More

    ಕರೊನಾ ಸಂಕಷ್ಟದ ನಡುವೆಯೂ ‘ಚಿತ್ರಮಂದಿರ ತುಂಬಿದೆ..’

    ಬೆಂಗಳೂರು: ಕಳೆದ ವರ್ಷ ಮಾರ್ಚ್ 13ರಂದು ಚಿತ್ರಮಂದಿರಗಳು ಭರ್ತಿಯಾಗಿದ್ದೇ ಕೊನೆ ಆ ನಂತರ ಚಿತ್ರಮಂದಿರಗಳ ಮುಂದೆ ‘ಚಿತ್ರಮಂದಿರ ತುಂಬಿದೆ’ ಎಂಬ ಬೋರ್ಡ್ ಬಿದ್ದಿರಲಿಲ್ಲ. ಅಕ್ಟೋಬರ್ 15ರಿಂದಲೇ ಚಿತ್ರಪ್ರದರ್ಶನಕ್ಕೆ ಸರ್ಕಾರ ಅನುಮತಿ ನೀಡಿದ್ದರೂ, ಶೇ. 50ರಷ್ಟು ಮಾತ್ರ ಹಾಜರಾತಿ ಇತ್ತು. ಇದೀಗ ಚಿತ್ರಮಂದಿರಗಳಲ್ಲಿ ಶೇ. 100ರಷ್ಟು ಹಾಜರಾತಿಗೆ ಅನುಮತಿ ಕೊಡುವುದರ ಜತೆಗೆ, ಸರ್ಕಾರ ಒಂದಿಷ್ಟು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಇದಕ್ಕೆ ಪ್ರೇಕ್ಷಕರಿಂದ ಯಾವ ರೀತಿ ಸ್ಪಂದನೆ ಸಿಕ್ಕಿದೆ ಎಂದು ನೋಡುವ ಸಣ್ಣ ಪ್ರಯತ್ನ ಇಲ್ಲಿದೆ.

    ಶುಕ್ರವಾರ (ಫೆ. 5) ನಾಲ್ಕು ಕನ್ನಡ ಚಿತ್ರಗಳು ಬಿಡುಗಡೆಯಾಗಿವೆ. ಪ್ರಜ್ವಲ್ ಅಭಿನಯದ ‘ಇನ್​ಸ್ಪೆಕ್ಟರ್ ವಿಕ್ರಂ’, ವಿನೋದ್ ಪ್ರಭಾಕರ್ ಅಭಿನಯದ ‘ಶ್ಯಾಡೊ’, ಚಂದನ್ ಆಚಾರ್ ಅಭಿನಯದ ‘ಮಂಗಳವಾರ ರಜಾದಿನ’ ಮತ್ತು ಹೊಸಬರ ‘ಮಾಂಜ್ರಾ ಬಿಡುಗಡೆಯಾಗಿವೆ. ಈ ಪೈಕಿ ಮೂರು ಚಿತ್ರಗಳಿಗೆ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ. ಮೆಜೆಸ್ಟಿಕ್ ಪ್ರದೇಶದಲ್ಲಿರುವ ತ್ರಿವೇಣಿ ಚಿತ್ರಮಂದಿರದಲ್ಲಿ ‘ಇನ್​ಸ್ಪೆಕ್ಟರ್ ವಿಕ್ರಂ’ ಬಿಡುಗಡೆಯಾಗಿದ್ದು, ಮೊದಲ ಎರಡು ಪ್ರದರ್ಶನಗಳಿಗೆ ಶೇ. 80 ಮತ್ತು ಶೇ. 60ರಷ್ಟು ಹಾಜರಾತಿ ಇತ್ತು. ಮಾಗಡಿ ರಸ್ತೆಯಲ್ಲಿನ ಪ್ರಸನ್ನ ಚಿತ್ರಮಂದಿರದಲ್ಲಿ ವಿನೋದ್ ಪ್ರಭಾಕರ್ ಅಭಿನಯದ ‘ಶ್ಯಾಡೊ’ ಚಿತ್ರ ಬಿಡುಗಡೆಯಾಗಿದ್ದು, ಮೊದಲ ಪ್ರದರ್ಶನ ಬಹುತೇಕ ಫುಲ್ ಆಗಿತ್ತು. ಬೆಳಗಿನ ಶೋ ಸಂಪೂರ್ಣ ಭರ್ತಿಯಾದರೆ, ಮಧ್ಯಾಹ್ನದ ಶೋ ಶೇ. 60ರಷ್ಟು ಪ್ರೇಕ್ಷಕರಿಂದ ಕೂಡಿತ್ತು.

    ದಿನಕ್ಕೆ ನಾಲ್ಕು ಬಾರಿ ಸ್ಯಾನಿಟೈಸ್: ಚಿತ್ರಮಂದಿರಗಳಲ್ಲಿ ಸರ್ಕಾರದ ಮಾರ್ಗಸೂಚಿ ಪಾಲನೆಗೆ ಹೆಚ್ಚಿನ ಗಮನ ನೀಡಲಾಗುತ್ತಿದೆ. ಆ ಬಗ್ಗೆ ಹೇಳಿಕೊಳ್ಳುವ ಗಾಂಧಿನಗರ ನರ್ತಕಿ ಚಿತ್ರಮಂದಿರದ ಮ್ಯಾನೇಜರ್ ಯಾದವ್, ‘ದಿನಕ್ಕೆ ನಾಲ್ಕು ಬಾರಿ ಇಡೀ ಚಿತ್ರಮಂದಿರವನ್ನು ಸ್ಯಾನಿಟೈಸ್ ಮಾಡುತ್ತೇವೆ. ಒಂದೊಂದು ಶೋ ನಡುವೆ ಸಿಗುವ ಬಿಡುವಿನಲ್ಲಿ ಇಡೀ ಚಿತ್ರಮಂದಿರ ಸ್ವಚ್ಛ ಮಾಡುತ್ತಿದ್ದೇವೆ. ಪ್ಯಾಕ್ ಮಾಡಿದ ಆಹಾರ ಪದಾರ್ಥವನ್ನೇ ನೀಡಲಾಗುತ್ತಿದೆ’ ಎನ್ನುತ್ತಾರೆ. ಅದೇ ರೀತಿ ಪಕ್ಕದ ತ್ರಿವೇಣಿ ಚಿತ್ರಮಂದಿರದ ಮ್ಯಾನೇಜರ್ ವೆಂಕಟೇಶ್ ಮೂರ್ತಿ ಹೇಳುವ ಪ್ರಕಾರ, ‘ಮಾಸ್ಕ್ ಇಲ್ಲದ್ದವರನ್ನು ಚಿತ್ರಮಂದಿರಕ್ಕೆ ಬಿಟ್ಟುಕೊಂಡಿಲ್ಲ. ದೈಹಿಕ ಉಷ್ಣಾಂಶ ಮತ್ತು ಹ್ಯಾಂಡ್ ಸ್ಯಾನಿಟೈಸ್ ಕಡ್ಡಾಯ ಮಾಡಿದ್ದೇವೆ’ ಎನ್ನುತ್ತಾರವರು.

    ಡಬಲ್ ಮಧ್ಯಂತರ ಗೊಂದಲ: ಚಿತ್ರಮಂದಿರಕ್ಕೆ ಶೇ. 100 ಭರ್ತಿಗೆ ಅವಕಾಶ ಸಿಗುತ್ತಿದ್ದಂತೆ, ಒಂದು ಸಿನಿಮಾಕ್ಕೆ ಎರಡು ಇಂಟರ್​ವಲ್ ಅಳವಡಿಸಿಕೊಳ್ಳುವಂತೆ ಸರ್ಕಾರ ಹೇಳಿದೆಯಾದರೂ, ಅದರ ಬಗ್ಗೆ ಚಿತ್ರಮಂದಿರ ವ್ಯವಸ್ಥಾಪಕರಿಗೆ ಅಷ್ಟಾಗಿ ಮಾಹಿತಿ ಇಲ್ಲ. ಕೆಲವರಿಗೆ ಗೊತ್ತಿದೆ ಎಂದರೆ, ಇನ್ನು ಕೆಲವರು ಅದ್ಹೇಗೆ ಸಾಧ್ಯ ಎನ್ನುತ್ತಾರೆ. ಈ ಬಗ್ಗೆ ಪ್ರತಿಕ್ರಿಯಿಸುವ ತ್ರಿವೇಣಿ ಚಿತ್ರದ ಮಾಲೀಕ ಡಿ. ಆನಂದ್, ‘ಮೂರು ಗಂಟೆಯ ಸಿನಿಮಾ ಇದ್ದರೆ ಅದಕ್ಕೆ ನಾವು 2 ಮಧ್ಯಂತರ ಪಡೆಯಬಹುದು. ಆದರೆ, ಎರಡು ಗಂಟೆಯ ಚಿತ್ರಕ್ಕೆ ಹಾಗೇ ಮಾಡಲು ಬರುವುದಿಲ್ಲ. ಹಾಗಾಗಿ ಒಂದೇ ಮಧ್ಯಂತರ ನೀಡುತ್ತಿದ್ದು, ಈ ಕುರಿತು ಸರ್ಕಾರಕ್ಕೆ ಮನವಿ ಮಾಡಿಕೊಡಲಿದ್ದೇವೆ’ ಎನ್ನುತ್ತಾರೆ.

    ಸರ್ಕಾರದ ಮಾರ್ಗಸೂಚಿಯ ಪ್ರಕಾರ ಚಿತ್ರಮಂದಿರಗಳು ಕಾರ್ಯ ನಿರ್ವಹಿಸುತ್ತಿವೆ. ಮಾಸ್ಕ್, ಸ್ಯಾನಿಟೈಸೇಶನ್ ಕಡ್ಡಾಯ ಮಾಡಲಾಗಿದೆ. ಇದಕ್ಕೆ ಪ್ರೇಕ್ಷಕರು ಸಹ ಸಹಕರಿಸುತ್ತಿದ್ದಾರೆ. ಜನ ದೊಡ್ಡ ಸಂಖ್ಯೆಯಲ್ಲಿ ಚಿತ್ರಮಂದಿರಕ್ಕೆ ಬಂದಿದ್ದು, ಆಶಾಭಾವನೆ ಮೂಡಿಸಿದೆ. ಮುಂದಿನ ದಿನಗಳಲ್ಲಿ ಚಿತ್ರಪ್ರದರ್ಶನದ ವಿಷಯದಲ್ಲಿ ಗೊಂದಲ ಮಾಡದೆ, ಸರ್ಕಾರ ಒಂದು ಸ್ಪಷ್ಟತೆ ಕೊಟ್ಟರೆ ಆಗ ಚಿತ್ರತಂಡಗಳು ಯಾವುದೇ ಭಯವಿಲ್ಲದೆ ಚಿತ್ರಗಳನ್ನು ಬಿಡುಗಡೆ ಮಾಡುವುದಕ್ಕೆ ಮುಂದಾಗುತ್ತವೆ.

    | ಕೆ.ವಿ. ಚಂದ್ರಶೇಖರ್ ಕರ್ನಾಟಕ ಚಲನಚಿತ್ರ ಪ್ರದರ್ಶಕರ ಸಂಘದ ಅಧ್ಯಕ್ಷ

    ಇದೀಗ ಶೇ. 100 ಭರ್ತಿಗೆ ಅವಕಾಶ ಸಿಕ್ಕ ಹಿನ್ನೆಲೆಯಲ್ಲಿ, ಪ್ರೇಕ್ಷಕರ ಸಂಖ್ಯೆ ಮೊದಲಿಗಿಂತ ಹೆಚ್ಚಾಗಿದೆ. ಇನ್ನು ಹೆಚ್ಚೆಚ್ಚು ದೊಡ್ಡ ದೊಡ್ಡ ಸಿನಿಮಾ ಬಿಡುಗಡೆ ಬಳಿಕವೇ ಹಳೇ ಲಯಕ್ಕೆ ಮರಳಬಹುದು ಎಂಬ ನಂಬಿಕೆ ಇದೆ.

    | ಡಿ.ಆನಂದ್ ತ್ರಿವೇಣಿ ಚಿತ್ರಮಂದಿರದ ಮಾಲೀಕ

    ಬುಕ್ಕಿಂಗ್ ಕ್ಲರ್ಕ್ ಆಗಿ 40 ವರ್ಷ ಕೆಲಸ ಮಾಡಿದ್ದೇನೆ. ಈ ರೀತಿಯ ಪರಿಸ್ಥಿತಿ ಯಾವತ್ತೂ ನೋಡಿರಲಿಲ್ಲ. ಇದೀಗ ಕರೊನಾ ಕಡಿಮೆ ಆಗಿದೆ. ಜನಜೀವನ ಯಥಾಸ್ಥಿತಿಗೆ ಬಂದಿದೆ. ಜನರೂ ಭಯ ಬದಿಗಿಟ್ಟು ಚಿತ್ರಮಂದಿರಕ್ಕೆ ಬರುತ್ತಿರುವುದು ಆಶಾ ಭಾವನೆ ಮೂಡಿಸಿದೆ.

    | ಮನೋಹರ್ ನರ್ತಕಿ ಬುಕ್ಕಿಂಗ್ ಕ್ಲರ್ಕ್

    ಶುಕ್ರವಾರ 2-3 ಸಿನಿಮಾ ಬಿಡುಗಡೆ ಆದ ಹಿನ್ನೆಲೆಯಲ್ಲಿ ಪ್ರೇಕ್ಷಕ ಸಹಜವಾಗಿ ಡಿವೈಡ್ ಆಗಿದ್ದಾನೆ. ಶನಿವಾರದಿಂದ ಮತ್ತೆ ಎಲ್ಲ ಚಿತ್ರಮಂದಿರ ಗಳಲ್ಲಿ ಚಿತ್ರಕ್ಕೆ ಪ್ರೇಕ್ಷಕ ಆಗಮಿಸಲಿದ್ದಾನೆ.

    | ನಾಗೇಂದ್ರ ಸಂತೋಷ್ ಬುಕ್ಕಿಂಗ್ ಕ್ಲರ್ಕ್

    ನೋಡು ಶಿವ ಎಂದ ಮೇಘಾ

    ಮನೆಗೆ ಬಂದ ಮಹಾಲಕ್ಷ್ಮೀ… ಕಳೆದ 30 ವರ್ಷ ಎಲ್ಲಿದ್ದರು? ನಟಿ ಬಾಯ್ಬಿಟ್ಟ ಎಕ್ಸ್​ಕ್ಲೂಸಿವ್ ಮಾಹಿತಿ ಇಲ್ಲಿದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts