More

    ಗ್ರಾಮ ಪಂಚಾಯಿತಿ ಚುನಾವಣೆ ಫಲಿತಾಂಶ ವಿಳಂಬ, ಕುಮಟಾದಲ್ಲಿ ಅಭ್ಯರ್ಥಿಗಳ ಆಕ್ರೋಶ

    ಕುಮಟಾ: ಇಲ್ಲಿನ ಡಾ. ಬಾಳಿಗಾ ಕಾಲೇಜ್​ನಲ್ಲಿ ಬುಧವಾರ ಗ್ರಾಪಂ ಮತ ಎಣಿಕೆ ಪ್ರಕ್ರಿಯೆ ತೀರಾ ವಿಳಂಬವಾಗುತ್ತಿದೆ ಎಂದು ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.

    ಬೆಳಗ್ಗೆಯಿಂದ ಮತ ಎಣಿಕೆ ನಡೆದು ಮಧ್ಯಾಹ್ನ 1 ಗಂಟೆಯಾದರೂ 20 ಸ್ಥಾನಗಳ ಫಲಿತಾಂಶವೂ ಪ್ರಕಟಗೊಳ್ಳದ ಹಿನ್ನೆಲೆಯಲ್ಲಿ ಮತ ಎಣಿಕೆ ಕೇಂದ್ರದ ಹೊರಗೆ ಕಾಯುತ್ತಿದ್ದ ಅಭ್ಯರ್ಥಿಗಳು, ಏಜೆಂಟರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

    ಈ ವೇಳೆ ಎಣಿಕೆ ಕೇಂದ್ರದ ಬಾಗಿಲ ಬಳಿ ಜಮಾಯಿಸಿದ ಅಭ್ಯರ್ಥಿಗಳ ಬೆಂಬಲಿಗರು ವಿಳಂಬ ಯಾಕೆ ಎಂದು ಪ್ರಶ್ನಿಸಿದರಲ್ಲದೆ, ಒಂದೊಮ್ಮೆ ವಿಳಂಬವಿದ್ದರೆ ಮೊದಲೇ ಹೇಳಿದರೆ ನಾವು ಹೊರಗಡೆ ಬಿಸಿಲಲ್ಲಿ ಊಟ, ತಿಂಡಿ ಬಿಟ್ಟು ಕಾಯುವುದು ತಪ್ಪುತ್ತದೆ ಎಂದರು. ನಿಧಾನಗತಿಯಲ್ಲಿ ಮತ ಎಣಿಕೆ ನಡೆಸುತ್ತಿರುವುದಕ್ಕೆ ತಾಲೂಕಾಡಳಿತವೇ ಹೊಣೆ, ಮತ ಎಣಿಕೆ ಮಾಡುವವರಿಗೆ ಸರಿಯಾಗಿ ತರಬೇತಿ ನೀಡದಿರುವುದು ಹಾಗೂ ಹಿಂದೆ ಮತ ಎಣಿಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿರದ ಅನನುಭವಿಗಳನ್ನೇ ಹೆಚ್ಚು ನಿಯೋಜಿಸಿರುವುದೇ ಇದಕ್ಕೆ ಕಾರಣ ಎಂದು ಆರೋಪಿಸಿದರು.

    ಬಳಿಕ ತಹಸೀಲ್ದಾರ್ ಡಿ.ಎಸ್. ಕಡಕಬಾವಿ ಸಾರ್ವಜನಿಕರೊಂದಿಗೆ ಮಾತನಾಡಿ ಅವರನ್ನು ಸಮಾಧಾನಪಡಿಸುವಲ್ಲಿ ಸಫಲರಾದರು.

    ಡಿವೈಎಸ್​ಪಿ ನಿಖಿಲ, ಸಿಪಿಐ ಪರಮೇಶ್ವರ ಗುನಗಾ, ಪಿಎಸ್​ಐ ಆನಂದಮೂರ್ತಿ, ಪಿಎಸ್​ಐ ಸುಧಾ ಅಘನಾಶಿನಿ, ಸಿಬ್ಬಂದಿ ಶಾಂತಿ- ಸುವ್ಯವಸ್ಥೆ ಕಾಪಾಡಿದರು.

    ಹೊಲನಗದ್ದೆ ಹಾಗೂ ಇತರ ಕೆಲ ಪಂಚಾಯಿತಿಯಲ್ಲಿ ಅತಿ ಹೆಚ್ಚು ಮತದಾನವಾಗಿದ್ದು, ಅಭ್ಯರ್ಥಿಗಳೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹೀಗಾಗಿ ಮತಪತ್ರಗಳನ್ನು ಎಣಿಸುವಲ್ಲಿ ಸಮಯ ಬೇಕಾಗುತ್ತದೆ. ಸಿಬ್ಬಂದಿಗೆ ತರಬೇತಿ ಸರಿಯಾಗಿ ಕೊಟ್ಟಿದ್ದು ನಿಗದಿತ ಸಮಯದಲ್ಲಿ ಮತ ಎಣಿಕೆ ಕಾರ್ಯ ಯಾವುದೇ ಲೋಪದೋಷ ರಹಿತವಾಗಿ ನಡೆಯಲಿದೆ.

    | ಡಿ.ಎಸ್. ಕಡಕಬಾವಿ, ಕುಮಟಾ ತಹಸೀಲ್ದಾರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts