂಡ ಬೋಲ್ಡ್ ಆಗಿದ್ದಾರೆ. ತಮ್ಮಂತೆಯೇ ಎಡಗೈ ಬ್ಯಾಟ್ಸ್​ಮನ್ ಆಗಿರುವ ಪಡಿಕಲ್​ಗೆ ಯುವಿ ಸವಾಲು ಒಂದನ್ನು ಕೂಡ ಎಸೆದಿದ್ದಾರೆ. ಅದಕ್ಕೆ ಕನ್ನಡಿಗನಿಂದ ಉತ್ತರವೂ ಬಂದಿದೆ.

    ಆರ್​ಸಿಬಿ ಗೆಲುವಿನ ಬಳಿಕ ವಿರಾಟ್ ಕೊಹ್ಲಿ ಆಟಕ್ಕೆ ‘ಫಾರ್ಮ್ ತಾತ್ಕಾಲಿಕ, ಕ್ಲಾಸ್ ಶಾಶ್ವತ’ ಎಂದಿರುವ ಯುವರಾಜ್, ಕಳೆದ 8 ವರ್ಷಗಳಲ್ಲಿ ಕೊಹ್ಲಿ ಫಾರ್ಮ್​ನಲ್ಲಿ ಇಲ್ಲದ್ದನ್ನು ನೋಡೇ ಇರಲಿಲ್ಲ ಎಂದು ಟ್ವೀಟ್ ಮಾಡಿದ್ದರು. ಅದರ ಜತೆಗೆ ಪಡಿಕಲ್ ಆಟವನ್ನು ಮೆಚ್ಚುತ್ತ, ಈ ಹುಡುಗನ ಆಟವೂ ಅತ್ಯುತ್ತಮವಾಗಿದೆ. ನಾವಿಬ್ಬರು ಜತೆಯಾಗಿ ಬ್ಯಾಟಿಂಗ್ ಮಾಡಬೇಕಿದೆ ಮತ್ತು ಯಾರು ಅತಿ ಹೆಚ್ಚು ದೂರ ಚೆಂಡನ್ನು ಬಾರಿಸುತ್ತಾರೆ ಎಂದು ನೋಡಬೇಕಿದೆ ಎಂದಿದ್ದರು.

    ಯುವರಾಜ್ ಈ ರೀತಿ ಸವಾಲು ಎಸೆದ ಬೆನ್ನಲ್ಲೇ ಅದಕ್ಕೆ ಪ್ರತಿಕ್ರಿಯೆ ನೀಡಿರುವ 20 ವರ್ಷದ ಪಡಿಕಲ್, ‘ಪಾಜಿ ಖಂಡಿತವಾಗಿಯೂ ನಾನು ನಿಮ್ಮೊಂದಿಗೆ ಸ್ಪರ್ಧಿಸುತ್ತಿಲ್ಲ. ನಿಮ್ಮಿಂದಲೇ ನಾನು ಫ್ಲಿಕ್ ಮಾಡುವುದನ್ನು ಕಲಿತಿರುವೆ. ಯಾವಾಗಲೂ ನಿಮ್ಮೊಂದಿಗೆ ಬ್ಯಾಟಿಂಗ್ ಮಾಡಲು ಬಯಸಿರುವೆ. ಬನ್ನಿ ಹೋಗೋಣ’ ಎಂದು ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ.

    ಇದನ್ನೂ ಓದಿ:  ಚಾಹಲ್-ಪಡಿಕಲ್ ಸಾಹಸ, ಲಯ ಕಂಡ ಕೊಹ್ಲಿ, ಆರ್‌ಸಿಬಿಗೆ 3ನೇ ಗೆಲುವು

    ಪಡಿಕಲ್ ಆಡಿರುವ ಟೂರ್ನಿಯ 4 ಪಂದ್ಯಗಳಲ್ಲಿ ಇದುವರೆಗೆ 174 ರನ್ ಪೇರಿಸಿದ್ದಾರೆ. ಪಂಜಾಬ್ ಆಟಗಾರ ಯುವಿ ಜತೆಗೆ ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡುಲ್ಕರ್ ಕೂಡ ಪಡಿಕಲ್ ಆಟವನ್ನು ಮೆಚ್ಚಿದ್ದು, ಪಡಿಕಲ್ ಬ್ಯಾಟಿಂಗ್ ಮತ್ತೊಮ್ಮೆ ಪ್ರಭಾವ ಬೀರಿತು ಎಂದು ಟ್ವೀಟಿಸಿದ್ದಾರೆ. ಈ ಮುನ್ನ ಪಡಿಕಲ್ ಐಪಿಎಲ್ ಪದಾರ್ಪಣೆಯ ಪಂದ್ಯದಲ್ಲೇ ಅರ್ಧಶತಕ ಬಾರಿಸಿ ಮಿಂಚಿದಾಗ, ಟೀಮ್ ಇಂಡಿಯಾ ಮಾಜಿ ನಾಯಕ, ಬಿಸಿಸಿಐ ಅಧ್ಯಕ್ಷ ಹಾಗೂ ಮಾಜಿ ಎಡಗೈ ಬ್ಯಾಟ್ಸ್​​ಮನ್ ಕೂಡ ಆಗಿರುವ ಸೌರವ್ ಗಂಗೂಲಿ ಕೂಡ ಅವರ ಆಟವನ್ನು ಶ್ಲಾಘಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts