More

    ಶಿಲಾಯುಗದ ಸಮಾಧಿಗಳು ಪತ್ತೆ

    ಮೈಸೂರು: ಅಂದಾಜು 3 ಸಾವಿರ ವರ್ಷಗಳ ಹಿಂದಿನ ಕಾಲದ ಅಪರೂಪದ ಬೃಹತ್ ಶಿಲಾಯುಗದ ಸಮಾಧಿಗಳು ಮೈಸೂರು ತಾಲೂಕಿನ ಇಲವಾಲ ಹೋಬಳಿಯಲ್ಲಿ ಪತ್ತೆಯಾಗಿವೆ.

    ಇಲವಾಲದಿಂದ 8 ಕಿ.ಮೀ. ದೂರದಲ್ಲಿರುವ ಕಲ್ಲೂರು ನಾಗನಹಳ್ಳಿಗೆ ಇತಿಹಾಸದ ಬಗ್ಗೆ ಕ್ಷೇತ್ರ ಅಧ್ಯಯನ ಮಾಡಲು ಇತಿಹಾಸ ಬೋಧಕರ ತಂಡ ತೆರಳಿದ್ದಾಗ ಇವುಗಳು ಪತ್ತೆಯಾಗಿವೆ.

    ಕೆ.ಆರ್.ಸಾಗರದಿಂದ ಕೆ.ಆರ್.ನಗರಕ್ಕೆ ಹೋಗುವ ಗ್ರಾಮದ ರಸ್ತೆಯ ಪಕ್ಕದಲ್ಲಿ ಸಮಾಧಿಗಳು ಇವೆ. ಇವುಗಳನ್ನು ಎಲ್ ಆಕಾರದಲ್ಲಿ ಸಾಲಾಗಿ ನಿರ್ಮಿಸಲಾಗಿದೆ. 3 ಸಮಾಧಿಗಳು ದಕ್ಷಿಣಕ್ಕೆ ಮುಖ ಮಾಡಿದ್ದರೆ, ಉಳಿದ 4 ಸಮಾಧಿಗಳು ಪೂರ್ವಾಭಿಮುಖವಾಗಿವೆ. ಪ್ರತಿ ಸಮಾಧಿ 12 ಅಡಿ ಉದ್ದ, 8.5 ಅಡಿ ಅಗಲ ಇದೆ. ಈ ಸಮಾಧಿಗಳನ್ನು ಸ್ಥಳೀಯವಾಗಿ ಸಿಗುವ ಕಲ್ಲು, ಬಂಡೆಗಳನ್ನು ಬಳಸಿ ನಿರ್ಮಿಸಲಾಗಿದೆ.

    ಮೈಸೂರಿನ ಕುವೆಂಪುನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ಸಹ ಪ್ರಾಧ್ಯಾಪಕ ಡಾ.ಎಸ್.ಜಿ.ರಾಮದಾಸ ರೆಡ್ಡಿ, ಉಪನ್ಯಾಸಕ ಚರಣ್‌ಕುಮಾರ್, ಎನ್‌ಎಸ್‌ಎಸ್ ಸ್ವಯಂ ಸೇವಕರೊಡನೆ ಗ್ರಾಮಕ್ಕೆ ಹೋದಾಗ ಏಳು ಮಾಸ್ತಮ್ಮ ಗುಡಿಗಳಿವೆ ಎಂದು ತಿಳಿದು ಬಂದಿದೆ. ಸ್ವಚ್ಛಗೊಳಿಸಿ ಪರಿಶೀಲಿಸಿದಾಗ 7 ಹಾಸು ಬಂಡೆ ಸಮಾಧಿಗಳು (ಡಾಲ್ಮೇನ್) ಪತ್ತೆಯಾಗಿವೆ.

    ಪ್ರತಿ ಸಮಾಧಿಯನ್ನು ಗುಡಿಯ ಆಕಾರದಲ್ಲಿ ಕಟ್ಟಿ ಸುತ್ತಲೂ ಬಂಡೆಗಳನ್ನು ನಿಲ್ಲಿಸಿ, ಅವುಗಳ ಮೇಲೆ 6.5 ಅಡಿ ಉದ್ದದ ಹಲವು ಬಂಡೆಗಳನ್ನು ಹಾಸಿದ್ದಾರೆ. ನಂತರ ಬಂಡೆಗಳನ್ನು ಸುತ್ತುವರಿದು ಸ್ಥಳೀಯವಾಗಿ ಸಿಗುವ ಕಲ್ಲುಗಳನ್ನು ಬಳಸಿ ಕಟ್ಟಡ ಕಟ್ಟಿದ್ದಾರೆ. ಇವು ವಿಶೇಷವಾದ ಹಾಗೂ ಕರ್ನಾಟಕದಲ್ಲೇ ಅಪರೂಪದ ಸಮಾಧಿಗಳಾಗಿವೆ.

    ಇದೇ ತರಹದ ಸಮಾಧಿಗಳು ನಾನು ಕ್ಷೇತ್ರ ಕಾರ್ಯ ನಡೆಸುವಾಗ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಸೋಮಗುದ್ದು ಗ್ರಾಮದಲ್ಲಿ ಪತ್ತೆಯಾಗಿದ್ದವು. ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಕೇರಳದಲ್ಲೂ ಕಂಡುಬಂದಿವೆ ಎಂದು ರಾಮದಾಸ ರೆಡ್ಡಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts