More

    ಸರ್ಕಾರಿ ಸೇವೆ ಆನ್‌ಲೈನ್ ವಿಳಂಬ

    – ಹರೀಶ್ ಮೋಟುಕಾನ ಮಂಗಳೂರು
    ಜಿಲ್ಲಾ ಮಟ್ಟದ ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರಿಗೆ ಕಾಗದ ರಹಿತವಾಗಿ ಆನ್‌ಲೈನ್ ತಂತ್ರಾಂಶದ ಮೂಲಕ ಸೇವೆ ಒದಗಿಸಬೇಕು ಎನ್ನುವ ಸರ್ಕಾರದ ಆದೇಶ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನವಾಗಿಲ್ಲ. 2020 ಜ.1ರಿಂದ ದಕ್ಷಿಣ ಕನ್ನಡ ಹಾಗೂ ಉಡುಪಿಯ ಜಿಲ್ಲಾ ಮಟ್ಟದ ಸರ್ಕಾರಿ ಕಚೇರಿಗಳಲ್ಲಿ ಕಡತಗಳನ್ನು ಇ-ಕಚೇರಿ ತಂತ್ರಾಂಶದಲ್ಲಿ ತೆರೆದು ನಿರ್ವಹಿಸಲು ಸರ್ಕಾರ ಸೂಚನೆ ನೀಡಿತ್ತು. ಆದರೆ ನಾನಾ ಕಾರಣಗಳಿಂದ ನಿರೀಕ್ಷಿತ ಮಟ್ಟದಲ್ಲಿ ಇದರ ಅನುಷ್ಠಾನವಾಗಿಲ್ಲ. ಕೆಲವೊಂದು ಇಲಾಖೆಗಳಲ್ಲಿ ಪ್ರಕ್ರಿಯೆಗಳು ಪ್ರಗತಿ ಹಂತದಲ್ಲಿವೆ.
    ಪರಿಸರ ಸಂರಕ್ಷಣೆ, ಪಾರದರ್ಶಕತೆ ಹಾಗೂ ಆಧುನಿಕ ತಂತ್ರಜ್ಞಾನ ಅಳವಡಿಕೆ ಹಿನ್ನೆಲೆಯಲ್ಲಿ ಸರ್ಕಾರಿ ಇಲಾಖೆಗಳನ್ನು ಕಾಗದ ರಹಿತ ಇಲಾಖೆಯನ್ನಾಗಿಸಲು ರಾಜ್ಯ ಸರ್ಕಾರ ವರ್ಷದ ಹಿಂದೆಯೇ ನಿರ್ದೇಶನ ನೀಡಿತ್ತು. ಕೆಲವು ಇಲಾಖೆಯಲ್ಲಿ ಭಾಗಶಃ ಅನುಷ್ಠಾನವಾಗಿದ್ದರೆ, ಕೆಲವು ಕಡೆ ನಿಧಾನವಾಗಿತ್ತು. ಜ.1ರಿಂದ ಕಡ್ಡಾಯವಾಗಿ ಕಾಗದ ರಹಿತ ಮಾಡಲೇ ಬೇಕು ಎಂದು ಕೊನೆಯ ಬಾರಿಗೆ ಆದೇಶ ನೀಡಿತ್ತು.
    ಎರಡೂ ಜಿಲ್ಲೆಗಳ ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ಪಂಚಾಯಿತಿ ಕಚೇರಿ ಬಹುತೇಕ ಪೇಪರ್‌ಲೆಸ್ ಆಗಿದೆ. ಪೂರ್ಣ ಅನುಷ್ಠಾನ ಇನ್ನೂ ಸಾಧ್ಯವಾಗಿಲ್ಲ. ಜಿಲ್ಲಾ ಮಟ್ಟದ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ, ಮುಜರಾಯಿ ಇಲಾಖೆ, ಚುನಾವಣೆ ಶಾಖೆಗಳು ಪೇಪರ್‌ಲೆಸ್ ಆಗಿವೆ. ಬೆಳ್ತಂಗಡಿ ತಾಲೂಕು ಪಂಚಾಯಿತಿ ಕೂಡ ಪೇಪರ್‌ಲೆಸ್ ಆಗಿದೆ. ಉಳಿದ ಕಡೆ ಈ ಪ್ರಕ್ರಿಯೆಗಳು ಪ್ರಗತಿಯಲ್ಲಿವೆ.

    ಸಿಬ್ಬಂದಿ ಕೊರತೆಯಿಂದ ವಿಳಂಬ: ಬಾಕಿಯಾಗಿರುವ ಎಲ್ಲ ಸರ್ಕಾರಿ ಇಲಾಖೆಗಳ ಇ-ಕಚೇರಿ ವ್ಯವಸ್ಥೆ ಅನುಷ್ಠಾನಿಸಲು ಜಿಲ್ಲಾಧಿಕಾರಿ ಅಧ್ಯಕ್ಷತೆಯ ಇ-ಕಚೇರಿ ಅನುಷ್ಠಾನ ಸಮಿತಿ ನಿರ್ದೇಶನ ನೀಡಿದೆ. ಆದರೆ ಇಲಾಖೆಗಳಲ್ಲಿರುವ ಸಿಬ್ಬಂದಿ ಕೊರತೆ, ಕೆಲಸ ಒತ್ತಡದಿಂದ ಅನುಷ್ಠಾನ ವಿಳಂಬವಾಗಿದೆ. ಈಗಾಗಲೇ ಅನುಷ್ಠಾನವಾದ ಜಿಲ್ಲಾಧಿಕಾರಿ, ಜಿ.ಪಂ. ಕಚೇರಿಗಳಲ್ಲಿ ಕಾಗದ ರಹಿತವಾಗಿ ಇಲಾಖೆ ವ್ಯವಹಾರ ನಡೆಯುತ್ತಿದ್ದರೂ ಉನ್ನತಾಧಿಕಾರಿಗಳಿಗೆ, ಸಚಿವರಿಗೆ, ಇತರ ಅಧಿಕಾರಿಗಳಿಗೆ ಕಾಗದ ರೂಪದಲ್ಲಿಯೇ ಕಡತ ನೀಡುವ ಪರಿಸ್ಥಿತಿ ಇರುವುದರಿಂದ ಅನುಷ್ಠಾನ ಪೂರ್ಣ ಮಟ್ಟದಲ್ಲಿ ಆಗುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಮೊಬೈಲ್‌ನಲ್ಲೇ ಅಪ್‌ಡೇಟ್: ಎಲ್ಲ ಇಲಾಖೆಗಳಲ್ಲಿ ಕಾಗದ ರಹಿತ ವ್ಯವಸ್ಥೆ ಜಾರಿಗೆ ಬಂದರೆ ಸಾರ್ವಜನಿಕರು ಅರ್ಜಿ ಹಿಡಿದು ಕಚೇರಿಗಳಿಗೆ ಅಲೆದಾಡಬೇಕಾದ ಪರಿಸ್ಥಿತಿ ಇರುವುದಿಲ್ಲ. ಕೊಟ್ಟಿರುವ ಅರ್ಜಿ ಯಾವ ಹಂತದಲ್ಲಿದೆ ಎಂಬುದನ್ನು ಮೊಬೈಲ್‌ನಲ್ಲಿ ಆನ್‌ಲೈನ್ ಮೂಲಕ ಪರಿಶೀಲನೆ ನಡೆಸಿ ತಿಳಿದುಕೊಳ್ಳಬಹುದು. ಇದರಿಂದ ಸಮಯ, ಹಣ ಉಳಿಯುತ್ತದೆ. ಈಗಾಗಲೇ ಕೆಲವೊಂದು ಆನ್‌ಲೈನ್ ಸೇವೆಗಳು ರಾಜ್ಯ ಮಟ್ಟದಲ್ಲಿ ಕಾರ್ಯಾಚರಿಸುತ್ತಿರುವುದರಿಂದ ಸಾರ್ವಜನಿಕರಿಗೆ ಸಹಕಾರಿಯಾಗಿದೆ.

    ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ಪಂಚಾಯಿತಿ ಮತ್ತು ಜಿಲ್ಲಾ ಮಟ್ಟದ ಇತರ ಇಲಾಖೆಗಳಲ್ಲಿ ಈಗಾಗಲೇ ಪೇಪರ್‌ಲೆಸ್ ವ್ಯವಸ್ಥೆ ಅನುಷ್ಠಾನದಲ್ಲಿದೆ. ಇನ್ನೂ ಪರಿಣಾಮಕಾರಿಯಾಗಿ ಪೂರ್ಣ ಮಟ್ಟದಲ್ಲಿ ಜಾರಿ ಮಾಡಲು ಸೂಚನೆ ನೀಡಲಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿ-ಸಿಬ್ಬಂದಿಗೆ ತರಬೇತಿಯನ್ನೂ ನೀಡಲಾಗಿದೆ. ಶೀಘ್ರದಲ್ಲೇ ಪೂರ್ಣ ಮಟ್ಟದಲ್ಲಿ ಪೇಪರ್‌ಲೆಸ್ ವ್ಯವಸ್ಥೆ ಅಳವಡಿಕೆಯಾಗಲಿದೆ.
    – ಸಿಂಧೂ ಬಿ. ರೂಪೇಶ್, ಜಿಲ್ಲಾಧಿಕಾರಿ, ದಕ್ಷಿಣ ಕನ್ನಡ

    ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಾಗದ ರಹಿತ ವ್ಯವಸ್ಥೆ ಚೆನ್ನಾಗಿ ನಡೆಯುತ್ತಿದೆ. ಇತರೆ ಇಲಾಖೆಗಳಲ್ಲಿ ಮತ್ತು ತಾಲೂಕು ಮಟ್ಟದ ಕಚೇರಿಗಳಲ್ಲಿ ಕಾಗದ ರಹಿತ ಕಚೇರಿಯಾಗಿ ಕಾರ್ಯ ನಿರ್ವಹಿಸಲು ಪೂರಕ ತಯಾರಿ ನಡೆಯುತ್ತಿದೆ. ಒಂದು ತಿಂಗಳ ಒಳಗೆ ಜಿಲ್ಲಾ ಮಟ್ಟದ ಇಲಾಖೆ ಕಚೇರಿಗಳು, ತಾಲೂಕು ಮಟ್ಟದ ಕಚೇರಿಗಳು ಕಾಗದ ರಹಿತವಾಗಿಸಲಾಗುವುದು.
    – ಜಿ.ಜಗದೀಶ್, ಜಿಲ್ಲಾಧಿಕಾರಿ, ಉಡುಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts