More

    ಹಣಕ್ಕಾಗಿ ಬಾರ್ ಮಾಲೀಕರ ಜತೆ ಅಬಕಾರಿ ಮಹಿಳಾ ಅಧಿಕಾರಿ ವಾಗ್ವಾದ; ವಿಡಿಯೋ ವೈರಲ್!

    | ಪರಶುರಾಮ ಭಾಸಗಿ ವಿಜಯಪುರ

    ಡಿಸಿಗೂ ಜೆಸಿಗೂ ತಲುಪಿದೆ ನನ್ನದೇಕಿಲ್ಲ? ಯಾರದ್ದು ಕೊಡತೀರೋ ಬಿಡತೀರೋ…ನನ್ನದಂತೂ ಬೇಕು.. ನನ್ನದು ಬಿಟ್ಟು ಅವರದ್ದು ಹೇಗೆ ಮಾಡಿದಿರಿ..? ಕೊಡುವುದಿದ್ದರೆ ನೀಟಾಗಿ ಕೊಡಿ, ಒಲ್ಲೆ ಅಂದ್ರೆ ನಾಳೆನೇ ಟೈಮ್ ಹಚ್ಚಿ ತೆಗೆದುಕೊಳ್ಳುತ್ತೇನೆ.!

    ಇದು ಮುದ್ದೇಬಿಹಾಳ ತಾಲೂಕಿನ ಅಬಕಾರಿ ಇಲಾಖೆಯಲ್ಲಿ ನಡೆದ ಅಬಕಾರಿ ಇನ್​ಸ್ಪೆಕ್ಟರ್ ಜ್ಯೋತಿ ಮೇತ್ರಿ ಹಾಗೂ ಬಾರ್ ಮಾಲೀಕರ ನಡುವಿನ ಸಂಭಾಷಣೆಯ ಝಲಕ್. ಸುದೀರ್ಘ ಅವಧಿವರೆಗೆ ನಡೆದ ಈ ಸಂಭಾಷಣೆಯ ವಿಡಿಯೋ ಇದೀಗ ವೈರಲ್ ಆಗಿದ್ದು ಸಂಪೂರ್ಣವಾಗಿ ಕೊಡು ತೆಗೆದುಕೊಳ್ಳುವ ವಿಚಾರವೇ ಚರ್ಚೆಯಾಗಿದೆ.

    ಹೇಗಿತ್ತು ಸಂಭಾಷಣೆ?: ಅಬಕಾರಿ ಅಧಿಕಾರಿ ಜ್ಯೋತಿ ಮಾತನಾಡುತ್ತಾ, ‘ಬಾಗೇವಾಡಿ, ವಿಜಯಪುರ, ಸಿಂದಗಿ, ಇಂಡಿದು ಮುಗೀತು. ಜೆಸಿಗೂ ಆಯಿತು. ಎಲ್ಲರದೂ ಅಪ್​​ಡೇಟ್ ಮುಗೀತು. ರಿನ್ಯೂ ಮುಗೀತು. ನನ್ನದೊಂದೇ ಏಕೆ ಕಾಡುತ್ತಿದ್ದೀರಿ ಹೇಳಿ’ ಎಂದು ಬಾರ್ ಮಾಲೀಕರನ್ನು ಪ್ರಶ್ನಿಸಿದ್ದು ವಿಷಯ ಏನೆಂಬುದನ್ನು ಸ್ಪಷ್ಟಪಡಿಸುತ್ತದೆ.

    ‘ಬೇರೆ ತಾಲೂಕಿನವರೊಂದಿಗೆ ಕಂಪೇರ್ ಮಾಡಬೇಡಿ, ಎಲ್ಲರಿಗಿಂತಲೂ ಮೊದಲು ಮಾಡಿದ್ದೇವೆ ಎಂಬುದನ್ನು ತಲೆಯಿಂದ ತೆಗೆಯಿರಿ. ಬಾಗೇವಾಡಿಯವರೇ ಮೊದಲು ಕೊಟ್ಟಿದ್ದಾರೆ. ಬೇರೆ ತಾಲೂಕಿನವರೊಂದಿಗೆ ಕಂಪೇರ್ ಮಾಡುತ್ತೀರಿ ಎಂದರೆ ಅವರಂಗೇ ಇದ್ದು ಬಿಡಿ’ ಎನ್ನುತ್ತಿದ್ದಂತೆ ಜುಲೈ ತಿಂಗಳ ಲೆಕ್ಕಾಚಾರ ಮುಂದಿಡುವ ವ್ಯಕ್ತಿಯೋರ್ವ ‘ನಮಗೂ ಜುಲೈದು ಇಟ್ಟುಕೊಂಡು ಭಾರ ಆಗಿದೆ. ಯಾವಾಗಾದರೂ ಕೊಡುವುದೈತಿ ತೆಗೆದುಕೊಳ್ಳುವುದೈತಿ, ಸುಮ್ಮನೇ ಕಿರಿಕಿರಿ ಏಕೆ? ಕೊಟ್ಟುಬಿಡೋಣ’ ಎಂದು ಸಹವರ್ತಿಗಳಿಗೆ ಹೇಳುತ್ತಾರೆ.

    ಆಗ ಅಧಿಕಾರಿ ‘ಇದರಲ್ಲಿ ನನ್ನ ಒಬ್ಬಾಕಿದು ಇರಲ್ಲ. ನಿಮ್ಮದು ಹೇಗೆ ಡಿಸೈಡ್ ಇರುತ್ತೋ ಹಾಗೆ ನಮಗೂ ಮೇಲಿನವರದು ಇರುತ್ತದೆ. ಸುಮ್ಮನೆ ಹಠ ಹಿಡಕೊಂಡು ಕುಳಿತರೆ ಆಗುವುದಲ್ಲ ಹೋಗುವುದಲ್ಲ. ಒಲ್ಲೆ ಅಂದ್ರ ನಾಳೆನೇ ಟೈಮ್ ಹಚ್ಚಿ ವಸೂಲಿ ಮಾಡಿಕೊಳ್ಳುತ್ತೇನೆ‘ ಎನ್ನುವರಲ್ಲದೇ ‘ನಾನು ಎಲ್ಲದಕ್ಕೂ ಹೊಂದಾಣಿಕೆ ಆಗಿಯೇ ಹೊರಟಿದ್ದೇನೆ. ಆದರೂ ಈ ರೀತಿ ಕಾಡುವುದು ಸರಿಯಲ್ಲ’ ಎನ್ನುತ್ತಾರೆ.

    ಡಿಸಿ-ಜೆಸಿಗೂ ತಲುಪಿದೆ..: ಇನ್‌ಸ್ಪೆಕ್ಟರ್ ಜ್ಯೋತಿ ಮಾತನಾಡುತ್ತ, ‘ಡಿಸಿ ಸರ್​​ಗೆ ಕೊಟ್ಟು ಬಂದೀರಿ. ಅವರೇ ಜೆಸಿ ಸರ್ ಮುಂದೆ ತಗೊಂಡಿನಿ ಎಂದು ಓಪನ್ ಆಗಿ ಹೇಳತಾರೆ’ ಎಂದಾಗ ಮಾಲೀಕರು ‘ಒಬ್ಬರಾದರೂ ಡಿಸಿ, ಜೆಸಿಗೆ ಕೊಟ್ಟಿದ್ದು ಹೇಳಲಿ‘ ಎನ್ನುತ್ತಾರೆ. ‘ಡಿಸಿ ಸರ್ ಸುಳ್ಳು ಹೇಳುತ್ತಾರಾ? ಹೋಗೋದು ಹೋಗೋದೆ… ನೀವು ಕೊಟ್ಟಿಲ್ಲ ಎಂದು ಹೇಳಬಹುದು ಆದರೆ, ಹಿಂದಿನ ಬಾಗಿಲಿನಿಂದ ಹೇಗೆ ಹೋಗಬೇಕೋ ಹಾಗೆ ಹೋಗೋದೆ’ ಎನ್ನುತ್ತಾರೆ ಇನ್‌ಸ್ಪೆಕ್ಟರ್ ಜ್ಯೋತಿ. ಇದನ್ನು ಮಾಲೀಕರು ಅಲ್ಲಗಳೆದಾಗ ‘ತಗೊಂಡೋವ್ರೆ ಹೇಳಿದ್ದಾರೆ. ನಾಲ್ಕು ತಾಲೂಕಿನಿಂದ ತಗೊಂಡಿನಿ, ವಿಜಯಪುರ ಒಂದೇ ಬಾಕಿ ಎಂದಿದ್ದಾರೆ. ಫೋನ್ ಹಚ್ಚಿ ಬೇಕಾದರೆ ಓಪನ್ ಸೌಂಡ್ ಇಟ್ಟು ಮಾತಾಡಸ್ತೀನಿ ಮತ್ತೆ’ ಎನ್ನುತ್ತಾರಲ್ಲದೇ ‘ಅವರದ್ದು ಕೊಡತೀರೋ ಬಿಡುತ್ತೀರೋ ಗೊತ್ತಿಲ್ಲ, ನನ್ನದು ಕೊಡಿ’ ಎಂದು ಇನ್‌ಸ್ಪೆಕ್ಟರ್ ಜ್ಯೋತಿ ಕಡ್ಡಿ ಮುರಿದಂತೆ ನುಡಿಯುತ್ತಾರೆ.

    ನನ್ನದು ಬಿಟ್ಟು ಅವರದ್ದು ಹೇಗೆ ಮಾಡಿದಿರಿ?: “ಮುದ್ದೇಬಿಹಾಳದ್ದು ತಗೊಂಡ್ರೀ ಸರ್? ಅಂತ ಡಿಸಿ ಅವರಿಗೆ ಕೇಳಿದಾಗ ‘ಹೂಂನಮ್ಮ ಬಂದಾದ ನನಗ’ ಅಂದಿದ್ದಾರೆ. ಅಲ್ರಿ ಸರ್ ನನಗೆ ಬಿಟ್ಟು ನಿಮಗೆ ಹೇಗೆ ತಂದು ಕೊಟ್ಟರೆಂದು ಡಿಸಿ ಜತೆ ಜಗಳಾಡುತ್ತೇನೆ” ಎಂದಿದ್ದಾರೆ ಜ್ಯೋತಿ. ‘ನನ್ನದು ಬಿಟ್ಟು ಅವರದ್ದು ಹೇಗೆ ಮಾಡಿದಿರಿ? ಕೊಡುವುದು ಮಾಡುವುದು ಇದ್ದರೆ ನೀಟಾಗಿ ಮಾಡಿ. ಹೆಚ್ಚಿಗೆ ಏನಾದರೂ ಡಿಮ್ಯಾಂಡ್ ಮಾಡಿದೀನಾ?’ ಎಂದು ಪ್ರಶ್ನಿಸುತ್ತಾರೆ.

    ಅಲ್ಲದೇ, ‘ಸಿಎಂವರೆಗೂ ಹೋಗಿ ನಿಮ್ಮನ್ನು ಸೇವ್ ಮಾಡಿದ್ದೀನಿ. ಇಷ್ಟೆಲ್ಲಾ ಮಾಡಿದ ಮೇಲೆ ಹದಿನೈದು ಸಾವಿರ ರೂಪಾಯಿ ಹುಟ್ಟಲ್ಲ ನಿಮಗ? ನಿಮಗೇನು ಅಂಥದ್ದು ಹಾಳು ಮಾಡಿದ್ದೇನು ನಾ? ಹದಿನೈದು ಸಾವಿರ ರೂಪಾಯಿಗೆ ಆಗಲ್ಲ ಆಗಲ್ಲ ಎಂದು ಹದಿನೈದು ಸಲ ಬರುತ್ತೀರಿ’ ಎಂದ ಅಧಿಕಾರಿ ಅಸಮಾಧಾನ ಹೊರಹಾಕುತ್ತಾರೆ.

    ನಾನು ಯಾರ ಸಭೆಯನ್ನೂ ಕರೆದಿಲ್ಲ. ಯಾರ ಜತೆಗೂ ನಾನೇನೂ ಮಾತನಾಡಿಲ್ಲ. ವಿಡಿಯೋ ಬಗ್ಗೆ ನನಗೇನೂ ಗೊತ್ತೇ ಇಲ್ಲ.

    | ಜ್ಯೋತಿ ಮೇತ್ರಿ, ಅಬಕಾರಿ ಇನ್​ಸ್ಪೆಕ್ಟರ್​, ಮುದ್ದೇಬಿಹಾಳ

    ಅಂತಿಮವಾಗಿ ಬಾರ್ ಮಾಲೀಕರು ‘ಎರಡು ತಿಂಗಳದ್ದೇನಿದೆಯೋ ಅದನ್ನು ಕೊಟ್ಟು ಬಿಡೋಣ. ಅವರ ಮರುಗ ಹಚ್ಚಿಕೊಳ್ಳೋದು ಬೇಡ. ಹೆಣ್ಣುಮಕ್ಕಳ ಮರುಗ ಹತ್ತುವುದು ಸರಿಯಲ್ಲ. ಎಲ್ಲಿ ನಿಮ್ಮ ಜತೆ ಗುದ್ದಾಡಿಕೊಂಡು ಹೋಗೋದು. ಅದೇನೀದೆಯೋ ಅದನ್ನು ಒಳ್ಳೆಯದು ಮಾಡಿ ಮುಗಿಸೋಣ’ ಎನ್ನುತ್ತಾರೆ. ಅಲ್ಲದೇ, ‘ದೊಡ್ಡಮನಸ್ಸು ಮಾಡಿದ್ದೀರಿ. ಎರಡು ತಿಂಗಳದ್ದು ಕೊಟ್ಟು ಮುಗಿಸಿ ಬಿಡಿ. ಮುಂದಿನ ಸಲ ಯಾವ ಡೇಟ್‌ಗೆ ಅಂತೀರಿ ಆ ಡೇಟ್‌ಗೆ ಮಾಡೋಣ. ಸೋಮವಾರ ಎಲ್ಲ ರೊಕ್ಕ ತಂದು ಕೊಟ್ಟು ಬಿಡುತ್ತೇವೆ. ಮಂಗಳವಾರ ಇಲ್ಲ ಬುಧವಾರ ಕೊಟ್ಟು ಬಿಡಿ‘ ಎಂದು ಬೇರೊಬ್ಬ ಚರ್ಚೆಗೆ ತೆರೆ ಎಳೆಯಲೆತ್ನಿಸುತ್ತಾನೆ.

    ಆಗ ಅಧಿಕಾರಿ ‘ನಮಗೆ ಇರೋದೊಂದೆ ಸೋರ್ಸ್. ಇದಕ್ಕೂ ಕಲ್ಲು ಹಾಕಿದರೆ ಹೇಗೆ? ಜುಲೈದು ಕೊಡು ಫಸ್ಟ್. ಎಲ್ಲರೂ ಕೂಡಿ ತಂದು ಕೊಡೋದು ಬೇಡ. ನಮ್ಮ ಮಂದಿಯನ್ನ ಕಳುಹಿಸುತ್ತೇನೆ’ ಎಂದಾಗ ಬಾರ್ ಮಾಲೀಕರು, ‘ನಾವೇ ಎಲ್ಲರೂ ಸೇರಿ ಕಲೆಕ್ಟ್ ಮಾಡಿಕೊಡುತ್ತೇವೆ, ಜುಲೈದು ಹುಂಡಿಗೆ ಹಾಕಿ ಬಿಡೋಣ’ ಎನ್ನುವರಲ್ಲದೇ, ‘ಇನ್ಮುಂದೆ 20ನೇ ತಾರೀಖು ದಾಟಿದರೆ ಕೇಳಿ’ ಎಂದು ಚರ್ಚೆ ಮುಗಿಸುತ್ತಾರೆ. ಒಟ್ಟಿನಲ್ಲಿ ಅಧಿಕಾರಿ ಮತ್ತು ಮಾಲೀಕರ ಮಧ್ಯೆ ನಡೆದ ಈ ಸಂಭಾಷಣೆ ಅಬಕಾರಿ ಇಲಾಖೆಯ ಕೊಡು ತೆಗೆದುಕೊಳ್ಳುವ ವಿಚಾರವನ್ನು ಬಯಲಿಗೆಳೆದಿದ್ದು, ತೀವ್ರ ಚರ್ಚೆಗೆ ಕಾರಣವಾಗಿದೆ.

    ‘ದೊಡ್ಡ’ದಾದ ಜಾತಿ-ಮೀಸಲಾತಿ ವಿವಾದ, ಐತಿಹಾಸಿಕ ದೇವಸ್ಥಾನದ ಟೆಂಡರೇ ರದ್ದು!

    ಹುಳಿ ಬರುವ ಮೊದಲೇ ಗುರಿ ತಲುಪುವ ಇಡ್ಲಿ-ದೋಸೆ ಹಿಟ್ಟು; ಹೊಸ ರೀತಿಯ ಸರಬರಾಜು..

    ಪತಿಯ ಅಂತ್ಯಕ್ರಿಯೆ ಸಂದರ್ಭ ಪತ್ನಿಗೆ ಹೃದಯಾಘಾತ; ಒಂದೇ ದಿನ ದಂಪತಿಯ ಸಾವು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts