More

    ಅರ್ಹರಿಗೆ ಕೋವಿಡ್ ಪ್ಯಾಕೇಜ್ ತಲುಪಿಸಿ

    ಹಾವೇರಿ: ಕರೊನಾ 2ನೇ ಅಲೆಯ ಲಾಕ್​ಡೌನ್ ಘೊಷಣೆಯಿಂದ ಸಂಕಷ್ಟದಲ್ಲಿರುವ ಹೂವು, ಹಣ್ಣು, ತರಕಾರಿ ಬೆಳೆಗಾರರು, ಕ್ಷೌರಿಕರು, ಶ್ರಮಿಕರು, ಆಟೋ ಟ್ಯಾಕ್ಸಿ ಚಾಲಕರು ಹಾಗೂ ಕಾರ್ವಿುಕರಿಗೆ ತ್ವರಿತವಾಗಿ ಪರಿಹಾರ ವಿತರಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಸೂಚಿಸಿದರು.

    ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೋವಿಡ್ ಪರಿಹಾರ ಪ್ಯಾಕೇಜ್ ಫಲಾನುಭವಿಗಳನ್ನು ಗುರುತಿಸುವ ಕುರಿತು ಸೋಮವಾರ ನೋಡಲ್ ಇಲಾಖಾ ಅಧಿಕಾರಿಗಳ ಸಭೆ ನಡೆಸಿ, ಸರ್ಕಾರದ ಮಾರ್ಗಸೂಚಿಯಂತೆ ಅರ್ಹರನ್ನು ಗುರುತಿಸಿ ಇಲಾಖಾವಾರು ಜನರಿಗೆ ಮಾಹಿತಿ ನೀಡಬೇಕು. ಅರ್ಹರಿಗೆ ಸರ್ಕಾರದ ಪರಿಹಾರ ತಲುಪಿಸುವ ನಿಟ್ಟಿನಲ್ಲಿ ಕ್ರಮವಹಿಸಬೇಕು ಎಂದರು.

    ಸರ್ಕಾರ ಹೂವು, ಹಣ್ಣು, ತರಕಾರಿ ಬೆಳೆಗಾರರಿಗೆ ಒಂದು ಹೆಕ್ಟೇರ್​ಗೆ ಮಿತಿಗೊಳಿಸಿ ಪ್ರತಿ ಹೆಕ್ಟೇರ್ 10 ಸಾವಿರ ರೂ. ಪರಿಹಾರ ಘೊಷಿಸಿದೆ. ಕಟ್ಟಡ ಕಾರ್ವಿುಕರಿಗೆ ತಲಾ 3 ಸಾವಿರ ರೂ., ಆತ್ಮನಿರ್ಭರ ನಿಧಿಯಲ್ಲಿ ನೋಂದಣಿ ಹೊಂದಿದ ರಸ್ತೆ ಬದಿ ವ್ಯಾಪಾರಸ್ಥರಿಗೆ ತಲಾ 2 ಸಾವಿರ ರೂ., ಕಲಾವಿದರು ಹಾಗೂ ಕಲಾ ತಂಡಗಳಿಗೆ ತಲಾ 3 ಸಾವಿರ ರೂ., ಅಸಂಘಟಿತ ಕಾರ್ವಿುಕರಾದ ಕ್ಷೌರಿಕರು, ಅಗಸರು, ಟೈಲರ್​ಗಳು, ಹಮಾಲಿಗಳು, ಚಿಂದಿ ಆಯುವವರು, ಕುಂಬಾರರು, ಭಟ್ಟಿ ಕಾರ್ವಿುಕರು, ಮೆಕಾನಿಕ್, ಕಮ್ಮಾರರು, ಚಮ್ಮಾರರು, ಮನೆ ಮನೆ ಕೆಲಸ ಮಾಡುವ ಗೃಹ ಕಾರ್ವಿುಕರಿಗೆ ತಲಾ 2 ಸಾವಿರ ಪರಿಹಾರ, ಆಟೋ ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್ ಚಾಲಕರಿಗೆ ತಲಾ 3 ಸಾವಿರ ರೂ. ಪರಿಹಾರ ನೀಡಲು ಸರ್ಕಾರ ಈಗಾಗಲೇ ಘೊಷಣೆ ಮಾಡಿದೆ ಎಂದರು.

    ತೋಟಗಾರಿಕೆ ಇಲಾಖಾ ಅಧಿಕಾರಿಗಳಿಗೆ 2021-22ನೇ ಸಾಲಿನ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ಹೂವು, ಹಣ್ಣು ಮತ್ತು ತರಕಾರಿ ಬೆಳೆಗಾರರಿಗೆ ಪ್ರತಿ ಹೆಕ್ಟೇರ್​ಗೆ 10 ಸಾವಿರ ರೂ.ಗಳಂತೆ ಗರಿಷ್ಠ 1 ಹೆಕ್ಟೇರ್​ಗೆ ಮಿತಿಗೊಳಿಸಿ ಪರಿಹಾರಧನ ವಿತರಿಸಲು ಆದೇಶಿಸಲಾಗಿದೆ. ಪರಿಹಾರ ಧನವನ್ನು 2020-21ನೇ ಸಾಲಿನ ಬೆಳೆ ಸಮೀಕ್ಷೆಯಲ್ಲಿ ಹೂವು, ಹಣ್ಣು ಮತ್ತು ತರಕಾರಿ ಬೆಳೆಗಳು ನಮೂದಾಗಿರುವ ರೈತರಿಗೆ ಮಾತ್ರ ವಿತರಿಸಲು ಸರ್ಕಾರದ ಮಾರ್ಗಸೂಚಿಯಲ್ಲಿ ಅವಕಾಶವಿದೆ. ಹಸಿರು ಪೋರ್ಟಲ್​ನಲ್ಲಿ ರೈತರು ನೋಂದಾಯಿಸಿಕೊಳ್ಳುವಂತೆ ತೋಟಗಾರಿಕಾ ಉಪನಿರ್ದೇಶಕರು ಕ್ರಮವಹಿಸಬೇಕು ಎಂದರು.

    ಕಟ್ಟಡ ಕಾರ್ವಿುಕರು ಮತ್ತು ಅಸಂಘಟಿತ ಕಾರ್ವಿುಕರಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸೇವಾ ಫೋರ್ಟಲ್​ನಲ್ಲಿ ನೋಂದಣಿ ಮಾಡಲು ಕಾರ್ವಿುಕ ಇಲಾಖೆ ಅಧಿಕಾರಿಗಳು ಅಗತ್ಯ ಕ್ರಮವಹಿಸಬೇಕು. ಆಧಾರ್ ಲಿಂಕ್, ಬ್ಯಾಂಕ್ ಖಾತೆ ಹಾಗೂ ಲೇಬರ್ ಕಾರ್ಡ್ ಹೊಂದಿದ ಹಾಗೂ ಇಲಾಖೆಯ ನಿಯಮಾವಳಿ ಪ್ರಕಾರ ವರ್ಷಕ್ಕೆ ಕನಿಷ್ಠ 90 ದಿನ ಕೆಲಸ ಮಾಡಿರಬೇಕು. ಈ ಕುರಿತು ಮಾರ್ಗಸೂಚಿ ಅನುಸಾರ ಅರ್ಹ ಫಲಾನುಭವಿಗಳಿಗೆ ಪರಿಹಾರ ದೊರಕುವಂತೆ ಮಾಡಬೇಕು ಎಂದರು.

    ಕೋವಿಡ್ ನಿರ್ವಹಣೆಗಾಗಿ ಪ್ರತಿ ಗ್ರಾಪಂಗೆ ಎಸ್​ಡಿಆರ್​ಎಫ್ ನಿಧಿಯಿಂದ ತಲಾ 50 ಸಾವಿರ ರೂ. ಮುಂಗಡ ಹಣ ನೀಡಲಾಗಿದೆ. ಎಸ್​ಡಿಎಫ್ ಮಾರ್ಗಸೂಚಿಯಂತೆ ಅನುದಾನ ವೆಚ್ಚಮಾಡಬೇಕು ಎಂದರು.

    ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಹಾಗೂ ಭೂ ಅಭಿವೃದ್ಧಿ ಬ್ಯಾಂಕ್​ಗಳಿಂದ ಪಡೆದಿರುವ ಸಣ್ಣ, ಮಧ್ಯಮ ಮತ್ತು ದೀರ್ಘಾವಧಿ ಸಾಲದ ಕಂತುಗಳನ್ನು ಮರುಪಾವತಿ ಮಾಡಲು ಜುಲೈ 31ರವರೆಗೆ ಅವಧಿ ವಿಸ್ತರಿಸಲಾಗಿದೆ. ಈ ಕುರಿತು ಸಹಕಾರಿ ಸಂಘದ ಉಪನಿಬಂಧಕರು ಸೂಕ್ತ ಕ್ರಮಕೈಗೊಳ್ಳಬೇಕು ಎಂದರು.

    ಸಭೆಯಲ್ಲಿ ಜಿಪಂ ಸಿಇಒ ಮಹಮ್ಮದ ರೋಷನ್, ಅಪರ ಜಿಲ್ಲಾಧಿಕಾರಿ ಎಂ. ಯೋಗೇಶ್ವರ, ಕೃಷಿ ಜಂಟಿ ನಿರ್ದೇಶಕ ಬಿ. ಮಂಜುನಾಥ, ಪ್ರಾದೇಶಿಕ ಸಾರಿಗೆ ಅಧಿಕಾರಿ ವಸೀಮಬಾಬಾ ಮುದ್ದೆಬೀಹಾಳ, ತೋಟಗಾರಿಕೆ ಅಧಿಕಾರಿ ವಿಶ್ವನಾಥ ಇತರರಿದ್ದರು.

    ಕಲಾಸೇವೆ ಕನಿಷ್ಠ 10 ವರ್ಷ ಮಾಡಿರಬೇಕು

    ಕಲಾವಿದರು ಪರಿಹಾರ ಪಡೆಯಲು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಕನಿಷ್ಠ 10 ವರ್ಷಗಳ ಕಲಾಸೇವೆ ಮಾಡಿರಬೇಕು. 35 ವರ್ಷ ಮೇಲ್ಪಟ್ಟರಾಗಿರಬೇಕು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಮಾಸಾಶನ ಪಡೆಯುತ್ತಿರಬಾರದು ಹಾಗೂ ಯಾವುದೇ ಸರ್ಕಾರಿ ನೌಕರರಾಗಿರಬಾರದು. ಸರ್ಕಾರದ ಮಾರ್ಗಸೂಚಿ ಅನುಸಾರ ಕಲಾವಿದರಿಗೆ ಪರಿಹಾರ ನೀಡುವಲ್ಲಿ ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

    ಉಚಿತ ಊಟ

    ಹಾವೇರಿ ಮತ್ತು ಹಿರೇಕೆರೂರನಲ್ಲಿರುವ ಇಂದಿರಾ ಕ್ಯಾಂಟಿನ್​ಗಳಲ್ಲಿ ಉಚಿತ ಊಟದ ವ್ಯವಸ್ಥೆ ಮಾಡಬೇಕು. ದಿನಕ್ಕೆ ಕನಿಷ್ಠ 500 ಜನರಿಗಾದರೂ ಪ್ರತಿ ಕ್ಯಾಂಟಿನ್​ನಿಂದ ಊಟ ಪೂರೈಸಲು ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts