More

    ರೈತರ ಬಾಳು ಹಸನಾಗಿಸದ ಹೆಸರು

    ಪ್ರಭುಸ್ವಾಮಿ ಅರವಟಗಿಮಠ ನರೇಗಲ್ಲ
    ಮುಂಗಾರಿನ ಪ್ರಮುಖ ವಾಣಿಜ್ಯ ಬೆಳೆ ಹೆಸರು ಉತ್ತಮ ಫಸಲು ಬಂದಿದೆ. ಆದರೆ, ಕಟಾವು ಮಾಡಲು ಮಳೆರಾಯ ಕೊಂಚ ಬಿಡುವು ನೀಡುತ್ತಿಲ್ಲ. ಇದರಿಂದಾಗಿ ರೈತರ ಸ್ಥಿತಿ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.
    ಪಟ್ಟಣ, ಕೋಡಿಕೊಪ್ಪ, ಕೋಚಲಾಪೂರ, ಅಬ್ಬಿಗೇರಿ, ತೋಟಗಂಟಿ, ಮಲ್ಲಾಪೂರ, ದ್ಯಾಂಪೂರ, ಜಕ್ಕಲಿ, ಬೂದಿಹಾಳ, ಮಾರನಬಸರಿ, ಕಳಕಾಪೂರ, ಹಾಲಕೆರೆ, ನಿಡಗುಂದಿ, ನಿಡಗುಂದಿಕೊಪ್ಪ, ಯರೇಬೇಲೇರಿ, ಡ.ಸ. ಹಡಗಲಿ, ಕುರಡಗಿ, ಗುಜಮಾಗಡಿ ಸೇರಿ ಹೋಬಳಿಯಾದ್ಯಂತ ಸುಮಾರು 1200 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಪೂರ್ವ ಮುಂಗಾರು ಹಾಗೂ ಮುಂಗಾರಿನ ಮಳೆಗಳು ಉತ್ತಮವಾಗಿ ಸುರಿದ ಪರಿಣಾಮ ಹೆಸರು ಬೆಳೆ ವರ್ಷಕ್ಕಿಂತ ಉತ್ತಮವಾಗಿ ಬೆಳೆದಿದೆ. ಅಲ್ಲಲ್ಲಿ, ತೇವಾಂಶ ಹೆಚ್ಚಳದ ಕಾರಣದಿಂದ ಹಳದಿ ರೋಗ, ಸೀರು ಬಾಧೆಗೂ ತುತ್ತಾಗಿತ್ತು. ಅದಕ್ಕೆ ಸಾಕಷ್ಟು ಹಣ ವ್ಯಯಿಸಿ ಕೀಟನಾಶಕ ಸಿಂಪಡಣೆ ಮಾಡಲಾಗಿತ್ತು. ಈಗ ಹೆಸರು ಬೆಳೆ ಕಟಾವಿಗೆ ಬಂದಿದೆ. ಆದರೆ, ಮಳೆಯ ಕಾರಣದಿಂದ ಜಮೀನಿನಲ್ಲಿನ ಹೆಸರನ್ನು ಮನೆಗೆ ತರಲಾಗದ ಸ್ಥಿತಿ ರೈತರದ್ದಾಗಿದೆ.
    ಆಳುಗಳ ಕೂಲಿ ಗಗನಕ್ಕೆ: ವರ್ಷದಿಂದ ವರ್ಷಕ್ಕೆ ಕೃಷಿ ಕೂಲಿ ಆಳುಗಳ ಬೆಲೆ ಏರಿಕೆಯಾಗುತ್ತಲೆ ಬರುತ್ತಿದೆ. ಕಳೆದ ವರ್ಷ ಹೆಣ್ಣಾಳಿಗೆ ದಿನಕ್ಕೆ 250 ರೂ. ಇದ್ದ ಕೂಲಿ ಪ್ರಸಕ್ತ ವರ್ಷ 300 ರೂ.ಗೆ ಏರಿಕೆಯಾಗಿದೆ.
    ಹೆಸರು ಬುಡ್ಡಿ ಬಿಡಿಸಲು ಹಿಂದೇಟು: ಉತ್ತಮ ಮಳೆಯ ಫಲವಾಗಿ ಪ್ರಸಕ್ತ ವರ್ಷ ಹೆಸರು ಬೆಳೆಯು ಫಲವತ್ತಾಗಿ ಬೆಳೆದಿದೆ. ಸರಿಸೃಪಗಳ ಭೀತಿಯಿಂದ ಕೂಲಿಯಾಳುಗಳು ಜಮೀನಿನಲ್ಲಿ ಕಾಲಿಡಲು ಭಯಪಡುತ್ತಿದ್ದಾರೆ. ಇದರಿಂದಾಗಿ ಹೆಸರು ಬುಡ್ಡಿ (ಕಾಯಿ) ಬಿಡಿಸಲು ಆಳುಗಳು ಮುಂದೆ ಬರುತ್ತಿಲ್ಲ. ಕೂಲಿ ಆಳುಗಳನ್ನು ನೆಚ್ಚಿಕೊಳ್ಳದೆ ಯಂತ್ರದ ಸಹಾಯದಿಂದ ಕಟಾವು ಮಾಡುವ ಉದ್ದೇಶದಿಂದ ಎತ್ತರದ ತಳಿಯನ್ನು ಬಿತ್ತನೆ ಮಾಡಲಾಗಿದೆ. ಆದರೆ, ಸತತ ಮಳೆಯ ಪರಿಣಾಮ ಜಮೀನುಗಳಿಗೆ ಯಂತ್ರಗಳು ಹೋಗದ ಸ್ಥಿತಿ ನಿರ್ವಣವಾಗಿದೆ.

    ಹಿಂಗಾರು ಬಿತ್ತನೆಗೂ ಹಿನ್ನಡೆ
    ಹೆಸರನ್ನು ಕಟಾವು ಮಾಡಿದ ನಂತರ ಕಡಲೆ, ಜೋಳ, ಗೋಧಿ ಸೇರಿ ಇತರ ಹಿಂಗಾರು ಬೆಳೆಗಳನ್ನು ಬೆಳೆಯುವುದು ರೂಢಿ. ಆದರೆ, ಸತತ ಮಳೆ, ಮೋಡ ಕವಿದ ವಾತಾವರಣದ ಪರಿಣಾಮ ಹೆಸರು ಕಟಾವು ಮಾಡುವುದು ವಿಳಂಬವಾಗುತ್ತಿದೆ. ಇದರಿಂದಾಗಿ ಹಿಂಗಾರು ಬಿತ್ತನೆಗೆ ಜಮೀನು ಸ್ವಚ್ಛಗೊಳಿಸಿ ಬಿತ್ತನೆ ಮಾಡುವುದಕ್ಕೂ ಹಿನ್ನಡೆಯಾಗುತ್ತಿದೆ. ಮೂರ್ನಾಲ್ಕು ದಿನಗಳ ಕಾಲ ಉತ್ತಮವಾಗಿ ಬಿಸಿಲು ಬಿದ್ದಲ್ಲಿ ಹೆಸರು ಕಟಾವು ಸರಾಗವಾಗಿ ನಡೆಯಲಿದೆ.


    ಮುಂಗಾರಿನ ಬೆಳೆ ಹಾನಿಯ ಬಗ್ಗೆ ಕಂದಾಯ ಹಾಗೂ ಕೃಷಿ ಇಲಾಖೆಯ ವತಿಯಿಂದ ಜಂಟಿ ಸಮೀಕ್ಷೆ ಕೈಗೊಂಡು ವರದಿ ಸಲ್ಲಿಸಲಾಗಿದೆ. ಬೆಳೆ ವಿಮೆ ಪಾವತಿಸಿದ ರೈತರು ರೋಣ ಕೃಷಿ ಇಲಾಖೆಯ ಕಚೇರಿಯಲ್ಲಿ ವಿಮಾ ಕಂಪನಿಯ ಸಿಬ್ಬಂದಿಗೆ ವಿಮೆ ತುಂಬಿದ ಪಾವತಿ, ಆಧಾರ ಕಾರ್ಡ್, ಬ್ಯಾಂಕ್ ಪಾಸ್​ಬುಕ್ ಪ್ರತಿಗಳನ್ನು ನೀಡಬೇಕು.
    | ಸಿ.ಕೆ. ಕಮ್ಮಾರ, ಕೃಷಿ ಅಧಿಕಾರಿ ರೈತ ಸಂಪರ್ಕ ಕೇಂದ್ರ, ನರೇಗಲ್ಲ

    ಸಾಕಷ್ಟು ತೊಂದರೆಗಳ ನಡುವೆ ಹೆಸರು ಬೆಳೆಯಲಾಗಿದೆ. ಬೆಳೆಯು ಉತ್ತಮವಾಗಿ ಬಂದಿದೆ. ಆದರೆ, ಸತತ ಜಿಟಿ ಜಿಟಿ ಮಳೆ ಮೋಡ ಕವಿದ ವಾತಾವರಣದ ಪರಿಣಾಮ ಕಟಾವು ಮಾಡಲಾಗುತ್ತಿಲ್ಲ. ತಗ್ಗು ಪ್ರದೇಶದಲ್ಲಿನ ಬೆಳೆಗಳಿಗೆ ಹಳದಿ ರೋಗ ಸೇರಿ ಅನೇಕ ರೋಗಗಳು ತಗುಲಿವೆ. ಕೀಟನಾಶಕ ಸಿಂಪಡಣೆಗೆ ಸಾಕಷ್ಟು ಹಣ ವ್ಯಯಿಸಲಾಗಿದೆ. ಈಗ ನೋಡಿದರೆ ಕಟಾವು ಮಾಡಲಾಗದ ಸ್ಥಿತಿ ನಿರ್ವಣವಾಗಿದೆ. ಆದ್ದರಿಂದ, ಬೆಳೆ ಹಾನಿ ಪರಿಹಾರ ನೀಡಲು ಜಿಲ್ಲಾಡಳಿತ ಮುಂದಾಗಬೇಕು.
    | ಚಂದ್ರು ಲಕ್ಕನಗೌಡ್ರ ರೈತ ನರೇಗಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts