More

    1992ರಲ್ಲಿ ಬಾಬ್ರಿ ಮಸೀದಿ ಕೆಡವಿದ್ದರಿಂದಲೇ ಇಂದು ರಾಮ ಮಂದಿರ ನಿರ್ಮಾಣ ಸಾಧ್ಯವಾಗಿದೆ

    ಲಖನೌ: ಹಿಂದು ಧರ್ಮಿಯರ ಅನೇಕ ದಶಕಗಳ ಕನಸಿನಂತೆ ಇದೀಗ ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರುವ ಕ್ಷಣ ಹತ್ತಿರಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಆ.5ರಂದು ಭೂಮಿ ಪೂಜೆ ನೆರವೇರಿಸಲಿದ್ದಾರೆ. ಈ ಸಂದರ್ಭದಲ್ಲಿ ಖಾಸಗಿ ಸುದ್ದಿ ಸಂಸ್ಥೆಗೆ ಸಂದರ್ಶನ ನೀಡಿರುವ ಉತ್ತರ ಪ್ರದೇಶದ ಮಾಜಿ ಸಿಎಂ ಕಲ್ಯಾಣ್​ ಸಿಂಗ್​, 1992ರ ಡಿಸೆಂಬರ್​ 6ರಂದು ಕರಸೇವಕರು ಬಾಬ್ರಿ ಮಸೀದಿಯನ್ನು ಕೆಡವಿದ್ದರಿಂದಲೇ ಇಂದು ಆ ಪ್ರದೇಶದಲ್ಲಿ ಶ್ರೀ ರಾಮ ಮಂದಿರ ನಿರ್ಮಾಣ ಸಾಧ್ಯವಾಗಿದೆ ಎಂದು ಹೇಳಿದ್ದಾರೆ.

    ನಾನು ಅದನ್ನು ದೈವಾನುಗ್ರಹ ಎಂದು ಭಾವಿಸುತ್ತೇನೆ. 1528ರಲ್ಲಿ ಮೊಘಲ್​ ದೊರೆ ಬಾಬರ್​ನ ಸೇನಾಧಿಪತಿಯಾಗಿದ್ದ ಮೀರ್​ ಬಾಖಿ ಎಂಬಾತ ಅಯೋಧ್ಯೆಯಲ್ಲಿದ್ದ ಶ್ರೀ ರಾಮ ಮಂದಿರವನ್ನು ಧ್ವಂಸಗೊಳಿಸಿದೆ. ಅದನ್ನು ಬೇರೆಡೆ ನಿರ್ಮಿಸಬೇಕು ಎಂಬುದಕ್ಕಿಂತಲೂ ಹಿಂದುಗಳನ್ನು ಅವಮಾನಿಸಬೇಕು ಎಂಬುದು ಆತನ ಉದ್ದೇಶವಾಗಿತ್ತು. ಅಲ್ಲಿ ಆತ ನಿರ್ಮಿಸಿದ್ದ ಕಟ್ಟಡವನ್ನು ಮುಖ್ಯಮಂತ್ರಿಯಾಗಿದ್ದ ನನ್ನಿಂದ ಕೆಡವಿಸಬೇಕು ಎಂಬುದು ದೇವರ ಬಯಕೆ ಆಗಿದ್ದಿರಬೇಕು. ಹಾಗಾಗಿ ನನ್ನ ಆಡಳಿತಾವಧಿಯಲ್ಲಿ ಅದನ್ನು ಕೆಡವಲಾಯಿತು. ಆ ಕಟ್ಟಡವನ್ನು ಕೆಡವದೇ ಹೋಗಿದ್ದರೆ, ಬಾಬ್ರಿ ಮಸೀದಿ-ರಾಮ ಜನ್ಮಭೂಮಿ ವಿವಾದದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ನ್ಯಾಯಾಲಯ ಆದೇಶಿಸುವ ಸಾಧ್ಯತೆ ಇತ್ತು. ಆದರೆ ಅಂದು ಕೆಡವಿದ್ದರಿಂದ ಇಂದು ಅಲ್ಲಿ ಶ್ರೀ ರಾಮ ದೇಗುಲ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸುವ ಕ್ಷಣ ಹತ್ತಿರಾಗಿದೆ. ಇದು ನನ್ನ ಜೀವನದ ಹೆಮ್ಮೆಯ ಕ್ಷಣ ಎಂದು ಹೇಳಿದ್ದಾರೆ.

    ಕಟ್ಟಡವನ್ನು ಕೆಡವಲು ಅಂದು 3.5 ಲಕ್ಷ ಕರಸೇವಕರು ಅಯೋಧ್ಯೆಯಲ್ಲಿ ಜಮಾಯಿಸಿದ್ದರು. ಆ ಸಂದರ್ಭದಲ್ಲಿ ಅಯೋಧ್ಯೆಯ ಜಿಲ್ಲಾಧಿಕಾರಿ ನನಗೆ ಕರೆ ಮಾಡಿ, ಕೇಂದ್ರೀಯ ಪಡೆಗಳು ವಿವಾದಾತ್ಮಕ ಸ್ಥಳದತ್ತ ಧಾವಿಸುತ್ತಿರುವುದಾಗಿಯೂ, ಆದರೆ ಸಾಕೇತ್​ ಕಾಲೇಜಿನ ಬಳಿ ಅವರನ್ನು ಕರಸೇವಕರು ತಡೆದಿರುವುದಾಗಿಯೂ ಹೇಳಿದರು. ಅವರನ್ನು ಚದುರಿಸಲು ಗೋಲಿಬಾರ್​​ ಮಾಡಲು ಅನುಮತಿ ಕೋರಿದರು. ಆದರೆ ನಾನು ಅನುಮತಿ ನಿರಾಕರಿಸಿದ್ದಲ್ಲದೆ, ಲಿಖಿತ ಆದೇಶ ಹೊರಡಿಸಿದೆ. ಗೋಲಿಬಾರ್​ ಮಾಡಿದರೆ ಸಹಸ್ರಾರು ಜನರು ಸಾಯುವ ಸಾಧ್ಯತೆ ಇದೆ. ಅಲ್ಲದೆ, ದೇಶಾದ್ಯಂತ ಕಾನೂನು ಮತ್ತು ಸುವ್ಯವಸ್ಥೆ ಹದಗೆಡುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದೆ. ಈ ದಾಖಲೆ ಈಗಲೂ ಕಡತದಲ್ಲಿದೆ ಎಂದು ತಿಳಿಸಿದ್ದಾರೆ.

    ಬಾಬ್ರಿ ಮಸೀದಿ-ರಾಮ ಜನ್ಮಭೂಮಿ ಸ್ಥಳದಲ್ಲಿ ಪ್ರತಿಭಟನೆ ನಡೆಸುವ ಸಲುವಾಗಿ ಲಕ್ಷಾಂತರ ಕರಸೇವಕರು 1992ರ ಡಿಸೆಂಬರ್​ 6ರಂದು ಅಯೋಧ್ಯೆಯಲ್ಲಿ ಜಮಾಯಿಸಿದ್ದರು. ಆದರೆ ಅವರ ಪ್ರತಿಭಟನೆ ಕೈಮೀರಿ ಹೋಗಿ, ಮಸೀದಿಯನ್ನು ಧ್ವಂಸಗೊಳಿಸಿದ್ದರು. ಆಗ ಉತ್ತರ ಪ್ರದೇಶದಲ್ಲಿ ಆಡಳಿತದಲ್ಲಿದ್ದ ಕಲ್ಯಾಣ್​ ಸಿಂಗ್​ ಅವರ ಸರ್ಕಾರವನ್ನು ವಜಾಗೊಳಿಸಿದ್ದ ಕೇಂದ್ರ ಸರ್ಕಾರ, ರಾಷ್ಟ್ರಪತಿ ಆಡಳಿತವನ್ನು ಜಾರಿ ಮಾಡಿತ್ತು.

    ಇದನ್ನೂ ಓದಿ: ದೇಶದಲ್ಲೇ ತಯಾರಾಗಲಿವೆ 11 ಲಕ್ಷ ಕೋಟಿ ರೂ. ಮೌಲ್ಯದ ಸ್ಮಾರ್ಟ್​ಫೋನ್​ಗಳು; ಸ್ವಾವಲಂಬಿ ಭಾರತಕ್ಕೆ ಬಂತು ಬಲ

    ಕಳೆದ ವರ್ಷ ಬಾಬ್ರಿ ಮಸೀದಿ ಮತ್ತು ರಾಮ ಜನ್ಮಭೂಮಿ ವಿವಾದದ ಕುರಿತು ತೀರ್ಪು ನೀಡಿದ್ದ ಸುಪ್ರೀಂಕೋರ್ಟ್​ನ ಸಂವಿಧಾನ ಪೀಠ, ವಿವಾದಾತ್ಮಕ ಸ್ಥಳದಲ್ಲಿ ಶ್ರೀ ರಾಮ ಮಂದಿರ ನಿರ್ಮಿಸಲು ಅವಕಾಶ ಮಾಡಿಕೊಟ್ಟಿತ್ತು. ತನ್ಮೂಲಕ ಹಲವು ದಶಕಗಳ ಹಳೆಯದಾದ ವಿವಾದಕ್ಕೆ ತೆರೆ ಎಳೆದಿತ್ತು.
    ವಿವಾದಾತ್ಮಕ ಕಟ್ಟಡವನ್ನು ಕೆಡವಲು ಕರಸೇವಕರಿಗೆ ಅವಕಾಶ ಮಾಡಿಕೊಡುವ ನನ್ನ ಅಂದಿನ ನಿರ್ಧಾರದ ಬಗ್ಗೆ ಇಂದಿಗೂ ನನಗೆ ಹೆಮ್ಮೆ ಇದೆ. ಅಂದು ನಾನು ನನ್ನ ಸರ್ಕಾರವನ್ನು ಕಳೆದುಕೊಂಡಿರಬಹುದು. ಆದರೆ, ಲಕ್ಷಾಂತರ ಕರಸೇವಕರನ್ನು ರಕ್ಷಿಸಿದ ತೃಪ್ತಿ ಇದೆ. ಇದೀಗ ಅಂದು ಕಟ್ಟಡ ಕೆಡವಿದ್ದರಿಂದಲೇ ಇಂದು ಅಲ್ಲಿ ದೇವಸ್ಥಾನ ನಿರ್ಮಾಣಗೊಳ್ಳುತ್ತಿರುವ ಸಂತಸವೂ ಇದೆ ಎಂದು ಕಲ್ಯಾಣ್​ ಸಿಂಗ್​ ಹೇಳಿದ್ದಾರೆ.

    ಅಯೋಧ್ಯೆಯಲ್ಲಿ ಭವ್ಯವಾದ ಶ್ರೀ ರಾಮ ಮಂದಿರ ನಿರ್ಮಾಣವಾಗುವುದರಿಂದ, ಆ ಸ್ಥಳ ಜಾಗತಿಕ ಪ್ರವಾಸಿ ತಾಣವಾಗಿ ಮಾರ್ಪಡಲಿದೆ. ದೇಗುಲದ ಸುತ್ತ ಹೊಸ ಅಯೋಧ್ಯೆ ನಿರ್ಮಾಣಗೊಳ್ಳಲಿದೆ. ಪುರಾತನ ನಗರಿಗೆ ಪೂರಕವಾಗಿ ಅದು ಹರಡಿಕೊಳ್ಳಲಿದೆ. ಇದರಿಂದಾಗಿ ಆ ಭಾಗದಲ್ಲಿ ಉದ್ಯೋಗ ಸೃಷ್ಟಿಯಾಗುವ ಜತೆಗೆ, ಅಭಿವೃದ್ಧಿಯೂ ಆಗಲಿದೆ ಎಂದು ತಿಳಿಸಿದ್ದಾರೆ.

    ಆ ಸ್ಥಳದಲ್ಲಿ ದೇವಸ್ಥಾನ ನಿರ್ಮಿಸುವ ನನ್ನ ಕನಸು ನನಸಾಗುತ್ತಿದೆ. ಅಲ್ಲಿಯವರೆಗೂ ಜೀವಂತವಾಗಿರಬೇಕು ಎಂಬುದು ನನ್ನ ಅಭಿಲಾಷೆ ಆಗಿದೆ. ಒಂದು ವೇಳೆ ಸತ್ತರೂ ಅಯೋಧ್ಯೆಯಲ್ಲೇ ಮರುಜನ್ಮ ಎತ್ತಬೇಕು ಎಂಬುದು ನನ್ನ ಹೆಬ್ಬಯಕೆ ಆಗಿದೆ ಎಂದು ಹೇಳಿದ್ದಾರೆ.

    ಬ್ಲ್ಯಾಕ್​ ಆಂಡ್​ ವೈಟ್​ ಚಾಲೆಂಜ್​ನಲ್ಲಿ ಮಹಿಳಾ ಕ್ರೀಡಾತಾರೆಯರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts