More

    ಬರ-ನೆರೆಗೆ ಸಿದ್ಧವಾಗುತ್ತಿದೆ ತಡೆಗೋಡೆ: ಹವಾಮಾನ ಬದಲಾವಣೆ ಕ್ರಿಯಾಯೋಜನೆ, ಸರ್ಕಾರಕ್ಕೆ ಶೀಘ್ರ ವರದಿ

    | ರುದ್ರಣ್ಣ ಹರ್ತಿಕೋಟೆ ಬೆಂಗಳೂರು

    ಜನಜೀವನವನ್ನು ಕಾಡುವ ನೆರೆ, ಬರದಂತಹ ಹವಾಮಾನ ವೈಪರೀತ್ಯಗಳಿಗೆ ತಡೆಗೋಡೆ ಹಾಕುವ ನಿಟ್ಟಿನಲ್ಲಿ ನೀತಿ-ನಿರೂಪಣೆಗೆ ಅನುಕೂಲವಾಗುವಂತಹ ಕ್ರಿಯಾಯೋಜನೆಯೊಂದನ್ನು ರಾಜ್ಯ ಸರ್ಕಾರ ಸಿದ್ಧಪಡಿಸಿದೆ. ಅಕಾಲಿಕ ಮಳೆಯಿಂದಾಗುವ ಹಾನಿ, ನೆರೆಯಿಂದಾಗುವ ಸಮಸ್ಯೆಗಳನ್ನು ಆದಷ್ಟು ತಡೆಗಟ್ಟುವ ಉದ್ದೇಶದಿಂದ ಸರ್ಕಾರ ಈ ಹೆಜ್ಜೆ ಇಟ್ಟಿದೆ. ಜಾಗತಿಕ ವಾಗಿ ಹವಾಮಾನ ಬದಲಾವಣೆ ಬಗ್ಗೆ ಸಾಕಷ್ಟು ಚರ್ಚೆಗಳಾಗುತ್ತಿವೆ. ಬಹುತೇಕ ದೇಶಗಳಲ್ಲಿ ಇಂತಹ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ. ಆದ್ದರಿಂದಲೇ ಕೇಂದ್ರ ಸರ್ಕಾರ ಪ್ರತ್ಯೇಕ ಕ್ರಿಯಾ ಯೋಜನೆ ರೂಪಿಸಿ ಕೊಳ್ಳುವಂತೆ ಎಲ್ಲ ರಾಜ್ಯಗಳಿಗೂ ಸೂಚನೆ ನೀಡಿದೆ.

    ತಜ್ಞರಿಂದ ಸಿದ್ಧ: ಕ್ರಿಯಾ ಯೋಜನೆಯಲ್ಲಿ ಬೇರೆ ಬೇರೆ ಇಲಾಖೆಗಳಿಗೆ ಸಂಬಂಧಿಸಿದ ವಿಷಯಗಳೂ ಸೇರಿವೆ. ಪರಿಸರದ ಮೇಲಿನ ಒತ್ತಡ ತಗ್ಗಿಸಲು ಮುಂದಿನ 10 ವರ್ಷಗಳಲ್ಲಿ ಏನೇನು ಕ್ರಮ ಕೈಗೊಳ್ಳಬೇಕೆಂಬ ಬಗ್ಗೆ ತಜ್ಞರು ವರದಿ ಸಿದ್ಧಪಡಿಸಿದ್ದಾರೆ. ಅತಿ ಶೀಘ್ರದಲ್ಲಿ ಈ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಲಿದೆ.

    ಕೃಷಿ ಮೇಲೆ ಪರಿಣಾಮ: ಮಳೆ ಪ್ರಮಾಣದ ಆಧಾರದಲ್ಲಿ ಕೃಷಿ ಚಟುವಟಿಕೆ ನಡೆಯುತ್ತ ಬರುತ್ತಿದೆ. ಮಳೆ ಆಧಾರದ ಮೇಲೆಯೇ ಇಂತಹದ್ದೇ ಕೃಷಿ ಉತ್ಪನ್ನ ಬಿತ್ತನೆ ಎಂಬುದನ್ನು ರೈತರು ಸುಲಭವಾಗಿ ಕಂಡುಕೊಳ್ಳುತ್ತಾರೆ. ಆದರೆ ಹವಾಮಾನ ಬದಲಾವಣೆಯಿಂದ ಕೃಷಿಯ ಮೇಲೆ ಪರಿಣಾಮ ಭೀಕರವಾಗಿರಲಿದೆ.

    ಬೇಕಿದೆ ದೊಡ್ಡ ಮೊತ್ತ: ತಜ್ಞರ ಸಲಹೆಗಳ ಪ್ರಕಾರ ಹವಾಮಾನ ವೈಪರೀತ್ಯ ನಿಯಂತ್ರಣಕ್ಕೆ ದೊಡ್ಡ ಮೊತ್ತ ಅಗತ್ಯ ಇರುವುದು ವರದಿಯಲ್ಲಿ ಪ್ರಸ್ತಾಪವಾಗಿದೆ. 2021-25ರ ಅವಧಿಗೆ ಸುಮಾರು 20 ಸಾವಿರ ಕೋಟಿ ರೂ., 2025-30ರ ಅವಧಿಯಲ್ಲಿ ಸುಮಾರು 50 ಸಾವಿರ ಕೋಟಿ ರೂ. ಬೇಕಾಗುತ್ತದೆ ಎಂದು ವರದಿಯಲ್ಲಿ ವಿವರಿಸಲಾಗಿದೆ. ಇತ್ತೀಚೆಗೆ ಮಡಿಕೇರಿಯಲ್ಲಿ ಬಿದ್ದ ಭಾರಿ ಆಲಿಕಲ್ಲು ಮಳೆ, ಹಿಮಾಲಯದ ಅವಘಡ, ಇವೇ ಮೊದಲಾದ ಘಟನೆಗಳು ಹವಾಮಾನದಲ್ಲಿ ಆಗುತ್ತಿರುವ ವೈಪರಿತ್ಯಕ್ಕೆ ಕಾರಣವಾಗಿವೆ ಎಂಬುದು ಪರಿಸರ ವಿಜ್ಞಾನಿಗಳ ಅಭಿಪ್ರಾಯವಾಗಿದೆ.

    ಕ್ರಿಯಾಯೋಜನೆಯಲ್ಲಿ ಏನಿದೆ?: ಕೃಷಿ, ಸಾರಿಗೆ, ನಗರಾಭಿವೃದ್ಧಿ, ಪರಿಸರ ಆಯವ್ಯಯ ಹೀಗೆ ವಿವಿಧ ವಿಷಯಗಳನ್ನು ಕ್ರಿಯಾಯೋಜನೆ ಒಳಗೊಂಡಿದೆ.

    ಪ್ರವಾಸಿಗರಿಗೆ ತೆರಿಗೆ ಹೊರೆ ಸಾಧ್ಯತೆ: ಮಲೆನಾಡು, ಕರಾವಳಿ ಭಾಗದಲ್ಲಿ ಪ್ರವಾಸಿಗರ ಮೇಲೆ ಶೇ. 5 ತೆರಿಗೆ ವಿಧಿಸುವ ಬಗ್ಗೆಯೂ ವರದಿಯಲ್ಲಿ ಪ್ರಸ್ತಾಪವಾಗಲಿದೆ. ಈ ಸಂಗ್ರಹ ಮೊತ್ತವನ್ನು ಪರಿಸರ ಸಮತೋಲನ ಕಾಪಾಡುವ ಉದ್ದೇಶಕ್ಕೆ ಬಳಸಬಹುದು. ಇದರಿಂದ ಖಜಾನೆ ಮೇಲೂ ಹೊರೆ ಬೀಳುವುದಿಲ್ಲ.

    ರಾಜ್ಯ ಸರ್ಕಾರ ಕ್ರಿಯಾ ಯೋಜನೆ ರೂಪಿಸುತ್ತಿದೆ. ಈ ಬಗ್ಗೆ ಅಧಿಕಾರಿಗಳ ಜತೆಗೆ ಚರ್ಚೆ ನಡೆಸಲಾಗಿದೆ.

    | ಸಿ.ಪಿ. ಯೋಗೇಶ್ವರ್ ಪರಿಸರ ಸಚಿವ

    ಏನೇನು ಸಲಹೆ?

    • ಪ್ರತ್ಯೇಕವಾದ ಕ್ಲೈಮೆಟ್ ಬಜೆಟ್ ರೂಪಿಸಬೇಕು
    • ಅರಣ್ಯೀಕರಣ ಹೆಚ್ಚು ಮಾಡಬೇಕು, ವಿದ್ಯುತ್ ಚಾಲಿತ ವಾಹನಗಳಿಗೆ ಆದ್ಯತೆ ನೀಡಬೇಕು. ಆ ಮೂಲಕ ಹೊಗೆ ಉಗುಳುವ ವಾಹನಗಳ ಸಂಖ್ಯೆ ಕಡಿಮೆ ಮಾಡಬೇಕು
    • ಪೆಟ್ರೋಲ್, ಡೀಸೆಲ್ ಬಳಕೆಯನ್ನು ತಗ್ಗಿಸಬೇಕು
    • ಸೋಲಾರ್ ಸೇರಿದಂತೆ ನವೀಕರಿಸುವ ವಿದ್ಯುತ್ ಬಳಕೆ ಜಾಸ್ತಿ ಮಾಡಬೇಕು, ಕೃಷಿ, ಮೀನುಗಾರಿಕೆ, ತೋಟಗಾರಿಕೆಗೆ ಹೆಚ್ಚಿನ ಹಣ ಒದಗಿಸಬೇಕು, ದನಕರುಗಳಿಂದ ಮಿಥೇಲ್ ಉತ್ಪಾದನೆ ಕಡಿಮೆಯಾಗುವಂತೆ ನೋಡಿಕೊಳ್ಳಬೇಕು
    • ವಿಶ್ವಬ್ಯಾಂಕ್ ಸಲಹೆಯಂತೆ ಕಾರ್ಬನ್ ಟ್ರೇಡಿಂಗ್​ನಲ್ಲಿ ಭಾಗ ವಹಿಸುವ ರೀತಿ ಕ್ರಮ ಕೈಗೊಳ್ಳಬೇಕು
    • ಕಡಿಮೆ ನೀರು ಬಳಸುವ ಬೆಳೆಗಳಿಗೆ ಆದ್ಯತೆ ಹೆಚ್ಚಾಗಬೇಕು
    • ತ್ಯಾಜ್ಯ ನಿರ್ವಹಣೆಯಲ್ಲಿ ಸುಧಾರಣೆ ತರಬೇಕು
    • ಕೈಗಾರಿಕೆಗಳ ಸಿಎಸ್​ಆರ್ ನಿಧಿಯಲ್ಲಿ ಶೇ.5ರಷ್ಟು ಪರಿಸರ ನಿರ್ವಹಣೆಗೆ ಬಳಕೆ ಮಾಡಬೇಕು
    • ನಗರಗಳ ಒತ್ತಡ ಕಡಿಮೆ ಮಾಡ ಬೇಕು, ಎಲ್ಲ ಇಲಾಖೆಗಳು ತಮ್ಮ ಅನುದಾನದಲ್ಲಿ ಸ್ವಲ್ಪ ಹಣವನ್ನು ಪರಿಸರ ನಿರ್ವಹಣೆಗೆ ಮೀಸಲಿಡಬೇಕು, ಎಸಿಗಳ ಬಳಕೆ ಕಡಿಮೆ ಮಾಡುವಂತೆ ನಾಗರಿಕರಿಗೆ ಮನವರಿಕೆ ಮಾಡಿಕೊಡುವುದು

    ಸಮಸ್ಯೆಗಳೇನು?

    • ಪರಿಸರ ಅಸಮತೋಲನದಿಂದಾಗಿ ಸಮುದ್ರ ಮಟ್ಟ 1 ಅಡಿಯಷ್ಟು ಹೆಚ್ಚಾಗಿದೆ
    • ಉಷ್ಣಾಂಶ ಕೂಡ ಒಂದು ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದೆ
    • 1986ರಿಂದಲೂ ಓಝೋನ್ ಪದರಕ್ಕೆ ಹಾನಿಯಾಗುತ್ತಿರುವ ಬಗ್ಗೆ ಕಳವಳವಿದೆ
    • ಈ ಪದರದ ಅತಿನೇರಳೆ ಕಿರಣಗಳು ಚರ್ಮದ ಕ್ಯಾನ್ಸರ್​ನಂತಹ ಹಲವು ಸಮಸ್ಯೆ ಸೃಷ್ಟಿಸುತ್ತದೆ

    ಇಲಾಖೆಗಳ ನಿರ್ಲಕ್ಷ್ಯ: ಅನೇಕ ಇಲಾಖೆಗಳು ಪರಿಸರ ಸಮತೋ ಲನ ಕಾಪಾಡುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಬೇಕಾಗಿದೆ. ಆದರೆ ಸರ್ಕಾರಗಳು ಈ ವಿಚಾರವನ್ನು ಗಂಭೀರವಾಗಿ ತೆಗೆದು ಕೊಂಡಿಲ್ಲ. ಅಭಿವೃದ್ಧಿ ವೆಚ್ಚಗಳಿಗೆ ಸುಮಾರು 40 ಸಾವಿರ ಕೋಟಿ ರೂ.ಗಿಂತ ಹೆಚ್ಚು ಖರ್ಚು ಮಾಡಿದರೂ ಪರಿಸರಕ್ಕೆ ಶೇ.2 ರಿಂದ ಶೇ.4 ವೆಚ್ಚವಾಗುತ್ತಿಲ್ಲ. ಉದಾಹರಣೆಗೆ ಲೋಕೋಪಯೋಗಿ ಇಲಾಖೆ ಮಾಡುವ ವೆಚ್ಚ ಶೇ.4 ರೊಳಗೆ ಇದೆ.

    ಪರಿಸರ ಸಮತೋಲನ ಕಾಪಾಡದೇ ಇದ್ದರೆ ಮುಂದೆ ಇನ್ನಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ. ಆದ್ದರಿಂದಲೇ ಸರ್ಕಾರ ಕ್ರಿಯಾ ಯೋಜನೆ ಯೊಂದನ್ನು ಸಿದ್ಧಪಡಿಸುತ್ತಿದೆ. ಆದಷ್ಟು ಬೇಗ ಕ್ರಿಯಾ ಯೋಜನೆ ಜಾರಿ ಮಾಡಿ ಪ್ರತ್ಯೇಕ ಹವಾಮಾನ ಬಜೆಟ್ ರೂಪಿಸಬೇಕು.

    | ಪ್ರೊ. ಕೃಷ್ಣರಾಜು ಪರಿಸರ ಅರ್ಥಶಾಸ್ತ್ರಜ್ಞರು

    ಹವಾಮಾನ ವೈಪರೀತ್ಯದ ಪರಿಣಾಮ ತಡೆಯದಿದ್ದಲ್ಲಿ ಕೃಷಿ ಸೇರಿದಂತೆ ಸಾಕಷ್ಟು ಪರಿಣಾಮ ಎದುರಿಸ ಬೇಕಾಗುತ್ತದೆ. ನೀರು ಸಂಸ್ಕರಣೆ, ತ್ಯಾಜ್ಯ ನೀರು ಮರು ಬಳಕೆ, ಮರುಪೂರಕದಿಂದ ಅಂತರ್ಜಲ ವೃದ್ಧಿ, ನಗರೀಕರಣಕ್ಕೆ ಕಡಿವಾಣ, ಕೃಷಿ ಉತ್ಪನ್ನಗಳು ಸುಡುವುದು ನಿಷೇಧಕ್ಕೆ ಗಮನ ಹರಿಸಬೇಕು.

    | ಡಾ. ಎಚ್.ಸಿ. ಶರತ್ಚಂದ್ರ ಪರಿಸರ ವಿಜ್ಞಾನಿ

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಜಾರಕಿಹೊಳಿ ಸೆಕ್ಸ್​ ಸಿಡಿ ಪ್ರಕರಣ: ಹಲವು ಅನುಮಾನ ಹುಟ್ಟಿಸಿದೆ ಡಾ.ಸುಧಾಕರ್​ ಹೇಳಿಕೆ

    ಬ್ಯಾಂಕ್​ ವ್ಯವಹಾರದ ಬಗ್ಗೆ ಅನುಮಾನ; ಪಿಗ್ಮಿ ಹಣ ಹಿಂದಿರುಗಿಸುವಂತೆ ಮುಗಿಬಿದ್ದ ಖಾತೆದಾರರು

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts