More

    ವಿಸ್ಮಯಕಾರಿ ಆನಿಮೆ!; ಮಕ್ಕಳ ನೆಚ್ಚಿನ ವರ್ಣರಂಜಿತ ಪ್ರಪಂಚ

    ಚಿಕ್ಕ ವಯಸ್ಸಿನ ಮಕ್ಕಳಿಗೆ ಕಾರ್ಟೂನು ನೋಡುವುದು ಎಂದರೆ ಬಹಳ ಪ್ರೀತಿ. ಆದರೆ ಅದೇ ಕಾರ್ಟೂನು ತಂತ್ರಜ್ಞಾನಕ್ಕೆ ಇನ್ನಷ್ಟು ಹೊಳಪು ನೀಡಿ ಅದರ ಮೂಲಕ ಪ್ರೌಢ ಕಥೆಗಳನ್ನು ಹೇಳಿದರೆ ಹೇಗೆ? ಹೌದು.. ಇದೇ ಆಲೋಚನೆ ಜಪಾನಿನ ಆನಿಮೆಗಳಲ್ಲಿ ಕಂಡುಬರುವುದು. ಕಾರ್ಟೂನು ಎಂದು ಜಗತ್ತೇ ಹಂಗಿಸಿದರೂ ಬೃಹದಾಕಾರವಾಗಿ ಇಂದು ಆನಿಮೆ ಜಗತ್ತು ಬೆಳೆದು ನಿಂತಿದೆ. ಈ ಆನಿಮೆಯ ಆಳ-ಅಗಲ ಎಷ್ಟು? ಅದನ್ನೇ ಅನ್ವೇಷಿಸುತ್ತಾ ಹೋಗೋಣ ಬನ್ನಿ

    | ಅತುಲ ದಾಮಲೆ

    1917ರ ಜೂನ್​ನಲ್ಲೇ ಜಗತ್ತಿನ ಮೊತ್ತ ಮೊದಲ ಆನಿಮೆ ಬಿಡುಗಡೆಗೊಂಡಿತ್ತು. ಅದರ ಹೆಸರು ಡಲ್ ಸ್ವಾರ್ಡ್. ಅಲ್ಲಿಂದ ಶುರುವಾದ ಆನಿಮೆ ಲೋಕ ಇಂದಿಗೆ ಜಗತ್ತಿನ ಅನೇಕ ಯುವ ಜನರನ್ನು ತನ್ನತ್ತ ಚುಂಬಕದಂತೆ ಸೆಳೆಯುವವರೆಗೆ ತಲುಪಿದೆ. ಜಪಾನಿ ಭಾಷೆಯ ಸೊಗಡನ್ನು ಅರಗಿಸಿಕೊಂಡರೆ ಈ ಆನಿಮೆ ಕಥೆಗಳ ಒಳಗೆ ಮನುಷ್ಯ ಕರಗಿ ಹೋಗುವುದೇ ತಿಳಿಯುವುದಿಲ್ಲ. ಅಷ್ಟು ಪ್ರಭಾವಶಾಲಿ ಈ ಮಾಧ್ಯಮ. ಇವುಗಳನ್ನು ಮೊದಲಿಗೆ ಪಾಶ್ಚಿಮಾತ್ಯರು ಕಾರ್ಟೂನು ಎಂದು ಹಂಗಿಸುತ್ತಿದ್ದರು. ಆದರೆ ಇಂದು ಆನಿಮೆ ಹಾಗೂ ಕಾರ್ಟೂನು ಬೇರೆ ಬೇರೆ ಎಂದು ಅವರೇ ಹೇಳುತ್ತಿದ್ದಾರೆ. ಅದು ಈ ಆನಿಮೆಗಳ ಸಾಮರ್ಥ್ಯಕ್ಕೆ ಹಿಡಿದ ಕೈಗನ್ನಡಿ.

    ಆನಿಮೆ ಯುವ ಜನರನ್ನು ಯಾಕೆ ಸೆಳೆಯುತ್ತಿದೆ?: ಇದರ ರಹಸ್ಯ ಇರುವುದು ಕಥೆಯನ್ನು ಹೆಣೆದಿರುವ ಶೈಲಿಯಲ್ಲಿ. ಇಲ್ಲಿ ನಾಯಕ ಅಥವಾ ನಾಯಕಿಯಾಗಿ ಬಹುತೇಕ ಹದಿಹರೆಯದವರೇ ಇರುತ್ತಾರೆ, ಇಲ್ಲವೇ ಇವರಲ್ಲಿ ಅಸಾಮಾನ್ಯ ಶಕ್ತಿ ಅಡಗಿಕೊಂಡಿರುತ್ತದೆ ಅಥವಾ ಮುಖ್ಯ ಪಾತ್ರದವರು ತಮ್ಮ ಜೀವನದಲ್ಲಿ ನೋಡಬಾರದ್ದನ್ನೆಲ್ಲ ನೋಡಿರುತ್ತಾರೆ. ಇದರ ಸುತ್ತ ಎಂತಹ ಪಾತ್ರಗಳು ಇರುತ್ತವೆ ಎಂದರೆ ನೋಡುಗರಿಗೆ ಇದು ನನ್ನದೇ ಕಥೆ ಅಲ್ಲವೇ ಎಂದು ಒಂದು ಕ್ಷಣಕ್ಕೆ ಅನಿಸುತ್ತದೆ. ಒಮ್ಮೆ ನೋಡುಗರನ್ನು ಹಿಡಿದಿಟ್ಟುಕೊಳ್ಳುವ ಇವು ಆಮೇಲೆ ಬೇಡವೆಂದರೂ ಬಿಡುವುದಿಲ್ಲ.

    ಇನ್ನು ಜಪಾನಿಗರು ಜಗತ್ತಿಗೆ ನೀಡುವ ಕಲ್ಪನಾ ಲೋಕಗಳು. ಒನ್ ಪೀಸ್, ನರುಟೋ ಮುಂತಾದ ಪ್ರಖ್ಯಾತ ಕಥಾವಸ್ತುಗಳು ಜನರ ಕಲ್ಪನೆಯ ಪರಿಧಿಯನ್ನು ವಿಸ್ತರಿಸಿದರೆ ಶಿಂಗೆಕಿ ನೊ ಕ್ಯೋಜಿನ್ ಅಥವಾ ಅಟ್ಯಾಕ್ ಆನ್ ಟೈಟನ್ಸ್​ನಂತಹ ಆನಿಮೆಗಳು ಜಗತ್ತನ್ನು ಈ ರೀತಿಯಾಗಿಯೂ ನೋಡಬಹುದಾ ಎನ್ನುವ ಹೊಸ ದೃಷ್ಟಿಕೋನವನ್ನು ಜನರಲ್ಲಿ ಹುಟ್ಟಿಸುತ್ತವೆ. ಹೊಸದಾಗಿ ನಿರ್ವಣವಾಗಿ ಸೀರಿಸ್ ಮಾದರಿಯ ಡೀಮನ್ ಸ್ಲೇಯರ್, ಜಿಜಿತ್ಸು ಕೈಸೆನ್ ಮುಂತಾದ ಆನಿಮೆಗಳಲ್ಲಿ ಕಥೆಯ ಜತೆಗೆ ಓರ್ವ ಚಿತ್ರಕಾರನ ಕಲ್ಪನೆಯಲ್ಲಿರುವ ಲೋಕವೂ ಕಾಣ ಸಿಗುತ್ತಿದೆ. ಕೇವಲ ಇವುಗಳ ಆನಿಮೇಶನ್ ನೋಡಿ ಫಿದಾ ಆಗುವ ಜನರೂ ಇದ್ದಾರೆ. ಈ ಜಪಾನಿಗರು ಎಂಥ ಅದ್ಭುತ ಆನಿಮೇಶನ್ ಮಾಡುತ್ತಾರೆ ಎಂದರೆ ಶಾಂತ ಸುಂದರ ನೀರಿನ ಚಿತ್ರಣವನ್ನು ಅವರಿಗೆ ಬೇಕಾದಂತೆ ನೈಜವಾಗಿ ಕಾಣುವಂತೆ ಮಾಡುತ್ತಾರೆ. ಈ ದೃಶ್ಯಗಳು ಆನಿಮೇಷನ್ ಎನಿಸಿದರೂ ಅದು ನಿಜ ಎಂದು ಮನಸ್ಸು ನಂಬುತ್ತದೆ, ಅದು ಆನಿಮೆ ಕಲಾವಿದನ ಕೈಚಳಕ.

    ಆನಿಮೆ ಗೆಲ್ಲುತ್ತಿದೆ ಎಂದರೆ ಸಾಲದು. ಗೆದ್ದಿರುವುದಕ್ಕೆ ಆಧಾರವೂ ನೀಡಬೇಕು. ಕರೋನಾ ನಂತರವೂ ಅಂದರೆ 2022ರಲ್ಲಿ ಆನಿಮೆ ಇಂಡಸ್ಟ್ರಿ 20.6 ಬಿಲಿಯನ್ ಡಾಲರುಗಳನ್ನು ಕಮಾಯಿಸಿದೆ. ಅಂದರೆ ಬರೋಬ್ಬರಿ ಒಂದು ಲಕ್ಷದ ಅರವತ್ತು ಸಾವಿರ ಕೋಟಿ ರೂಪಾಯಿ. ಅತಿ ಹೆಚ್ಚು ಗಳಿಕೆ ಮಾಡಿರುವ ಆನಿಮೆಗಳಲ್ಲಿ ಕೆಲವೆಂದರೆ ಡೀಮನ್ ಸ್ಲೇಯರ್, ಪೋಕೆಮನ್, ಜಿಜಿತ್ಸು ಕೈಸೆನ್, ಯುವರ್ ನೇಮ್ ಡೀಮನ್ ಸ್ಲೇಯರ್ 132 ಕೋಟಿ ರೂ. ಬಂಡವಾಳದೊಂದಿಗೆ ನಿರ್ವಣವಾಗಿತ್ತು. ಕರೋನಾ ನಂತರ ಬಿಡುಗಡೆಯಾದರೂ ಜಗತ್ತಿನಾದ್ಯಂತ 4 ಸಾವಿರ ಕೋಟಿ ರೂಪಾಯಿ ಗಳಿಸಿದೆ. ಅದರಲ್ಲಿ ಬಹುಭಾಗ ಆದಾಯ ಥಿಯೇಟರ್​ಗಳಿಂದ ಹರಿದು ಬಂದದ್ದು!

    ಇದನ್ನೂ ಓದಿ: ಯುವತಿಯನ್ನು 16 ಸಲ ಚುಚ್ಚಿ ಚುಚ್ಚಿ ಕೊಂದ ಹುಚ್ಚುಪ್ರೇಮಿ!; ಎದೆ, ಹೊಟ್ಟೆ, ಕುತ್ತಿಗೆಗೆ ಇರಿದು ಕೊಲೆ

    ಆಸ್ಕರ್ ಗೆದ್ದ ಏಕೈಕ ಆನಿಮೆ: ಚಲನ ಚಿತ್ರ ರಂಗದಲ್ಲಿ ಆಸ್ಕರ್ ಗೆದ್ದವರಿಗೆ ಭಾರಿ ಮರ್ಯಾದೆ ಇದೆ. ಅಲ್ಲಿ ನೀಡಲಾಗುವ ಅನೇಕ ವಿಭಾಗಗಳ ಪ್ರಶಸ್ತಿಗಳಲ್ಲಿ ಆನಿಮೇಶನ್ ಕೂಡ ಒಂದು. ಆದರೆ ಇಷ್ಟೆಲ್ಲಾ ಅದ್ಭುತಗಳನ್ನು ಸಾಧಿಸಿರುವ ಆನಿಮೆ ಲೋಕದಲ್ಲಿ ಆಸ್ಕರ್ ಪ್ರಶಸ್ತಿ ಸಿಕ್ಕಿದ್ದು ಕೇವಲ ಒಂದೇ ಆನಿಮೆಗೆ ಎಂದರೆ ನಂಬುತ್ತೀರಾ? ಹೌದು.. ’ಸ್ಪಿರಿಟೆಡ್ ಅವೇ’ ಹೆಸರಿನ ಆನಿಮೆಗೆ ಅತ್ಯುತ್ತಮ ಆನಿಮೇಶನ್ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಲಭಿಸಿದೆ. ಆದರೆ ಆ ಕಥೆಯ ಆಳಕ್ಕೆ ಇಳಿದವರಿಗೆ ಆಸ್ಕರ್ ಪ್ರಶಸ್ತಿಗಳ ಬಗ್ಗೆ ಅನೇಕ ಪ್ರಶ್ನೆಗಳು ಕಾಡುವುದು ಪಕ್ಕಾ.

    ಎಲ್ಲಿ ನೋಡಬಹುದು?: ಆನಿಮೆಗಳು ಭಾರತದ ಮುಖ್ಯವಾಹಿನಿಗಳಲ್ಲಿ ಪ್ರದರ್ಶನ ಕಾಣುವುದು ಅಪರೂಪ. ಆದರೂ ನರುಟೋ, ಪೋಕೆಮನ್​ನಂತಹ ಆನಿಮೆಗಳು ನಿಕಲೋಡಿಯನ್ ಮುಂತಾದ ಕಾರ್ಟೂನು ಚ್ಯಾನಲ್​ಗಳಲ್ಲಿ ಪ್ರದರ್ಶನ ಕಂಡಿವೆ. ಈಗ ಜಾಗತಿಕ ವೀಕ್ಷಕರನ್ನು ತಲುಪಲು ಇವು ಒಟಿಟಿಗಳಲ್ಲಿ ಪ್ರದರ್ಶನ ಕಾಣುತ್ತಿವೆ. ನೆಟ್​ಫ್ಲಿಕ್ಸ್​ನಲ್ಲಿ 200ಕ್ಕೂ ಹೆಚ್ಚು, ಅಮೇಜಾನ್ ಪ್ರೖೆಂನಲ್ಲಿ 35ಕ್ಕೂ ಅಧಿಕ ಆನಿಮೆ ಸಿನಿಮಾ ಹಾಗೂ ಸೀರೀಸ್​ಗಳಿವೆ. ಹಲವು ಆನಿಮೆಗಳು ಹಾಟ್​ಸಾರ್​ನಲ್ಲೂ ಲಭ್ಯವಿದ್ದು ಕ್ರಂಚಿ ರೋಲ್, ಕಾನ್​ಟಿವಿ, 9ಆನಿಮೆ ಮುಂತಾದ ಅನೇಕ ವೆಬ್​ಸೈಟ್​ಗಳಲ್ಲಿ ಲಭ್ಯ ಇವೆ. ಪ್ರಶಸ್ತಿಗಳ ವಿಚಾರದಲ್ಲಿ ಸೋಲುತ್ತಿದ್ದರೂ ಮೆಲ್ಲಮೆಲ್ಲನೆ ಜನಮಾನಸದಲ್ಲಿ ಆನಿಮೆ ಕಾಲೂರುತ್ತಿದೆ. ಭಾರತದ ಯುವಜನರಲ್ಲಿ ಆನಿಮೆ ಕ್ರೇಜ್ ದಿನೇದಿನೆ ಹೆಚ್ಚಾಗುತ್ತಿದ್ದು ಭಾರತೀಯರ ಟೇಸ್ಟ್ ಬದಲಾಗುತ್ತಿದೆ ಎಂದರೆ ತಪ್ಪಾಗಲಿಕ್ಕಿಲ್ಲ.

    ಆನಿಮೆ ಶೈಲಿಯಲ್ಲಿ ರಾಮಾಯಣ!

    ‘ರಾಮಾಯಣ: ದ ಲೆಜೆಂಡ್ ಆಫ್ ಪ್ರಿನ್ಸ್ ರಾಮ’ ಸಿನಿಮಾ 1993ರಲ್ಲಿ ತೆರೆ ಕಂಡಿದ್ದು, ಈ ಚಿತ್ರದ ಹಿಂದೆ ಜಪಾನಿನ ಆನಿಮೆ ಶೈಲಿಯ ಪ್ರಭಾವ ಬಹಳಷ್ಟಿದೆ. ಇದನ್ನು ನಿರ್ವಿುಸಲು ಬರೋಬ್ಬರಿ ಒಂದು ದಶಕವನ್ನೇ ತೆಗೆದುಕೊಳ್ಳಲಾಗಿತ್ತು. ಇದರ ಹಿಂದೆ ನಿರ್ವಪಕ ಕೊಯಿಚಿ ಸಾಸಾಕಿ, ಸ್ಕ್ರೀನ್ ಪ್ಲೇಗೆ ರಾಮ್ ಮೋಹನ್ ಹಾಗೂ ಇದರ ನಿರ್ದೇಶನದ ಹಿಂದೆ ಯೂಗೊ ಸಾಕೊ ಕೈಚಳಕವಿತ್ತು. ಇದು ಶುರುವಾಗುವ ಹಿಂದೆಯೂ ಒಂದು ಕಥೆ ಇದೆ!ಯೂಗೊ ಸಾಕೊ ’ರೆಲಿಕ್ಸ್ ಆಫ್ ರಾಮಾಯಣ’ ಹೆಸರಿನ ಆನಿಮೆ ಶೈಲಿಯ ಡಾಕ್ಯುಮೆಂಟರಿ ಮಾಡಿದ್ದರು. ಇದನ್ನು ಆಗ ಕಾರ್ಟೂನು ಎಂದೇ ಭಾವಿಸಿದ್ದ ವಿಶ್ವ ಹಿಂದೂ ಪರಿಷತ್, ಈ ಡಾಕ್ಯುಮೆಂಟರಿಯನ್ನು ಖಂಡಿಸಿ ಜಪಾನಿನ ದೂತವಾಸಕ್ಕೆ ಪತ್ರ ಬರೆದಿದ್ದರು. ಆಗ ವಿಶ್ವ ಹಿಂದೂ ಪರಿಷತ್ ಹಾಗೂ ಭಾರತ ಸರ್ಕಾರಕ್ಕೆ ಜಪಾನಿನ ಆನಿಮೆಯ ಹಿಂದೆ ಎಷ್ಟು ಜನ ಕಲಾವಿದರು ಗಂಭೀರವಾಗಿ ತಮ್ಮ ಜೀವನವನ್ನೇ ಮುಡಿಪಾಗಿಸಿದ್ದಾರೆ ಎಂದು ಯೂಗೋ ಸಾಕೊ ಮನವರಿಕೆ ಮಾಡಿದ್ದರು. ಆಗ ಹುಟ್ಟಿದ್ದೇ ’ರಾಮಾಯಣ: ದ ಲೆಜೆಂಡ್ ಆಫ್ ರಾಮ’.

    ಇದನ್ನೂ ಓದಿ: ಮಗನ ಕಾಟ ತಾಳಲಾಗದೇ ಆತನನ್ನು ಬರ್ಬರವಾಗಿ ಕೊಲೆ ಮಾಡಿದ ತಂದೆ!

    ಆನಿಮೆಗಳಿಗೆ ವಿಶಿಷ್ಟ ಕಥಾವಸ್ತು ಎಲ್ಲಿಂದ?: ಆನಿಮೆಗಳ ಬಗ್ಗೆ ಮಾತನಾಡಿ ಮಾಂಗಾಗಳ ಬಗ್ಗೆ ಮಾತನಾಡದೇ ಹೋದರೆ ಅದು ಅಕ್ಷಮ್ಯ ಅಪರಾಧವೇ ಸರಿ. ಮಾಂಗಾ ಎಂದರೆ ಜಪಾನಿನಲ್ಲಿ ಪ್ರಕಟಗೊಂಡ ಕಾಮಿಕ್ ಎಂದರ್ಥ. ಮಾಂಗಾವನ್ನು ಸರಳವಾಗಿ ವಿವರಿಸುವುದಾದರೆ ಇವು ತುಂತುರು ಬಾಲಮಂಗಳಗಳಲ್ಲಿ ನಾವು ಕಾಣುವ ಚಿತ್ರಕಥೆಗಳೇ. ಆದರೆ ಮಾಂಗಾಗಳಲ್ಲಿ ಗಂಭೀರ ಹಾಗೂ ಗಹನವಾದ ವಿಚಾರಗಳನ್ನು ಸೇರಿಸಲಾಗುತ್ತದೆ. ನಿಜ ಜಗತ್ತಿನ ಏರಿಳಿತಗಳನ್ನು ತಮ್ಮ ಕಲ್ಪನಾಲೋಕದಲ್ಲಿ ಲೇಖಕ ಇಳಿಸಿರುತ್ತಾನೆ. ಇನ್ನು ಈ ಮಾಂಗಾಗಳ ಕರõಗಳನ್ನು ವಿಶಿಷ್ಟವಾಗಿ ಮಾಂಗಾಕಾ ಎನ್ನುತ್ತಾರೆ. ಹೀಗೆ ಮಾಂಗಾಕಾ ಕೈಯಲ್ಲಿ ಅರಳುವ ಮಾಂಗಾಗಳು ಖ್ಯಾತಿ ಪಡೆದರೆ ಆ ಕೃತಿ ಮುಂದೆ ಆನಿಮೆ ಆಗಬಹುದು. ಹೀಗೆ ಒಂದು ರೌಂಡ್ ಫಿಲ್ಟರ್ ಆಗಿಯೇ ನಿರ್ಮಾಣ ಹಂತಕ್ಕೆ ಕಥೆ ಬರುವುದರಿಂದ ಆನಿಮೆಗಳು ಜನರ ಮನಸ್ಸನ್ನು ಗೆಲ್ಲುವ ಸಾಧ್ಯತೆ ಹೆಚ್ಚೇ ಇರುತ್ತದೆ.

    ರಾಜ್ಯದ ಜನತೆಗೆ ರೈಲ್ವೇಯಿಂದ ಸಿಹಿಸುದ್ದಿ: ಇಲ್ಲೆಲ್ಲ ನಿಲ್ಲಲಿವೆ ಈ ರೈಲುಗಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts