More

    ಪಾಸಿವಿಟ್ ವರದಿಗೂ ಕಾಯಬೇಕು 2 ದಿನ!

    ಉಡುಪಿ: ಜಿಲ್ಲೆಯ ಗ್ರಾಮೀಣ ಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಂಗ್ರಹಿಸಲಾದ ಗಂಟಲು ದ್ರವದ ಮಾದರಿ ಜಿಲ್ಲಾಸ್ಪತ್ರೆಯಲ್ಲಿರುವ ಪ್ರಯೋಗಾಲಯಕ್ಕೆ ತಲುಪಲು ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್ ವರದಿಗಾಗಿ ಎರಡು ದಿನ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.
    ಸಾಮಾನ್ಯವಾಗಿ ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ಮಾದರಿ ಸಂಗ್ರಹಿಸುವಾಗ ಪಾಸಿಟಿವ್ ಆಗಿದ್ದರೆ 24 ಗಂಟೆಗಳಲ್ಲಿ ಹಾಗೂ ನೆಗೆಟಿವ್ ವರದಿ ಮೂರು ದಿನಗಳ ಬರುತ್ತದೆ ಎಂಬ ಉತ್ತರ ಸಿಗುತ್ತದೆ. ಇದರಂತೆ ಕೆಲವರು 24 ಗಂಟೆಗಳಲ್ಲಿ ತಮ್ಮ ಮೊಬೈಲ್‌ಗೆ ಕರೆ ಅಥವಾ ಸಂದೇಶ ಬಾರದಿದ್ದರೆ ವರದಿ ನೆಗೆಟಿವ್ ಎಂದೇ ಭಾವಿಸಿ ಊರೆಲ್ಲ ತಿರುಗಾಡುತ್ತಾರೆ. ಇದು ಗ್ರಾಮೀಣ ಭಾಗದಲ್ಲಿ ಸೋಂಕು ಹರಡಲು ಕಾರಣವಾಗುತ್ತಿದೆ.

    52 ಗಂಟೆ ಬಳಿಕ ವರದಿ: ಜಿಲ್ಲಾಸ್ಪತ್ರೆಯಿಂದ 13 ಕಿ.ಮೀ. ದೂರದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರವೊಂದರಲ್ಲಿ ಮೇ 26ರಂದು ಬೆಳಗ್ಗೆ 10.20ಕ್ಕೆ ಸಂಗ್ರಹಿಸಲಾದ ಗಂಟಲು ದ್ರವದ ಮಾದರಿ ಜಿಲ್ಲಾಸ್ಪತ್ರೆ ಪ್ರಯೋಗಾಲಯಕ್ಕೆ ತಲುಪಿರುವುದು ಮೇ 27ರಂದು ಸಾಯಂಕಾಲ 4.20ಕ್ಕೆ. ಮಾದರಿಯನ್ನು ಪರೀಕ್ಷಿಸಿ ಕೋವಿಡ್ ಪಾಸಿಟಿವ್ ಆದ ಮೇಲೆ ರೋಗಿಯ ಮೊಬೈಲ್‌ಗೆ ಸಂದೇಶ ಬಂದಿರುವುದು ಮೇ 28ರಂದು ಮಧ್ಯಾಹ್ನ 2 ಗಂಟೆಗೆ. ಅಂದರೆ ಸ್ವಾಬ್ ಸಂಗ್ರಹಿಸಿದ ಬಳಿಕ ಫಲಿತಾಂಶಕ್ಕೆ ಸರಿಸುಮಾರು 52 ಗಂಟೆಗಳನ್ನು ತೆಗೆದುಕೊಳ್ಳಲಾಗಿದೆ. ಇದೊಂದು ಉದಾಹರಣೆ ಮಾತ್ರ. ಇಂಥ ಹಲವು ಪ್ರಕರಣಗಳು ಕಂಡುಬಂದಿವೆ.

    ಮಾದರಿ ಸಾಗುವುದು ಹೇಗೆ?
    ಗ್ರಾಮೀಣ ಪ್ರದೇಶಗಳಲ್ಲಿ ಸಂಗ್ರಹಿಸಲಾದ ಸ್ವಾಬ್‌ಗಳನ್ನು ಆಯಾ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ತರಲಾಗುತ್ತದೆ. ಅಲ್ಲಿಂದ ಮಧ್ಯಾಹ್ನ ಹಾಗೂ ಸಾಯಂಕಾಲ ಎರಡು ಸಮಯದಲ್ಲಿ ಆಯಾ ತಾಲೂಕು ಆರೋಗ್ಯ ಕಚೇರಿಗಳಿಗೆ ತಲುಪಿಸಲಾಗುತ್ತದೆ. ಈ ಸ್ವಾಬ್‌ಗಳಿಗೆ ಹೊಸ ಸಂಖ್ಯೆ ನೀಡಿ ಪಟ್ಟಿ ಮಾಡಿ ಸರ್ವೆಲೆನ್ಸ್ ಕಚೇರಿಗೆ ಕಳುಹಿಸಲಾಗುತ್ತದೆ. ಅಲ್ಲಿ ಲ್ಯಾಬ್ ನಂಬರ್ ಹಾಕಲಾಗುತ್ತದೆ. ಸರ್ವೆಲೆನ್ಸ್ ಕಚೇರಿಯಲ್ಲಿ ಎಲ್ಲ ತಾಲೂಕುಗಳಿಂದ ಬಂದ ಮಾದರಿಗಳನ್ನು ಒಟ್ಟು ಮಾಡಿ ಲ್ಯಾಬ್‌ಗೆ ನೀಡಲಾಗುತ್ತದೆ ಎಂದು ಉಡುಪಿ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಲ್ಯಾಬ್ ಸಮಸ್ಯೆ ಅಲ್ಲ: ಜಿಲ್ಲಾಸ್ಪತ್ರೆಯಲ್ಲಿರುವ ಜಿಲ್ಲೆಯ ಏಕೈಕ ಸರ್ಕಾರಿ ಪ್ರಯೋಗಾಲಯದಲ್ಲಿ ಪ್ರತಿದಿನ ಸುಮಾರು 2800- 3000 ಸ್ವಾಬ್‌ಗಳನ್ನು ಪರೀಕ್ಷಿಸಿ 24 ಗಂಟೆಯೊಳಗೆ ವರದಿ ನೀಡಲಾಗುತ್ತದೆ. ಲ್ಯಾಬ್‌ಗೆ ಬಂದ ಮಾದರಿಯನ್ನು ಪರೀಕ್ಷಿಸಿ 24 ಗಂಟೆಯೊಳಗೆ ಅಪ್‌ಲೋಡ್ ಮಾಡಲಾಗುತ್ತದೆ. ಆದರೆ ಆಯಾ ಕೇಂದ್ರಗಳಿಂದ ಲ್ಯಾಬ್‌ಗೆ ಮಾದರಿ ಬರುವುದೇ ವಿಳಂಬವಾಗುವುದರಿಂದ ವರದಿ ಕೂಡ ತಡವಾಗಿ ಬರುತ್ತಿದೆ ಎಂದು ಜಿಲ್ಲಾಸ್ಪತ್ರೆ ಮೂಲಗಳು ತಿಳಿಸಿವೆ.

    ಸ್ವಾಬ್ ಸಂಗ್ರಹಿಸಿದ 24 ಗಂಟೆಯೊಳಗೆ ವರದಿ ನೀಡಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ದಿನಕ್ಕೆ ಮೂರು ಬಾರಿ ಸ್ವಾಬ್ ಸಂಗ್ರಹ ಮಾಡುವಂತೆ ಸೂಚನೆ ನೀಡಲಾಗಿದೆ. ವಾಹನಗಳ ಕೊರತೆ ಇದ್ದರೆ ತಕ್ಷಣ ನೀಡುವ ವ್ಯವಸ್ಥೆ ಮಾಡಲಾಗುವುದು. ಆಯಾ ದಿನದ ಮಾದರಿ ಅಂದೇ ಪ್ರಯೋಗಾಲಯಕ್ಕೆ ತಲುಪಬೇಕು.
    – ಜಿ.ಜಗದೀಶ್, ಜಿಲ್ಲಾಧಿಕಾರಿ, ಉಡುಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts