More

    ದೇ.ಹಿಪ್ಪರಗಿಯಲ್ಲಿ ಶಾಂತಿಯುತ ಮತದಾನ

    ದೇವರಹಿಪ್ಪರಗಿ: ಅಭ್ಯರ್ಥಿಗಳ ಬೆಂಬಲಿಗರ ವಾಗ್ವಾದ, ಗುಂಪುಗಾರಿಕೆಯಂಥ ಸಣ್ಣ ಘಟನೆಗಳ ಹೊರತಾಗಿ ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದೆ ತಾಲೂಕಿನ 14 ಗ್ರಾಮ ಪಂಚಾಯಿತಿಗಳ ಮತದಾನ ಶಾಂತಿಯುತವಾಗಿ ನಡೆಯಿತು.

    ತಾಲೂಕಿನಲ್ಲಿ ಭಾನುವಾರ ಬೆಳಗ್ಗೆ ಆರಂಭಗೊಂಡ ಮತದಾನ ಕೊರೆಯುವ ಚಳಿಯಲ್ಲೂ ಮತದಾರರನ್ನು ಮತ ಕೇಂದ್ರಗಳಿಗೆ ಸೆಳೆಯುವಲ್ಲಿ ಯಶಸ್ವಿಯಾಯಿತು. ಮುಳಸಾವಳಗಿ, ಚಿಕ್ಕರೂಗಿ, ಹಿಟ್ನಳ್ಳಿ, ಜಾಲವಾದ, ಕೋರವಾರ, ಕೊಂಡಗೂಳಿ, ಸಾತಿಹಾಳ ಗ್ರಾಮಗಳ ಮತಗಟ್ಟೆಗಳ ಸುತ್ತಲೂ ಅಭ್ಯರ್ಥಿಗಳ ಬೆಂಬಲಿಗರು ಹಾಗೂ ಸಂಬಂಧಿತರು ಗುಂಪು ಗುಂಪಾಗಿ ಮತದಾರರನ್ನು ಕರೆತರುವ ಹಾಗೂ ಓಲೈಸುವ ದೃಶ್ಯ ಸಾಮಾನ್ಯವಾಗಿತ್ತು.

    ಮತದಾನ ಕೇಂದ್ರದಲ್ಲಿ ಸಿಪಿಐ ಬಸವರಾಜ ಮೂಕಾರ್ತಿಹಾಳ ನೇತೃತ್ವದಲ್ಲಿ ಪೊಲೀಸರು ಮತದಾರರ ಹೊರತಾಗಿ ಇನ್ನಾರು ಮತದಾನ ಕೇಂದ್ರದಲ್ಲಿ ಪ್ರವೇಶಿಸದಂತೆ ಪದೇ ಪದೆ ಎಚ್ಚರಿಕೆ ನೀಡುತ್ತಿರುವುದು ಸಾಮಾನ್ಯವಾಗಿತ್ತು. ಚಿಕ್ಕರೂಗಿ, ಮುಳಸಾವಳಗಿ ಗ್ರಾಮಗಳಲ್ಲಿ ಜನರ ಗುಂಪು ಚದುರಿಸಲು ಪೊಲೀಸ್ ಸಿಬ್ಬಂದಿ ಹರಸಾಹಸ ಪಟ್ಟರು.

    ಬೆಳಗ್ಗೆ 9 ಗಂಟೆವರೆಗೆ ಚುನಾವಣೆ ನಡೆದ 126 ಮತಗಟ್ಟೆಗಳಲ್ಲಿ 7124 ಮತದಾರರು ಮತ ಚಲಾಯಿಸಿದ್ದರು. ಶೇ.8.20 ಮತದಾನವಾಗಿದ್ದರೆ, 11ಗಂಟೆಗೆ ಶೇ. 23.65 ಮತದಾನವಾಗಿತ್ತು. ಮಧ್ಯಾಹ್ನ 1 ಗಂಟೆಗೆ ಶೇ. 49.62 ಮತದಾನವಾದರೆ, 3 ಗಂಟೆಗೆ ಶೇ. 62.25 ಮತದಾನವಾದ ವರದಿ ದಾಖಲಾಗಿತ್ತು.

    ಅತೀ ಸೂಕ್ಷ್ಮ ಮತದಾನ ಕೇಂದ್ರಗಳಾದ ಕೋರವಾರ, ಚಿಕ್ಕರೂಗಿ, ಯಾಳವಾರ, ಜಾಲವಾದ, ಮುಳಸಾವಳಗಿಗಳಲ್ಲಿ ಬಹುತೇಕ ಮತದಾನ ಶಾಂತಿಯುತವಾಗಿ ನಡೆಯಿತು. ದೇವೂರ ಗ್ರಾಮದಲ್ಲಿ ಪರಿಸ್ಥಿತಿ ಉಲ್ಬಣಗೊಳ್ಳುತ್ತಿದೆ ಎನ್ನುತ್ತಿದ್ದಂತೆಯೇ ಪಿಎಸ್‌ಐ ಸುರೇಶ ಗಡ್ಡಿ ನೇತೃತ್ವದಲ್ಲಿ ಸಿಬ್ಬಂದಿ ಸ್ಥಳಕ್ಕೆ ತೆರಳಿ ತಿಳಿಗೊಳಿಸಿದರು.

    ಹಿಟ್ನಳ್ಳಿ ತಾಂಡಾ 4 ನೇ ವಾರ್ಡ್ ಪ್ರತಿಸ್ಪರ್ಧಿಗಳಾದ ನೀಲಾಬಾಯಿ ಹಾಗೂ ಕಸ್ತೂರಿಬಾಯಿ ಸಹೋದರಿಯರ ಬೆಂಬಲಿಗರ ನಡುವೆ ವಾಗ್ವಾದ ಆರಂಭಗೊಳ್ಳುತ್ತಿದ್ದಂತೆ ಪೊಲೀಸರು ಮಧ್ಯೆ ಪ್ರವೇಶಿಸಿ ಬೆಂಬಲಿಗರನ್ನು ಮತದಾನ ಕೇಂದ್ರದಿಂದ ಹೊರಹಾಕಿದರು. ಇನ್ನು ತಾಂಡಾದ ಶತಾಯುಷಿ ಜಮೀಬಾಯಿ ಸಾಲೋಟಗಿ, 90 ವಯಸ್ಸಿನ ಚಾಂದುಬಾಯಿ ರಾಠೋಡ ನಡೆದು ಬಂದು ಮತದಾನ ಮಾಡಿದರೆ, ಹರನಾಳ ಗ್ರಾಮದ ಬೇಬಿ ಹಲಗಣಿ ಸೇರಿದಂತೆ ಹಲವು ಯುವಕ, ಯುವತಿಯರು ಇದೇ ಪ್ರಥಮ ಬಾರಿ ಮತದಾನ ಮಾಡಿ ಸಂಭ್ರಮಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts