More

    ಬಿಸಿಲ ಬೇಗೆಗೆ ಕುರಿಗಳು ಕಂಗಾಲು

    ನರೇಗಲ್ಲ: ದಿನ ಕಳೆದಂತೆ ಬಿಸಿಲ ಬೇಗೆ ಹೆಚ್ಚುತ್ತಿದೆ. ಹಳ್ಳ-ಕೊಳ್ಳ, ಕೃಷಿ ಹೊಂಡಗಳು ಬತ್ತುತ್ತಿದ್ದು, ಹಸಿರು ಕ್ರಮೇಣ ಮಾಯವಾಗುತ್ತಿದೆ. ಊರು ಬಿಟ್ಟು ಅಡವಿಗಳಲ್ಲಿಯೇ ಬೀಡುಬಿಡುವ ಕುರಿಗಾಹಿಗಳ ಬದುಕು ಅಕ್ಷರಶಃ ಸಂಕಷ್ಟಕ್ಕೀಡಾಗಿದೆ. ಬಿಸಿಲಿನ ಝುಳಕ್ಕೆ ಪ್ರಾಣಿ, ಪಕ್ಷಿಗಳು, ಜಾನುವಾರುಗಳು ಹಾಗೂ ಆಡು, ಕುರಿಗಳು ನೀರು ಮತ್ತು ಆಹಾರಕ್ಕಾಗಿ ಪರಿತಪಿಸುವಂತಾಗಿವೆ.

    ನರೇಗಲ್ಲ ಹೋಬಳಿಯ ಅಬ್ಬಿಗೇರಿ, ಜಕ್ಕಲಿ, ಮಾರನಬಸರಿ, ಬೂದಿಹಾಳ, ನಿಡಗುಂದಿ, ನಿಡಗುಂದಿಕೊಪ್ಪ, ಹಾಲಕೆರೆ, ಕೋಡಿಕೊಪ್ಪ, ಕೋಚಲಾಪೂರ, ದ್ಯಾಂಪೂರ, ಮಲ್ಲಾಪೂರ, ಯರೇಬೇಲೇರಿ, ಕುರಡಗಿ, ಡ.ಸ. ಹಡಗಲಿ, ಗುಜಮಾಗಡಿ, ನಾಗರಾಳ ಸೇರಿದಂತೆ ಸುತ್ತಲಿನ ಗ್ರಾಮಗಳ ಕುರಿಗಾರರು ಮೈಲುಗಟ್ಟಲೆ ಕ್ರಮಿಸಿದರೂ ಕುರಿಗಳ ಹೊಟ್ಟೆಗೆ ಸಾಕಷ್ಟು ಆಹಾರ ಮತ್ತು ನೀರು ಸಿಗುತ್ತಿಲ್ಲ. ಇದರಿಂದಾಗಿ ಕುರಿಗಾರರ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಕುರಿಗಳು ಹಸಿರು ಮೇವಿಲ್ಲದೆ ಒಣ ಮುಳ್ಳುಕಂಟಿಗಳನ್ನು ತಿಂದು ಬದುಕುವಂತಾಗಿದೆ. ಬಿಸಿಲಿನ ಬೇಗೆಗೆ ಕುರಿಗಳಲ್ಲಿ ಕುರಿ ಮೈಲಿ, ಕರುಳು ಬೇನೆಯಂತಹ ರೋಗಗಳು ಕಾಡುತ್ತಿದ್ದು, ಕುರಿಗಾರರು ಆತಂಕಕ್ಕೊಳಗಾಗಿದ್ದಾರೆ.

    ಹೂಳು ತುಂಬಿರುವ ಕೃಷಿ ಹೊಂಡಗಳು: ಕಳೆದ ಮೂರ್ನಾಲ್ಕು ವರ್ಷಗಳಿಂದ ಬೇಸಿಗೆಯ ಸಮಯದಲ್ಲಿ ಕುರಿಗಳಿಗೆ ಆಶ್ರಯವಾಗಿದ್ದ ಕೃಷಿ ಹೊಂಡಗಳು ಹೂಳು ತುಂಬಿಕೊಂಡಿದ್ದು, ಬಹುತೇಕ ಮುಚ್ಚುವ ಹಂತ ತಲುಪಿವೆ. ಬಿಸಿಲಿನ ತಾಪಕ್ಕೆ ನೀರು ಸಂಪೂರ್ಣ ಬತ್ತಿ ಹೋಗಿದೆ. ಅಡವಿಯಲ್ಲಿನ ಪ್ರಮುಖ ಜಲಮೂಲಗಳು ಸಂಪೂರ್ಣ ಬತ್ತಿ ಹೋಗಿದ್ದು, ಕುಡಿಯುವ ನೀರಿನ ಅಭಾವ ಎದುರಾಗಿದೆ. ಕೃಷಿ ಇಲಾಖೆಯಿಂದ ನಿರ್ವಿುಸಲಾಗುತ್ತಿದ್ದ ಕೃಷಿ ಹೊಂಡಗಳನ್ನು ಕಳೆದ ಎರಡು ವರ್ಷಗಳಿಂದ ಸ್ಥಗಿತಗೊಳಿಸಲಾಗಿದ್ದು, ಈ ಹಿಂದೆ ನಿರ್ವಿುಸಲಾಗಿದ್ದ ಬಹುತೇಕ ಕೃಷಿ ಹೊಂಡಗಳು ಹೂಳು ತುಂಬಿಕೊಂಡಿವೆ. ಕೃಷಿ ಇಲಾಖೆಯಿಂದ ಕೃಷಿ ಹೊಂಡಗಳ ನಿರ್ವಣಕ್ಕೆ ಮತ್ತೆ ಚಾಲನೆ ನೀಡಬೇಕು ಎಂದು ರೈತರು, ಕುರಿಗಾರರು ಆಗ್ರಹಿಸಿದ್ದಾರೆ.

    ಬೇಸಿಗೆಯಲ್ಲಿ ನೀರಿನ ಕೊರತೆಯಿಂದ ಕುರಿಗಳಲ್ಲಿ ಕುರಿ ಮೈಲಿ, ಕರಳು ಬೇನೆಯಂತಹ ರೋಗಗಳು ಹೆಚ್ಚಾಗಿ ಕಾಣಿಸುತ್ತವೆ. ಈಗಾಗಲೇ ನರೇಗಲ್ಲ ಪಶು ಆಸ್ಪತ್ರೆಯಲ್ಲಿ ಈ ಎರಡು ರೋಗಗಳ ಚುಚ್ಚುಮದ್ದು ದಾಸ್ತಾನಿದ್ದು, ಮುಂಜಾಗ್ರತೆ ಕ್ರಮವಾಗಿ ಕುರಿಗಾರರು ಕುರಿಗಳಿಗೆ ಲಸಿಕೆ ಹಾಕಿಸುತ್ತಿದ್ದಾರೆ.

    | ಲಿಂಗಯ್ಯ ಗೌರಿಮಠ ಪಶು ವೈದ್ಯಾಧಿಕಾರಿ ನರೇಗಲ್ಲ

    ಅಡವಿಯಲ್ಲಿ ಆಹಾರ, ನೀರು ಸಿಗದ ಕಾರಣ ಕುರಿಗಳನ್ನು ಸಾಕುವುದು ಕಷ್ಟವಾಗುತ್ತಿದೆ. ಅಗತ್ಯ ಪ್ರಮಾಣದ ಆಹಾರ, ನೀರು ಸಿಗದ ಕಾರಣ ಕುರಿಗಳು ಸೊರಗುತ್ತಿವೆ. ಕುರಿ ಸಾಕಾಣಿಕೆ ನೆಚ್ಚಿಕೊಂಡು ಜೀವನ ನಡೆಸುವುದು ಕಷ್ಟವಾಗುತ್ತಿದೆ. ಮಳೆಗಾಲ ಬರುವವರೆಗೆ ಏನು ಮಾಡುವುದು ಎಂಬುದೇ ತಿಳಿಯದಾಗಿದೆ.

    | ಮೈಲಾರಪ್ಪ ಕುರಿ, ಶರಣಪ್ಪ ಜೋಗಿ ಕುರಿಗಾರರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts