More

    ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ


    ಮೈಸೂರು : ಸರ್ಕಾರಿ ವೈದ್ಯರಾಗಿಯೂ ಖಾಸಗಿ ಕ್ಲಿನಿಕ್ ತೆರೆದು ಹಣ ಸುಲಿಗೆ ಮಾಡುತ್ತಿರುವ ವೈದ್ಯರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಸದಸ್ಯರು ಮಂಗಳವಾರ ತಿ.ನರಸೀಪುರ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಮುಂಭಾಗ ಪ್ರತಿಭಟನೆ ನಡೆಸಿದರು.


    ಜಿಲ್ಲಾ ಸಂಚಾಲಕ ಆಲಗೂಡು ಡಾ.ಚಂದ್ರಶೇಖರ್ ಮಾತನಾಡಿ, ಸ್ಥಳೀಯ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿರುವ 100 ಹಾಸಿಗೆ ಆಸ್ಪತ್ರೆಯನ್ನು 200 ಹಾಸಿಗೆ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಬೇಕು. ಸಾರ್ವಜನಿಕ ಆಸ್ಪತ್ರೆಯ ಕೆಲವೊಂದು ಪರೀಕ್ಷೆ ಮತ್ತು ನುರಿತ ವೈದ್ಯರು ಹಾಗೂ ಇತರೆ ಸೌಲಭ್ಯ ಇಲ್ಲದ ಕಾರಣ ಮೈಸೂರಿಗೆ ಹೋಗಬೇಕಾದ ಪರಿಸ್ಥಿತಿ ಇದೆ ಎಂದು ಕಿಡಿಕಾರಿದರು.


    ಕಿಡ್ನಿ ತೊಂದರೆಯಿರುವ ರೋಗಿಗಳು ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾ ಮತ್ತು ಖಾಸಗಿ ಆಸ್ಪತ್ರೆಗೆ ತೆರಳಿ ಸಾವಿರಾರು ರೂ. ಖರ್ಚು ಮಾಡುತ್ತಿದ್ದಾರೆ. ಹಾಗಾಗಿ ತಾಲೂಕು ಆಸ್ಪತ್ರೆಯಲ್ಲಿ ಪ್ರತಿಯೊಬ್ಬ ರೋಗಿಗೂ ಚಿಕಿತ್ಸೆ ದೊರಕುವಂತೆ ಮಾಡಬೇಕು ಎಂದು ಆಗ್ರಹಿಸಿದರು.


    ಸಮಿತಿಯ ತಾಲೂಕು ಸಂಚಾಲಕ ಕೆಂಪಯ್ಯನಹುಂಡಿ ಆರ್.ರಾಜು ಮಾತನಾಡಿ, ಸರ್ಕಾರಿ ಆಸ್ಪತ್ರೆಯಲ್ಲಿ ಶವಾಗಾರ ಇದ್ದು ಇಲ್ಲದಂತಾಗಿದೆ. ಜಿಲ್ಲಾ ಆಸ್ಪತ್ರೆಯ ಶವಾಗಾರದಂತೆ ಇಲ್ಲಿಯೂ ಸಹ ಶವ ಸಂಸ್ಕಾರ ಕೊಠಡಿ ನಿರ್ಮಿಸಿ ಸದರಿ ಕಟ್ಟಡದಲ್ಲೇ ಮರಣೋತ್ತರ ಪರೀಕ್ಷೆ ನಡೆಯುವಂತೆ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.


    ಸಮಿತಿಯ ಜಿಲ್ಲಾ ವಿಭಾಗೀಯ ಸಂಚಾಲಕ ಕನ್ನಾಯಕನಹಳ್ಳಿ ಮರಿಸ್ವಾಮಿ, ಮನೋಜ್ ಕುಮಾರ್, ಸೋಮನಾಥಪುರ ಗೋವಿಂದ ರಾಜು, ಎಲ್.ರಾಜಶೇಖರ್, ಚೌಹಳ್ಳಿ ಪರಶುರಾಮ, ಎಡದೊರೆ ಚಂದ್ರಪ್ಪ, ಕೊಳತ್ತೂರು ಪ್ರಭಾಕರ್, ಮಾರನ ಪುರ ಕೇಶವ ಮೂರ್ತಿ, ಮಹದೇವಸ್ವಾಮಿ, ಕೇಶವಮೂರ್ತಿ, ಜಯಣ್ಣ, ಕೂಡ್ಲೂರು ಶಿವನಂಜು, ರವಿಕಾಂತ್,ಉಮೇಶ್, ಮಂಚಯ್ಯ, ಮಹದೇವ ಸ್ವಾಮಿ, ಬೆನಕನಹಳ್ಳಿ ಸ್ವಾಮಿ ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts