More

    ದೆಹಲಿಯಲ್ಲಿ ಕೊವಿಡ್​-19 ಸಮುದಾಯ ಪ್ರಸರಣ ಪ್ರಾರಂಭವಾಗಿದೆಯಾ? ಅಮಿತ್​ ಷಾ ನೀಡಿದ್ದಾರೆ ವಿವರಣೆ…

    ನವದೆಹಲಿ: ದೇಶದ ಕೊವಿಡ್​-19 ಹಾಟ್​ಸ್ಫಾಟ್​ಗಳಲ್ಲಿ ರಾಷ್ಟ್ರರಾಜಧಾನಿ ನವದೆಹಲಿಯೂ ಒಂದು. ಅಲ್ಲಿ ಆತಂಕಕಾರಿ ಗತಿಯಲ್ಲಿ ಕರೊನಾ ಹರಡುತ್ತಿದೆ.

    ಈ ಮಧ್ಯೆ ಕಳೆದ ವಾರ ದೆಹಲಿ ಉಪಮುಖ್ಯಮಂತ್ರಿ ಮನೀಶ್​ ಸಿಸೋಡಿಯಾ ಒಂದು ಹೇಳಿಕೆಯನ್ನು ನೀಡಿದ್ದರು. ದೆಹಲಿಯಲ್ಲಿ ಕೊವಿಡ್​ ಪ್ರಸರಣ ಈಗಾಗಲೇ ಸಮುದಾಯಕ್ಕೆ ಹಬ್ಬಿದೆ. ಇಲ್ಲಿ ಜುಲೈ ಅಂತ್ಯದ ವೇಳೆಗೆ 5.5 ಲಕ್ಷಕ್ಕೂ ಅಧಿಕ ಜನರು ಕರೊನಾ ಸೋಂಕಿಗೆ ಒಳಗಾಗಲಿದ್ದಾರೆ. ಬೆಡ್​ಗಳ ಕೊರತೆ, ಕರೊನಾ ಸೋಂಕಿತರನ್ನು ಇರಿಸಲು ಜಾಗದ ಕೊರತೆಯೂ ಉಂಟಾಗಲಿದೆ. ಪರಿಸ್ಥಿತಿ ತುಂಬ ಗಂಭೀರ ಮಟ್ಟಕ್ಕೆ ತಲುಪಲಿದೆ ಎಂದಿದ್ದರು.

    ಆದರೆ ಇಂದು ಗೃಹಸಚಿವ ಅಮಿತ್​ ಷಾ ಅವರು ಮನೀಶ್ ಸಿಸೋಡಿಯಾ ಅವರ ಊಹೆಯನ್ನು ಖಡಾಖಂಡಿತವಾಗಿ ಅಲ್ಲಗಳೆದಿದ್ದಾರೆ. ಜುಲೈ ಅಂತ್ಯಕ್ಕೆ ದೆಹಲಿಯಲ್ಲಿ ಸೋಂಕಿತರ ಸಂಖ್ಯೆ 5.5 ಲಕ್ಷ ದಾಟುತ್ತದೆ ಎಂಬುದನ್ನು ನಾನಂತೂ ಒಪ್ಪುವುದಿಲ್ಲ. ಉಪಮುಖ್ಯಮಂತ್ರಿ ಮನೀಶ್​ ಸಿಸೋಡಿಯಾ ಅವರು ಈ ರೀತಿ ಹೇಳಿಕೆಗಳನ್ನು ನೀಡಿ ಜನರನ್ನು ಪ್ಯಾನಿಕ್​ ಮಾಡುತ್ತಿದ್ದಾರೆ. ಅವರಲ್ಲಿ ಭಯ ಸೃಷ್ಟಿಸುತ್ತಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ಕರೊನಾ ನಿಯಂತ್ರಣಕ್ಕೆ ಅಗತ್ಯವಾದ ಎಲ್ಲ ರೀತಿಯ ಕ್ರಮಗಳನ್ನೂ ಕೇಂದ್ರ ಸರ್ಕಾರವೇ ಮುಂದಾಗಿ ತೆಗೆದುಕೊಳ್ಳುತ್ತಿದೆ ಎಂದು ಹೇಳಿದ್ದಾರೆ.

    ಇಂದು ರಾಷ್ಟ್ರೀಯ ಮಾಧ್ಯಮವೊಂದರ ಜತೆ ಸಂದರ್ಶನದಲ್ಲಿ ಮಾತನಾಡಿದ ಅಮಿತ್​ ಷಾ, ದೆಹಲಿಯ ಕೊವಿಡ್​-19 ಪರಿಸ್ಥಿತಿ ಅಷ್ಟು ಗಂಭೀರ ಸ್ಥಿತಿಗೆ ತಲುಪಲು ನಾವು ಅವಕಾಶ ಕೊಡುವುದಿಲ್ಲ. ದೆಹಲಿಯಲ್ಲಿ ಸದ್ಯ ಪ್ರತಿದಿನ ಅತಿ ಹೆಚ್ಚಿನ ಕರೊನಾ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಆದರೆ ನಾನು ಭರವಸೆ ಕೊಡಬಲ್ಲೆ, ಜುಲೈ ಅಂತ್ಯದ ವೇಳೆ ಸೋಂಕಿತರ ಸಂಖ್ಯೆ ಕಡಿಮೆಯಾಗಲಿದೆ. ಇದಕ್ಕಿಂತ ಉತ್ತಮ ಸ್ಥಿತಿಯಲ್ಲಿ ದೆಹಲಿ ಇರಲಿದೆ ಎಂದು ಷಾ ಹೇಳಿದರು.

    ದೆಹಲಿಯಲ್ಲಿ ಕರೊನಾ ಹೆಚ್ಚುತ್ತಿರುವದನ್ನು ಗಮನಿಸಿದ ಪ್ರಧಾನಮಂತ್ರಿ ಮೋದಿಯವರು ಕೇಂದ್ರ ಗೃಹ ಇಲಾಖೆಗೆ ಸೂಚನೆಯನ್ನು ನೀಡಿದ್ದಾರೆ. ಇಲ್ಲಿ ಕರೊನಾ ವಿರುದ್ಧ ಹೋರಾಟ ಮಾಡಲು ದೆಹಲಿ ಸರ್ಕಾರಕ್ಕೆ ಸಂಪೂರ್ಣ ಸಹಕಾರ ನೀಡಿ, ಅಗತ್ಯ ಕ್ರಮಗಳನ್ನು ಗೃಹ ಸಚಿವಾಲಯ ಕೂಡಲೇ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ. ಮೋದಿಯವರ ಸೂಚನೆ ಬರುತ್ತಿದ್ದಂತೆ ನಾವು ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಜತೆ ಸೇರಿ, ಸರ್ವ ಪಕ್ಷಗಳ ಸಭೆ ಕರೆದೆವು. ಕೊವಿಡ್​-19 ನಿಯಂತ್ರಣಕ್ಕೆ ಬೇಕಾದ ಕ್ರಮಗಳನ್ನೆಲ್ಲ ಜಾರಿ ಮಾಡುತ್ತಿದ್ದೇವೆ. ಹಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡು, ಅದರಂತೆ ನಡೆಯುತ್ತಿದ್ದೇವೆ. ಕಂಟೇನ್​ಮೆಂಟ್​ ಝೋನ್​ಗಳಲ್ಲಿರುವ ಪ್ರತಿಯೊಬ್ಬರನ್ನೂ ತಪಾಸಣೆಗೆ ಒಳಪಡಿಸಲಾಗುತ್ತಿದೆ ಎಂದು ಹೇಳಿದರು. ಇದನ್ನೂ ಓದಿ: ಆರಾಧ್ಯಾಳಿಂದಲೇ ಸಿನಿಮಾ ಕರಿಯರ್ ಹಾಳು; ಪುತ್ರಿ ಬಗ್ಗೆ ಅಭಿಷೇಕ್​ ಬಚ್ಚನ್​ ಹೇಳಿದ್ದೇನು?

    ಸಮುದಾಯ ಪ್ರಸರಣ ?
    ಇನ್ನು ದೆಹಲಿಯಲ್ಲಿ ಕರೊನಾ ಸಮುದಾಯ ಪ್ರಸರಣ ಪ್ರಾರಂಭವಾಗಿದೆಯಾ ಎಂಬ ಪ್ರಶ್ನೆಗೂ ಉತ್ತರಿಸಿದ ಗೃಹಸಚಿವರು, ಆತಂಕ ಬೇಡ..ಇಲ್ಲಿ ಇನ್ನೂ ಕೊವಿಡ್​-19 ಸಮುದಾಯ ಪ್ರಸರಣ ಹಂತಕ್ಕೆ ಹೋಗಿಲ್ಲ ಎಂದು ಸ್ಪಷ್ಟನೆ ನೀಡಿದರು.

    ನಾನು ನೀತಿ ಆಯೋಗದ ಡಾ. ಪೌಲ್​, ಐಸಿಎಂಆ್​ ಮುಖ್ಯಸ್ಥ ಡಾ. ಭಾರ್ಗವ್​ ಮತ್ತು ದೆಹಲಿಯ ಏಮ್ಸ್​ ನಿರ್ದೇಶಕ ಡಾ.ಗುಲೇರಿಯಾ ಅವರ ಬಳಿ ಚರ್ಚಿಸಿದ್ದೇನೆ. ಅವರೂ ಕೂಡ ಕೊವಿಡ್​-19 ಸಮುದಾಯ ಪ್ರಸರಣ ಹಂತಕ್ಕೆ ಹೋಗಿಲ್ಲ ಎಂಬುದನ್ನು ತಿಳಿಸಿದ್ದಾರೆ. ತಪಾಸಣೆಯಲ್ಲಿ ವಿಳಂಬವಾದಷ್ಟೂ ಪ್ರಸರಣ ಜಾಸ್ತಿಯಾಗುತ್ತ ಹೋಗುತ್ತದೆ. ಈ ಹಿಂದೆ ದೆಹಲಿಯಲ್ಲಿ ಅದೇ ಆಗಿತ್ತು. ಆದರೆ ಈಗ ದಿನವೊಂದಕ್ಕೆ 20,000 ಜನರನ್ನು ಟೆಸ್ಟ್ ಮಾಡಲಾಗುತ್ತಿದೆ. ಸೋಂಕಿತರನ್ನು ಕೂಡಲೇ ಕ್ವಾರಂಟೈನ್​ಗೆ ಒಳಪಡಿಸಲಾಗುತ್ತಿದೆ. ಹಾಗಾಗಿ ಭಯ ಬೇಡವೇಬೇಡ ಎಂದು ಹೇಳಿದರು. ಇದನ್ನೂ ಓದಿ: ನಾಯಿಗೆ ಕೈತುತ್ತು ನೀಡೋ ಬಾಲೆ- ವಿಡಿಯೋ ಭಾರಿ ವೈರಲ್‌

    ದೆಹಲಿ ಕರೊನಾ ನಿಯಂತ್ರಣಕ್ಕೆ ಸಂಬಂಧಪಟ್ಟಂತೆ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಅರವಿಂದ್​ ಕೇಜ್ರಿವಾಲ್​ ಅವರನ್ನು ಹೊರಗಿಡಲಾಯಿತಾ? ಅದಕ್ಕೆ ಅಷ್ಟು ವಿವಾದ ಸೃಷ್ಟಿಯಾಯಿತಾ? ಹೇಗಿದೆ ಕೇಂದ್ರ ಮತ್ತು ದೆಹಲಿ ಸರ್ಕಾರದ ನಡುವಿನ ಸಂಬಂಧ ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರಿಸಿದ ಅಮಿತ್​ ಷಾ, ಕೇಂದ್ರ ಮತ್ತು ದೆಹಲಿ ಸರ್ಕಾರದ ನಡುವೆ ಸಮನ್ವಯತೆ ಇದೆ. ಅರವಿಂದ್ ಕೇಜ್ರಿವಾಲ್​ ಅವರನ್ನು ಯಾವ ಕಾರಣಕ್ಕೂ ಹೊರಗಿಟ್ಟಿಲ್ಲ. ಕೆಲವು ರಾಜಕೀಯ ಹೇಳಿಕೆಗಳು ಹೊರಬಿದ್ದಿರಬಹುದು. ಆದರೆ ಪ್ರತಿ ನಿರ್ಧಾರ, ಕ್ರಮಗಳನ್ನು ತೆಗೆದುಕೊಳ್ಳುವಾಗ ಸಿಎಂ ಕೇಜ್ರಿವಾಲ್​ ಅವರೊಂದಿಗೆ ಚರ್ಚಿಸಿ, ಅವರನ್ನೂ ಒಳಗೊಳ್ಳಲಾಗಿದೆ ಎಂದು ತಿಳಿಸಿದರು.

    ಅಂತ್ಯಕ್ರಿಯೆ ವಿಳಂಬ ಇಲ್ಲ

    ಈ ಮೊದಲು ದೆಹಲಿಯಲ್ಲಿ ಕೊವಿಡ್​-19ನಿಂದ ಮೃತಪಟ್ಟವರ ಅಂತ್ಯಕ್ರಿಯೆಯಲ್ಲಿ ವಿಳಂಬ ಆಗುತ್ತಿತ್ತು. 350ಕ್ಕೂ ಹೆಚ್ಚು ಮಂದಿಯ ಶವಗಳು ಬಾಕಿ ಇದ್ದವು. ಇದೀಗ ಆ ವಿಚಾರದಲ್ಲೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಸೋಂಕಿನಿಂದ ಯಾರೇ ಮೃತಪಟ್ಟರೂ ಎರಡು ದಿನಗಳ ಒಳಗೆ ಅವರ ಧರ್ಮ, ಸಂಪ್ರದಾಯಕ್ಕೆ ತಕ್ಕಂತೆ ಅಂತ್ಯಕ್ರಿಯೆ ಮಾಡಲಾಗುತ್ತಿದೆ. ಸದ್ಯ ಯಾವುದೇ ಶವಗಳೂ ಬಾಕಿ ಇಲ್ಲ. ಬಹುತೇಕ ಸತ್ತ ದಿನವೇ ಅಂತಿಮ ವಿಧಿವಿಧಾನಗಳನ್ನೂ ಮುಗಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
    ಜೂ.14ರ ಹೊತ್ತಿಗೆ ದೆಹಲಿಯಲ್ಲಿ 9,937 ಬೆಡ್​ಗಳು ಮಾತ್ರ ಇದ್ದವು. ಜೂ.30 ಹೊತ್ತಿಗೆ 30,000 ಬೆಡ್​ಗಳು ಬಳಕೆಗೆ ಸಿಗಲಿವೆ. 8000 ಬೆಡ್​ಗಳನ್ನು ರೈಲ್ವೆ ಕೋಚ್​​ಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ನಿಗದಿತ ಆಸ್ಪತ್ರೆಗಳಲ್ಲಿ 250 ಐಸಿಯು ಬೆಡ್​ಗಳನ್ನು ಡಿಆರ್​ಡಿಒ ಸಿದ್ಧಪಡಿಸುತ್ತಿದೆ ಎಂದು ಹೇಳಿದರು. (ಏಜೆನ್ಸೀಸ್​)

    ಕರೊನಾ ಮಧ್ಯೆ ನಿಯಮ ಉಲ್ಲಂಘಿಸಿ ಸಂಭ್ರಮದಿಂದ ಪುತ್ರನ ಮದುವೆ ಮಾಡಿದವನಿಗೆ ಕಾದಿತ್ತು ಬಿಗ್​ ಶಾಕ್​…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts