More

    ಸಿಡ್ನಿ ಟೆಸ್ಟ್‌ನಲ್ಲಿ ಭಾರತ ತಂಡಕ್ಕೆ ಇನಿಂಗ್ಸ್ ಹಿನ್ನಡೆ, ಗಾಯದ ಹೊಡೆತ

    ಸಿಡ್ನಿ: ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ವೈಫಲ್ಯ, ವಿಕೆಟ್ ನಡುವಿನ ಓಟದ ಎಡವಟ್ಟುಗಳು ಮತ್ತು ಗಾಯದ ಸಮಸ್ಯೆಗಳಿಂದಾಗಿ ಭಾರತ ತಂಡ ಮೂರನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟದಲ್ಲಿ ತೀವ್ರ ಸಂಕಷ್ಟಗಳನ್ನು ಎದುರಿಸಿದೆ. ಆತಿಥೇಯ ಆಸ್ಟ್ರೇಲಿಯಾ ತಂಡ ಒಟ್ಟಾರೆ 197 ರನ್ ಮುನ್ನಡೆ ಸಾಧಿಸುವ ಮೂಲಕ ಪಂದ್ಯದಲ್ಲಿ ಹಿಡಿತ ಸಾಧಿಸಿದ್ದು, ಭಾರತ ತಂಡ ಬಾರ್ಡರ್-ಗಾವಸ್ಕರ್ ಟ್ರೋಫಿಯಲ್ಲಿ ಮತ್ತೊಮ್ಮೆ ಲಯ ತಪ್ಪಿದೆ.

    ಎಸ್‌ಸಿಜಿ ಮೈದಾನದಲ್ಲಿ ಶನಿವಾರ 2 ವಿಕೆಟ್‌ಗೆ 96 ರನ್‌ಗಳಿಂದ ದಿನದಾಟ ಆರಂಭಿಸಿದ ಭಾರತ ತಂಡ, ಚಹಾ ವಿರಾಮಕ್ಕೆ ಮೊದಲೇ 244 ರನ್‌ಗಳಿಗೆ ಆಲೌಟ್ ಆಯಿತು. ಇದರಿಂದ ಭಾರತ ತಂಡ ಮೊದಲ ಇನಿಂಗ್ಸ್‌ನಲ್ಲಿ 94 ರನ್ ಹಿನ್ನಡೆ ಅನುಭವಿಸಿತು. ಬಳಿಕ 2ನೇ ಇನಿಂಗ್ಸ್ ಆರಂಭಿಸಿದ ಆಸೀಸ್, ದಿನದಂತ್ಯಕ್ಕೆ 2 ವಿಕೆಟ್‌ಗೆ 103 ರನ್ ಪೇರಿಸಿದ್ದು, ಒಟ್ಟಾರೆ 200ರ ಸನಿಹದ ಮುನ್ನಡೆಯೊಂದಿಗೆ ಬಲಿಷ್ಠ ಸ್ಥಿತಿಯಲ್ಲಿ ನಿಂತಿದೆ. 300ಕ್ಕಿಂತ ಹೆಚ್ಚಿನ ಸವಾಲು ಎದುರಾದರೆ ಭಾರತ ತಂಡಕ್ಕೆ ಪಂದ್ಯಕ್ಕೆ ಮರಳುವುದು ಕಠಿಣವೆನಿಸಲಿದೆ.

    ಇದನ್ನೂ ಓದಿ: VIDEO | ಸ್ಟೀವನ್ ಸ್ಮಿತ್‌ರನ್ನು ರವೀಂದ್ರ ಜಡೇಜಾ ರನೌಟ್ ಮಾಡಿದ ರೀತಿಗೆ ಕ್ರಿಕೆಟ್​ ಪ್ರೇಮಿಗಳು ಫಿದಾ!

    ಪೂಜಾರ ಆಮೆಗತಿ ಅರ್ಧಶತಕ
    ವನ್‌ಡೌನ್ ಬ್ಯಾಟ್ಸ್‌ಮನ್ ಚೇತೇಶ್ವರ ಪೂಜಾರ ಆಸೀಸ್ ಬೌಲರ್‌ಗಳಿಗೆ ಸವಾಲಾಗಿ ನಿಂತರೂ, ಭಾರತಕ್ಕೆ ಹೆಚ್ಚಿನ ಲಾಭ ತಂದುಕೊಡಲಿಲ್ಲ. ಯಾಕೆಂದರೆ ಅವರ ಬ್ಯಾಟಿಂಗ್ ಆಮೆಗತಿಯಿಂದ ಕೂಡಿತ್ತು. ಅರ್ಧಶತಕ ಪೂರೈಸಲು 174 ಎಸೆತ ಎದುರಿಸಿದರು. ಇದು ಪೂಜಾರ ವೃತ್ತಿಜೀವನದ ಅತಿ ನಿಧಾನಗತಿಯ ಅರ್ಧಶತಕವೆನಿಸಿದೆ. ಈ ಮುನ್ನ 2018ರಲ್ಲಿ ಅವರು ದಕ್ಷಿಣ ಆಫ್ರಿಕಾ ವಿರುದ್ಧ ಜೊಹಾನ್ಸ್‌ಬರ್ಗ್‌ನಲ್ಲಿ 173 ಅರ್ಧಶತಕ ಬಾರಿಸಿದ್ದು, ಅತಿ ನಿಧಾನಗತಿ ಎನಿಸಿತ್ತು. ಪೂಜಾರ ನಿಧಾನಗತಿ ಆಟಕ್ಕೆ ಕೆಲವರಿಂದ ಟೀಕೆಗಳೂ ವ್ಯಕ್ತವಾಗಿವೆ. ಅವರ ಆಮೆಗತಿ ಆಟದಿಂದ ಜತೆಗಾರ ಬ್ಯಾಟ್ಸ್‌ಮನ್‌ಗಳ ಮೇಲೆ ಒತ್ತಡ ಬಿದ್ದಿತು ಎಂದು ಟೀಕಿಸಲಾಗಿದೆ. ಆದರೆ ನನಗೆ ಗೊತ್ತಿರುವ ರೀತಿಯಲ್ಲಿ ನಾನು ಬ್ಯಾಟಿಂಗ್ ಮಾಡಿರುವೆ ಎಂದು ಪೂಜಾರ ತಮ್ಮ ಆಟವನ್ನು ಸಮರ್ಥಿಸಿಕೊಂಡಿದ್ದಾರೆ.

    ಕಂಟಕವಾದ ರನೌಟ್‌ಗಳು
    ಆಸೀಸ್ ವೇಗಿಗಳಾದ ಪ್ಯಾಟ್ ಕಮ್ಮಿನ್ಸ್, ಹ್ಯಾಸಲ್‌ವುಡ್ ಮತ್ತು ಮಿಚೆಲ್ ಸ್ಟಾರ್ಕ್ ಬಿಗಿ ದಾಳಿಯ ನಡುವೆ ಭಾರತ ತಂಡಕ್ಕೆ 3 ರನೌಟ್‌ಗಳು ಹೆಚ್ಚಿನ ಹಿನ್ನಡೆ ತಂದವು. ಹನುಮ ವಿಹಾರಿ (4) ಸಿಂಗಲ್ಸ್ ಕಸಿಯುವ ಅವಸರದಲ್ಲಿ ಹ್ಯಾಸಲ್‌ವುಡ್‌ರ ಡೈರೆಕ್ಟ್ ಹಿಟ್‌ನಿಂದ ರನೌಟಾದರೆ, ಆರ್. ಅಶ್ವಿನ್ (10) ಕೂಡ ರನ್ ಕದಿಯುವ ಯತ್ನದಲ್ಲಿ ಎಡವಿದರು. ಬುಮ್ರಾ ಕೂಡ ಜಡೇಜಾ ಸ್ಟ್ರೈಕ್ ಉಳಿಸಿಕೊಳ್ಳುವಂತೆ ಮಾಡಲು 2ನೇ ರನ್‌ಗಾಗಿ ಓಡಿದಾಗ ಲಬುಶೇನ್ ಡೈರೆಕ್ಟ್ ಹಿಟ್‌ನಿಂದ ರನೌಟಾದರು. ಇದರಿಂದಾಗಿ ಹಿನ್ನಡೆಯನ್ನು ತಗ್ಗಿಸಿಕೊಳ್ಳುವ ಭಾರತದ ಹೋರಾಟಕ್ಕೆ ಹಿನ್ನಡೆಯಾಯಿತು.

    ಇದನ್ನೂ ಓದಿ: PHOTO | ಬೆಂಗಳೂರಿನ ಬಿಲಿಯರ್ಡ್ಸ್ ತಾರೆ ಪಂಕಜ್ ಆಡ್ವಾಣಿ ವಿವಾಹ

    ಭಾರತಕ್ಕೆ ಗಾಯದ ಹಿನ್ನಡೆ
    ಪ್ರವಾಸದಲ್ಲಿ ಭಾರತ ತಂಡಕ್ಕೆ ಗಾಯಾಳುಗಳ ಸಮಸ್ಯೆ ಮುಂದುವರಿದಿದೆ. ಆಲ್ರೌಂಡರ್ ರವೀಂದ್ರ ಜಡೇಜಾ ಮತ್ತು ವಿಕೆಟ್ ಕೀಪರ್ ರಿಷಭ್ ಪಂತ್ ಶುಕ್ರವಾರ ಬ್ಯಾಟಿಂಗ್ ಮಾಡುವಾಗ ಗಾಯಗೊಂಡ ಕಾರಣದಿಂದಾಗಿ ಆಸೀಸ್ 2ನೇ ಇನಿಂಗ್ಸ್ ವೇಳೆ ಕಣಕ್ಕಿಳಿಯಲಿಲ್ಲ. ಪಂತ್ ವೇಗಿ ಕಮ್ಮಿನ್ಸ್ ಎಸೆತದಲ್ಲಿ ಮೊಣಕೈಗೆ ಪೆಟ್ಟು ತಿಂದಿದ್ದು, ಸ್ಕಾೃನಿಂಗ್‌ಗೆ ಒಳಗಾಗಿದ್ದಾರೆ. 2ನೇ ಇನಿಂಗ್ಸ್ ವೇಳೆ ವೃದ್ಧಿಮಾನ್ ಸಾಹ ಬದಲಿ ವಿಕೆಟ್ ಕೀಪರ್ ಆಗಿ ಕಾರ್ಯನಿರ್ವಹಿಸಿದರು. ಜಡೇಜಾ ಕೂಡ ವೇಗಿ ಸ್ಟಾರ್ಕ್ ಎಸೆತದಲ್ಲಿ ಎಡಗೈ ಹೆಬ್ಬೆರಳಿಗೆ ಚೆಂಡೇಟು ತಿಂದರು. ಬಳಿಕ ಅವರೂ ಸ್ಕಾೃನಿಂಗ್‌ಗೆ ಒಳಗಾದರು. ಇದರಿಂದಾಗಿ ಅವರು 2ನೇ ಇನಿಂಗ್ಸ್‌ನಲ್ಲಿ ಬೌಲಿಂಗ್‌ಗೆ ಇಳಿಯಲಿಲ್ಲ. ಇದು ಭಾರತೀಯ ಬೌಲಿಂಗ್ ವಿಭಾಗಕ್ಕೆ ಹಿನ್ನಡೆಯಾಗಿದ್ದು, ನಾಲ್ಕೇ ಬೌಲರ್‌ಗಳೊಂದಿಗೆ ದಾಳಿ ಸಂಘಟಿಸಬೇಕಾಯಿತು. ಈ ಮುನ್ನ ಮೊಹಮದ್ ಶಮಿ, ಉಮೇಶ್ ಯಾದವ್ ಮತ್ತು ಕೆಎಲ್ ರಾಹುಲ್ ಗಾಯಗೊಂಡು ಸರಣಿಯಿಂದ ಹೊರಬಿದ್ದಿದ್ದರು. ರೋಹಿತ್ ಶರ್ಮ ಗಾಯದಿಂದ ಮೊದಲೆರಡು ಟೆಸ್ಟ್‌ಗಳಿಗ ಅಲಭ್ಯರಾಗಿದ್ದರೆ, ಇಶಾಂತ್ ಶರ್ಮ ಸಂಪೂರ್ಣ ಸರಣಿಗೆ ಅಲಭ್ಯರಾಗಿದ್ದಾರೆ.

    ಮತ್ತೆ ಸವಾಲಾದ ಲಬುಶೇನ್-ಸ್ಮಿತ್
    ಆಸೀಸ್‌ಗೆ ತಿರುಗೇಟು ನೀಡುವ ಯತ್ನದಲ್ಲಿ ಭಾರತ ಆರಂಭಿಕರಾದ ಡೇವಿಡ್ ವಾರ್ನರ್ (13) ಮತ್ತು ವಿಲ್ ಪುಕೊವ್‌ಸ್ಕಿ (10) ವಿಕೆಟ್‌ಗಳನ್ನು ಬೇಗನೆ ಕಬಳಿಸಿತ್ತು. ಆದರೆ ಮೊದಲ ಇನಿಂಗ್ಸ್‌ನಂತೆ ಈ ಬಾರಿಯೂ ಮಾರ್ನಸ್ ಲಬುಶೇನ್ (47*) ಮತ್ತು ಸ್ಟೀವನ್ ಸ್ಮಿತ್ (29*) ಜೋಡಿ ಭಾರತಕ್ಕೆ ಕಗ್ಗಂಟಾಗಿದೆ. ಇವರಿಬ್ಬರು ದಿನದಂತ್ಯದಲ್ಲಿ ಮುರಿಯದ 3ನೇ ವಿಕೆಟ್‌ಗೆ ಸುಮಾರು 20 ಓವರ್‌ಗಳಲ್ಲಿ 68 ರನ್ ಸೇರಿಸಿ ಮುನ್ನಡೆ ಹಿಗ್ಗಿಸಿದರು. 4ನೇ ದಿನ ಈ ಜೋಡಿಯನ್ನು ಭಾರತ ಎಷ್ಟು ಬೇಗನೆ ಬೇರ್ಪಡಿಸುವುದೋ, ಅಷ್ಟರ ಮಟ್ಟಿಗೆ ಟಾರ್ಗೆಟ್ ಕಡಿಮೆಯಾಗಲಿದೆ.

    ಆಸ್ಟ್ರೇಲಿಯಾ: 338 ಮತ್ತು 29 ಓವರ್‌ಗಳಲ್ಲಿ 2 ವಿಕೆಟ್‌ಗೆ 103 (ವಾರ್ನರ್ 13, ಪುಕೊವ್‌ಸ್ಕಿ 10, ಲಬುಶೇನ್ 47*, ಸ್ಮಿತ್ 29*, ಸಿರಾಜ್ 20ಕ್ಕೆ 1, ಅಶ್ವಿನ್ 28ಕ್ಕೆ 1). ಭಾರತ: 100.4 ಓವರ್‌ಗಳಲ್ಲಿ 244 (ಪೂಜಾರ 50, ರಹಾನೆ 22, ವಿಹಾರಿ 4, ರಿಷಭ್ ಪಂತ್ 36, ರವೀಂದ್ರ ಜಡೇಜಾ 28*, ಅಶ್ವಿನ್ 10, ಕಮ್ಮಿನ್ಸ್ 29ಕ್ಕೆ 4, ಹ್ಯಾಸಲ್‌ವುಡ್ 43ಕ್ಕೆ 2, ಸ್ಟಾರ್ಕ್ 61ಕ್ಕೆ 1).

    VIDEO | ಸೀರೆಯುಟ್ಟು ಪಲ್ಟಿ ಹೊಡೆದ ಮಹಿಳಾ ಜಿಮ್ನಾಸ್ಟ್, ವಿಡಿಯೋ ವೈರಲ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts