More

    ದೆಹಲಿ ವಿಧಾನಸಭಾ ಚುನಾವಣೆ: ಸತತ ಎರಡನೇ ಅವಧಿಗೂ ಶೂನ್ಯ ಸಂಪಾದಿಸಿದ ಕಾಂಗ್ರೆಸ್

    ನವದೆಹಲಿ: ಹದಿನೈದು ವರ್ಷಗಳ ಕಾಲ ನಿರಂತರ ದೆಹಲಿಯನ್ನು ಆಳಿದ್ದ ಕಾಂಗ್ರೆಸ್ ಪಕ್ಷ ಸತತ ಎರಡು ಅವಧಿಗೆ ವಿಧಾನಸಭೆ ಚುನಾವಣೆಯಲ್ಲಿ ಶೂನ್ಯ ಸಾಧನೆ ಮಾಡಿದೆ. ಈ ಸಲದ ಚುನಾವಣೆಯ ಮತ ಎಣಿಕೆ ಪ್ರಗತಿಯಲ್ಲಿದ್ದು, ಟ್ರೆಂಡ್ ನಲ್ಲಿ ಆರಂಭದಲ್ಲಿ ಒಂದು ಸ್ಥಾನದಲ್ಲಿ ಕಂಡು ಬಂದಿದ್ದ ಕಾಂಗ್ರೆಸ್, ನಂತರ ಯಾವ ಕ್ಷೇತ್ರದಲ್ಲೂ ಮುನ್ನೆಲೆಯಲ್ಲಿ ಕಾಣಿಸಿಲ್ಲ.

    ರಾಷ್ಟ್ರ ರಾಜಧಾನಿಯ ರಾಜಕಾರಣದಲ್ಲಿ ಕಾಂಗ್ರೆಸ್ ಮಹತ್ವ ಕಳೆದುಕೊಂಡಿರುವುದು ಕಳೆದ ಚುನಾವಣೆಯಲ್ಲೇ ವೇದ್ಯವಾಗಿತ್ತು. ಅಲ್ಲಿಂದೀಚೆಗೆ ಕಾಂಗ್ರೆಸ್ ಚೇತರಿಸಿಕೊಂಡಿಲ್ಲ ಎಂಬುದು ಈ ಚುನಾವಣೆ ವೇಳೆ ಇನ್ನಷ್ಟು ಸ್ಪಷ್ಟವಾಗಿದೆ. ಮೂರು ಅವಧಿಗೆ ವಿಶ್ವಾಸಾರ್ಹ ಮುಖವಾಗಿದ್ದ ಶೀಲಾ ದೀಕ್ಷಿತ್​ ಸೋತ ಬಳಿಕ ದೆಹಲಿಯಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಬಲ್ಲ ನಾಯಕರು ಸಿಕ್ಕಿಲ್ಲ. ಕಳೆದ ವರ್ಷ ಜುಲೈನಲ್ಲಿ ಶೀಲಾ ಅವರ ನಿಧನದ ಬಳಿಕ ಕಾಂಗ್ರಸ್ ಪಕ್ಷ ಸಂಪೂರ್ಣ ಕುಗ್ಗಿದ್ದಲ್ಲದೆ, ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಾರ್ಟಿ ತನ್ನ ನೆಲೆಯನ್ನು ಬಲಗೊಳಿಸಿದೆ.

    ಇದರೊಂದಿಗೆ ಚುನಾವಣಾ ಕಣದಲ್ಲಿ ಈ ಸಲ ಬಿಜೆಪಿ ವರ್ಸಸ್ ಆಪ್ ನಡುವೆ ಹೋರಾಟ ಎಂದೇ ಎಲ್ಲ ಕ್ಷೇತ್ರಗಳಲ್ಲೂ ಬಿಂಬಿತವಾಗಿತ್ತು. ಕಾಂಗ್ರೆಸ್ ಪಕ್ಷ ಇಲ್ಲಿ ತೃತೀಯ ಸ್ಥಾನಕ್ಕೆ ಅದರಲ್ಲೂ ಎರಡರ ಹತ್ತಿರಕ್ಕೂ ಸುಳಿಯದ ರೀತಿಯಲ್ಲಿ ಮೂಲೆಗುಂಪಾಗಿದೆ. ಬಹುತೇಕ 70 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ.

    ದೆಹಲಿಯಲ್ಲಿ ನಾವು ಮತ್ತೆ ಅಸ್ತಿತ್ವ ಕಳೆದುಕೊಂಡಿದ್ದೇವೆ. ಇನ್ನು ಆತ್ಮಾವಲೋಕನ ಸಾಕು. ಇದು ಕ್ರಮ ತೆಗೆದುಕೊಳ್ಳಬೇಕಾದ ಸಮಯ. ರಾಜ್ಯ ಮಟ್ಟದಲ್ಲಿ ಐಕ್ಯತೆ, ತಂತ್ರಗಾರಿಕೆಯಲ್ಲಿ ಕೊರತೆ, ಹೈಕಮಾಂಡ್​ನ ವಿಳಂಬ ನಿರ್ಣಯಗಳನ್ನು ಸರಿಪಡಿಸಬೇಕು. ಉತ್ಸಾಹಗುಂದಿದ ಕಾರ್ಯಕರ್ತರನ್ನು ಮೋಟಿವೇಟ್ ಮಾಡಬೇಕು. ಜನರೊಂದಿಗಿನ ಒಡನಾಟವನ್ನು ಕಳೆದುಕೊಂಡಿದ್ದೇವೆ. ಇದಕ್ಕೆ ನಾನೂ ಹೊಣೆಗಾರಳಾಗಿದ್ದೇನೆ ಎಂದು ದೆಹಲಿ ಮಹಿಳಾ ಕಾಂಗ್ರೆಸ್​ ಮುಖ್ಯಸ್ಥೆ, ವಕ್ತಾರೆ ಶರ್ಮಿಷ್ಠಾ ಮುಖರ್ಜಿ ಟ್ವೀಟ್ ಮಾಡಿಕೊಂಡಿದ್ದಾರೆ.

    ದೆಹಲಿ ವಿಧಾನಸಭೆಯ 2015ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಮತ ಗಳಿಕೆ ಶೇಕಡ 9.7 ಆಗಿದ್ದು, ಬಿಜೆಪಿಗೆ 32.7 %, ಆಪ್​ ಶೇಕಡ 54.34 ಆಗಿತ್ತು. ಈ ಸಲದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಆರ್​ಜೆಡಿ ಜತೆಗೆ ಸಖ್ಯ ಮಾಡಿಕೊಂಡಿತ್ತು. ಹೀಗಾಗಿ 70 ಕ್ಷೇತ್ರಗಳ ಪೈಕಿ 4 ಆರ್​ಜೆಡಿಗೆ ಬಿಟ್ಟು 66 ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧಿಸಿತ್ತು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts